ಸಾಂಸ್ಕೃತಿಕ ಘಮಲಿನಲ್ಲಿ ‘ಸಿಲಿಕಾನ್‌ ಸಿಟಿ’; ಕೋಮು ಸಾಮರಸ್ಯದ ಪ್ರತೀಕ ‘ಬೆಂಗಳೂರು ಕರಗ’ಕ್ಕೆ ಕ್ಷಣಗಣನೆ

Date:

ಬಾಲ್ಯದ 'ಪರದೇಶ'ದ ಒಳಗೆ, ಇಷ್ಟು ಗಾಢವಾದ ಮಣ್ಣಿನ ಘಮವಿರುವುದು ನಿಜಕ್ಕೂ ಸಂತಸದ ವಿಚಾರ. ಕಾಲ ಎಷ್ಟೇ ಬದಲಾದರೂ, ಯಾವುದೇ ಒಂದು ಪ್ರದೇಶದ ಜೀವಂತಿಕೆಯನ್ನು ಪೀಳಿಗೆಗಳಿಗೆ ಸಾಗಿಸುವುದು ಇಂತಹ ಸಾಂಸ್ಕೃತಿಕ ಪರಂಪರೆಗಳೇ. ನಾವು ಅವುಗಳನ್ನು ತಲುಪಿಸುವ ಮಾಧ್ಯಮಗಳಾಗಬೇಕು.

ʼಬೆಂಗಳೂರು ಕರಗʼ ಎನ್ನುವ ಶಬ್ದ ಮೊದಲು ನನ್ನ ಕಿವಿಗೆ ಬಿದ್ದದ್ದು ಹಳೆಯ ಕನ್ನಡ ಚಿತ್ರಗೀತೆಯೊಂದರ ಮೂಲಕ! ‘ಕರುಳಿನ ಕರೆ’ ಚಿತ್ರದ “ತಾಜಾ ತಾಜಾ ಕಳ್ಳೇಕಾಯ್, ಗರ್ಮಾ ಗರಂ ಕಳ್ಳೇಕಾಯ್, ʼಬೆಂಗಳೂರು ಕರಗʼದ ಬಸವನ ಪರಿಷೆಯ ಬಡವರ ಬಾದಾಮಿ ಕಳ್ಳೇಕಾಯ್…” ಹಾಡದು.

- Advertisement -

ಕರಗ ಎನ್ನುವುದೊಂದು ಯಾವುದೋ ಜಾತ್ರೆ, ಪರಿಷೆ ಇರಬೇಕು ಎನ್ನುವುದು ನನ್ನ ಲೆಕ್ಕಾಚಾರವಾಗಿತ್ತು. ಅಲ್ಲದೆ, ಆ ಕಾಲದಲ್ಲಿ ನಮ್ಮೂರಿಂದ ಹೋಗಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡವರೆಲ್ಲಾ ಹಬ್ಬ-ಹರಿದಿನಗಳಲ್ಲಿ ಬೆಂಗಳೂರು ಬಿಟ್ಟು ಊರಿನ ಕಡೆ ಮುಖ ಮಾಡುತ್ತಿದ್ದರು. ಇದನ್ನು ನೋಡಿದ ನನಗಂತೂ ಬೆಂಗಳೂರು ಎನ್ನುವುದೊಂದು ಯಾವುದೋ ʼಪರದೇಶʼ ಇರಬೇಕು, ಅಲ್ಲಿ ಇಂತಹ ಹಬ್ಬ-ಆಚರಣೆಗಳೆಲ್ಲ ಇರಲು ಸಾಧ್ಯವೇ ಇಲ್ಲ ಎಂದೇ ನಂಬಿದ್ದೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಆ ಹಾಡಿನಲ್ಲಿ ಬೆಂಗಳೂರಿನ ಕರಗದ ಉಲ್ಲೇಖ ಬಂದಾಗ ʼಬೆಂಗಳೂರಿನಲ್ಲೂ ಜಾತ್ರೆ ನಡೆಯುತ್ತಾ?ʼ ಎಂದು ಅಚ್ಚರಿಗೊಂಡಿದ್ದೆ. ದಿನಗಳೆದಂತೆ, ಈ ಕುತೂಹಲದ ಎಳೆ ಹಿಡಿದು ಹೋದಾಗ, ಬೆಂಗಳೂರಿನ ನೆಲಮೂಲದ ʼಮಣ್ಣಿನ ಹಬ್ಬʼದ ಹಿಂದಿನ ಅದ್ಭುತ ಇತಿಹಾಸ ಮತ್ತು ಸಂಪ್ರದಾಯ ತಿಳಿಯಿತು.

