ಭ್ರಷ್ಟಾಚಾರ ನಿರ್ಮೂಲನೆ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧ ಜಾಗೃತರಾಗಿ, ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ.ಜಿ.ಎಂ. ಮಹಾಸ್ವಾಮೀಜಿ ಹೇಳಿದರು.
ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಗುರುವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ‘ಸತ್ಯನಿಷ್ಠೆಯಿಂದ ಸಮೃದ್ಧಿ’ ಧ್ಯೇಯವಾಕ್ಯದಡಿ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಂಚದ ವ್ಯವಹಾರದಲ್ಲಿ ಮಧ್ಯವರ್ತಿಗಳೂ ಕಾನೂನಿನ ವ್ಯಾಪ್ತಿಗೆಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ದೊರೆಯಬೇಕಾದ ಸೇವೆಗಳನ್ನು ವಿಳಂಬವಿಲ್ಲದೆ, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಒದಗಿಸಬೇಕು. ಲಂಚ ನೀಡುವುದು, ಪಡೆಯುವುದು ಮತ್ತು ಲಂಚಕ್ಕೆ ಬೇಡಿಕೆ ಇಡುವುದು ಅಪರಾಧವಾಗಿದೆ.
ಸಾರ್ವಜನಿಕರಿಂದ ಹಣ ಅಥವಾ ಯಾವುದೇ ರೀತಿಯ ಪ್ರತಿಫಲವನ್ನು ಕೇಳುವುದು, ಸ್ವೀಕರಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಶಿಕ್ಷೆಗೆ ಅವಕಾಶವಿದೆ. ಲಂಚದ ವ್ಯವಹಾರದಲ್ಲಿ ಭಾಗಿಯಾಗುವ ಮಧ್ಯವರ್ತಿಗಳೂ ಕಾನೂನಿನ ವ್ಯಾಪ್ತಿಗೆ ಬರುತ್ತಾರೆ ಎಂದು ಎಚ್ಚರಿಸಿದರು.
ಸರ್ಕಾರ ಸಾರ್ವಜನಿಕ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವ ಅನುದಾನವನ್ನು ನಿಗದಿತ ಉದ್ದೇಶಗಳಿಗೆ ಸಮರ್ಪಕವಾಗಿ ಬಳಸಬೇಕು. ಸರ್ಕಾರಿ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅನುದಾನ ಬಳಸಿಕೊಂಡು ಕಳಪೆ ಗುಣಮಟ್ಟದ ಕಾಮಗಾರಿ ನಡೆಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವುದಲ್ಲದೆ, ಕಾನೂನು ಕ್ರಮಕ್ಕೂ ಕಾರಣವಾಗುತ್ತದೆ ಎಂದು ತಿಳಿಸಿದರು.
ಅಧಿಕಾರವೆಂದರೆ ಸೌಲಭ್ಯವಲ್ಲ, ಜವಾಬ್ದಾರಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ಕೇವಲ ಕಾನೂನಿನ ಅಗತ್ಯವಲ್ಲ; ಅದು ಪ್ರಜಾಪ್ರಭುತ್ವದ ನೈತಿಕ ಜವಾಬ್ದಾರಿಯಾಗಿದೆ. ‘ಅಧಿಕಾರವೆಂದರೆ ಜವಾಬ್ದಾರಿ, ಸೌಲಭ್ಯವಲ್ಲ’ ಎಂಬುದನ್ನು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಅರಿತುಕೊಳ್ಳಬೇಕು ಎಂದರು.ಸರ್ಕಾರಿ ಕಚೇರಿಗಳಿಗೆ ಬರುವ ಪ್ರತಿಯೊಬ್ಬ ನಾಗರಿಕನೂ ನ್ಯಾಯ, ಗೌರವ ಹಾಗೂ ಸಮಯಕ್ಕೆ ಸರಿಯಾಗಿ ಸೇವೆ ದೊರೆಯುವುದನ್ನು ನಿರೀಕ್ಷಿಸುತ್ತಾನೆ. ಆ ನಿರೀಕ್ಷೆಯನ್ನು ಈಡೇರಿಸುವುದು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸತ್ಯನಿಷ್ಠೆ ನಮ್ಮ ವ್ಯಕ್ತಿತ್ವವಾಗಲಿ, ಪಾರದರ್ಶಕತೆ ನಮ್ಮ ಕಾರ್ಯವಿಧಾನವಾಗಲಿ, ಜನಸೇವೆ ನಮ್ಮ ಧ್ಯೇಯವಾಗಲಿ ಎಂಬ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಹಾನಿಂಗ ನಂದಗಾವಿ ಅವರು ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸುರೇಶ ರೆಡ್ಡಿ, ಸರ್ಕಾರಿ ಅಭಿಯೋಜಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





