ಬೆಳಗಾವಿ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಿಸದಿರುವುದರಿಂದ ಕಬ್ಬು ಬೆಳೆಗಾರರ ಸಮಸ್ಯೆ ಉದ್ಭವಿಸಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ಎಂಎಸ್‌ಪಿ ಹೆಚ್ಚಿಸುವ ಭರವಸೆ ನೀಡಿದ್ದು, ಈ ಸಂಬಂಧ ಸಮಿತಿಯನ್ನೂ ರಚಿಸಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಕ್ಕರೆಯ ಎಂಎಸ್‌ಪಿ ನಿಗದಿಪಡಿಸಿದ ಬಳಿಕ ಅದನ್ನು ಆಧರಿಸಿ ಕಬ್ಬಿನ ದರ ನಿಗದಿಪಡಿಸಲು ಸಕ್ಕರೆ ಕಾರ್ಖಾನೆಗಳು ತೀರ್ಮಾನಿಸಲಿವೆ. ಪ್ರತಿ ಟನ್‌ಗೆ ಎಷ್ಟು ದರ ನೀಡಲಾಗುತ್ತದೆ ಎಂಬುದನ್ನು ಕಾರ್ಖಾನೆಗಳೇ ಪ್ರಕಟಿಸಲಿವೆ ಎಂದರು.
ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ರೈತರ ಸಂಕಷ್ಟವನ್ನು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರೂ ಅರ್ಥಮಾಡಿಕೊಂಡಿದ್ದು, ಎಂಎಸ್‌ಪಿ ಹೆಚ್ಚಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಬ್ಬಿನ ದರದ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಚರ್ಚಿಸಿ ತೀರ್ಮಾನಿಸಲಿವೆ. ಕರ್ನಾಟಕ ಬಂದ್ ಹಿಂಪಡೆದ ರೈತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.




