ಎಐಯುಡಿಎಫ್ ತನ್ನ ಅಲ್ಪಸಂಖ್ಯಾತ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೆಯವನಾಗಿ ನಿರಾಳವಾಗಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ರಾಜ್ಯದ ಭವಿಷ್ಯ ಅಂತಿಮವಾಗಿ ಪ್ರಜ್ಞಾವಂತ ಮತದಾರರ ತೀರ್ಮಾನದ ಮೇಲೆ ನಿಂತಿದೆ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಸ್ಸಾಂ ರಾಜಕಾರಣದ ಕಾವು ದಿನದನವೂ ರಂಗೇರುತ್ತಿದ್ದು, ವಿರೋಧ ಪಕ್ಷಗಳ ಬಿರುಕು ಬಹಿರಂಗವಾಗಿದೆ. ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ ಅವರು ಕಾಂಗ್ರೆಸ್ ಮತ್ತು ಆಡಳಿತರೂಢ ಬಿಜೆಪಿ ಎರಡನ್ನೂ ಗುರಿಯಾಗಿಸಿಕೊಂಡು ಸಿಡಿಸಿರುವ ರಾಜಕೀಯ ಅಸ್ತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ. ತರುಣ್ ಗೋಗೋಯ್ ಮತ್ತು ರಾಹುಲ್ ಗಾಂಧಿ ಅವರ ವೈಫಲ್ಯವೇ ಅಸ್ಸಾಂ ಅನ್ನು ಬಿಜೆಪಿಗೆ ಒಪ್ಪಿಸಲು ಕಾರಣ ಹಾಗೂ ಹಿಮಂತ ಬಿಸ್ವಾ ಶರ್ಮಾ ಸರ್ಕಾರವನ್ನು ಕಿತ್ತೊಗೆಯಲೇಬೇಕು, ಆದರೆ ಅದಕ್ಕೆ ರಾಹುಲ್ ಗಾಂಧಿ ಪರ್ಯಾಯವಲ್ಲ ಎಂಬ ಅವರ ಹೇಳಿಕೆಯೇ ರಾಜ್ಯದ ತ್ರಿಕೋನ ರಾಜಕೀಯ ಸ್ಪರ್ಧೆಯು ನೈಜ ಚಿತ್ರಣವನ್ನು ಬಿಚ್ಚಿಟ್ಟಿದೆ.
ಅಸ್ಸಾಂನಲ್ಲಿ ಸತತ ಮೂರು ಅವಧಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಪತನಕ್ಕೆ ಅದರ ನಾಯಕರ ಅಹಂಕಾರವೇ ಕಾರಣ ಎಂಬುದು ಅಜ್ಮಲ್ ಅವರ ಪ್ರಮುಖ ವಾದ. 2006ರಲ್ಲಿ ‘ಅಜ್ಮಲ್ ಯಾರು?’ ಎಂದು ಅಂದಿನ ಸಿಎಂ ತರುಣ್ ಗೋಗೋಯ್ ವ್ಯಂಗ್ಯವಾಡಿದ್ದನ್ನು ಅವರು ಇಂದಿಗೂ ಮರೆತಿಲ್ಲ. ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್, ಅವರನ್ನು ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ. ಇದೇ ರಾಜಕೀಯ ಮೌಡ್ಯ ಮತ್ತು ರಾಹುಲ್ ಗಾಂಧಿವಯರ ದುರ್ಬಲ ನಾಯಕತ್ವವು 2016 ಮತ್ತು 2021ರ ಚುನಾವಣೆಗಳಲ್ಲಿ ಬಿಜೆಪಿಗೆ ಅಧಿಕಾರವನ್ನು ಉಡುಗೊರೆಯಾಗಿ ನೀಡಿತು ಎಂದು ಅವರು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ಅನ್ನು ಟೀಕಿಸುವ ಭರದಲ್ಲಿ ಅಜ್ಮಲ್ ಅವರು ಬಿಜೆಪಿ ಬಗ್ಗೆ ಯಾವುದೇ ಮೃದು ಧೋರಣೆ ಹೊಂದಿಲ್ಲ. ಹಾಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆಯ ನೆಪದಲ್ಲಿ ‘ಮಿಯಾ ಮುಸ್ಲಿಮರನ್ನು’ (ಬಂಗಾಳಿ ಭಾಷಿಕ ವಲಸಿಗರು) ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ, ಹಾಗೂ ದ್ವೇಷದ ಭಾಷಣಗಳ ಮೂಲಕ ಸಮಾಜವನ್ನು ಒಡೆಯಲಾಗುತ್ತಿದೆ. ಅಸ್ಸಾಂನ ಅಸ್ಮಿತೆ ಉಳಿಸಲು ಈ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯಲೇಬೇಕು ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.
