ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿದ ಎಂಟು ಕೋರ್ಸ್ ಗಳು ಮುಚ್ಚದೇ ಮುಂದುವರೆಸುವಂತೆ ಆಗ್ರಹಿಸಿ ಸರದಿ ಅನಿರ್ದಿಷ್ಟಾವಧಿ ಉಪವಾಸ ನಿರತ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿವಿ ಆವರಣದಲ್ಲಿ ಪ್ರತಿಭಟಿಸಿ, ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳೇ ನಾಶ ಮಾಡಲು ಮುಂದಾಗಿರುವುದು ಖಂಡನೀಯ. ಏಕಾಏಕಿ ಎಂಟು ಕೋರ್ಸುಗಳನ್ನು ರದ್ದು ಮಾಡುವುದು ಎಷ್ಟರಮಟ್ಟಿಗೆ ಸರಿಯಾಗಿದೆ. ಇದಕ್ಕೆಲ್ಲ ಯಾರು ಹೊಣೆ? ಸಂಬಂಧಿಸಿದ ಆಡಳಿತ ಮಂಡಳಿಯ ಕಾರ್ಯವೈಖರಿ ವಿಫಲವಾಗಿವೆ. ರಾಜ್ಯ ಸರ್ಕಾರದ ಯಾವುದೇ ಅಧಿಕಾರಿಗಳು ಬೇಟಿ ನೀಡದಿದ್ದಕ್ಕೆ ಅಭಿವೃದ್ಧಿ ಕುಂಠಿತವಾಗಿದೆ” ಎಂದು ಕಿಡಿಕಾರಿದರು.
“ವಿವಿ ಅಡಳಿತ ಮಂಡಳಿ ಲೋಪದೋಷಗಳಿಂದ ಅಭಿವೃದ್ಧಿ ಬದಲಾಗಿ ಅನೈತಿಕ, ಅಕ್ರಮ ಚಟುವಟಿಕೆಗಳು, ಭ್ರಷ್ಟಾಚಾರ ತಾಂಡವಾಡುತ್ತಿವೆ. 9 ದಿವಸಗಳ ಕಾಲ ಉಪವಾಸ ಧರಣಿ ನಿರತ ಅತಿಥಿ ಉಪನ್ಯಾಸಕರನ್ನು ವೇತನ ಕೊಡದೇ ಬಾಕಿ ಉಳಿಸಿಕೊಂಡು, ಏಕಾಏಕಿ ಕೆಲಸದಿಂದ ಬಿಡುಗಡೆ ಮಾಡಿ ಬೀದಿಗೆ ತಳ್ಳಿರುವ ಜಾನಪದ ವಿವಿ ಆಡಳಿತ ಮಂಡಳಿ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮಧ್ಯೆ ಪ್ರವೇಶ ಮಾಡಬೇಕು” ಎಂದು ಆಗ್ರಹಿಸಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಜಾನಪದ ವಿಶ್ವವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ವಿವಿ ಅಭಿವೃದ್ಧಿ ಕಾಣದೆ ಒಂದಾಲೊಂದು ಸಮಸ್ಯೆಗಳ ಮದ್ಯೆ ನರಳಾಡುತ್ತಿದೆ. ವಿದ್ಯಾರ್ಥಿಗಳು ದಾಖಲಾತಿ, ಪ್ರವೇಶ ಶುಲ್ಕ, ಅಂಕಪಟ್ಟಿ, ಪರೀಕ್ಷಾ ಶುಲ್ಕ, ಬಸ್ಸಿನ ಸಮಸ್ಯೆಗಳು, ಹಾಸ್ಟೆಲ್ ಸಮಸ್ಯೆಗಳು, ಅತಿಥಿ ಉಪನ್ಯಾಸಕರ ನೇಮಕಾತಿ, ವೇತನ ಹೀಗೆ ಅನೇಕ ಸಮಸ್ಯೆಗಳ ಗೂಡಾಗಿದೆ. ವಿವಿಯು ಸಮಸ್ಯೆಗಳ ಪರಿಹಾರಕ್ಕಾಗಿ, ಅಭಿವೃದ್ಧಿಗಾಗಿ ಚಿಂತನೆ ನಡೆಸಬೇಕಾದ ರಾಜ್ಯ ಸರ್ಕಾರವು ಪ್ರಸ್ತುತ ವರ್ಷ ಎಂಟು ಕೋರ್ಸ್ ಗಳು ಮುಚ್ಚುತ್ತಿರುವ ಬೆಳವಣಿಗೆಯನ್ನು ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಮಂಜುನಾಥ ಕರ್ಜಗಿ ಮಾತನಾಡಿ, “ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು” ಎಂದರು.
