ಕರ್ನಾಟಕದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಟಾಟಾ ಪವರ್ ಸಂಸ್ಥೆ ಸಲ್ಲಿಸಿರುವ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಂಬಂಧಿತ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿರುವುದು ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಮುಂದಾಗುವ ಯಾವುದೇ ಸಂಸ್ಥೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಭಾಷಾ ಹಕ್ಕುಗಳಿಗೆ ಗೌರವ ನೀಡುವುದು ತನ್ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿರಬೇಕು ಎಂದು ಹೇಳಿದ್ದಾರೆ. ಆದರೆ ಟಾಟಾ ಪವರ್ ಸಂಸ್ಥೆ ಸಲ್ಲಿಸಿರುವ ಅರ್ಜಿಗಳು ಮತ್ತು ಮಾಹಿತಿ ದಾಖಲೆಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವುದು ಕನ್ನಡಿಗರ ಹಕ್ಕುಗಳನ್ನು ನಿರ್ಲಕ್ಷಿಸುವ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಾಟಾ ಪವರ್ ಸಂಸ್ಥೆಯ ಪ್ರತಿನಿಧಿಗಳು ಈಗಾಗಲೇ ಮನೆಮನೆಗೆ ಭೇಟಿ ನೀಡಿ ವಿದ್ಯುಚ್ಛಕ್ತಿ ಪೂರೈಕೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದು, ಈ ಸಂದರ್ಭದಲ್ಲಿ ಬಳಸಲಾಗುತ್ತಿರುವ ನಮೂನೆಗಳು ಸಹ ಆಂಗ್ಲ ಭಾಷೆಯಲ್ಲಿವೆ. ಇದರಿಂದ ಸಾಮಾನ್ಯ ಕನ್ನಡಿಗರಿಗೆ ದಾಖಲೆಗಳ ಉದ್ದೇಶ, ಅಂಶಗಳು ಹಾಗೂ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಬಿಳಿಮಲೆ ಹೇಳಿದ್ದಾರೆ.
ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ಕನ್ನಡದಲ್ಲಿಯೂ ಲಭ್ಯವಾಗುವುದು ನಾಗರಿಕರ ಹಕ್ಕು. ವಿದ್ಯುತ್ ಬಿಲ್ಲುಗಳು ಹಾಗೂ ವಿದ್ಯುಚ್ಛಕ್ತಿ ಸೇವೆಗೆ ಸಂಬಂಧಿಸಿದ ದಾಖಲೆಗಳು ಜನಜೀವನದ ಮಹತ್ವದ ಭಾಗವಾಗಿರುವುದರಿಂದ ಬಳಕೆದಾರರು ಈ ವಿಷಯದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ವಿದ್ಯುತ್ ವಿತರಣಾ ಪರವಾನಿಗೆ ವಿರೋಧಿಸಿ ಜೂ.18ರಂದು ರಾಜ್ಯಾದ್ಯಂತ ರೈತ ಸಂಘ ಪ್ರತಿಭಟನೆ
ಮನೆಮನೆಗೆ ಭೇಟಿ ನೀಡುವ ಸಂಸ್ಥೆಯ ಪ್ರತಿನಿಧಿಗಳು ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನೀಡಿದಲ್ಲಿ ನಾಗರಿಕರು ಅದನ್ನು ಕನ್ನಡದಲ್ಲಿಯೇ ಒದಗಿಸುವಂತೆ ಒತ್ತಾಯಿಸಬೇಕು ಎಂದು ಬಿಳಿಮಲೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?ಹುಣಸೂರು | ಟಾಟಾ ಪವರ್ ವಿದ್ಯುತ್ ವಿತರಣಾ ಪರವಾನಿಗೆ ಅರ್ಜಿ ತಿರಸ್ಕರಿಸಲು ಆಗ್ರಹ
ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ತಕ್ಷಣ ಕ್ರಮ ಕೈಗೊಂಡು, ಟಾಟಾ ಪವರ್ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕನ್ನಡದಲ್ಲಿಯೂ ಪ್ರಕಟಿಸುವಂತೆ ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ದೊರೆಯಬೇಕು ಮತ್ತು ಸಾರ್ವಜನಿಕ ಸೇವೆಗಳ ಎಲ್ಲ ದಾಖಲೆಗಳು ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಲಭ್ಯವಾಗಬೇಕು ಎಂದು ಹೇಳಿದ್ದಾರೆ.




