ಬೆಳಗಾವಿ ವಿಭಾಗದ ಯಾವುದೇ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಬುಧವಾರ ನಡೆದ ಬೆಳಗಾವಿ ವಿಭಾಗದ ಹವಾಮಾನ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜುಲೈ ತಿಂಗಳಲ್ಲೂ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹ ಡೆಡ್‌ಸ್ಟೋರೇಜ್ ಮಟ್ಟ ತಲುಪಿರುವುದರಿಂದ ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಹಾಗೂ ಎಚ್ಚರಿಕೆಯಿಂದ ಬಳಸಬೇಕು” ಎಂದು ತಿಳಿಸಿದರು.
ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಬಳಕೆಗೆ ಬಳಸಬಾರದು. ಕಾಲುವೆ ಹಾಗೂ ನದಿಗಳಲ್ಲಿ ಅನಧಿಕೃತವಾಗಿ ಪಂಪ್‌ಸೆಟ್ ಅಳವಡಿಸಿ ನೀರು ಎತ್ತುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೀರಿನ ಕೊರತೆಯ ಭೀತಿಯಿಂದ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುತ್ತಿರುವುದರಿಂದ ಡೆಂಘೀ ಹರಡುವ ಸಾಧ್ಯತೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 34, ಧಾರವಾಡದಲ್ಲಿ 27, ಗದಗದಲ್ಲಿ 25, ವಿಜಯಪುರದಲ್ಲಿ 24, ಹಾವೇರಿಯಲ್ಲಿ 11, ಉತ್ತರ ಕನ್ನಡದಲ್ಲಿ 10 ಹಾಗೂ ಬಾಗಲಕೋಟೆಯಲ್ಲಿ 5 ಡೆಂಘೀ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಜನರಲ್ಲಿ ಅರಿವು ಮೂಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಳೆಮಾಪನ ಕೇಂದ್ರಗಳನ್ನು ತಕ್ಷಣ ದುರಸ್ತಿಗೊಳಿಸಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಕೊಳವೆಬಾವಿ ಹಾಗೂ ಕೆರೆಗಳಿರುವ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವು ಬೆಳೆಯಲು ರೈತರಿಗೆ ಮೇವಿನ ಬೀಜ ವಿತರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಅಗತ್ಯವಿದ್ದರೆ ಕೊಳವೆಬಾವಿಗಳ ಡೀಪನಿಂಗ್ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಬೆಳೆವಿಮೆ ವಿಷಯದಲ್ಲಿ ವಿಮಾ ಕಂಪನಿಗಳು ಮಾನದಂಡ ಬದಲಿಸಿ ರೈತರಿಗೆ ಅನ್ಯಾಯವಾಗದಂತೆ ಕೃಷಿ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಡಾ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.




