ತಾಲೂಕಿನ ಸಿಂಗಾಟ-ಕದಿರೇನಹಳ್ಳಿ ಗ್ರಾಮದ ದಲಿತ ರೈತರಿಗೆ ಸೇರಿರುವ ಸಾಗುವಳಿ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ತಮ್ಮ ವಶಕ್ಕೆ ಪಡೆಯಲು ಮುಂದಾಗಿರುವುದನ್ನು ಖಂಡಿಸಿ ಜೂನ್ 15ರಂದು ಸಿಂಗಾಟ-ಕದಿರೇನಹಳ್ಳಿಯಿಂದ ಅರಣ್ಯ ಇಲಾಖೆ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಸಿ.ರಾಜಕಾಂತ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಗಾಟ-ಕದಿರೇನಹಳ್ಳಿಯ ಹಳೆಯ ಸರ್ವೇ ನಂ.67 ಹಾಗೂ ಹೊಸ ಸರ್ವೇ ನಂ.81, 82, 83, 84, 85 ಮತ್ತು 86ರಲ್ಲಿ ಸಾಗುವಳಿ ಚೀಟಿ, ಪಹಣಿ ಹಾಗೂ ಇತರೆ ದಾಖಲೆಗಳನ್ನು ಹೊಂದಿರುವ ಬಡ ರೈತರು ಕಳೆದ ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಗೋಮಾಳ ಮತ್ತು ಕರಾಬ್ ಭೂಮಿಯನ್ನು ಬಡ ರೈತರು ಸುಮಾರು 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಭೂಮಿಗೆ ಸಂಬಂಧಿಸಿದ ದಾಖಲೆಗಳು, ಸ್ಕೆಚ್‌ಗಳು ಹಾಗೂ ದುರಸ್ತಿ ದಾಖಲೆಗಳೂ ಇವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಕಂದಾಯ ಇಲಾಖೆ ಹಾಗೂ ತಹಸೀಲ್ದಾರ್ ಬಡವರ ಪರವಾಗಿ ನಿಲ್ಲದೇ ಪ್ರಭಾವಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭೂಮಿ ಕಳೆದುಕೊಂಡಿರುವ ಫಲಾನುಭವಿಗಳಿಗೆ ಇದೇ ಇಲಾಖೆಯಿಂದ ದಾಖಲೆಗಳನ್ನು ನೀಡಲಾಗಿದ್ದರೂ, ಈಗ ಆ ದಾಖಲೆಗಳ ಸತ್ಯಾಸತ್ಯತೆಯನ್ನು ಸಮರ್ಥಿಸಿಕೊಳ್ಳುವ ಬದಲು ಜನರನ್ನು ಅರಣ್ಯ ಇಲಾಖೆಯತ್ತ ತಳ್ಳುವ ಕೆಲಸ ಮಾಡಲಾಗಿದೆ. ಇದರಿಂದ 14ರಿಂದ 15 ಕುಟುಂಬಗಳು ಬೀದಿಪಾಲಾಗಿದ್ದು, ಅವರ ನೋವು ಅಕ್ಷರಶಃ ‘ಅರಣ್ಯರೋದನ’ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳೂ ವಿಫಲರಾಗಿದ್ದಾರೆ. ಹೀಗಾಗಿ ಜೂನ್ 15ರಿಂದ ಹೋರಾಟದ ಭಾಗವಾಗಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದ್ದು, ರೈತರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ ಮಾತನಾಡಿ, ಸಾಗುವಳಿದಾರರನ್ನು ‘ಡೀಮ್ಡ್ ಫಾರೆಸ್ಟ್’ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಕಂದಾಯ ಇಲಾಖೆ ಜನರ ಪರವಾಗಿ ನಿಲ್ಲಬೇಕು. ಇದೇ ಉದ್ದೇಶ ದಿಂದ ಜೂನ್ 15ರಂದು ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜೀವಿಕ ಸಂಘಟನೆಯ ಮುಖಂಡರು ಮಾತನಾಡಿ, ಈ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿಲ್ಲ. ಅರಣ್ಯ ಇಲಾಖೆಯ ಅನ್ಯಾಯದ ವಿರುದ್ಧ ಸಿಂಗಾಟಕದಿರೇನಹಳ್ಳಿ ಗ್ರಾಮದ ಬಡ ರೈತರ ಪರವಾಗಿ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಧ್ವನಿಯಾಗಬೇಕು. ಶಾಸಕ, ಸಚಿವ ಹಾಗೂ ಸಂಸದರು ಈ ವಿಚಾರದಲ್ಲಿ ಮಧ್ಯಪ್ರವೇಶಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಜವಾಬ್ದಾರಿ ನಮ್ಮದು: ಶಾಸಕ ಕೊತ್ತೂರು ಜಿ. ಮಂಜುನಾಥ್ ಭರವಸೆ
ಸುದ್ದಿಗೋಷ್ಠಿಯಲ್ಲಿ ಸಿ.ಜಿ.ಗಂಗಪ್ಪ, ಟೈಲರ್ ಮುನಿರಾಜು, ಚಿನ್ನಪ್ಪ, ಮುನಿಯಪ್ಪ, ತ್ಯಾಗರಾಜು, ನರಸಿಂಹ, ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕ ಎನ್. ಪರಮೇಶ್, ನಾರಾಯಣಮ್ಮ, ಕರಗಪ್ಪ
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ | ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂನ್ 15ರಂದು ಬೃಹತ್ ಕಾಲ್ನಡಿಗೆ ಜಾಥಾ: ಕೆ.ಸಿ. ರಾಜಕಾಂತ್
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:




