ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ ಔಷಧಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರದ ಉಚಿತ ಔಷಧ ಪೂರೈಕೆ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ವೈದ್ಯರು ಔಷಧಗಳನ್ನು ಬರೆದುಕೊಟ್ಟರೂ, ಒಂದೆರಡು ಔಷಧಗಳು ಆಸ್ಪತ್ರೆಯಲ್ಲೇ ಲಭ್ಯವಿಲ್ಲದ ಕಾರಣ ಅವುಗಳನ್ನು ಹೊರಗಡೆಯ ಔಷಧ ಅಂಗಡಿಗಳಿಂದ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ನೂರಾರು ರೂಪಾಯಿ ವೆಚ್ಚ ಮಾಡಿ ಔಷಧ ಖರೀದಿಸಬೇಕಾಗುತ್ತಿರುವುದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಹೊರೆಯಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಯಾವುದೇ ಔಷಧವನ್ನು ಹೊರಗಡೆಯಿಂದ ಖರೀದಿಸುವಂತೆ ರೋಗಿಗಳಿಗೆ ಸೂಚಿಸಬಾರದು ಎಂದು ಸರ್ಕಾರ ಹೇಳುತ್ತಿದೆ. ಆರೋಗ್ಯ ಸಚಿವರು ಕೂಡ ವಿಧಾನಸೌಧದಲ್ಲಿ ಈ ಕುರಿತು ಹಲವು ಬಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿನ ವಾಸ್ತವ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಟೀಕಿಸಿದ್ದಾರೆ.
‘ಸಾಲ ಮಾಡಿಯಾದರೂ ಔಷಧ ಖರೀದಿಸಬೇಕಾದ ಸ್ಥಿತಿ’
ಬಡವರು ಆರೋಗ್ಯ ಸಮಸ್ಯೆ ಎದುರಾದಾಗ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಅಲ್ಲಿಯೇ ಅಗತ್ಯ ಔಷಧಗಳು ಸಿಗದಿದ್ದರೆ, ಆರೋಗ್ಯ ಉಳಿಸಿಕೊಳ್ಳಲು ಸಾಲ ಮಾಡಿಯಾದರೂ ಹೊರಗಡೆಯಿಂದ ಔಷಧ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುತ್ತಿದೆ ಎಂದು ಅರವಿಂದ ಕುಲಕರ್ಣಿ ಹೇಳಿದ್ದಾರೆ.
ಸರ್ಕಾರ ಎಲ್ಲ ಅಗತ್ಯ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಲಾಗುತ್ತದೆ ಎಂದು ಹೇಳುತ್ತಿದೆ. ಹಾಗಿದ್ದರೆ ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಕೆಲವು ಔಷಧಗಳು ಏಕೆ ಲಭ್ಯವಿಲ್ಲ ಎಂಬುದಕ್ಕೆ ಅಧಿಕಾರಿಗಳು ಉತ್ತರಿಸಬೇಕು. ಔಷಧಗಳ ಕೊರತೆ ನಿಜವಾಗಿಯೂ ಪೂರೈಕೆ ಸಮಸ್ಯೆಯಿಂದ ಉಂಟಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳು, ಸಚಿವರು ಸ್ಪಷ್ಟನೆ ನೀಡಲಿ…
ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಂಟಾಗುತ್ತಿರುವ ಔಷಧದ ಸಮಸ್ಯೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಬೇಕು. ಸರ್ಕಾರದ ಉಚಿತ ಔಷಧ ಯೋಜನೆಯ ಉದ್ದೇಶವೇ ಬಡ ಜನರಿಗೆ ಹೊರೆಯಾಗದಂತೆ ಚಿಕಿತ್ಸೆ ಒದಗಿಸುವುದಾಗಿದ್ದು, ಆಸ್ಪತ್ರೆಯಲ್ಲಿ ಔಷಧ ಕೊರತೆಯಿದ್ದರೆ ಕೂಡಲೇ ಸರಿಪಡಿಸಬೇಕು.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಸ್ಪಷ್ಟನೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಂಡು, ಬಡ ರೋಗಿಗಳು ಹೊರಗಡೆ ಹಣ ನೀಡಿ ಔಷಧ ಖರೀದಿಸುವ ಪರಿಸ್ಥಿತಿಗೆ ಅಂತ್ಯ ಹಾಡಬೇಕು ಎಂದು ಅರವಿಂದ ಕುಲಕರ್ಣಿ ಒತ್ತಾಯಿಸಿದ್ದಾರೆ.




