ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಮುಂದಡಿ ಇಟ್ಟಿರುವ ಎಐಸಿಸಿ ಸಂಘಟನೆ, ʻಸ್ರಜನ್ʼ ಅಭಿಯಾನದಡಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಿಸಿದೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ವೀಕ್ಷಕರಾಗಿ ನೇಮಕಗೊಂಡಿರುವ ಎಐಸಿಸಿ ಆದಿವಾಸಿ ಘಟಕದ ಉಪಾಧ್ಯಕ್ಷ, ತೆಲಂಗಾಣದ ಡಾ.ತೆಜಾವತ್ ಬೆಲ್ಲಯ್ಯ ನಾಯಕ ಶನಿವಾರ ಬಾಗಲಕೋಟೆಗೆ ಆಗಮಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಹೊಸ ಸಾರಥಿ ಆಯ್ಕೆ ಕುರಿತು ಅವರು ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು ಮತ್ತು ಮುಂಚೂಣಿ ಘಟಕಗಳ ಪದಾಧಿಕಾರಿಗಳಿಂದ ಮತ್ತು ಎಲ್ಲಾ ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರ ಅಭಿಪ್ರಾಯವನ್ನು ಅವರು ಪಡೆಯಲಿದ್ದಾರೆ. ಮೂರು ದಿನಗಳಲ್ಲಿ ಡಿಸಿಸಿ ಕಚೇರಿಯಲ್ಲಿ ಮತ್ತು ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಎಲ್ಲ ಸ್ತರಗಳ ಪದಾಧಿಕಾರಿಗಳು, ಕಾರ್ಯಕರ್ತರ ಭೇಟಿಗೆ ಸಮಯಾವಕಾಶ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಈ ರೀತಿ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಇತಿಹಾಸದಲ್ಲಿ ಹೊಸ ಪ್ರಯೋಗ. ಈ ಹಿಂದೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರು, ಹಾಲಿ ಸಂಸದರು, ಮಾಜಿಗಳು ಒಮ್ಮತದಿಂದ ಸೂಚಿಸುತ್ತಿದ್ದ ಒಬ್ಬರ ಹೆಸರನ್ನು ಕೆಪಿಸಿಸಿ ಅಧ್ಯಕ್ಷರು ಪರಿಗಣಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುತ್ತಿದ್ದರು. ಮೇಲಿನಿಂದ ಆ ರೀತಿ ನೇಮಿಸುವ ಬದಲಿಗೆ, ಜಿಲ್ಲೆಗೆ ಹೋಗಿ ಕಾರ್ಯಕರ್ತರಿಂದ ಅಭಿಪ್ರಾಯ ಪಡೆದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಹೊಸ ಪರಂಪರೆಗೆ ಕಾಂಗ್ರೆಸ್ ಹೈಕಮಾಂಡ್ ಪೀಠಿಕೆ ಹಾಕಿದೆ.
ʻಇದು ಕಾಂಗ್ರೆಸ್ ಕೂಡ ಕೇಡರ್ ಬೇಸ್ ಪಾರ್ಟಿ ಆಗುವತ್ತ ಹೆಜ್ಜೆ ಹಾಕಲಾರಂಭಿಸಿದೆʼ ಎಂಬುದರ ಸೂಚನೆ ಇರಬಹುದು. ಎಲ್ಲರ ಅಭಿಪ್ರಾಯ ಪಡೆದು ಅಧ್ಯಕ್ಷರನ್ನು ಆರಿಸುವುದರಿಂದ ಇತರೆ ಆಕಾಂಕ್ಷಿಗಳು ಅಸಮಾಧಾನಗೊಳ್ಳಲು ಅವಕಾಶ ಇರುವುದಿಲ್ಲ. ಈಗ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡವರು ಮುಂದಿನ ಮೂರು ವರ್ಷಗಳ ಕಾಲ ಆ ಹುದ್ದೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರ ಅಧಿಕಾರಾವಧಿಯಲ್ಲೇ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಜರುಗಲಿವೆ.
ರಾಜ್ಯದಲ್ಲಿ ಜಿಪಂ, ತಾಪಂ, ಹಾಗೂ ಗ್ರಾಪಂ ಚುನಾವಣೆಗಳು ಕೂಡ ನಡೆಯಲಿವೆ. ಆದ್ದರಿಂದ ಈ ಅವಧಿಗೆ ಡಿಸಿಸಿ ಅಧ್ಯಕ್ಷರಾಗುವವರ ಮೇಲೆ ಮಹತ್ವದ ಜವಾಬ್ದಾರಿ ಇರಲಿದೆ. ಡಿಸಿಸಿ ಅಧ್ಯಕ್ಷರಾಗಲು ಅನೇಕರು ಆಕಾಂಕ್ಷಿಗಳಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನ ಸಮರ್ಥರಿದ್ದಾರೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಜಿಲ್ಲೆಯ ಗಡಿ ಭಾಗದ ಜಮಖಂಡಿ, ಮುಧೋಳ, ತೇರದಾಳ, ಬಾದಾಮಿ, ಹುನಗುಂದ ಕ್ಷೇತ್ರಗಳ ಕಟ್ಟಕಡೆಯ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸತತ ಸಂಪರ್ಕ ಇರುವವರು, ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೆ ಕನಿಷ್ಠ ಹೆಸರು, ಮುಖ ಪರಿಚಯ ಇರುವವರು ಎಷ್ಟು ಜನರಿದ್ದಾರೆ ಎಂಬುದು ಕೂಡ ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಪರಿಗಣನೆಗೆ ಬರಲಿದೆ.
