ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದಲ್ಲಿರುವ 14 ಹಳ್ಳಿಗಳ ಜನರು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಾವು ನಿಖರವಾಗಿ ಯಾವ ರಾಜ್ಯಕ್ಕೆ ಸೇರಿದ್ದೇವೆ ಎಂಬ ಗಡಿ ಪ್ರಶ್ನೆಯನ್ನು ಮೊದಲು ಇತ್ಯರ್ಥವಾಗಬೇಕು. ಅಲ್ಲಿಯವರೆಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಹಳ್ಳಿಗಳ ಅನೇಕ ನಿವಾಸಿಗಳು, ಚುನಾವಣಾ ಅಧಿಕಾರಿಗಳು ನೀಡುತ್ತಿರುವ ಎಸ್‌ಐಆರ್ ನಮೂನೆಗಳನ್ನು (ಫಾರ್ಮ್) ಸ್ವೀಕರಿಸಲು ನಿರಾಕರಿಸಿದ್ದಾರೆ.
ಅಂದಹಾಗೆ, ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಭಾಗದಲ್ಲಿರುವ ಪರಂದೋಲಿ, ಮುಕದ್ದಮ್‌ಗುಡಾ, ಅಂತಾಪುರ ಮತ್ತು ಬೋಲಾಪಟಾರ್ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಈ 14 ಹಳ್ಳಿಗಳ ಮೇಲೆ ಎರಡೂ ರಾಜ್ಯಗಳು ತಮ್ಮ ಹಕ್ಕನ್ನು ಪ್ರತಿಪಾದಿಸಿವೆ. ಉಭಯ ರಾಜ್ಯಗಳು ಈ ಹಳ್ಳಿಗಳು ತಮ್ಮ ವ್ಯಾಪ್ತಿಗೆ ಒಳಪಟ್ಟಿವೆ ಎಂದು ವಾದಿಸುತ್ತಿವೆ. ಸದ್ಯಕ್ಕೆ ಗಡಿ ವಿವಾದವು ಸುಪ್ರೀಂ ಕೋರ್ಟ್ ಪಡಸಾಲೆಯಲ್ಲಿ ಕೊಳೆಯುತ್ತಿದೆ. ಆದರೆ, ಇಲ್ಲಿನ ನಿವಾಸಿಗಳು ತಾವು ನಿಜಕ್ಕೂ ಯಾವ ರಾಜ್ಯಕ್ಕೆ ಸೇರಿದ್ದೇವೆ ಎಂಬ ಖಚಿತತೆ ಇಲ್ಲದೆ, ಹೈರಾಣಾಗುತ್ತಿದ್ದಾರೆ.
ವಿವಾದ ಗೂಡಾಗಿರುವ ಈ 14 ಹಳ್ಳಿಗಳಲ್ಲಿ ಸುಮಾರು 6,000 ಜನಸಂಖ್ಯೆಯಿದೆ. ಈ ಪೈಕಿ 3,500ರಷ್ಟು ಮತದಾರರಿದ್ದಾರೆ. 1956ರಲ್ಲಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ನಡೆದಾಗಿನಿಂದಲೂ, ಇಲ್ಲಿನ ನಿವಾಸಿಗಳು ದಶಕಗಳಿಂದ ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅಂದಿನ ಜಂಟಿ ಆಂಧ್ರಪ್ರದೇಶ (ಪ್ರಸ್ತುತ ತೆಲಂಗಾಣ) ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿಯೂ ಮತ ಚಲಾಯಿಸುತ್ತಾ ಬಂದಿದ್ದಾರೆ. ಅಂದಿನಿಂದ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಇಲ್ಲಿನ ಮತದಾರರು ಇಬ್ಬರು ಸರಪಂಚರು, ಇಬ್ಬರು ಶಾಸಕರು ಹಾಗೂ ಇಬ್ಬರು ಸಂಸದರನ್ನು ಆಯ್ಕೆ ಮಾಡುತ್ತಿರುವುದು ಇಲ್ಲಿನ ವಿಶಿಷ್ಟ ಪರಿಸ್ಥಿತಿಯಾಗಿದೆ.
