ಮಳೆ ಕೊರತೆಯಿಂದ ಬೆಳೆ ಹಾನಿಯಾದರೆ ಸೂಕ್ತ ಪರಿಹಾರ ಹಾಗೂ ಬೆಳೆವಿಮೆ ಸೌಲಭ್ಯವನ್ನು ತ್ವರಿತವಾಗಿ ರೈತರಿಗೆ ತಲುಪಿಸಬೇಕಿದೆ. ಸರ್ಕಾರ ಮತ್ತು ಆಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎನ್ನುವದು ಜಿಲ್ಲೆಯ ರೈತರ ಮನವಿಯಾಗಿದೆ.
ಮುಂಗಾರು ಮಳೆ ವಿಳಂಬವಾಗಿರುವುದು ಬೆಳಗಾವಿ ಜಿಲ್ಲೆಯ ರೈತರನ್ನು ಆಕಾಶದತ್ತ ಮುಖ ಮಾಡುವಂತೆ ಮಾಡಿದೆ. ಚೆನ್ನಾಗಿ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಬೆಳೆ ಒಣಗುವ ಭೀತಿ ಕಾಡುತ್ತಿದೆ. ಕೃಷಿ ಎಂದರೆ ಕೇವಲ ಉದ್ಯೋಗವಲ್ಲ, ಅದು ಗ್ರಾಮೀಣ ಬದುಕಿನ ಆಧಾರವಾಗಿದ್ದು, ಪ್ರಕೃತಿಯ ಅನಿಶ್ಚಿತತೆ ರೈತರ ಬದುಕನ್ನು ಮತ್ತೆ ಸಂಕಷ್ಟಕ್ಕೆ ತಳ್ಳಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿತ್ತು. ಅದರ ಆಧಾರದ ಮೇಲೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ನಂತರ ಮುಂಗಾರು ಮಳೆ ಕೈಕೊಟ್ಟಿದೆ. ಈವರೆಗೆ ಶೇ.50ರಷ್ಟು ಮಾತ್ರ ಬಿತ್ತನೆ ಆಗಿದೆ. ಇನ್ನುಳಿದ ಶೇ.50ರಷ್ಟು ಭೂಮಿ ಬಿತ್ತನೆಗೆ ಸಿದ್ಧಗೊಂಡಿದ್ದರೂ ಮಳೆ ನೋಡಿಕೊಂಡು ಬಿತ್ತನೆ ಮಾಡೋಣ ಎನ್ನುವ ಚಿಂತನೆಯಲ್ಲಿ ರೈತರಿದ್ದಾರೆ. ಬಿತ್ತನೆ ಮಾಡಿ ಮಳೆ ಆಗದೇ ಹೋದರೆ ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ ರೈತರದ್ದಾಗಿದೆ.
ಮೇ ತಿಂಗಳ ಕೊನೆ ಮತ್ತು ಜೂನ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ಒಂದಷ್ಟು ಬಿತ್ತನೆಯಾಗಿದೆ. ಆದರೆ ಜೂನ್ ಎರಡನೇ ವಾರದಲ್ಲಿ ತೇವಾಂಶ ಗಟ್ಟಿಗೊಳಿಸುವಷ್ಟು ದೊಡ್ಡ ಮಳೆ ಸುರಿದಿಲ್ಲ. ಹಾಗಾಗಿ ಬಹಳಷ್ಟು ಕಡೆ ಬಿತ್ತನೆ ಬಾಕಿಯಿದ್ದು, ಈವರೆಗೆ ಶೇ.51ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 7,52,312 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದ್ದು, ಜೂನ್ 15ರವರೆಗೆ 3,81,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಕಬ್ಬು 2,29,229 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅದೇ ರೀತಿ ಸೋಯಾಬೀನ್ 42,405 ಹೆಕ್ಟೇರ್, ಹೆಸರು 38,271 ಹೆಕ್ಟೇರ್, ಭತ್ತ 32,540 ಹೆಕ್ಟೇರ್, ಮೆಕ್ಕೆಜೋಳ 14,820 ಹೆಕ್ಟೇರ್, ಹತ್ತಿ 8,433 ಹೆಕ್ಟೇರ್ ಸೇರಿದಂತೆ ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ತೇವಾಂಶದ ಕೊರತೆಯನ್ನು ಎದುರಿಸುತ್ತಿವೆ.
