ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಳಕಲ್ ತಾಲ್ಲೂಕಿನ ಹೇರೂರು ಹಾಗೂ ಹುನಗುಂದ ತಾಲ್ಲೂಕಿನ ಅಮರಾವತಿ ಮತ್ತು ರಕ್ಕಸಗಿ ಗ್ರಾಮಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತೊಗರಿ ಹಾಗೂ ಇತರೆ ಬೆಳೆಗಳನ್ನು ಪರಿಶೀಲಿಸಿದ ಸಚಿವರು, ರೈತರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಂದ ಬೆಳೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಹೇರೂರು ಗ್ರಾಮದ ರೈತರು, “ಈ ಬಾರಿ ಮಳೆ ಕೊರತೆಯಿಂದ ತೊಗರಿ ಬೆಳೆ ತೀವ್ರ ಹಾನಿಗೊಳಗಾಗಿದೆ. ಆರು ಎಕರೆಯಲ್ಲಿ ಬೆಳೆದ ಬೆಳೆಯಿಂದ ಹತ್ತು ಕ್ವಿಂಟಲ್ ತೊಗರಿ ಬಂದರೂ ಅದೇ ಹೆಚ್ಚು. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು” ಎಂದು ಮನವಿ ಸಲ್ಲಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರತಾನಿ ಮಾತನಾಡಿ, ಹುನಗುಂದ ಹಾಗೂ ಇಳಕಲ್ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಈಗ ಉತ್ತಮ ಮಳೆಯಾದರೂ ಇಳುವರಿಯಲ್ಲಿ ಗಣನೀಯ ಪ್ರಮಾಣದ ಏರಿಕೆ ಸಾಧ್ಯವಿಲ್ಲ. ಎರಡೂ ತಾಲ್ಲೂಕುಗಳಲ್ಲಿ ಶೇ. ೫೦ರಿಂದ ೬೦ರಷ್ಟು ಇಳುವರಿ ಕುಸಿತವಾಗುವ ಸಾಧ್ಯತೆ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಇದೇ ವೇಳೆ, ಹುನಗುಂದ ತಾಲ್ಲೂಕಿನಲ್ಲಿ ೧೪,೨೩೬ ಹಾಗೂ ಇಳಕಲ್ ತಾಲ್ಲೂಕಿನಲ್ಲಿ ೧೧,೫೯೩ ರೈತರು ಬೆಳೆ ವಿಮೆ ಮಾಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಪರಿಶೀಲನಾ ವೇಳೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಕೃಷಿ ತಾಂತ್ರಿಕ ಅಧಿಕಾರಿ ಬಸವರಾಜ ಟಕ್ಕಳಕಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ಜಬ್ಬಾರ್ ಕಲಬುರ್ಗಿ, ಎನ್.ಎಂ. ಸಂದಿಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.