image 2026 03 30T132237.742

ಬೆಂಗಳೂರು ನಗರದ ಅಸ್ಮಿತೆ, ಭಕ್ತಿ, ಕೋಮು ಸಾಮರಸ್ಯದ ಅದ್ಭುತ ಸಂಗಮ, ನಾಡಿನ ಸಾಂಸ್ಕೃತಿಕ ಹೆಗ್ಗುರುತು ‘ಬೆಂಗಳೂರು ಕರಗ’. ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಆಚರಣೆಯು ಮುಖ್ಯವಾಗಿ ವಹ್ನಿಕುಲ ಕ್ಷತ್ರಿಯ ಅಥವಾ ತಿಗಳ ಸಮುದಾಯದ ಭಕ್ತಿ, ಸಂಪ್ರದಾಯದ ಪ್ರತೀಕ. ಪುರಾಣದ ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಮತ್ತು ಶಕ್ತಿ ದೇವತೆ ಎಂದು ಗೌರವಿಸುವ ಈ ಹಬ್ಬವು, ಪ್ರತಿ ವರ್ಷ ಚೈತ್ರ ಮಾಸದ ಪೂರ್ಣಿಮೆಯಂದು ಅದ್ದೂರಿಯಾಗಿ ಜರುಗುತ್ತದೆ.

‘ಕರಗ’ ಎಂದರೆ ‘ಕುಂಭ’ ಅಥವಾ ಕಲಶ ಎಂದರ್ಥ. ‘ಕ’- ಕೈಯಿಂದ ಮುಟ್ಟದ, ‘ರ’- ರುಂಡದ ಅಥವಾ ತಲೆಯ ಮೇಲೆ ಧರಿಸುವ ಮತ್ತು ‘ಗ’- ಗತಿಯಲ್ಲಿ ತಿರುಗುವುದು ಅಥವಾ ನರ್ತಿಸುವುದು ಎಂದರ್ಥ. ಹೂವಿನ ದಿಂಡಿನಿಂದ ಸುಂದರವಾಗಿ ಅಲಂಕೃತಗೊಂಡ ಮಣ್ಣಿನ ಮಡಕೆ ಮತ್ತು ಅದರೊಳಗಿನ ಕಲಶವನ್ನು ಕರಗ ಹೊರುವ ಪೂಜಾರಿಯು ತನ್ನ ಕೈಯಿಂದ ಮುಟ್ಟದೆ, ಕೇವಲ ತಲೆಯ ಸಮತೋಲನದಲ್ಲಿ ಇಡೀ ರಾತ್ರಿ ನರ್ತಿಸುತ್ತಾ ಸಾಗುವುದು ಈ ಉತ್ಸವದ ಪರಮೋಚ್ಚ ಸಾಹಸ. ಒನಕೆ ಕರಗ, ಚೊಂಬಿನ ಕರಗ, ಚಿತ್ತಗೋಪುರ ಕರಗ, ಪಟದ ಕುಣಿತ, ಧರ್ಮರಾಯನ ಕರಗ, ಹೂವಿನ ಕರಗ… ಇತ್ಯಾದಿ ಕರಗದ ವಿಧಗಳು.