ಅಜ್ಮಲ್ ಅವರ ಈ ಗಂಭೀರ ಆರೋಪಗಳಿಗೆ ಕಾಂಗ್ರೆಸ್ ಕೂಡ ಅಷ್ಟೇ ಪ್ರಬಲವಾಗಿ ತಿರುಗೇಟು ನೀಡುತ್ತಿದೆ. ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪರೋಕ್ಷವಾಗಿ ನೆರವಾಗುತ್ತಿರುವುದೇ ಬದ್ರುದ್ದೀನ್ ಅಜ್ಮಲ್, ಅವರು ವಾಸ್ತವದಲ್ಲಿ ಬಿಜೆಪಿಯ ‘ಬಿ-ಟೀಮ್’ ಎಂದು ಕೈ ನಾಯಕರು ಆರೋಪಿಸುತ್ತಾರೆ. ಅಜ್ಮಲ್ ಅವರ ವಿವಾದಾತ್ಮಕ ಮತ್ತು ಧ್ರುವೀಕರಣದ ಹೇಳಿಕೆಗಳೇ ಬಿಜೆಪಿಗೆ ಹಿಂದೂ ಮತಗಳನ್ನು ಒಗ್ಗೂಡಿಸಲು ಅಸ್ತ್ರವಾಗುತ್ತಿವೆ. ರಾಹುಲ್ ಗಾಂಧಿ ಅವರು ಸಂವಿಧಾನ ಮತ್ತು ಸೌಹಾರ್ದತೆಗಾಗಿ ಹೋರಾಡುತ್ತಿದ್ದು, ಅವರೇ ದೇಶಕ್ಕೆ ಮತ್ತು ರಾಜ್ಯಕ್ಕೆ ನೈಜ ಪರ್ಯಾಯ ನಾಯಕರು ಎಂದು ಕಾಂಗ್ರೆಸ್ ತನ್ನ ನಿಲುವನ್ನು ದೃಢವಾಗಿ ಸಮರ್ಥಿಸಿಕೊಳ್ಳುತ್ತಿದೆ.
ಇದನ್ನು ಓದಿದ್ದೀರಾ? ಪೆಟ್ರೋ ಡಾಲರ್ ಎಂದರೇನು? ಅಮೆರಿಕದ ಅರ್ಥವ್ಯವಸ್ಥೆಯ ಬುಡ ಅಲುಗಾಡುತ್ತಿರುವುದೇಕೆ?