ಹಳ್ಳಿಗಳಿಗೆ ದೊರೆಯುತ್ತಿದೆ ಎರಡೂ ರಾಜ್ಯಗಳ ಸೌಲಭ್ಯ
ಈ ಹಳ್ಳಿಗಳ ನಿವಾಸಿಗಳು ಎರಡೂ ರಾಜ್ಯಗಳ ಸರ್ಕಾರಗಳು ನೀಡಿರುವ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಇವುಗಳಲ್ಲಿ ಕೆಲವು ಹಳ್ಳಿಗಳಿಗೆ ಎರಡೂ ರಾಜ್ಯಗಳು ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ಒದಗಿಸಿವೆ. ಕೆಲವು ಗ್ರಾಮಗಳಲ್ಲಿ ಎರಡೂ ರಾಜ್ಯಗಳ ಪಡಿತರ ಅಂಗಡಿಗಳೂ ಇವೆ.
ಈ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆಲಂಗಾಣವನ್ನು ಪ್ರತಿನಿಧಿಸುವ ಒಬ್ಬರು ಹಾಗೂ ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಮತ್ತೊಬ್ಬರಂತೆ ಇಬ್ಬರು ಸರಪಂಚರಿದ್ದಾರೆ. ಅಂತೆಯೇ, ತೆಲುಗು ಮತ್ತು ಮರಾಠಿ ಭಾಷೆಗಳ ತಲಾ ಎರಡು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಎರಡೂ ರಾಜ್ಯಗಳು ಪ್ರತ್ಯೇಕವಾಗಿ ಸ್ಥಾಪಿಸಿವೆ.
ರಸ್ತೆ ಸಂಪರ್ಕದ ವಿಷಯಕ್ಕೆ ಬಂದರೆ, ಮಹಾರಾಷ್ಟ್ರ ಸರ್ಕಾರವು ಚಂದ್ರಾಪುರ ಕಡೆಯಿಂದ ಸಂಪರ್ಕಿಸುವ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸಿದೆ; ಆದರೆ, ತೆಲಂಗಾಣ ಕಡೆಯಿಂದ ಬರುವ ಜನರಿಗೆ ಮಾತ್ರ ಕಲ್ಲುಬಂಡೆಗಳಿಂದ ಕೂಡಿದ ದುರ್ಗಮ ಹಾದಿ ಎದುರಾಗುತ್ತದೆ.
ತೆಲಂಗಾಣ-ಮಹಾರಾಷ್ಟ್ರ ಗಡಿಯಲ್ಲಿ ಸುಮಾರು 80 ಚದರ ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿರುವ ಈ ಹಳ್ಳಿಗಳು ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಕೇರಮೇರಿ ತಾಲೂಕು ಮತ್ತು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜೀವಿ ತಾಲೂಕು ವ್ಯಾಪ್ತಿಗೆ ಒಳಪಡುತ್ತವೆ.
ಈ ಗಡಿ ವಿವಾದವು 1956ರಲ್ಲಿ ಆಂಧ್ರಪ್ರದೇಶ ರಾಜ್ಯ ರಚನೆಯಾದಾಗಿನಿಂದಲೂ ಮುಂದುವರಿದಿದೆ. 1956ರವರೆಗೆ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ಈ ಹಳ್ಳಿಗಳು, ಆಂಧ್ರಪ್ರದೇಶದ ರಚನೆಯ ನಂತರ ಸಾಂಸ್ಕೃತಿಕ ಸಂಬಂಧಗಳ ಕಾರಣದಿಂದ ಮಹಾರಾಷ್ಟ್ರಕ್ಕೆ ಹತ್ತಿರವಾಗಿದ್ದವು. ಆದರೆ, ಭೌಗೋಳಿಕವಾಗಿ ಆಂಧ್ರಪ್ರದೇಶಕ್ಕೆ ಹತ್ತಿರವಾಗಿದ್ದವು. ಈ ಗೊಂದಲಗಳ ನಡುವೆಯೇ 1956ರ ಭಾಷಾವಾರು ರಾಜ್ಯ ಮರುಸಂಘಟನೆಯಡಿ 1960ರಲ್ಲಿ ಮಹಾರಾಷ್ಟ್ರ ರಚನೆಯಾದಾಗ ಈ ಹಳ್ಳಿಗಳನ್ನು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜೀವಿ ತಾಲೂಕಿಗೆ ಸೇರಿಸಲಾಯಿತು.
