ಬಾಗಲಕೋಟೆ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳ ಅನುಷ್ಠಾನದಲ್ಲಿ ಕಂಡುಬರುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, 30 ದಿನಗಳೊಳಗೆ ವಾಸ್ತವ ಸ್ಥಿತಿಯ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿ, “ಬಹುಗ್ರಾಮ ನೀರಿನ ಯೋಜನೆಗಳ ಮೂಲಕ ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂಬ ದೂರುಗಳು ಶಾಸಕರಿಂದ ವ್ಯಕ್ತವಾಗಿವೆ. ಜಲಜೀವನ್ ಮಿಷನ್ ಕಾಮಗಾರಿಗಳ ಗುಣಮಟ್ಟ ಹಾಗೂ ಅನುಷ್ಠಾನದ ಕುರಿತು ಆಕ್ಷೇಪ ಕೇಳಿಬಂದಿರುವುದರಿಂದ, ವಾಸ್ತವಾಂಶ ಆಧಾರಿತ ವರದಿ ಅಗತ್ಯವಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜೆ.ಟಿ ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬಹುಗ್ರಾಮ ನೀರಿನ ಯೋಜನೆಗಳ ಕೊನೆಯ ಹಂತದ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಆರ್ ಬಿ ತಿಮ್ಮಾಪುರ, ಜಿಲ್ಲೆಯ ಸುಮಾರು ಶೇ.60ರಷ್ಟು ಬಹುಗ್ರಾಮ ನೀರಿನ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
“ಘಟಪ್ರಭಾ, ಮಲಪ್ರಭಾ ಹಾಗೂ ಅಲಮಟ್ಟಿ ಹಿನ್ನೀರಿನ ಪ್ರದೇಶದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಕಡಿಮೆ ಇದ್ದರೂ, ಹಿಪ್ಪರಗಿ ಬ್ಯಾರೇಜ್ ವ್ಯಾಪ್ತಿಯ ಗ್ರಾಮಗಳ ಪರಿಸ್ಥಿತಿ ಕಳವಳಕಾರಿಯಾಗಿದೆ. ಅಲ್ಲಿನ ಜನರಿಗೆ ನಿರಂತರ ನೀರು ಪೂರೈಕೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೊಳವೆಬಾವಿ ಕೊರೆಯುವುದನ್ನೇ ಶಾಶ್ವತ ಪರಿಹಾರವೆಂದು ಪರಿಗಣಿಸಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊಸ ಕೊಳವೆಬಾವಿ ಕೊರೆಯಬೇಕು. ಅಗತ್ಯವಿದ್ದಲ್ಲಿ ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪಡೆಯುವ ವ್ಯವಸ್ಥೆ ಮಾಡಬೇಕು. ಈಗ ಗುರುತಿಸಿರುವ 350 ಕೊಳವೆಬಾವಿಗಳು ಸಾಲುವುದಿಲ್ಲ. ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಜೆ.ಟಿ ಪಾಟೀಲ್, ಗಲಗಲಿ ಹಾಗೂ ಚಿಕ್ಕಪಡಸಲಗಿ ಬ್ಯಾರೇಜ್‌ಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ನೀಡಲು ಆಗ್ರಹಿಸಿದರು. ಶಾಸಕ ಸಿದ್ದು ಸವದಿ, ಹಿಪ್ಪರಗಿ ಬ್ಯಾರೇಜಿನ ಎಲ್ಲಾ ಗೇಟ್‌ಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, “ಬ್ಯಾರೇಜ್‌ನಲ್ಲಿ ಒಟ್ಟು 22 ಗೇಟ್‌ಗಳಿದ್ದು, ಅವುಗಳಲ್ಲಿ ಆರು ಗೇಟ್‌ಗಳ ಸ್ಥಿತಿ ಗಂಭೀರವಾಗಿದೆ. ಗೇಟ್‌ಗಳ ಸುರಕ್ಷತಾ ಸ್ಥಿತಿ ತಿಳಿಯಲು ಅಲ್ಟ್ರಾಸೋನಿಕ್ ಪರೀಕ್ಷೆ ನಡೆಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದೆ. ಎಲ್ಲಾ ಗೇಟ್‌ಗಳ ಬದಲಾವಣೆಗೆ ₹43 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವ ಎಂ ಬಿ ಪಾಟೀಲ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಉಮೇಶ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.