ವಿರೋಧ ಪಕ್ಷಗಳ ನಡುವಿನ ಈ ಕಚ್ಚಾಟವು ಆಡಳಿತಾರೂಢ ಬಿಜೆಪಿಗೆ ಸಹಜವಾಗಿಯೇ ರಾಜಕೀಯ ವರದಾನವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಒಡಕನ್ನು ಬಹಳ ಚಾಣಾಕ್ಷತನದಿಂದ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಎಐಯುಡಿಎಫ್ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವಾಗ, ಬಿಜೆಪಿ ತನ್ನ ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ನಿರತವಾಗಿದೆ. ವಿರೋಧ ಪಕ್ಷಗಳ ನಡುವಿನ ನಾಯಕತ್ವದ ಗೊಂದಲವನ್ನು ತನ್ನತ್ತ ಸೆಳೆಯುವಲ್ಲಿ ಕಮಲ ಪಾಳೆಯ ಯಶಸ್ವಿಯಾಗುತ್ತಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಅಸ್ಸಾಂ ವಿಧಾನಸಭೆಯ 126 ಸ್ಥಾನಗಳ ಪೈಕಿ ಶೇ. 30ರಿಂದ 35ರಷ್ಟು ಮುಸ್ಲಿಂ ಮತಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಸಾಂಪ್ರದಾಯಿಕವಾಗಿ ಈ ಮತಗಳು ಕಾಂಗ್ರೆಸ್ ಮತ್ತು ಎಐಯುಡಿಎಫ್ ನಡುವೆ ಹಂಚಿಹೋಗುತ್ತವೆ. ಅಜ್ಮಲ್ ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ತಿರಸ್ಕರಿಸುವಂತೆ ಅಲ್ಪಸಂಖ್ಯಾತರಿಗೆ ಕರೆ ನೀಡುತ್ತಿರುವುದು ನೇರವಾಗಿ ವಿಪಕ್ಷಗಳ ಮತಗಳ ವಿಭಜನೆಗೆ ಕಾರಣವಾಗಲಿದೆ. ಆಡಳಿತ ವಿರೋಧಿ ಅಲೆಯ ಲಾಭವನ್ನು ಒಗ್ಗೂಡಿಸುವ ಬದಲು, ವಿಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಅದರ ಸಂಪೂರ್ಣ ಲಾಭವು ಚುನಾವಣಾ ಅಂಕಗಣಿತದಲ್ಲಿ ಬಿಜೆಪಿಯ ಪಾಲಾಗುವುದು ನಿಚ್ಚಳ.
ಅಸ್ಸಾಂನ ಪ್ರಸ್ತುತ ರಾಜಕೀಯವು ‘ಯಾರು ಯಾರ ಬಿ-ಟೀಮ್’ ಎಂಬ ಆರೋಪಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ತಮ್ಮ ಪಕ್ಷವನ್ನು ಟೀಕಿಸುವ ಕಾಂಗ್ರೆಸ್ ನಾಯಕರು ವಾಸ್ತವದಲ್ಲಿ ತಾವೇ ಬಿಜೆಪಿಯ ‘ಎ-ಟೀಮ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಜ್ಮಲ್ ದೂರುತ್ತಾರೆ. ಸರ್ಕಾರವನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್, ತನ್ನ ಅಸ್ತಿತ್ವದ ಉಳಿವಿಗಾಗಿ ಎಐಯುಡಿಎಫ್ ಮೇಲೆ ಗೂಬೆ ಕೂರಿಸುತ್ತಿದೆ ಎಂಬುದು ಅವರ ವಾದ. ಈ ಪರಸ್ಪರ ದೋಷಾರೋಪಣೆಯ ರಾಜಕಾರಣವು ಅಂತಿಮವಾಗಿ ಮತದಾರರನ್ನು, ವಿಶೇಷವಾಗಿ ಅಲ್ಪಸಂಖ್ಯಾತ ಮತ್ತು ಜಾತ್ಯತೀತ ಒಲವುಳ್ಳವರು ಯಾವ ಕಡೆ ವಾಲುತ್ತಾರೆ ಎಂಬುದು ಸದ್ಯದ ಕುತೂಹಲ ಸಂಗತಿ.
ಬದ್ರುದ್ದೀನ್ ಅಜ್ಮಲ್ ಅವರ ಹೇಳಿಕೆಗಳು ಅಸ್ಸಾಂನಲ್ಲಿ ಮುಂಬರುವ ಚುನಾವಣೆಯ ದಿಕ್ಸೂಚಿಯನ್ನು ಸ್ಪಷ್ಟಪಡಿಸಿವೆ. ಇದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಾಗಿರದೆ, ತ್ರಿಕೋನ ಸ್ಪರ್ಧೆಯ ಕದನವಾಗಿ ಮಾರ್ಪಟ್ಟಿದೆ. ಎಐಯುಡಿಎಫ್ ತನ್ನ ಅಲ್ಪಸಂಖ್ಯಾತ ನೆಲೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೆಯವನಾಗಿ ನಿರಾಳವಾಗಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ರಾಜ್ಯದ ಭವಿಷ್ಯ ಅಂತಿಮವಾಗಿ ಪ್ರಜ್ಞಾವಂತ ಮತದಾರರ ತೀರ್ಮಾನದ ಮೇಲೆ ನಿಂತಿದೆ.




