ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ-ಮಲ್ಲಾಪುರ ಬಳಿ ಸೋಮವಾರ ಮಧ್ಯರಾತ್ರಿ ಟಾಟಾ ಏಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಧಾರವಾಡ ತಾಲೂಕಿನ ಹೆಗ್ಗೇರಿ ಗ್ರಾಮದ ಅಜಾದ್ ಇಸ್ಮಾಯಿಲ್ ಜಮಾದಾರ (45), ಅವರ ಪತ್ನಿ ಕೈರೂನ್ ಆಜಾದ್ ಜಮಾದಾರ (40) ಹಾಗೂ ಅಜಾದ್ ಅವರ ಅಳಿಯ, ದೇಮಟ್ಟಿ ಗ್ರಾಮದ ಬಾಬಾಜಾನ್ ನಿಸ್ಸಾರ್ ಅಹ್ಮದ್ ತಡಕೋಡ (16) ಮೃತರು.
ದೇಮಟ್ಟಿಯಿಂದ ಹೆಗ್ಗೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಲ್ಲಾಪುರ ಬಳಿ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಕಿತ್ತೂರು ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ ತಿಳಿಸಿದ್ದಾರೆ.
ಮೃತ ದಂಪತಿಯ ಅಂತ್ಯಕ್ರಿಯೆ ಹೆಗ್ಗೇರಿ ಗ್ರಾಮದಲ್ಲಿ ಹಾಗೂ ಬಾಬಾಜಾನ್ ಅವರ ಅಂತ್ಯಕ್ರಿಯೆ ದೇಮಟ್ಟಿಯಲ್ಲಿ ನೆರವೇರಿತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಎರಡೂ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




