2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಮತ್ತು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಎ. ವೈ. ಕೊಗ್ಯೆ ಮತ್ತು ಎಸ್. ಜೆ. ದೇವ್ ಅವರನ್ನೊಳಗೊಂಡ ಪೀಠವು ಈ ಆದೇಶ ಪ್ರಕಟಿಸಿದೆ. 2022ರ ಫೆಬ್ರವರಿ 8ರಂದು ವಿಶೇಷ ನ್ಯಾಯಾಲಯವು ನೀಡಿದ್ದ 7,015 ಪುಟಗಳ ಸುದೀರ್ಘ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ, ಭಾರತೀಯ ಕಾನೂನಿನ ಪ್ರಕಾರ, ಕೆಳ ನ್ಯಾಯಾಲಯವು ನೀಡುವ ಮರಣದಂಡನೆಯನ್ನು ಹೈಕೋರ್ಟ್ ದೃಢೀಕರಿಸದ ಹೊರತು ಜಾರಿಗೊಳಿಸಲಾಗುವುದಿಲ್ಲ. ಆದ್ದರಿಂದ, ಶಿಕ್ಷೆಯ ದೃಢೀಕರಣಕ್ಕಾಗಿ ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿತ್ತು.
ಅಪರಾಧಿಗಳ ಮೇಲ್ಮನವಿಗಳು ಮತ್ತು ಸರ್ಕಾರದ ಅರ್ಜಿಗಳನ್ನು ಹೈಕೋರ್ಟ್‌ನ ಪೀಠವು ವಿಚಾರಣೆ ನಡೆಸಿದೆ. ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಜೊತೆಗೆ, ಸ್ಫೋಟದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಪರಿಹಾರದ ಹಣವನ್ನು 2027ರ ಮಾರ್ಚ್ 31ರೊಳಗೆ ವಿತರಿಸುವಂತೆ ಗಡುವು ವಿಧಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ತನಿಖೆ
2008ರ ಜುಲೈ 26ರಂದು ಅಹಮದಾಬಾದ್ ನಗರದಾದ್ಯಂತ ಕೆಲವೇ ನಿಮಿಷಗಳ ಅಂತರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ಭೀಕರ ದುರಂತದಲ್ಲಿ 56 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 246ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಇದಾದ ಎರಡು ದಿನಗಳ ನಂತರ ಸೂರತ್ ನಗರದಲ್ಲೂ ಜೀವಂತ ಬಾಂಬುಗಳು ಪತ್ತೆಯಾಗಿದ್ದವು. 2002ರಲ್ಲಿ ನಡೆದಿದ್ದ ಗೋದ್ರಾ ನರಮೇಧಕ್ಕೆ ಪ್ರತಿಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಗಳು ಕಳುಹಿಸಿದ್ದ ಇ-ಮೇಲ್‌ಗಳಲ್ಲಿ ಹೇಳಲಾಗಿದೆ ಎಂದು ವರದಿಯಾಗಿತ್ತು.
ಅಹಮದಾಬಾದ್‌ನಲ್ಲಿ ದಾಖಲಾಗಿದ್ದ 20 ಮತ್ತು ಸೂರತ್‌ನಲ್ಲಿ ದಾಖಲಾಗಿದ್ದ 15 ಸೇರಿದಂತೆ ಒಟ್ಟು 35 ಪ್ರತ್ಯೇಕ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ಸುದೀರ್ಘ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯ ವೇಳೆ ಪೊಲೀಸರು ನೂರಕ್ಕೂ ಹೆಚ್ಚು ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರು. ಆ ಪೈಕಿ 78 ಆರೋಪಿಗಳನ್ನು ಸುದೀರ್ಘ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಈ ದೀರ್ಘಾವಧಿಯ ವಿಚಾರಣೆಯಲ್ಲಿ 9 ಬೇರೆ ಬೇರೆ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಬರೋಬ್ಬರಿ 1,163 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ 26 ಪ್ರಮುಖ ಸಾಕ್ಷಿಗಳ ಸುರಕ್ಷತೆಯ ದೃಷ್ಟಿಯಿಂದ ಅವರ ಗುರುತನ್ನು ಗೌಪ್ಯವಾಗಿಡಲಾಗಿತ್ತು.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ಅಂತಿಮವಾಗಿ 2022ರ ಫೆಬ್ರವರಿಯಲ್ಲಿ ವಿಶೇಷ ನ್ಯಾಯಾಲಯವು 49 ಜನರನ್ನು ಅಪರಾಧಿಗಳು ಎಂದು ಘೋಷಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮುಬೀನ್ ಶೇಖ್ ಮತ್ತು ಮನ್ಸೂರ್ ಪೀರ್ಭಾಯ್ ಸೇರಿದಂತೆ 28 ಜನರನ್ನು ಖುಲಾಸೆಗೊಳಿಸಿತ್ತು.
ಶಿಕ್ಷೆಗೆ ಒಳಗಾಗಿರುವ 49 ಅಪರಾಧಿಗಳಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಭಾರತೀಯ ದಂಡ ಸಂಹಿತೆ (ಐಪಿಸಿ), ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆಯನ್ನು ವಿಧಿಸಲಾಗಿತ್ತು. ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಆ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದೆ.