ಕರಗವನ್ನು ಹೊರುವ ಪೂಜಾರಿಯ ಸಿದ್ಧತೆ ಕೇಳಿದರೆ ಮೈ ಜುಮ್ಮೆನ್ನುತ್ತದೆ. ಅವರು ವಾರಗಟ್ಟಲೆ ಮನೆಯಿಂದ ದೂರವಿದ್ದು, ಸನ್ಯಾಸಿಯಂತೆ ಬದುಕಬೇಕು. ಹಬ್ಬದ ದಿನ ಸ್ತ್ರೀ ವೇಷ ಧರಿಸಿ, ಮುತ್ತೈದೆಯಂತೆ ಅಲಂಕೃತರಾಗಿ, ಸುಮಾರು 20-25 ಕೆಜಿ ತೂಕದ ಹೂವಿನ ಕರಗವನ್ನು ತಲೆಯ ಮೇಲೆ ಹೊರುತ್ತಾರೆ. ಕರಗ ಹೊತ್ತು ಸಾಗುವ ಅವರ ಸುತ್ತಲೂ ಕೈಯಲ್ಲಿ ಕತ್ತಿ ಹಿಡಿದ ನೂರಾರು ವೀರಕುಮಾರರು ‘ಗೋವಿಂದಾ… ಗೋವಿಂದಾ…’ ಎಂದು ಕೂಗುತ್ತಾ ಸಾಗುವ ದೃಶ್ಯ, ನಾವು ಬಾಲ್ಯದಲ್ಲಿ ಕಲ್ಪಿಸಿಕೊಂಡಿದ್ದ ‘ಫಾರಿನ್’ ಬೆಂಗಳೂರು ಇದೇನಾ ಎನ್ನುವಷ್ಟು ರೋಚಕ ಅನುಭವ ನೀಡುತ್ತದೆ.

ಈ ಮಹೋತ್ಸವವು ಹಿಂದೂ ವರ್ಷದ ಮೊದಲ ತಿಂಗಳ ಸಪ್ತಮಿಯಿಂದ ಆರಂಭವಾಗಿ ಸುಮಾರು ಹನ್ನೊಂದು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುತ್ತದೆ. ಧರ್ಮರಾಯ ಸ್ವಾಮಿ ದೇಗುಲದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ ಮತ್ತು ಹೂವಿನ ಕರಗದವರೆಗೆ ಪ್ರತಿ ಹಂತವೂ ಅತ್ಯಂತ ನಿಷ್ಠೆಯಿಂದ ಕೂಡಿರುತ್ತದೆ. ಈ ಹನ್ನೊಂದು ದಿನಗಳಲ್ಲಿ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆ ಎಂದು ನಂಬುವ ತಿಗಳ ಸಮುದಾಯ, ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರಿಗೆ ಹರಕೆ ಒಪ್ಪಿಸುತ್ತದೆ. ತಲೆಯ ಮೇಲಿರುವ ಕರಗವು ಯಾವುದೇ ಕಾರಣಕ್ಕೂ ನೆಲಕ್ಕೆ ಬೀಳಬಾರದು ಎಂಬುದು ಕರಗದ ಕಟ್ಟುನಿಟ್ಟಿನ ನಿಯಮ ಹಾಗೂ ಅದೇ ಈ ಆಚರಣೆಯ ಪ್ರಮುಖ ಆಕರ್ಷಣೆ.

image 2026 03 30T132357.093

ಚೈತ್ರ ಪೂರ್ಣಿಮೆಯ ರಾತ್ರಿ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಕರಗವು ನಗರದ ಪ್ರಮುಖ ರಸ್ತೆಗಳಾದ ನಗರ್ತ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆಗಳ ಮೂಲಕ ಸಾಗುತ್ತದೆ. ಇಡೀ ನಗರ ಮಲ್ಲಿಗೆ ಹೂವಿನ ಪರಿಮಳ ಸೂಸುತ್ತಿರುತ್ತದೆ.