ಆದರೆ, 1978ರಲ್ಲಿ ಆಂಧ್ರಪ್ರದೇಶ ಸರ್ಕಾರವು ಸಮಿತಿಯೊಂದರ ವರದಿಯ ಆಧಾರದ ಮೇಲೆ ಈ ಹಳ್ಳಿಗಳ ಮೇಲೆ ಹಕ್ಕು ಸಾಧಿಸಿತು. ಈ ವರದಿಯು ವಿಭಿನ್ನ ಗಡಿಯನ್ನು ಗುರುತಿಸಿದ್ದರಿಂದ ಎರಡೂ ರಾಜ್ಯಗಳ ನಡುವೆ ಸಂಘರ್ಷ ಆರಂಭವಾಯಿತು. ಈ ವಿವಾದವನ್ನು ಬಗೆಹರಿಸಲು 1983ರಲ್ಲಿ ಉಭಯ ಸರ್ಕಾರಗಳು ಕೆ.ಕೆ. ನಾಯ್ಡು ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿದವು. ಸುದೀರ್ಘ ಅಧ್ಯಯನದ ನಂತರ, ಈ ಹಳ್ಳಿಗಳು ಅಂದಿನ ಆಂಧ್ರಪ್ರದೇಶಕ್ಕೆ ಸೇರಬೇಕು ಎಂದು ಆಯೋಗ ನಿರ್ಧರಿಸಿತು. ಆದರೆ, ಈ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. 1996ರಲ್ಲಿ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿತಾದರೂ, ಈ ವಿಷಯವು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿಯೇ ಬಾಕಿ ಉಳಿದಿದೆ ಎಂದು ವರದಿಗಳು ತಿಳಿಸುತ್ತವೆ.
ಏಕಕಾಲದಲ್ಲಿ ಆರಂಭವಾದ ‘ಎಸ್‌ಐಆರ್’ ಪ್ರಕ್ರಿಯೆ
ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಭಾಗವಾಗಿ ತೆಲಂಗಾಣ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಏಕಕಾಲದಲ್ಲಿ ಈ ಹಳ್ಳಿಗಳಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೆ, ‘ಒಬ್ಬ ವ್ಯಕ್ತಿಗೆ ಒಂದೇ ಮತ’ ಎಂಬ ನಿಯಮವಿರುವುದರಿಂದ, ಚುನಾವಣಾ ಅಧಿಕಾರಿಗಳು ಕೇವಲ ಯಾವುದಾದರೂ ಒಂದು ರಾಜ್ಯದ ಪಟ್ಟಿಯಲ್ಲಿ ಮಾತ್ರ ಇವರ ಹೆಸರನ್ನು ನೋಂದಾಯಿಸಬಹುದಾದ ವಿಚಿತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ.
