ಸಿದ್ದಾಪುರ: ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಕೆಲ ಪೊಲೀಸ್ ಅಧಿಕಾರಿಗಳೇ ಆರೋಪಿಗಳ ಪರವಾಗಿ ನಿಂತು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಿದ್ದಾಪುರದ ಸಾಮಾಜಿಕ ಕಾರ್ಯಕರ್ತ ಹಾಗೂ ಜನಪ್ರತಿನಿಧಿ ವಸಂತ ಎಲ್. ನಾಯ್ಕ ಮನಮನೆ ಅವರು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿದ್ದಾಪುರ ಸಿಪಿಐ ಸೀತಾರಾಮ್ ಅವರನ್ನು ಅಮಾನತುಗೊಳಿಸಿ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ. ದೂರುದಾರ ವಸಂತ ನಾಯ್ಕ ಅವರ ಕುಟುಂಬದ ವಿರುದ್ಧ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದರು.
ಆದರೆ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲು ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸೀತಾರಾಮ್ ಆರೋಪಿಯ ಪರವಾಗಿ ನಿಂತು ತಮ್ಮ ಕುಟುಂಬದವರಿಗೇ ಬೆದರಿಕೆ ಹಾಕಿದ್ದಾರೆ ಎಂದು ವಸಂತ ನಾಯ್ಕ ದೂರಿನಲ್ಲಿ ಆರೋಪಿಸಿದ್ದಾರೆ. “ನಮ್ಮ ವಿರುದ್ಧವೇ ಸುಳ್ಳು ವರದಿ ಸೃಷ್ಟಿಸಿ, ಮಹಿಳಾ ಆಯೋಗ ಹಾಗೂ ಉನ್ನತ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ” ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಮನವಿ ಪತ್ರದಲ್ಲಿ ತಾಲೂಕಿನಲ್ಲಿ ನಡೆದ ಹಲವು ಘಟನೆಗಳನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. 2026ರ ಫೆಬ್ರವರಿ 2ರಂದು ಉಜ್ಜಜ್ಜಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ, ಜೀವ ಬೆದರಿಕೆ ಇರುವ ಕುರಿತು ಕುಟುಂಬಸ್ಥರು ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಕೊಲೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2025ರ ಏಪ್ರಿಲ್ 30ರಂದು ಮರಲಿ ಗ್ರಾಮದ ರೈತ ಕೇಶವ ಮಡಿವಾಳ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ ಪ್ರಕರಣದಲ್ಲಿ, ರೈತನ ಮೇಲೆಯೇ ಬಿ-ರಿಪೋರ್ಟ್ ಹಾಗೂ ಚಾರ್ಜ್‌ಶೀಟ್ ಸಲ್ಲಿಸಿ ಅನ್ಯಾಯ ಮಾಡಿದ್ದಾರೆ. ಹಾಗೂ ನಿಟ್ಟಗೌಡ ಗ್ರಾಮದ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿಯೂ ಸಮರ್ಪಕ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ
2026ರ ಮೇ 24ರಂದು ಸಿರಸಿ ರಸ್ತೆಯಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ ಶಶಿಕುಮಾರ್ ಶಂಕರ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಿಲ್ಲ ಎಂದು ಪತ್ರದ ಮೂಲಕ ಮೇಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ಸಿಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಸಿದ್ದಾಪುರ ತಾಲೂಕಿನಾದ್ಯಂತ ಓ.ಸಿ ಪಟ್ಟಿ, ಇಸ್ಪೀಟ್ ಕ್ಲಬ್ ಹಾಗೂ ಅಕ್ರಮ ಸಾರಾಯಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಅಕ್ರಮ ದಂಧೆಗಳಿಂದ ತಿಂಗಳಿಗೆ ಸುಮಾರು 10 ರಿಂದ 12 ಲಕ್ಷ ರೂಪಾಯಿಗಳ “ಮಾಮೂಲಿ” ಹಣವನ್ನು ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ, “ನಾವು ಮೇಲಧಿಕಾರಿಗಳಿಗೆ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ಹಣ ನೀಡಬೇಕು, ಸುಮ್ಮನಿರದಿದ್ದರೆ ನಿಮ್ಮನ್ನು ಗಡಿಪಾರು ಮಾಡುತ್ತೇವೆ” ಎಂದು ಸಿಪಿಐ ಸೀತಾರಾಮ್ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಾರ್ವಜನಿಕ ಜೀವನ ನಡೆಸುತ್ತಿರುವ ತಮಗೆ ಹಾಗೂ ಸಾರ್ವಜನಿಕರಿಗೆ ಜೀವ ಬೆದರಿಕೆ ಇದೆ ಎಂದು ವಸಂತ ನಾಯ್ಕ ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಮನವಿಯ ಪ್ರತಿಗಳನ್ನು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರು (ಐಜಿಪಿ), ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ಕಳುಹಿಸಿ ಸೂಕ್ತ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.