ಈ ಕುರಿತು ಈ ದಿನ.ಕಾಮ್ ಜತೆ ಬೆಳಗಾವಿ ಜಿಲ್ಲೆಯ ರೈತ ಕರಿಯಪ್ಪ ಮಾತನಾಡಿ, “ನಮ್ಮ ಜಿಲ್ಲೆಯಲ್ಲಿ ಮಳೆಯನ್ನು ನಂಬಿ ಹೆಸರು, ಉದ್ದು, ತೊಗರಿ, ಈರುಳ್ಳಿ, ಸೋಯಾಬೀನ್, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ನಾವು ಹೆಸರು ಬಿತ್ತನೆ ಮಾಡಿದ್ದೇವೆ. ಪ್ರಾರಂಭದಲ್ಲಿ ಮುಂಗಾರು ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ್ದೇವೆ. ಆದರೆ ಬಿತ್ತನೆ ಮಾಡಿ ಒಂದು ತಿಂಗಳು ಆದರೂ ಸರಿಯಾಗಿ ಮಳೆ ಆಗಿಲ್ಲ. ಬಿಸಿಲು ಹೆಚ್ಚಾಗಿದೆ. ಇದರಿಂದ ಬೆಳೆಗಳು ಒಣಗುತ್ತವೆ. ಮಳೆಯಾಗದಿದ್ದರೆ ಬೆಳೆ ಬರುವುದಿಲ್ಲ. ಒಂದು ಎಕರೆ ಹೆಸರು ಬಿತ್ತನೆಗೆ ₹15 ಸಾವಿರ ಖರ್ಚು ಮಾಡಿದ್ದೇವೆ. ಒಂದು ಪ್ಯಾಕೆಟ್ ಗೊಬ್ಬರಕ್ಕೆ ₹1,900 ಆಗಿದೆ. ಮಳೆ ಆದರೆ ರೈತರ ಬೆಳೆ ಬರಲಿದೆ” ಎಂದು ಹೇಳಿದರು. ಜತೆಗೆ ರೈತ ಕರಿಯಪ್ಪ ಮಾತನಾಡಿರುವ ಮಾತುಗಳು ಜಿಲ್ಲೆಯ ಸಾವಿರಾರು ರೈತರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.
ಮಳೆಗಾಗಿ ಕಾದು ಕುಳಿತಿರೋ ಬೆಳಗಾವಿ ಜಿಲ್ಲೆಯ ರೈತರ ಬದುಕು ಈಗ ಸಂಪೂರ್ಣ ಮುಂಗಾರು ಮಳೆಯ ಮೇಲೆ ನಿಂತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೇ ಒಣಗುವ ಹಂತಕ್ಕೆ ಬಂದಿವೆ. ಇನ್ನು ವಾರದೊಳಗೆ ಒಳ್ಳೆಯ ಮಳೆಯಾದ್ರ ಬೆಳೆಗಳು ಚೇತರಿಸಿಕೊಳ್ಳೋ ಸಾಧ್ಯತೆ ಇದೆ. ಇಲ್ಲದಿದ್ರ ರೈತರ ಶ್ರಮ, ಹಣ ಮತ್ತು ಹೂಡಿಕೆ ಎಲ್ಲವೂ ಮಣ್ಣಾಗೋ ಭೀತಿ ಕಾಡುತ್ತಿದೆ. ರೈತರ ನಿರೀಕ್ಷೆ ಮಳೆ ಆಗಿದ್ದು. ಧಾರಾಕಾರ ಮಳೆ ಬಂದ್ರ ಹೊಲ ಹಸಿರಾಗುತ್ತವೆ, ರೈತನ ಮುಖದಲ್ಲಿ ನಗು ಮೂಡುತ್ತೆ ಇಲ್ಲಾಂದ್ರೆ ರೈತರಿಗೆ ಆರ್ಥಿಕ ಸಂಕಷ್ಟ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿದ್ದೀರಾ? ‘ವರ್ಷದ ಕಷ್ಟ – ಕ್ಷಣದಲ್ಲಿ ನಷ್ಟ’; ಭಾರೀ ಮಳೆಗೆ ನಲುಗಿದ ಮಾವು ಬೆಳೆಗಾರರು
ಈ ಸಂದರ್ಭದಲ್ಲಿ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕಾದ ಅಗತ್ಯವಿದೆ. ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಬಿತ್ತನೆ ಬೀಜ, ಗೊಬ್ಬರ ಮತ್ತು ತಾಂತ್ರಿಕ ಸಲಹೆಗಳನ್ನು ಒದಗಿಸಬೇಕು. ಮಳೆ ಕೊರತೆಯಿಂದ ಬೆಳೆ ಹಾನಿಯಾದರೆ ಸೂಕ್ತ ಪರಿಹಾರ ಹಾಗೂ ಬೆಳೆವಿಮೆ ಸೌಲಭ್ಯವನ್ನು ತ್ವರಿತವಾಗಿ ರೈತರಿಗೆ ತಲುಪಿಸಬೇಕಿದೆ. ಸರ್ಕಾರ ಮತ್ತು ಆಡಳಿತ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎನ್ನುವದು ಜಿಲ್ಲೆಯ ರೈತರ ಮನವಿಯಾಗಿದೆ.




