ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ‘ಪ್ರಜಾಪ್ರಭುತ್ವದ ಕರಾಳ ದಿನ’ ಆಚರಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
AICC ಸೂಚನೆಯ ಮೇರೆಗೆ ನಡೆದ ಪ್ರತಿಭಟನೆಯಲ್ಲಿ INDIA ಒಕ್ಕೂಟದ ಸಂಸದರು ಹಾಗೂ ಕಾಂಗ್ರೆಸ್ ನಾಯಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಲಾಯಿತು. ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಕೆ. ಶಂಭುಶೆಟ್ಟಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅತ್ಯಂತ ಮಹತ್ವದ ಸ್ಥಾನ ಹೊಂದಿವೆ. ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಉಳಿಯಬೇಕಾದರೆ ಚುನಾವಣಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಹಾಗೂ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಚುನಾಯಿತ ಜನಪ್ರತಿನಿಧಿಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಹೊಂದಿದ್ದಾರೆ. ಆದರೆ ಅಂತಹ ಸಂದರ್ಭದಲ್ಲಿ ಪೊಲೀಸ್ ಬಲಪ್ರಯೋಗ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
This video cannot be played in your browser. Open the video directly
ಪ್ರತಿಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶದ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡಲು ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ. ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಮರುಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಶಂಭುಶೆಟ್ಟಿ ಎಚ್ಚರಿಸಿದರು.
AICC ಸುತ್ತೋಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ INDIA ಒಕ್ಕೂಟದ ನಾಯಕರು ಜಂತರ್ ಮಂತರ್ಗೆ ತೆರಳುತ್ತಿದ್ದ ವೇಳೆ ಪೊಲೀಸ್ ಬಲಪ್ರಯೋಗ ನಡೆಸಿರುವುದನ್ನು ಖಂಡಿಸಲಾಗಿದ್ದು, ಇದನ್ನು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಬಣ್ಣಿಸಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಷ. ಹದ್ಲಿ, ಬ್ಲಾಕ್ ಅಧ್ಯಕ್ಷರಾದ ಅಕ್ಬರ ಮುಲ್ಲಾ, ಅಬ್ದುಲರಜಾಕ ಬೇಣೂರ, ದ್ಯಾಮಣ್ಣ ಗಾಳಿ, ಶ್ರೀಧರ ನೀಲನಾಯಕ, ಬಾದಾಮಿ ಶಿವಕುಮಾರ ಹಿರೇಮಠ, ಮಹಾದೇವಗೌಡ ಪಾಟೀಲ, ರಮೇಶ ತೇಲಿ, ಸುನೀಲ ಬಾಲಗಾವಿ, ಜಟ್ಟಪ್ಪ ಮಾದಾಪುರ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೇ, ಶಂಕರ ನಾಯಕ, ಕೃಷ್ಣ ಬದಾಮಿ, ರೇಣುಕಾ ಸೂಳಿಕೇರಿ, ನಾಗಮಲ್ಲೇಶ್ವರಿ, ಅಭಿಷೇಕ ತಳ್ಳಿಕೇರಿ, ಪ್ರಭು ಹಳ್ಳೂರ, ಪ್ರಭು ರುದ್ರಾಕ್ಷಿ, ಶ್ರೀಕಾಂತ ಪೂಜಾರಿ, ಅನಿಲ ವಾಡಕರ, ಯಲ್ಲಪ್ಪ ಮೇಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