ಧರಣಿ ನಿರತ ಅತಿಥಿ ಉಪನ್ಯಸಕರು ಡಾ. ಎಚ್.ಎಚ್ ನಧಾಫ್ ಮಾತನಾಡಿ, “ಕನ್ನಡ ಮತ್ತು ಜಾನಪದ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತದ್ದೇನೆ. 2025-26 ಸಾಲಿನಲ್ಲಿ ನಮ್ಮನ್ನು ಪೂರ್ಣಾವಧಿ ವರೆಗೆ ದುಡಿಸಿಕೊಂಡು, ಒಂದು ತಿಂಗಳು ಇಪ್ಪತೈದು ಸಾವಿರ ರೂ ವೇತನ ಹಾಕಿ, ಮೇ ಮತ್ತು ಜೂನ್ ತಿಂಗಳಲ್ಲಿ ವೇತನ ಕಡಿತ ಮಾಡಿರುವರು. ಪೂರ್ಣಾವಧಿ ವೇತನ ಇಪ್ಪತೈದು ಸಾವಿರ ಹಾಕುವ ಬದಲಿಗೆ ಹನ್ನೆರಡುವರೆ ಸಾವಿರ ರೂ ಹಾಕಿ ಅರೆಕಾಲಿಕ ಎಂದು ಹೇಳುತ್ತಿದ್ದಾರೆ. ಇದು ನಮಗೆ ದೊಡ್ಡ ಅನ್ಯಾಯವಾಗಿದೆ” ಎಂದರು.
“2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ಚತುರ್ಮಾಸ ಆರಂಭವಾಗಿ ಎರಡನೇ ಚಥುರ್ಮಾಸ ಆರಂಭ ಆಗಬೇಕಿತ್ತು. ಆದರೆ ಮೂರುವರೆ ತಿಂಗಳಾದರೂ ಇನ್ನೂ ಆರಂಭವಾಗಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದ ಹಾಗೆ ಬೇಗ ತರಗತಿಗಳನ್ನು ಆರಂಭಿಸಬೇಕೆಂದು ಮನವಿ ಕೊಟ್ಟಿದ್ದೇವೆ. ಇವತ್ತಿನವರೆಗೂ ಸ್ಪಂದನೆ ನೀಡಲ್ಲ. ಇವತ್ತಿಗೆ ಒಂಬತ್ತು ದಿನಗಳಾದರೂ ಒಬ್ಬರೂ ಮಾತನಾಡಿಸುವ ಸೌಜನ್ಯ ಕೂಡ ಮಾಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿ ನಿರತ ಅತಿಥಿ ಉಪನ್ಯಸಕರು ಡಾ.ಅಭಿಲಾಷ ಎಚ್.ಕೆ. ಮಾತನಾಡಿ, “ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಗೊಳಿಸಿರುವ ಎಂಟು ಕೋರ್ಸಗಳನ್ನು ಪುಃನ ಆರಂಭಿಸಬೇಕು. ಈ ಹಿಂದೆ ಈ ಎಂಟು ಕೋರ್ಸಗಳಿಂದ ಪದವಿ ಪಡೆದ ವಿದ್ಯಾರ್ಥಿಗಳ ಅಂಕ ಪಟ್ಟಿಗೆ ಮಾನ್ಯತೆ ಸಿಕ್ಕಿದೆ ಎನ್ನು ಆದೇಶ ಪತ್ರ ಕೊಡಬೇಕು. ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಆರಂಭ ಆಗಿ ಮೂರು ತಿಂಗಳು ಕಳೆದರೂ ತರಗತಿಗಳು ಆರಂಭವಾಗಿಲ್ಲ. ತಕ್ಷಣಕ್ಕೆ ತರಗತಿಗಳನ್ನು ಆರಂಭಿಸಬೇಕು. ಜೊತೆಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಅದೇಶ ಪ್ರತಿ ಇಲ್ಲದೇ ನಾವು ದುಡಿಯುತ್ತಿದ್ದೇವೆ. ಕೂಲಿ ಕಾರ್ಮಿಕನಿಗೂ ಉದ್ಯೋಗ ಭದ್ರತೆ ಇರುತ್ತದೆ. ನಮಗೂ ಅದು ಇಲ್ಲ. ಆದೇಶ ಪ್ರತಿ ಇಲ್ಲದೇ ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದೇವೆ. ಎಷ್ಟೊ ಬಾರಿ ಮನವಿ ಮಾಡಿದರು ಆದೇಶ ಪ್ರತಿ ಕೊಟ್ಟಿಲ್ಲ. ಆದೇಶ ಪ್ರತಿ ಇಲ್ಲದ ಕಾರಣಕ್ಕೆ ಅವರು ಮನಸೋ ಇಚ್ಛೆ, ವೇತನ ಮಾಡುತ್ತಿದ್ದಾರೆ. ನಮ್ಮ ಅಕೌಂಟಿಗೆ ಸಂಬಳ ಆದ ಮೇಲೆಯೇ ನಾವು ಪೂರ್ಣಕಾಲಿಕನಾ ಅಥವಾ ಅರೆಕಾಲಿಕನಾವೆಂದು ಗೊತ್ತಾಗುವುದು. ಸೇವಾ ಪ್ರಮಾಣ ಪತ್ರವನ್ನು ಕೊಡುತ್ತಿಲ್ಲ. ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಒಂಬತ್ತು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ ಮಾತನಾಡಿದರು. ಈ ವೇಳೆ ಉಪವಾಸ ಧರಣಿ ನಿರತ ಅತಿಥಿ ಉಪನ್ಯಾಸಕರು ಡಾ.ಶಿಲಿನಾ ಕೋಟೆ ಎನ್, ಡಾ. ಸುವರ್ಣ ಶೃಂಗೇರಿ, ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಅಣ್ಣಪ್ಪ ಕೊರವರ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರು, ಡಿಎಚ್ಎಸ್ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ, ಪ್ರಬುದ್ಧ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕ ಚನ್ನಬಸವ ಸಿದಣ್ಣನವರ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ರವಿ ಬಂಕಾಪುರ, ನಾಗರಾಜ, ಕೃಷ್ಣಪ್ಪ ಗದಗ, ಯೋಗೇಶ ಗೌಡ್ರು, ಕುಮಾರ್ ಹಡಪದ್, ಕಾರ್ತಿಕ್ ನೀರಲಗಿ, ಚೇತನ್ ಕುಮಾರ್, ಫಾತಿಮಾ ಬೇಗಮ್, ಭಾಗ್ಯಶ್ರೀ ಕೊತಂಬರಿ, ಪ್ರೀತಿ ಹಿರೇಮಠ, ಪೂಜಾ ಸುತಗಟ್ಟಿ, ಪವಿತ್ರ ಹರಿಕೇರಿ, ರಕ್ಷಿತಾ ಓಲೇಕಾರ್ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