ತೆಲಂಗಾಣದಲ್ಲಿ ಜೂನ್ 25 ರಂದು ಈ ಪ್ರಕ್ರಿಯೆ ಆರಂಭವಾದಾಗ, ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆಯಾಗಿ ಕೇರಮೇರಿ ತಹಶೀಲ್ದಾರ್ ಪುಲ್ಲೆಮ್ಲ ನಾಗಾರ್ಜುನ ಗೌಡ್ ನೇತೃತ್ವದ ತಂಡವು ಪರಂದೋಲಿ ಗ್ರಾಮದಲ್ಲಿ ಮೊಕ್ಕಾಂ ಹೂಡಿ ನಮೂನೆಗಳನ್ನು ವಿತರಿಸಲು ಪ್ರಯತ್ನಿಸಿತು. ಆದರೆ, ಜೂನ್ 30ರಿಂದ ಮಹಾರಾಷ್ಟ್ರದಲ್ಲಿಯೂ ಎಸ್‌ಐಆರ್ ಆರಂಭವಾಗಿದ್ದು, ಈಗ ಅಲ್ಲಿನ ಅಧಿಕಾರಿಗೂ ಈ ಗ್ರಾಮಗಳ ಜನರಿಗೆ ಎಸ್‌ಐಆರ್ ಫಾರ್ಮ್‌ಗಳನ್ನು ವಿತರಿಸಲು ಸಂಪರ್ಕಿಸುತ್ತಿದ್ದಾರೆ.
ತಹಶೀಲ್ದಾರ್ ನಾಗಾರ್ಜುನ ಅವರ ಪ್ರಕಾರ, ಅಂತಾಪುರ ಮತ್ತು ಬೋಲಾಪಟಾರ್ ಪಂಚಾಯತಿಗಳ ವ್ಯಾಪ್ತಿಯ ಬಹುತೇಕ ನಿವಾಸಿಗಳು ತೆಲಂಗಾಣ ಸರ್ಕಾರದ ನಮೂನೆಗಳನ್ನು ಸ್ವೀಕರಿಸಿದ್ದಾರೆ. ಆದರೆ, ಪರಂದೋಲಿ ಮತ್ತು ಮುಕದ್ದಮ್‌ಗುಡಾ ಪಂಚಾಯತಿ ವ್ಯಾಪ್ತಿಯ ಕೋಟಾ, ಲೇಟಿಗುಡಾ, ಶಂಕರಲೋಡ್ಡಿ ಹಾಗೂ ಮಹಾರಾಜ್‌ಗುಡಾ ಮುಂತಾದ ಪ್ರದೇಶಗಳ ಮರಾಠಿ ಮಾತನಾಡುವ ಪರಿಶಿಷ್ಟ ಜಾತಿಯ (SC) ಮತದಾರರು ಮಹಾರಾಷ್ಟ್ರದ ಕಡೆಗೆ ಒಲವು ಹೊಂದಿರುವುದರಿಂದ ಫಾರ್ಮ್‌ಗಳನ್ನು ಸ್ವೀಕರಿಸಿಲ್ಲ.
ಮತ್ತೊಂದೆಡೆ, ಲಂಬಾಣಿ ಸಮುದಾಯದ ಮತದಾರರು ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿರುವುದರಿಂದ ತೆಲಂಗಾಣದ ಅಧಿಕಾರಿಗಳಿಂದ ನಮೂನೆಗಳನ್ನು ಪಡೆಯಲು ಉತ್ಸುಕರಾಗಿದ್ದಾರೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ (VJNT) ಸೇರಿಸಲಾಗಿದೆ. ತೆಲಂಗಾಣದ ಮತದಾರರ ಪಟ್ಟಿಯಿಂದ ಹೆಸರು ಕಟ್ ಆದರೆ ತಮಗೆ ಸಿಗುತ್ತಿರುವ ಎಸ್‌ಟಿ ಸ್ಥಾನಮಾನ ಕಳೆದುಕೊಳ್ಳಬಹುದು ಎಂಬ ಆತಂಕ ಅವರಲ್ಲಿದೆ. ಈ 14 ಹಳ್ಳಿಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರು ಸಮಾನ ಸಂಖ್ಯೆಯಲ್ಲಿದ್ದು, ಪ್ರತಿ ಹಳ್ಳಿಗೂ ಎರಡು ಪ್ರತ್ಯೇಕ ಮತದಾರರ ಪಟ್ಟಿಗಳಿರುವುದು ದೃಢಪಟ್ಟಿದೆ.
ವಿವಿಧ ಪಂಚಾಯತಿಗಳ ವಿವರ ಹೀಗಿದೆ (ಮೂಲ: ಈನಾಡು):
- ಪರಂದೋಲಿ: 358 ಮನೆಗಳು, 1,573 ಜನಸಂಖ್ಯೆ, 873 ಮತದಾರರು.
