ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಭಟ್ಟಿ ಸರಾಯಿ ಸಂಗ್ರಹಿಸಿಟ್ಟಿದ್ದ ಸ್ಥಳದ ಮೇಲೆ ಕುಡಚಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಕಳ್ಳಭಟ್ಟಿ ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಕಳ್ಳಭಟ್ಟಿ ಸರಾಯಿ ತಯಾರಿಸಲು ಬಳಸಲಾಗುತ್ತಿದ್ದ 1,790 ಲೀಟರ್ ಕೊಳೆ ಹಾಗೂ 10 ಲೀಟರ್ ಕಳ್ಳಭಟ್ಟಿ ಸರಾಯಿ ಸೇರಿದಂತೆ ಕಳ್ಳಭಟ್ಟಿ ತಯಾರಿಕೆಗೆ ಉಪಯೋಗಿಸುತ್ತಿದ್ದ ಬ್ಯಾರಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ರತನಕುಮಾರ ಜೀರಗ್ಯಾಳ, ಪಿಎಸ್‌ಐ ಪ್ರೀತಮ್ ನಾಯಿಕ ಹಾಗೂ ಕುಡಚಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಎಸ್‌ಐ ಕೆ.ಆರ್. ಸಾಳುಂಕೆ, ಪಿ.ಎಲ್. ಖವಟಿಕೊಪ್ಪ, ಎಚ್.ಎಸ್. ಗುಡ್ಡದ, ಬಿ.ಎಸ್. ಖೋತ, ಎ.ಎ. ಶಾಂಡಗೆ, ಎ.ಎಸ್. ಪಾಟೀಲ ಮತ್ತು ಮಹಿಳಾ ಸಿಬ್ಬಂದಿ ಆರ್.ಎಸ್. ಸನದಿ ದಾಳಿ ನಡೆಸಿದರು.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹಾಗೂ ಪ್ರಕರಣದ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.