ಬಾಗಲಕೋಟೆ ಜಿಲ್ಲಾ ಕೇಂದ್ರವೇ ಸಮಗ್ರ ಬಾಗಲಕೋಟೆ ಎಂದಾಗದು, ಜಿಲ್ಲಾ ಕೇಂದ್ರದಲ್ಲಿ ನಾಲ್ಕಾರು ಮಾಧ್ಯಮದವರ ಜೊತೆ ಸಂಪರ್ಕ ಇಟ್ಟುಕೊಂಡು ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದಷ್ಟೇ ಡಿಸಿಸಿ ಅಧ್ಯಕ್ಷರಾಗಲು ಮಾನದಂಡವಾಗದು. ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಮಾಜವಾದ ತತ್ವ ಸಿದ್ಧಾಂತಗಳಲ್ಲಿ ಬದ್ಧತೆ, ಜನಪರ ಹೋರಾಟಗಳ ಹಿನ್ನೆಲೆ, ಪಕ್ಷಕ್ಕೆ ಸದಾ ನಿಷ್ಠೆ, ಬಿಜೆಪಿಯ ಕೋಮುವಾದದ ವಿರುದ್ಧ ಗಟ್ಟಿ ಹೋರಾಟದ ಹಿನ್ನೆಲೆ ಕೂಡ ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಅಳತೆಗೋಲು ಆಗಬಹುದು.
ಡಿಸಿಸಿ ಅಧ್ಯಕ್ಷರ ಆಯ್ಕೆಯ ಈ ಕಸರತ್ತು ಪಕ್ಷದಲ್ಲಿ ಪ್ರಭಾವಶಾಲಿಗಳ ಮಾತಿಗಷ್ಟೇ ಮನ್ನಣೆ ಸಿಗುವ ಬದಲಿಗೆ, ಬಹುಮತಕ್ಕೆ ಬೆಲೆ ಸಿಗುತ್ತದೆ ಎಂಬ ಭರವಸೆಯನ್ನು ಕಾರ್ಯಕರ್ತರಲ್ಲಿ ಮೂಡಿಸಿದೆ. ವೀಕ್ಷಕರು ಒಂದು ದಿನದ ಮಟ್ಟಿಗೆ ತರಾತುರಿಯಲ್ಲಿ ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿ ಕೆಪಿಸಿಸಿಗೆ ವರದಿ ಸಲ್ಲಿಸದೇ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ದಿನಗಳವರೆಗೆ ಪಕ್ಷದ ವಿವಿಧ ಹಂತಗಳ ಧುರೀಣರು ಕಾರ್ಯಕರ್ತರ ಅಭಿಪ್ರಾಯ ಆಲಿಸುವುದರಿಂದ ಈ ಪ್ರಕ್ರಿಯೆಗೆ ಹೆಚ್ಚಿನ ತೂಕ ಬಂದಿದೆ.
ವಿಜಯಪುರ ಜಿಲ್ಲೆಯ ಕಂದಾಯ ಉಪ ವಿಭಾಗವಾಗಿದ್ದ ಬಾಗಲಕೋಟೆ, ಸ್ವತಂತ್ರ್ಯ ಜಿಲ್ಲೆಯಾದ ನಂತರದ ಮೂರು ದಶಕಗಳಲ್ಲಿ ಅನೇಕರು ಡಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿ ಪಕ್ಷದ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಳೆ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿ ಈಗ ನವನಗರದಲ್ಲಿ ತನ್ನದೇ ಆದ ಸುಸಜ್ಜಿತ ಸ್ವಂತ ಕಟ್ಟಡ ಹೊಂದಿದೆ. ಈಗ ಡಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿರುವವರಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ಇತ್ತೀಚೆಗಿನ ದಿನಗಳಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ವಲಸೆ ಬಂದವರೂ ಇದ್ದಾರೆ.
