ನಾವು ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿರಲಿಲ್ಲ. ಆದರೂ ನನ್ನ ಮೇಲೆ ಲಾಠಿ ಬೀಸಿದ್ದು ಯಾಕೆ? ಲಾಠಿ ಬೀಸುವಂತೆ ಆಜ್ಞೆ ಕೊಟ್ಟವರು ಯಾರು? ಅವರು ಬಂದು ಕ್ಷಮೆ ಕೇಳಿಬಿಡಲಿ ಎಂದು ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಸ್ಕಾನ್ ಶರ್ಮಾ ಆಗ್ರಹಿಸಿದ್ದಾರೆ.
“ನಾನು ಶಾಂತಿಯುತವಾಗಿ ನಡೆದುಕೊಂಡು ಹೋಗುತ್ತಿದ್ದೆ. ಹಾಗಿದ್ದರೂ ಪೊಲೀಸರು ನನ್ನನ್ನು ಏಕೆ ಹೊಡೆದರು? ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ನನಗೆ ಏಕೆ ಕಪಾಳಮೋಕ್ಷ ಮಾಡಿದರು? ಮಹಿಳೆಯ ಮೇಲೆ ಪುರುಷ ಪೊಲೀಸ್ ಸಿಬ್ಬಂದಿ ಕೈ ಹಾಕಬಾರದು ಎಂಬ ನಿಯಮವಿದ್ದರೂ, ಒಬ್ಬ ಪುರುಷ ಸಿಬ್ಬಂದಿ ನನ್ನ ಹಿಂಭಾಗಕ್ಕೆ ಲಾಠಿ ಚುಚ್ಚಲು ಯಾಕೆ ಪ್ರಯತ್ನಿಸಿದರು?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳು ಕ್ಷಮೆಯಾಚಿಸಿದರೆ ತಮಗೆ ಸಮಾಧಾನವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಮತ್ತು ದ್ವೇಷದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಕಾನ್, “ನನ್ನ ಹೆಸರು ಮುಸ್ಕಾನ್. ನನ್ನ ಪೂರ್ಣ ಹೆಸರು ಮುಸ್ಕಾನ್ ಶರ್ಮಾ. ಆದರೆ ನನ್ನನ್ನು ಮುಸ್ಲಿಂ ಎಂದು ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದರೆ ಆತ ಮುಸ್ಲಿಂ ಎನ್ನುವ ಕಥಾನಕವನ್ನು ಈ ದೇಶದಲ್ಲಿ ನಿರ್ಮಿಸಲಾಗುತ್ತಿದೆ. ಒಬ್ಬರನ್ನು ಮುಸ್ಲಿಂ ಎಂದು ಕರೆದ ತಕ್ಷಣ ಅವರು ಹೇಗೆ ದೇಶದ್ರೋಹಿಯಾಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 3 ಕೋಟಿ ರೂ. ವಂಚನೆ ಆರೋಪ: ನಟ ಸಲ್ಮಾನ್ ಖಾನ್ ಮತ್ತು ಸಹೋದರಿಗೆ ಚಂಡೀಗಢ ಕೋರ್ಟ್ ಸಮನ್ಸ್
“ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಮತ್ತು ನಾವು ಎದುರಿಸುತ್ತಿರುವ ಕಿರುಕುಳ ಈ ದೇಶದ ವಾತಾವರಣದ ಬಗ್ಗೆ ಸಾಕಷ್ಟು ಹೇಳುತ್ತದೆ. ಈ ದೇಶದ ಯುವ ಮಹಿಳೆಯಾಗಿ ನನ್ನ ರಕ್ಷಣೆಗೆ ನಾನು ಎಲ್ಲಿಗೆ ಹೋಗಬೇಕು?” ಎಂದು ಮುಸ್ಕಾನ್ ಕೇಳಿದ್ದಾರೆ.




