ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ತಿಂಗಳು ಸಮೀಪಿಸುತ್ತಿದೆ. ಸುಮಾರು ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯಗಳಿಗೆ ಇನ್ನೂ ಎಸ್‌ಐಆರ್ ಫಾರ್ಮ್ ವಿತರಣೆ ಆಗಿಲ್ಲ. ಇದರಿಂದ ಅಲೆಮಾರಿ ಸಮುದಾಯದ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ.
ಹಾವೇರಿ ಪಟ್ಟಣದ ಹೊರವಲಯದ ಇಜಾರಿಲಕಮಾಪುರದಲ್ಲಿ ಖಾಸಗಿ ಜಾಗದಲ್ಲಿ ಸುಮಾರು ವರ್ಷಗಳಿಂದ ಅಲೆಮಾರಿ ಸಮುದಾಯಗಳಾದ ಬುಡಗ ಜಂಗಮ, ಸುಡುಗಾಡು ಸಿದ್ಧರ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಇವರಲ್ಲಿ 22 ಮತದಾರರು ಸುಮಾರು ವರ್ಷಗಳಿಂದ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡುತ್ತಾ ಬಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈ ಅಲೆಮಾರಿ ಸಮುದಾಯಗಳಿಗೆ ಇದುವರೆಗೂ ಎಸ್‌ಐಆರ್ ಫಾರ್ಮ್ ವಿತರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿ ತಿಂಗಳು ಕಳೆಯುತ್ತಿದೆ. ನೂರಕ್ಕೆ ನೂರರಷ್ಟು ಎಸ್‌ಐಆರ್ ಫಾರ್ಮ್ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದುವರೆಗೂ ಇಜಾರಿಲಕಮಾಪುರದಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಅರ್ಹ 22 ಮತದಾರರ ಗುಡಿಸಲುಗಳಿಗೆ ಬಿಎಲ್‌ಒ ಭೇಟಿ ಮಾಡಿ ಎನ್ಯುಮರೇಷನ್ ಫಾರ್ಮ್ ನೀಡಿಲ್ಲ. ಅಲೆಮಾರಿ ಸಮುದಾಯದ ಅರ್ಹ ಮತದಾರರು ತಿಂಗಳುಗಳಿಂದ ಬಿಎಲ್‌ಒ ದಾರಿ ಕಾಯುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಅಸಹಾಯಕ ಅಲೆಮಾರಿ ಸಮುದಾಯದ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ ವ್ಯಕ್ತಪಡಿಸಿದ್ದಾರೆ.
ಅಲೆಮಾರಿ ಸಮುದಾಯದ ಜನರು ಬಹುತೇಕ ಅನಕ್ಷರಸ್ಥರು. ಎಸ್‌ಐಆರ್ ಫಾರ್ಮ್ ಕೊಟ್ಟರೂ ನಮಗೆ ತುಂಬಲು ಬರುವುದಿಲ್ಲ. ಅಧಿಕಾರಿಗಳೇ ನಮ್ಮ ಗುಡಿಸಲಿಗೆ ಬಂದು, ನಮ್ಮ ಎಸ್‌ಐಆರ್ ಫಾರ್ಮ್ ತುಂಬಿ ನಮ್ಮ ಮತದಾನದ ಹಕ್ಕು ಉಳಿಸಿಕೊಡಬೇಕು ಎಂದು ಅಲೆಮಾರಿ ಸಮುದಾಯ ಮನವಿ ಮಾಡಿದೆ.
ರಾಣೇಬೆನ್ನೂರು, ರಟ್ಟಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಜನರು ಸುಮಾರು ವರ್ಷಗಳಿಂದ ವಾಸಿಸುತ್ತಿದ್ದು, ಬಹುತೇಕರು ಅನಕ್ಷರಸ್ಥರು ಇದ್ದಾರೆ. ವಿಶೇಷ ಮತದಾರರ ಪರಿಷ್ಕರಣೆ ಪ್ರಕ್ರಿಯೆಯ ಫಾರ್ಮ್ ಸಿಕ್ಕಿದೆಯೇ ಎಂದು ಪರಿಶೀಲಿಸಿ, ಸಿಗದೇ ಇರುವವರಿಗೆ ಫಾರ್ಮ್ ನೀಡಿ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಅಗತ್ಯತೆ ಇದೆ.
ಈ ಕುರಿತು ಅಲೆಮಾರಿ ಸಮುದಾಯದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ, “ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿ ಒಂದು ತಿಂಗಳು ಕಳೆಯುತ್ತಿದೆ. ಇದುವರೆಗೂ ಯಾವ ಬಿಎಲ್‌ಒಗಳೂ ಬಂದು ಎನ್ಯುಮರೇಷನ್ ಫಾರ್ಮ್ ಕೊಟ್ಟಿಲ್ಲ, ಮನೆ ಭೇಟಿಯೂ ಮಾಡಿಲ್ಲ. ನಾವು ನಮ್ಮ ಮತದಾನದ ಹಕ್ಕಿನಿಂದ ಹೊರಗುಳಿದರೆ ಯಾರು ಹೊಣೆ? ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಲಿಲ್ಲ” ಎಂದು ಅಳಲು ತೋಡಿಕೊಂಡರು.
“ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದರೆ ಮೂರ್ನಾಲ್ಕು ಬಿಎಲ್‌ಒ ನಂಬರ್‌ಗಳನ್ನು ಕೊಟ್ಟು ಕರೆ ಮಾಡಲು ಹೇಳುತ್ತಾರೆ. ಇದುವರೆಗೂ ಯಾರಿಗೆಲ್ಲಾ ಕರೆ ಮಾಡಿದ್ದೇವೋ ಅವರೆಲ್ಲರೂ, ‘ನಿಮ್ಮ ಭಾಗದ ಬಿಎಲ್‌ಒ ನಾನಲ್ಲ’ ಎಂದು ಹೇಳಿದರು. ನಮ್ಮ ಜನರಿಗೆ ಓದು-ಬರಹ ಇಲ್ಲ. ಅಧಿಕಾರಿಗಳೇ ನಮ್ಮ ಗುಡಿಸಲಿಗೆ ಬಂದು ಎಸ್‌ಐಆರ್ ಫಾರ್ಮ್ ನೀಡಿ, ಅವರೇ ತುಂಬಿಕೊಂಡು ಹೋಗಬೇಕು. ಈ ಮೂಲಕ ನಮ್ಮ ಮತದಾನದ ಹಕ್ಕು ಉಳಿಸಬೇಕು” ಎಂದು ಹೇಳಿದರು.
ಈದಿನ್.ಕಾಮ್ ಜೊತೆಗೆ ಹಾವೇರಿ ತಹಶೀಲ್ದಾರ್ ಶರಣಮ್ಮ ಮಾತನಾಡಿ, “ಈ ಕೂಡಲೇ ಅಲೆಮಾರಿ ಸಮುದಾಯದ ಮುಖಂಡರು ಶೆಟ್ಟಿ ವಿಭೂತಿ ಅವರನ್ನು ಸಂಪರ್ಕ ಮಾಡಿ, ಯಾರಿಗೆಲ್ಲಾ ಎನ್ಯುಮರೇಷನ್ ಫಾರ್ಮ್ ಲಭ್ಯವಾಗಿಲ್ಲ ಎಂಬ ಮಾಹಿತಿ ಪಡೆದು ಫಾರ್ಮ್ ಭರ್ತಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