ಹೀಗೊಂದು ದಂತಕತೆ…

ಪಾಂಡವರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಸ್ವರ್ಗಾರೋಹಣ ಮಾಡುತ್ತಿರುವಾಗ ದ್ರೌಪದಿಯು ದಣಿದು ಹಿಂದೆ ಉಳಿಯುತ್ತಾಳೆ. ಈ ಸಂದರ್ಭದಲ್ಲಿ ‘ತಿಮಿರಾಸುರ’ ಎಂಬ ರಾಕ್ಷಸ ಆಕೆಯನ್ನು ಹಿಂಬಾಲಿಸುತ್ತಾನೆ. ತನ್ನ ರಕ್ಷಣೆಗಾಗಿ ದ್ರೌಪದಿ ತನಗಿದ್ದ ಶಕ್ತಿಯಿಂದ ತನ್ನ ದೇಹದಿಂದಲೇ ಒಂದು ಸೈನ್ಯ ಸೃಷ್ಟಿಸುತ್ತಾಳೆ. ಆ ಸೈನ್ಯವೇ ‘ವೀರಕುಮಾರರು’. ರಾಕ್ಷಸನೊಡನೆ ಯುದ್ಧ ಮುಗಿದ ನಂತರ ದ್ರೌಪದಿ ಹೊರಡುವ ವೇಳೆ ಈ ವೀರಕುಮಾರರು ತಮ್ಮನ್ನು ಬಿಟ್ಟು ಹೋಗದಂತೆ ಬೇಡಿಕೊಳ್ಳುತ್ತಾರೆ. ಆಗ ದ್ರೌಪದಿಯು ಪ್ರತಿ ವರ್ಷ ಚೈತ್ರ ಮಾಸದ ಪೂರ್ಣಿಮೆಯಂದು 3 ದಿನಗಳ ಕಾಲ ತಾನು ಭೂಮಿಗೆ ಬಂದು ಆಶೀರ್ವದಿಸುವುದಾಗಿ ವಾಗ್ದಾನ ಮಾಡುತ್ತಾಳೆ.

ಈ ವೀರಕುಮಾರರ ವಂಶಸ್ಥರೇ ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನೆಲೆಸಿರುವ ‘ವಹ್ನಿಕುಲ ಕ್ಷತ್ರಿಯ’ ಅಥವಾ ‘ತಿಗಳ’ ಸಮುದಾಯದವರು ಎಂದು ಹೇಳಲಾಗುತ್ತದೆ. ಇಂದಿಗೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕರಗ ಎಂದರೆ ಬರಿ ಹೂವಿನ ಕಳಸವಲ್ಲ, ಅದು ಸಾಕ್ಷಾತ್ ದ್ರೌಪದಿಯ ಶಕ್ತಿಯ ರೂಪ ಎನ್ನುವುದು ಇವರ ನಂಬಿಕೆ.

ಕೋಮು ಸಾಮರಸ್ಯದ ಪ್ರತೀಕ ‘ಕರಗ’

ಬೆಂಗಳೂರು ಕರಗದ ಅತ್ಯಂತ ಶ್ಲಾಘನೀಯ ಮಗ್ಗುಲೆಂದರೆ ಅದು ಶತಮಾನಗಳಿಂದ ಸಾರುತ್ತಿರುವ ಕೋಮು ಸಾಮರಸ್ಯ. ನಡುರಾತ್ರಿಯ ವೇಳೆಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ಕರಗವು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಬಂದು, ಅಕ್ಕಿಪೇಟೆಯಲ್ಲಿರುವ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಕ್ಕೆ ಕಡ್ಡಾಯವಾಗಿ ಭೇಟಿ ನೀಡುತ್ತದೆ. ನೀಡಲೇಬೇಕು. ಇಲ್ಲವಾದರೆ ಕರಗ ಪೂರ್ಣವಾಗುವುದಿಲ್ಲ. ಸುಮಾರು ಮುನ್ನೂರು ವರ್ಷಗಳ ಹಿಂದೆ ಸೂಫಿ ಸಂತ ಮಸ್ತಾನ್ ಸಾಹೇಬರು ಕರಗದ ಭಕ್ತಿಯಿಂದ ಪ್ರಭಾವಿತರಾಗಿದ್ದರು ಎಂಬ ಐತಿಹ್ಯವಿದ್ದು, ಅಂದಿನಿಂದ ಇಂದಿನವರೆಗೂ ದರ್ಗಾದ ಮುಜಾವರ್ ಅವರು ಕರಗಕ್ಕೆ ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡುತ್ತಾರೆ.