- ಮುಕದ್ದಮ್‌ಗುಡಾ: 305 ಮನೆಗಳು, 1,205 ಜನಸಂಖ್ಯೆ, 761 ಮತದಾರರು.
- ಅಂತಾಪುರ: 363 ಮನೆಗಳು, 1,668 ಜನಸಂಖ್ಯೆ, 815 ಮತದಾರರು.
- ಬೋಲಾಪಟಾರ್: 406 ಮನೆಗಳು, 1,479 ಜನಸಂಖ್ಯೆ, 1,007 ಮತದಾರರು.
ಗಡಿ ನಿರ್ಧಾರವಾಗುವವರೆಗೆ ಎಸ್‌ಐಆರ್‌ನಲ್ಲಿ ಭಾಗಿಯಾಗದಿರಲು ಪಟ್ಟು
ಗಡಿಗಳ ಸ್ಪಷ್ಟ ಗುರುತಿಸುವಿಕೆ ಇಲ್ಲದಿರುವುದರಿಂದ ಗ್ರಾಮಗಳ ಜನರು ಗೊಂದಲದಲ್ಲಿದ್ದಾರೆ. ಗಡಿ ವಿಚಾರ ಬಗೆಹರಿಯದೆ ಯಾವ ರಾಜ್ಯದಲ್ಲಿ ಎಸ್‌ಐಆರ್‌ಗೆ ನೋಂದಾಯಿಸಿಕೊಳ್ಳಬೇಕು ಎಂಬ ಗೊಂದಲವಿದೆ. ಆದ್ದರಿಂದ, ಗಡಿ ವಿವಾದವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸುವವರೆಗೆ ನಾವು ಎಸ್‌ಐಆರ್‌ನಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ ಎಂದು ಮಹಾರಾಷ್ಟ್ರ ಕಡೆಯ ಮಾಜಿ ಸರಪಂಚ ಕಾಂಬ್ಳೆ ಲಕ್ಷ್ಮಣ್ ಹೇಳಿದ್ದಾರೆ
ಈ ಹಳ್ಳಿಗಳಲ್ಲಿ ಭೂಮಿಗಳ ಅಧಿಕೃತ ಸರ್ವೇ ನಡೆದಿಲ್ಲವಾದರೂ, ಅಂದಿನ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ನೀಡುತ್ತಿದ್ದ ‘ಪಹಣಿ’ ಪತ್ರಗಳ ಆಧಾರದ ಮೇಲೆ ಬ್ಯಾಂಕುಗಳಿಂದ ರೈತರು ಬೆಳೆ ಸಾಲ ಪಡೆಯುತ್ತಿದ್ದರು. ಎರಡೂ ಸರ್ಕಾರಗಳು ಇವರಿಂದ ತೆರಿಗೆ ವಸೂಲಿ ಮಾಡುತ್ತಿದ್ದವು. ಆದರೆ, 2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರ, ತೆಲಂಗಾಣ ಸರ್ಕಾರವು ಇವರ ಕೃಷಿ ಭೂಮಿಯಲ್ಲಿ ಗಿಡಗಳನ್ನು ನೆಟ್ಟು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುತ್ತಿದೆ. 2014ರ ನಂತರ ತೆಲಂಗಾಣದಿಂದ ಪಹಣಿಗಳನ್ನು ನೀಡುತ್ತಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಆದ್ದರಿಂದ, ಚಂದ್ರಾಪುರ ಮತ್ತು ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಈ ಗೊಂದಲ ಬಗೆಹರಿಸುವವರೆಗೂ ತಾವು ಫಾರ್ಮ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.
