ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 12 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ ರಾಜ್ಯ ಆಹಾರ ಆಯೋಗದ ತಂಡವು ಕಲಾದಗಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚಿಸಿತು.
ತಂಡದ ಸದಸ್ಯೆ ವಿಜಯಲಕ್ಷ್ಮಿ ಅವರ ಸಮ್ಮುಖದಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.
ಜಿಲ್ಲೆಯ ವಿವಿಧೆಡೆ ಭೇಟಿ ನೀಡಿದ ಆಯೋಗದ ತಂಡವು ಪಡಿತರ ವಿತರಣೆ, ಶಾಲಾ ಮಕ್ಕಳಿಗೆ ನೀಡುವ ಆಹಾರ, ಅಂಗನವಾಡಿ ಕೇಂದ್ರಗಳ ವ್ಯವಸ್ಥೆ ಹಾಗೂ ಪಡಿತರ ಅಕ್ಕಿಯ ದಾಸ್ತಾನು ಮತ್ತು ಮರುಪ್ಯಾಕಿಂಗ್ ಕಾರ್ಯವನ್ನು ಪರಿಶೀಲಿಸಿತು.
ಬಿಟಿಡಿಎ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿದಾಗ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಬಾಳೆಹಣ್ಣುಗಳು ಗುಣಮಟ್ಟದಿಂದ ಕೂಡಿರದಿರುವುದು ಹಾಗೂ ಅನ್ನವನ್ನು ಸಮರ್ಪಕವಾಗಿ ಬೇಯಿಸದಿರುವುದು ಕಂಡುಬಂದಿತು. ಆಹಾರ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದೂ ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ.
ಎರಡು ಕೆ.ಜಿ. ಕಡಿಮೆ ಪಡಿತರ ವಿತರಣೆ ಆರೋಪ
ವಿದ್ಯಾಗಿರಿಯ ಗಡಗಡಿ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ, ನಿಗದಿತ ಪ್ರಮಾಣಕ್ಕಿಂತ ಎರಡು ಕೆ.ಜಿ. ಕಡಿಮೆ ಪಡಿತರ ನೀಡಲಾಗುತ್ತಿದೆ ಎಂದು ಫಲಾನುಭವಿಗಳು ಆಯೋಗದ ತಂಡಕ್ಕೆ ದೂರು ನೀಡಿದರು.
ಪಡಿತರ ವಿತರಣೆಯಲ್ಲಿ ಇಂತಹ ಲೋಪಗಳು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದರು.
ವಿದ್ಯಾಗಿರಿಯ ಅಂಗನವಾಡಿ ಕೇಂದ್ರದಲ್ಲಿಯೂ ಮೊಟ್ಟೆ ಖರೀದಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಲಭ್ಯವಿಲ್ಲದಿರುವುದು ಪರಿಶೀಲನೆಯ ವೇಳೆ ಕಂಡುಬಂದಿತು.
ಪಡಿತರ ಅಕ್ಕಿ ಮರುಪ್ಯಾಕಿಂಗ್ ಪರಿಶೀಲನೆ
ತೋಟಗಾರಿಕೆ ಇಲಾಖೆಯ ಸಮೀಪದಲ್ಲಿರುವ ಎಂ.ಎಸ್.ಪಿ.ಟಿ.ಸಿ. ಕೇಂದ್ರಕ್ಕೆ ಭೇಟಿ ನೀಡಿದ ತಂಡವು ಪಡಿತರ ಅಕ್ಕಿಯ ಮರುಪ್ಯಾಕಿಂಗ್ ಕಾರ್ಯದ ಕುರಿತು ಪರಿಶೀಲನೆ ನಡೆಸಿತು.
ಜಿಲ್ಲೆಯ ವಿವಿಧೆಡೆ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿರುವ ಎಲ್ಲ ಲೋಪದೋಷಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ಕುರಿತು ಸೂಕ್ತ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಬಾಗಲಕೋಟೆ ತಾಲೂಕು ಆಹಾರ ನಿರೀಕ್ಷಕ ಗಯ್ಯಾಳಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.