image 2026 03 30T132448.769

ಬೆಂಗಳೂರಿನ ಕಿಕ್ಕಿರಿದ ಗಲ್ಲಿಗಳಲ್ಲಿ, ಮಲ್ಲಿಗೆ ಹೂವಿನ ಪರಿಮಳದ ನಡುವೆ ವೀರಕುಮಾರರ ‘ಗೋವಿಂದಾ’ ಎಂಬ ಘೋಷಣೆಯೊಂದಿಗೆ ಸಾಗುವ ಕರಗವು ಆಧುನಿಕತೆಯ ನಡುವೆಯೂ ಪ್ರಾಚೀನ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ. ನಾಡುಪ್ರಭು ಕೆಂಪೇಗೌಡರ ಕಾಲದಿಂದಲೂ ರಾಜಾಶ್ರಯ ಪಡೆದ ಈ ಹಬ್ಬ, ಇಂದು ವಿಶ್ವಪ್ರಸಿದ್ಧಿ ಪಡೆದಿದ್ದು, ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರುತ್ತಿದೆ.

ಸದ್ಯ ಈ ಐತಿಹಾಸಿಕ ಉತ್ಸವದಲ್ಲಿ ಬೆಂಗಳೂರು ಮತ್ತೆ ಕಳೆಗಟ್ಟಿದೆ. ಏ.1 ಕರಗದ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಅರ್ಚಕ ಜ್ಞಾನೇಂದ್ರ ಕುಮಾರ್ ಕರಗ ಹೊರಲಿದ್ದಾರೆ. ಇಂದು ಹಸಿ ಕರಗ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 800ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಧರ್ಮರಾಯ ದೇವಸ್ಥಾನದ ಸನ್ನತಿ ಬೀದಿ, ಕಾರ್ಪೋರೇಷನ್ ರಸ್ತೆ, ಜೆಸಿ ರಸ್ತೆ, ಅವೆನ್ಯೂ ರಸ್ತೆ, ಕೆ.ಆರ್. ಮಾರ್ಕೆಟ್, ಹಡ್ಸನ್ ಸರ್ಕಲ್, ಹಲಸೂರು ಗೇಟ್ ಸರ್ಕಲ್, GBA ಕಚೇರಿ ಆವರಣ, ಎಸ್‌ಪಿ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳು ವಿವಿಧ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಪೊಲೀಸರು ಜನರಿಗೆ ಸುರಕ್ಷಿತವಾಗಿ ಉತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜಪಾನಿಯರ ದೀರ್ಘಾಯುಷ್ಯದ ಗುಟ್ಟು- ‘ಇಕಿಗಾಯ್‌’; ಈ ಕಲೆ ನಮಗೂ ಸಿದ್ಧಿಸಬಹುದು!

ಬಾಲ್ಯದ ‘ಪರದೇಶ’ದ ಒಳಗೆ, ಇಷ್ಟು ಗಾಢವಾದ ಮಣ್ಣಿನ ಘಮವಿರುವುದು ನಿಜಕ್ಕೂ ಸಂತಸದ ವಿಚಾರ. ದರ್ಗಾಕ್ಕೆ ಭೇಟಿ ನೀಡುವ ಆ ಕಡ್ಡಾಯ ಭಾಗ, ಇಂದಿನ ಅಸ್ತವ್ಯಸ್ತ ನಾಡಿಗೆ ಶಾಂತಿ ಮತ್ತು ಸಹಬಾಳ್ವೆಯ ದೊಡ್ಡ ಪಾಠ ಕಲಿಸುತ್ತದೆ. ತಂತ್ರಜ್ಞಾನದ ಅಬ್ಬರದ ನಡುವೆಯೂ ನೆಲದ ಶಕ್ತಿಯನ್ನು ಸಾರುತ್ತಲೇ ಇರುತ್ತದೆ. ಕಾಲ ಎಷ್ಟೇ ಬದಲಾದರೂ, ಯಾವುದೇ ಒಂದು ಪ್ರದೇಶದ ಜೀವಂತಿಕೆಯನ್ನು ಪೀಳಿಗೆಗಳಿಗೆ ಸಾಗಿಸುವುದು ಇಂತಹ ಸಾಂಸ್ಕೃತಿಕ ಪರಂಪರೆಗಳು. ನಾವು ಅವುಗಳನ್ನು ತಲುಪಿಸುವ ಮಾಧ್ಯಮಗಳಾಗಬೇಕು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...