ಪ್ರಸ್ತುತ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಸರಪಂಚ ಪುಷ್ಪಲತಾ ರಾಥೋಡ್ ಕೂಡ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ತೆಲಂಗಾಣ ಸರ್ಕಾರ ಜಾರಿಗೆ ತಂದಿದ್ದ ಉಚಿತ ವಿದ್ಯುತ್, ಪ್ರತಿ ಎಕರೆಗೆ 5,000 ರೂ. ಸಹಾಯಧನ ನೀಡುವ ‘ರೈತು ಬಂಧು’ ಮತ್ತು 5 ಲಕ್ಷ ರೂ.ಗಳ ‘ರೈತ ಬಿಮಾ’ ಆರೋಗ್ಯ ವಿಮೆಯಂತಹ ಆಕರ್ಷಕ ಯೋಜನೆಗಳ ಲಾಭ ಪಡೆಯಲು ಇಲ್ಲಿನ ನಿವಾಸಿಗಳು ಬಯಸಿದ್ದರೂ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರಣಗಳಿಗಾಗಿ ಮರಾಠಿ ಮಾತನಾಡುವ ನಿವಾಸಿಗಳು ಐತಿಹಾಸಿಕವಾಗಿ ಮಹಾರಾಷ್ಟ್ರವನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಮತ್ತು ಲಿಂಗಾರೆಡ್ಡಿ ತಾಲೂಕುಗಳ ಕೆಲವು ಗ್ರಾಮಸ್ಥರು ತೆಲಂಗಾಣದ ಅಭಿವೃದ್ಧಿಗೆ ಆಕರ್ಷಿತರಾಗಿ ತಮನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಸೇರಿಸುವಂತೆ ಇಚ್ಛೆ ವ್ಯಕ್ತಪಡಿಸಿದ್ದರು.
ಆದರೆ, ಮಹಾರಾಷ್ಟ್ರದ ರಾಜುರಾ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ರಾಮಚಂದ್ರರಾವ್ ಧೋಟೆ ಅವರು, “ಮಹಾರಾಷ್ಟ್ರ ಸರ್ಕಾರವು ಈ ಹಳ್ಳಿಗಳಲ್ಲಿ ಕೃಷಿ ಭೂಮಿಯ ಮಾಲೀಕತ್ವ ಹಕ್ಕು (ಪಟ್ಟಾ) ನೀಡುವ ಕೆಲಸವನ್ನು ಪ್ರಾರಂಭಿಸಿದೆ. ಇಲ್ಲಿನ 70-80%ರಷ್ಟು ಜನರು ಮಹಾರಾಷ್ಟ್ರದೊಂದಿಗೆ ಉಳಿಯಲು ಬಯಸುತ್ತಾರೆ” ಎಂದು ಈ ಹಿಂದೆ ಪ್ರತಿಪಾದಿಸಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ಅವರು ಈ 14 ಹಳ್ಳಿಗಳ ಆಡಳಿತಾತ್ಮಕ ನಿಯಂತ್ರಣವನ್ನು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಕುರಿತು ಪ್ರಕಟಣೆ ಹೊರಡಿಸಿದ್ದರು. ಆಗ, ತೆಲಂಗಾಣದ ಜನಪ್ರತಿನಿಧಿಗಳು ಇದರ ವಿರುದ್ಧ ಅಧಿಕೃತ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದ್ದರು. ಈ ಹಕ್ಕುಸ್ವಾಮ್ಯದ ವಿಷಯದಲ್ಲಿ ಮಹಾರಾಷ್ಟ್ರವು ತನ್ನ ಹಕ್ಕನ್ನು ಐತಿಹಾಸಿಕ ಕಂದಾಯ ದಾಖಲೆಗಳ ಆಧಾರದ ಮೇಲೆ ಮಂಡಿಸುತ್ತಿದ್ದರೆ, ತೆಲಂಗಾಣ ಸರ್ಕಾರವು ಕೆ.ಕೆ. ನಾಯ್ಡು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಆಡಳಿತಾತ್ಮಕ ನಿಯಂತ್ರಣಕ್ಕಾಗಿ ಪ್ರಯತ್ನಿಸುತ್ತಿದೆ. ಸದ್ಯಕ್ಕೆ ತೆಲಂಗಾಣ ಸರ್ಕಾರವು ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



