ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಜೀವ ಉಳಿಸಲು ಆರೋಗ್ಯವಂತ ಪ್ರತಿಯೊಬ್ಬ ವಯಸ್ಕರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಬಾಗಲಕೋಟೆ ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹೊಸೂರ ಕರೆ ನೀಡಿದರು.
ಬಾಗಲಕೋಟೆ ನಗರದ ವಿದ್ಯಾಗಿರಿಯ ಕೊಕೊ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್, ಕೆರೂಡಿ ರಕ್ತನಿಧಿ ಕೇಂದ್ರ ಹಾಗೂ ಇನ್ನರ್‌ವೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
“ದೇಶದಲ್ಲಿ ರಕ್ತದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಷ್ಟು ರಕ್ತದಾನಿಗಳು ಮುಂದೆ ಬರುತ್ತಿಲ್ಲ. ರಕ್ತದ ಅಗತ್ಯವಿರುವ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಕೇವಲ ಶೇ.50ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನದ ಬಗ್ಗೆ ಇನ್ನೂ ಕೆಲವರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕಿದೆ. ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ ಹೊಸ ರಕ್ತಕಣಗಳ ಉತ್ಪಾದನೆಗೆ ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
“ರೋಟರಿ ಕ್ಲಬ್ ಸಮಾಜಮುಖಿ ಸೇವಾ ಕಾರ್ಯಗಳ ಜತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ನಿರಂತರ ಸೇವೆ ಸಲ್ಲಿಸುತ್ತಿದ್ದು, ರಕ್ತದಾನ ಶಿಬಿರಗಳ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಕಾರ್ಯವನ್ನು ಮುಂದುವರಿಸಿದೆ” ಎಂದು ಹೇಳಿದರು.
ಶಿಬಿರದಲ್ಲಿ ರೋಟರಿ ಸದಸ್ಯ ಹಾಗೂ ಬಿಟಿಡಿಎ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಶಂಕರ ಹೆಬ್ಬಳ್ಳಿ ಅವರು ತಮ್ಮ ಕುಟುಂಬ ಸಹಿತ ರಕ್ತದಾನ ಮಾಡುವ ಮೂಲಕ ಮಾದರಿಯಾದರು. ರೋಟರಿ ಪದಾಧಿಕಾರಿ ಹಾಗೂ ಪತ್ರಕರ್ತ ಶ್ರೀಶೈಲ ಕೆ. ಬಿರಾದಾರ ಅವರು 35ನೇ ಬಾರಿ ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ರೋಟರಿ ಸದಸ್ಯರು ಹಾಗೂ ನಗರದ ನಾಗರಿಕರು ಸೇರಿ ಒಟ್ಟು 27 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಕೆರೂಡಿ ರಕ್ತನಿಧಿ ಕೇಂದ್ರದಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೋಲಾರ |ಸಿ.ಎಂ.ಮುನಿಯಪ್ಪರ ಆತ್ಮಕಥನ ದ್ವಿತೀಯ ಮುದ್ರಣ ಕಂಡ ಕಾಲಡಿಯ ಕಣ್ಣು
ಶಿಬಿರದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಅವಿನಾಶ ಕಟ್ಟಿಮನಿ, ಡಾ. ದೇವೇಂದ್ರ ಜಲ್ದೆ, ಚಂದ್ರಶೇಖರ ಕಟಗೇರಿ, ಜಯಪ್ರಕಾಶ ಬನ್ನಿ, ಸಂತೋಷ ಗೌಡರ, ಶ್ರೀಧರ ದಾಸ, ಚಂದ್ರಶೇಖರ ಮಾಳಿ, ಎಸ್.ಎಸ್. ಮಠ, ಎಸ್.ಎಲ್. ಚಿನ್ನನವರ, ರವಿ ಪಾಟೀಲ, ವಿಜಯ ಪಟಗುಂದಿ, ಸುಮಂಗಲಾ ಹದ್ಲಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ವಾಣಿ ಹೊಸೂರ, ಕಾರ್ಯದರ್ಶಿ ಪ್ರತಿಭಾ ದಂಡಿನ, ಖಜಾಂಜಿ ಶೋಭಾ ಹುಲಗಬಾಳಿ, ಎಡಿಟರ್ ದೀಪಾ ಬನ್ನಿ, ಕೆರೂಡಿ ರಕ್ತನಿಧಿ ಕೇಂದ್ರದ ಡಾ. ಶಶಿಕಲಾ ಅಂಟರತಾನಿ ಸೇರಿದಂತೆ ಹಲವರು ಇದ್ದರು.





