ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕಾರ್ಮಿಕರು ಮುಂಜಾನೆ ಕೆಲಸಕ್ಕೆ ಬಂದು, ತಮಗೆ ನೀಡಿರುವ ಅಳತೆ ಪ್ರಕಾರ ಕೆಲಸ ಮಾಡಿ, ವಿಪರೀತ ಬಿಸಿಲಿಗೂ ಮುನ್ನ ಮನೆಗೆ ತೆರಳಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕಾಂದೂ ಅವರು ಅನುಮತಿ ನೀಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮನರೇಗಾ ಕಾರ್ಮಿಕರು ಮೃತಪಟ್ಟ ಬಳಿಕ ಎಚ್ಚೆತ್ತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ, ಮನರೇಗಾ ಕೂಲಿ ಕಾರ್ಮಿಕರಿಗೆ ಬೇಸಿಗೆ ಸಮಯದಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡುವ ಕುರಿತು ಪಿಡಿಒಗಳಿಗೆ ಸೂಚನೆ ನೀಡುತ್ತಿದ್ದಾರೆ.
ಏಪ್ರಿಲ್ 30, ಮಾರ್ಚ್ 2ರಂದು ಈ ದಿನ.ಕಾಮ್ ʼಬಿಸಿಲಿನ ತಾಪಕ್ಕೆ ಮನರೇಗಾ ಕಾರ್ಮಿಕರ ಸಾವು: ಕೆಲಸದ ಸಮಯ ಪರಿಷ್ಕರಣೆ ಕೂಲಿ ಕಾರ್ಮಿಕರಿಗೆ ಅನ್ವಯಿಸುವುದಿಲ್ಲವೇ?ʼ ಮತ್ತು ʼಬಿರುಬಿಸಿಲಿಗೆ ಸಿಲುಕಿ ನರಳುತ್ತಿರುವ ಮನರೇಗಾ ಕಾರ್ಮಿಕರು: ಕೆಲಸದ ಪ್ರಮಾಣಕ್ಕೆ ಸಿಗದ ವಿನಾಯಿತಿʼ ಎಂಬ ತಲೆಬರಹದ ಈ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಸಿಇಒ ಅವರು, ಚಂದ್ರಬಂಡಾ ಗ್ರಾ.ಪಂ ವ್ಯಾಪ್ತಿಯ ಅರಸಿಗೇರಾ ತಾಂಡದಲ್ಲಿ ನಡೆಯುತ್ತಿರುವ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕೂಲಿ ಕಾರ್ಮಿಕರಿಗೆ ಬೇಸಿಗೆ ಸಮಯದಲ್ಲಿ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಿರುವ ಕುರಿತು ಕೂಲಿಕಾರರಿಂದ ಮಾಹಿತಿ ಪಡೆದುಕೊಂಡರು.
“ಎನ್‌ಎಂಎಂಎಸ್ ಆ್ಯಪ್ ಮುಖಾಂತರವೇ ಕೂಲಿಕಾರರ ಹಾಜರಾತಿಯನ್ನು ಎರಡು ಬಾರಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಎಂದ ಅವರು, ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಮುಂಜಾನೆ ಕೆಲಸಕ್ಕೆ ಬರಬೇಕು. ನಿಮಗೆ ನೀಡಿರುವ ಅಳತೆ ಪ್ರಕಾರ ಕೆಲಸ ಮಾಡಬೇಕು” ಎಂದು ಕಾರ್ಮಿಕರಿಗೆ ಸೂಚಿಸಿದರು.

ಆರೋಗ್ಯ ಕೇಂದ್ರಕ್ಕೆ ಭೇಟಿ: ನಂತರ ಚಂದ್ರಬಂಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲ್ಯಾಬ್ ಟೆಸ್ಟ್, ಲಸಿಕೆ ಸಂಗ್ರಹ ಕೋಣೆ, ಹೆರಿಗೆಯ ಕೋಣೆ, ಪುರುಷ/ಮಹಿಳೆಯರ ವಾರ್ಡ್ ಹಾಗೂ ಶಸ್ತ್ರಚಿಕಿತ್ಸೆ ಕೋಣೆಗಳಿಗೆ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಗ್ರಂಥಾಲಯಕ್ಕೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಗ್ರಂಥಾಲಯದಲ್ಲಿರುವ ಪುಸ್ತಕಗಳ ವಿವರ ಪಡೆದರು. ಆರೋಗ್ಯ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡದ ಕಾರಣ ಅಧಿಕಾರಿ, ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕೆಂದರು ತಿಳಿಸಿದರು.
ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಒಣ, ಹಸಿ ಕಸ ವಿಂಗಡಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಪಿಡಿಒಗೆ ತರಾಟೆಗೆ ತೆಗೆದುಕೊಂಡರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಮಲ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ವೀಕ್ಷಣೆ ಮಾಡಿ ಶೀಫ್ರದಲ್ಲಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಇದನ್ನೂ ಓದಿದ್ದೀರಾ? ಸಿಡಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ; ರಾಜ್ಯದ ಜನರಿಗೆ ಸರ್ಕಾರದ ಸಲಹೆಗಳೇನು?
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಕಾರ್ಯನಿರ್ವಾಹಕ ಅಭಿಯಂತರ ಸತೀಶ್, ಸಹಾಯಕ ನಿರ್ದೇಶಕರು(ಗ್ರಾ.ಉ) ಹನುಮಂತ, ಸಹಾಯಕ ನಿರ್ದೇಶಕ(ಪಂ.ರಾ) ಶಿವಪ್ಪ, ಪಿಡಿಒ ಮೋಹಿನುದ್ದೀನ್, ಎಡಿಪಿಸಿ, ಡಿಐಇಸಿ, ಟಿಸಿ, ಟಿಎ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



