ಮುಖ್ಯಮಂತ್ರಿಗಳೇ ಬರಲಿ ಅಥವಾ ಯಾರೇ ಬಂದರೂ ಉಪಚುನಾವಣೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು BJP ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಬಾಗಲಕೋಟೆ ನಗರದ ದೀಪಮ್ ಕಾಲೋನಿಯ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ವಾರ್ಡ್ ನಂ. 1 ಮತ್ತು 3ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಅವರು ಪಾದಯಾತ್ರೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಮತದಾರರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಬೇಸತ್ತಿದ್ದಾರೆ. ಸೋಲುವ ಆತಂಕದಿಂದ ಮುಖ್ಯಮಂತ್ರಿಗಳು ಹಳ್ಳಿಗಳಲ್ಲಿ ವಾಸ್ತವ್ಯ ಹೂಡಲು ಹೊರಟಿದ್ದಾರೆ. ತಮ್ಮ ಸ್ಥಾನದ ಘನತೆ ಮರೆತು ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಇವರ ಯಾವುದೇ ಕುತಂತ್ರ ಬಿಜೆಪಿಯ ಗೆಲುವಿನ ಮೇಲೆ ಪರಿಣಾಮ ಬೀರದು,” ಎಂದು ಟೀಕಿಸಿದರು.

ಕಳೆದ ಮೂರು ವರ್ಷಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುವುದು ಮತ್ತು ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮಾಡುವ ಘಟನೆಗಳು ಹೆಚ್ಚಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, “ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೂ ಮೊದಲೇ ಸೋಲು ಖಚಿತವಾಗಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮುಂದೆ ಮುಖ್ಯಮಂತ್ರಿಗಳ ಪ್ರಚಾರ ಕೆಲಸ ಮಾಡುವುದಿಲ್ಲ,” ಎಂದರು. ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಮುಳುಗಡೆ ಸಂತ್ರಸ್ತರ ಪರವಾಗಿ ಚರಂತಿಮಠ ಅವರು ಮಾಡಿರುವ ಕೆಲಸಗಳನ್ನು ಸ್ಮರಿಸಿದರು.
ಇದನ್ನೂ ಓದಿ: ಬಾಗಲಕೋಟೆ ತಾಂಡಾಗಳಲ್ಲಿ BJP ಬಿರುಸಿನ ಪ್ರಚಾರ; ವೀರಣ್ಣ ಚರಂತಿಮಠ ಪರ ಶಾಸಕದ್ವಯರ ಮತಯಾಚನೆ
ಮತಯಾಚನೆಯ ಸಂದರ್ಭದಲ್ಲಿ ವಿಜಯೇಂದ್ರ ಯಡಿಯೂರಪ್ಪ ಮತ್ತು ವೀರಣ್ಣ ಚರಂತಿಮಠ ಅವರಿಗೆ ನಗರದಾದ್ಯಂತ ಭವ್ಯ ಸ್ವಾಗತ ದೊರೆಯಿತು. ರಸ್ತೆಗಳಲ್ಲಿ ಬಣ್ಣಬಣ್ಣದ ರಂಗೋಲಿಗಳನ್ನು ಹಾಕಿ, ಹೂಮಳೆಗೈಯುವ ಮೂಲಕ ಮಹಿಳೆಯರು ಆರತಿ ಬೆಳಗಿ ಸತ್ಕರಿಸಿದರು. ಮನೆ ಮನೆಗಳಲ್ಲೂ ಹೂಮಾಲೆ, ಶಾಲು ಹೊದಿಸಿ ಸಿಹಿ ನೀಡಿ ಬೆಂಬಲ ಸೂಚಿಸಿದ ದೃಶ್ಯಗಳು ಕಂಡುಬಂದವು. ಈ ಸಂದರ್ಭದಲ್ಲಿ ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ, ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಹಲವಾರು ಪ್ರಮುಖ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.




