ಮುಳುಗಡೆ ನಿವೇಶನಗಳು ಹಾಗೂ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ಹಣ ವಿತರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ತೀವ್ರ ಆಕ್ರೋಶಗೊಂಡ ರೈತನೊಬ್ಬ ‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ’ದ (ಬಿಟಿಡಿಎ – BTDA) ಕಚೇರಿಯಲ್ಲಿಯೇ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಘಟನೆ ಇಂದು(ಜೂ.13) ನಡೆದಿದೆ.
ಈ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ರೈತ ಬಸಪ್ಪ ದೊಡ್ಡಮನಿ ಎಂಬುವವರು ಬಿಟಿಡಿಎ ಕಚೇರಿಯೊಳಗೆ ಸಿಬ್ಬಂದಿ ನೀಲಕಂಠ ಅಂಕದ ಅವರೊಂದಿಗೆ ವಾಗ್ವಾದ ನಡೆಸಿ, ಏಕಾಏಕಿ ಚಪ್ಪಲಿಯಿಂದ ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನು ಓದಿದ್ದೀರಾ? “ನಿನ್ನ ಹತ್ಯೆಗೆ 10 ಕೋಟಿ ಸುಪಾರಿ ಬಂದಿದೆ”: ಬೆಂಗಳೂರಿನಲ್ಲಿ ಮಾಜಿ ಶಾಸಕನ ಅಪಹರಣ
ಹಲ್ಲೆ ನಡೆಯುತ್ತಿದ್ದಂತೆ ಎಚ್ಚೆತ್ತ ಕಚೇರಿಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣವೇ ಅಲ್ಲಿಗೆ ಧಾವಿಸಿ, ನೀಲಕಂಠ ಅವರನ್ನು ರಕ್ಷಿಸಿ ಬೇರೊಂದು ಕೊಠಡಿಗೆ ಕರೆದೊಯ್ದರು. ಈ ಸಂದರ್ಭದಲ್ಲಿ ರೈತನೊಂದಿಗೆ ಕಚೇರಿಗೆ ಬಂದಿದ್ದ ಇತರ ಕೆಲವು ವ್ಯಕ್ತಿಗಳು ಪ್ರಾಧಿಕಾರದ ವಿರುದ್ಧ ಸ್ವಲ್ಪ ಹೊತ್ತು ಘೋಷಣೆಗಳನ್ನು ಕೂಗಿ, ಬಳಿಕ ಕಚೇರಿಯಿಂದ ನಿರ್ಗಮಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಅಧಿಕಾರಿ ನೀಲಕಂಠ ಅಂಕದ ಅವರು ಬಾಗಲಕೋಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