ಜಿಲ್ಲೆಯಲ್ಲಿ ಪ್ರಬಲ ಸಮುದಾಯವಾದ ಲಿಂಗಾಯತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತ ವರ್ಗದವರಲ್ಲಿ ಡಿಸಿಸಿ ಅಧ್ಯಕ್ಷರಾಗಲು ಅನೇಕ ಅರ್ಹರಿದ್ದಾರೆ. ಪಕ್ಷದ ಮಹಿಳಾ ಧುರೀಣರು ಕೂಡ ಈ ಸ್ಥಾನಕ್ಕೆ ಸಮರ್ಥರಿದ್ದಾರೆ. ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಕೂಡ ಪರಿಪಾಲನೆ ಆಗಲಿದೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ಐದು ಜನ ಎಂಎಲ್ಎಗಳು ಒಬ್ಬ ಎಂಎಲ್ ಸಿ ಲಿಂಗಾಯತ, ರೆಡ್ಡಿ, ಕುರುಬ, ಮಾದಿಗ, ನೇಕಾರ ಸಮುದಾಯದವರಿದ್ದಾರೆ. ಮುಧೋಳ, ಬೀಳಗಿ, ಬಾಗಲಕೋಟೆ ,ಹುನಗುಂದ, ಬಾದಾಮಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಲಿ ಶಾಸಕರಾಗಿರುವವರಲ್ಲಿ ಡಿಸಿಸಿ ಅಧ್ಯಕ್ಷರಾಗುವ ಆಸೆ ಯಾರಿಗೂ ಇಲ್ಲ ಎಂಬಂತೆ ಕಂಡು ಬರುತ್ತದೆ. ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದರೂ ಕ್ಯಾಬಿನೆಟ್ ರ್ಯಾಂಕ್ ಇರುವ ನಿಗಮ ಮಂಡಳಿ ಅಧ್ಯಕ್ಷರಾದರೂ ಆಗಬೇಕೆಂಬುದು ಶಾಸಕರ ಆಸೆಯಾಗಿದೆಯೇ ವಿನಃ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಆಸೆ ಅವರಲ್ಲಿ ಇಲ್ಲ. ಈಗ ಹೊಸ ಮುಖಗಳು ಡಿಸಿಸಿ ಅಧ್ಯಕ್ಷರಾಗಬೇಕಷ್ಟೆ.
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ- ಉಪಾಧ್ಯಕ್ಷರಿದ್ದಾರೆ. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರಿದ್ದಾರೆ. ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರಿದ್ದಾರೆ. ಇವರು ಸೇರಿದಂತೆ ಇನ್ನೂ ಕೆಲವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ವೀಕ್ಷಕರು ಆಕಾಂಕ್ಷಿಗಳಿಂದ ನೇರವಾಗಿ ಅರ್ಜಿ ಸ್ವೀಕರಿಸುತ್ತಿದ್ದಾರೆ. ಮೊದಲ ದಿನವೇ ಕೆಲವರು ಅರ್ಜಿ ಸಲ್ಲಿಸಿದ್ದಾರೆ.
ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳಿಂದ ಯಾರ ಯಾರ ಹೆಸರುಗಳು ಸೂಚಿಸಲ್ಪಡಲಿವೆ. ಡಿಸಿಸಿಗೆ ಯಾರು ಅಧ್ಯಕ್ಷರಾದರೆ ಸೂಕ್ತ ಎಂಬ ಭಾವನೆ ಕಾರ್ಯಕರ್ತರಲ್ಲಿದೆ ಎಂಬ ಚಿತ್ರಣ ಈ ತಿಂಗಳಾಂತ್ಯಕ್ಕೆ ಸಿಗಲಿದೆ. ವೀಕ್ಷಕರು ಎಐಸಿಸಿಯಿಂದ ನೇಮಕಗೊಂಡಿರುವುದರಿಂದ ಅವರು ಈ ಕುರಿತ ಸಮಗ್ರ ವರದಿಯನ್ನು ನೇರವಾಗಿ ಎಐಸಿಸಿ ಅಧ್ಯಕ್ಷರಿಗೆ ಸಲ್ಲಿಸಲಿದ್ದಾರೆ. ಡಝನ್‌ಗಟ್ಟಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರೂ, ವೀಕ್ಷಕರು ಅಂತಿಮವಾಗಿ ಆರರಿಂದ ಎಂಟು ಜನರ ಹೆಸರುಗಳನ್ನು ಶಿಫಾರಸು ಮಾಡಲಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು, ಐದು ದಶಕಗಳ ಹಿಂದೆಯೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಹಿರಿಮೆ ಇದೆ.
ಇಂತಹ ಉಜ್ವಲ ಹಿನ್ನೆಲೆ ಇರುವ ಈ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಯಾರ ಹೆಗಲಿಗೆ ಹಾಕಬಹುದು. ಡಿಸಿಸಿಗೆ ಹೊಸ ಅಧ್ಯಕ್ಷರಾಗುವವರು ಲಿಂಗಾಯತರೋ, ಅಹಿಂದ ವರ್ಗದವರೋ, ಮಹಿಳೆಯರೋ ಎಂಬುದನ್ನು ಕಾದು ನೋಡಬೇಕು .
ಬರಹ: ಮುತ್ತು ನಾಯ್ಕರ (ಪತ್ರಕರ್ತ, ಬಾಗಲಕೋಟೆ)

ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ




