ಸರ್ಕಾರ ಮತ್ತು ಕೃಷಿ ಇಲಾಖೆಗಳು ಒಗ್ಗೂಡಿ, ಹವಾಮಾನ ನಿರೋಧಕ ತಳಿಗಳ ಅಭಿವೃದ್ಧಿ, ಸಕಾಲಿಕ ಸಲಹೆ ಮತ್ತು ಎಚ್ಚರಿಕೆ ವ್ಯವಸ್ಥೆ, ಮಾರುಕಟ್ಟೆ ಸ್ಥಿರತೆಗೆ ಸರ್ಕಾರಿ ಹಸ್ತಕ್ಷೇಪ, ವಿಮಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ ರೈತರು ಇಂತಹ ಸಂಕಷ್ಟದಿಂದ ಹೊರಬರಬಹುದು. ಇಲ್ಲದಿದ್ದಲ್ಲಿ ʼಕರ್ನಾಟಕ ಹಣ್ಣಿನ ರಾಜ್ಯʼ ಎಂಬ ಖ್ಯಾತಿಗೆ ದೂರವಾಗಬಹುದು.
ಹಣ್ಣಿನ ರಾಜ್ಯ ಎಂದೇ ಪ್ರಸಿದ್ಧವಾದ ಕರ್ನಾಟಕದ ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ಬಾರಿ ಮಾವು ಬೆಳೆಗಾರರಿಗೆ ದ್ವಿಮುಖ ಸಂಕಷ್ಟ ಎದುರಾಗಿದೆ. ಭಾರೀ ಮಳೆ, ಬಿರುಗಾಳಿ ಮತ್ತು ಅಕಾಲಿಕ ಹವಾಮಾನ ವೈಪರೀತ್ಯಗಳಿಂದ ಬೆಳೆ ನಾಶವಾಗುತ್ತಿದ್ದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಉಳಿದ ಬೆಳೆಯಿಂದಲೂ ರೈತರಿಗೆ ಯಾವುದೇ ಲಾಭವಿಲ್ಲದಂತಾಗಿದೆ. ಒಂದು ವರ್ಷದ ಕಷ್ಟ, ಸಾಲ, ಶ್ರಮ ಎಲ್ಲವೂ ನೀರಲ್ಲಿ ಕೊಚ್ಚಿಹೋಗುತ್ತಿದೆ. ರೈತರು ಕಂಗಾಲಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವು ಬೆಳೆಗಳು ನಾಶವಾಗಿವೆ. ಒಂದು ರಾತ್ರಿಯಲ್ಲಿ ಅಥವಾ ಕೆಲವು ನಿಮಿಷಗಳ ಬಿರುಗಾಳಿ-ಮಳೆಗೆ ವರ್ಷದ ಬೆಳೆ ಮಣ್ಣುಪಾಲಾಗಿದೆ. ಒಂದು ತೋಟದಲ್ಲಿ 7-7.5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಶ್ರೀನಿವಾಸಪುರ, ಮುಳಬಾಗಿಲು ಸೇರಿದಂತೆ ಹಲವು ತಾಲೂಕುಗಳಲ್ಲಿ ಇದರ ಪರಿಣಾಮ ತೀವ್ರವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ರಾಜ್ಯದ ಒಟ್ಟು ಮಾವಿನ ಬೆಳೆಯಲ್ಲಿ 3ನೇ ಒಂದು ಭಾಗ ಶ್ರೀನಿವಾಸಪುರದಲ್ಲೇ ವ್ಯಾಪಿಸಿದೆ. ‘ಮಾವಿನ ನಗರಿ’ ಎಂದೇ ಕರೆಯುವ ಈ ಪ್ರದೇಶದಲ್ಲಿ ಶೇ 90ರಷ್ಟು ರೈತರಿಗೆ ಮಾವು ಬೆಳೆ ಬಿಟ್ಟರೆ ಮತ್ತೊಂದು ಆದಾಯವಿಲ್ಲ. 60ಕ್ಕೂ ಹೆಚ್ಚು ವರ್ಷಗಳಿಂದ ಮಾವಿನ ಕೃಷಿ ನಂಬಿ ಜೀವನ ಸಾಗಿಸುತ್ತಿರುವ ಬೆಳೆಗಾರರು ತಮ್ಮ ಮಕ್ಕಳ ಮದುವೆ, ಮಕ್ಕಳಿಗೆ ಉನ್ನತ ಶಿಕ್ಷಣ, ಮನೆ ನಿರ್ಮಾಣ, ಆಸ್ಪತ್ರೆ ಖರ್ಚು ಸೇರಿದಂತೆ ಸಂಸಾರದ ಇಡೀ ಜವಾಬ್ದಾರಿಗಳಿಗೆ ಮಾವು ಹಂಗಾಮಿನ ಫಸಲು ಹಾಗೂ ಧಾರಣೆ ಮೇಲೆ ಅವಲಂಬಿತರಾಗಿರುತ್ತಾರೆ.
ರೈತರಷ್ಟೇ ಅಲ್ಲ; ಮಂಡಿ ಮಾಲೀಕರು, ವರ್ತಕರು, ಮಧ್ಯವರ್ತಿಗಳು, ಸಾಗಣೆ ವಾಹನಗಳ ಮಾಲೀಕರು, ಚಾಲಕರು, ಕೂಲಿಕಾರರು, ಹಮಾಲಿಗಳು ಸೇರಿದಂತೆ ಅದೆಷ್ಟೊ ಜನರ ಬದುಕಿಗೆ ಮಾವಿನ ಕೃಷಿ ಆಸರೆಯಾಗಿದೆ. ಆದರೆ, ಇಳುವರಿ ಹಾಗೂ ಧಾರಣೆ ಕುಸಿತ ಇಡೀ ಮಾರುಕಟ್ಟೆ ವ್ಯವಸ್ಥೆಗೆ ಅಲ್ಲದೆ ಅವಲಂಬಿತರಿಗೂ ಪೆಟ್ಟು ನೀಡಿದೆ.
ಈ ವರ್ಷ ಹವಾಮಾನ ವೈಪರೀತ್ಯಕ್ಕೆ ಭಾರೀ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಯಲ್ಲಿನ ಧಾರಣೆ ಕುಸಿತವೂ ಮಾವು ಬೆಳೆಗಾರರನ್ನು ಹೈರಾಣಾಗಿಸಿದೆ. ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾ ಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಗಳಲ್ಲಿ ನಾಲ್ಕೈದು ವರ್ಷಗಳಿಂದ ಹವಾಮಾನ ವೈಪರೀತ್ಯ, ಧಾರಣೆಯ ಹಗ್ಗಜಗ್ಗಾಟ, ಕೀಟಬಾಧೆ, ಅಕಾಲಿಕ ಮಳೆ, ಆಲಿಕಲ್ಲು ಮಳೆ, ಬಿರುಗಾಳಿ, ವಿಪರೀತ ಬಿಸಿಲಿನ ಕಾರಣ ಮಾವು ಬೆಳೆಗಾರರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಭಾರೀ ಮಳೆಯಿಂದಾಗಿ ಮಾವಿನ ಹಣ್ಣುಗಳು ಉದುರಿ ಹೋಗುತ್ತಿವೆ, ಬೆಳೆಯ ಗುಣಮಟ್ಟ ಕುಸಿದಿದೆ. ಬಾಳೆ, ಪಪ್ಪಾಯಿ, ತರಕಾರಿ ಬೆಳೆಗಳಿಗೂ ಹಾನಿಯಾಗಿದೆ. ಕೋಲಾರದಲ್ಲಿ ಒಂದು ತಿಂಗಳಲ್ಲಿ 1200 ಹೆಕ್ಟೇರ್ ಬೆಳೆ ನಾಶವಾಗಿ ರೈತರಿಗೆ ಸುಮಾರು 2.51 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ವರದಿಗಳು ಹೇಳುತ್ತವೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಾವಿನ ಸುಗ್ಗಿ ಈಗ ಬಿರುಸು ಪಡೆದುಕೊಂಡಿದ್ದು, ಮಾವಿನ ಇಳುವರಿ ಕಡಿಮೆಯಾದರೆ ದರ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಈ ವರ್ಷ ಇಳುವರಿ ಮತ್ತು ಧಾರಣೆ ಎರಡೂ ಕುಸಿತ ಕಂಡಿದೆ. ಇದಕ್ಕೆ ಕಾರಣವೇನು ಎನ್ನುವುದು ರೈತರಿಗೂ ಗೊತ್ತಿಲ್ಲ; ವ್ಯಾಪಾರಿಗಳ ಬಳಿಯೂ ಉತ್ತರ ಸಿಗುತ್ತಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ ಇನ್ನೂ ಕೂಡ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಿಲ್ಲ.
ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಕೋಲಾರ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಶ್ರೀನಿವಾಸಪುರ ತಾಲೂಕಿನಲ್ಲೇ 40 ಸಾವಿರಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಮಾವಿನ ಕೃಷಿ ನಡೆಯುತ್ತದೆ. ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.
ಕಳೆದ ವರ್ಷ ಧಾರಣೆ ಇಲ್ಲದೆ ಮಾವಿನ ಹಣ್ಣುಗಳನ್ನು ತೋಟದಲ್ಲೇ ಬಿಡಲಾಗಿತ್ತು. ರೈತರ ಪ್ರತಿಭಟನೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಿದ್ದವು. ಈ ವರ್ಷವೂ ಶೇ 70ರಷ್ಟು ಫಸಲು ಕುಂಠಿತಗೊಂಡಿದ್ದು, ಹಂಗಾಮಿನ ಆರಂಭದಲ್ಲೇ ಧಾರಣೆ ಕುಸಿತ ಉಂಟಾಗಿದೆ. ಜ್ಯೂಸ್ ಉದ್ದೇಶಕ್ಕೆ ಸಂಸ್ಕರಣಾ ಘಟಕಗಳಿಗೆ ಪೂರೈಕೆಯಾಗುವ ತೋತಾಪುರಿ ಮಾವಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಪ್ರತಿ ಕೆ.ಜಿಗೆ ಕೇವಲ ₹ 4 ದರ ಸಿಗುತ್ತಿದೆ. ಅದರಲ್ಲೂ ರೈತರು 40 ಪೈಸೆಯನ್ನು ದಲ್ಲಾಳಿಗೆ ನೀಡಬೇಕು. ರೈತರು ತಾವು ಹೂಡಿದ ಬಂಡವಾಳಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ.
ಒಂದು ಟನ್ ತೋತಾಪುರಿ ಮಾವು ಬೆಳೆಯಲು ಸುಮಾರು 12 ಸಾವಿರ ರೂ. ಖರ್ಚು ಬರುತ್ತದೆ. ಆದರೆ, ಈಗ ಟನ್ ಮಾವು ಎಪಿಎಂಸಿಯಲ್ಲಿ ಕೇವಲ 4 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಕೂಲಿ ಹಾಗೂ ಸಾಗಣೆ ವೆಚ್ಚವಾದರೂ ಉಳಿಯಲಿ ಎಂದು ಹಲವು ರೈತರು ಮಾವು ಕಟಾವಿಗೆ ಮುಂದಾಗುತ್ತಿಲ್ಲ.
ಶ್ರೀನಿವಾಸಪುರದ ಮಾವು ಬೆಳೆಗಾರ ನವೀನ್ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಬೆಳೆಯುವ ಮಾವಿಗೆ ಉತ್ತಮ ಮೌಲ್ಯ ಸಿಗಬೇಕಾದರೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಸಂಗ್ರಹ, ಸಂಸ್ಕರಣಾ ಘಟಕ ಬೇಕು. ಮೂಲಸೌಕರ್ಯ ಒದಗಿಸಬೇಕು. ಸಾಗಣೆ, ಸಂಚಾರ ವ್ಯವಸ್ಥೆ ಸಮರ್ಪಕವಾಗಿರಬೇಕು. ರೈತರ ಆಧಾರಸ್ತಂಭ ಎನಿಸಿರುವ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು” ಎಂದು ಆಗ್ರಹಿಸಿದರು.
ಮಾವು ಬೆಳೆಯ ಗುಣಮಟ್ಟ ಕುಸಿತ, ರಫ್ತು ಸಮಸ್ಯೆಗಳು ಹಾಗೂ ಮಾರುಕಟ್ಟೆ ತಿರಸ್ಕಾರದ ಹಿಂದಿನ ಕಾರಣಗಳನ್ನು ನಿಖರವಾಗಿ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಕೋಲಾರ ಜಿಲ್ಲಾಧಿಕಾರಿ ಎಂ ಆರ್ ರವಿ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಮನಗರ ಜಿಲ್ಲೆಯಲ್ಲೂ ಪರಿಸ್ಥಿತಿ ಉತ್ತಮವಾಗಿಲ್ಲ. ಹವಾಮಾನ ವೈಪರೀತ್ಯ, ಜೋನಿ ರೋಗ ಮತ್ತು ಅತಿವೃಷ್ಟಿಯಿಂದಾಗಿ ಇಳುವರಿ ಶೇ.25-30ಕ್ಕೆ ಕುಸಿದಿದೆ. ಕೆಲವು ವರದಿಗಳ ಪ್ರಕಾರ ಶೇ.70-90ರಷ್ಟು ನಷ್ಟವಾಗಿರುವುದಾಗಿ ತಿಳಿದುಬಂದಿದೆ. ಹಿಂದಿನ ವರ್ಷಗಳಲ್ಲಿ ಕೂಡ ಅಕಾಲಿಕ ಮಳೆ, ಬಿಸಿಲು ಮತ್ತು ರೋಗಗಳಿಂದ ಇದೇ ಪರಿಸ್ಥಿತಿ ಎದುರಾಗಿತ್ತು. ಜಿಲ್ಲೆಯ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಈ ಬಾರಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ.
ದಿನೇಶ್ ಬಿಳಗುಂಬ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಮನಗರದಲ್ಲಿ ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಶೇ.80ರಷ್ಟು ಮಾವು ಕೈ ಕೊಟ್ಟಿದೆ. ಕೇವಲ ಶೇ 20ರಷ್ಟು ಬೆಳೆ ಮಾತ್ರ ಸಿಕ್ಕಿದೆ. ಅದಕ್ಕೂ ಸೂಕ್ತ ಬೆಲೆ ಇಲ್ಲದೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಮಾವಿನ ಋತು ಮೊದಲಿಗೆ ಶುರುವಾಗುವುದೇ ರಾಮನಗರದಲ್ಲಿ. ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ರಾಮನಗರ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಶೇ.90ರಷ್ಟು ಮಾವು ಪ್ರದೇಶ ಮಳೆಯಾಶ್ರಿತವಾಗಿದೆ.
“ಬೆಳೆಗಾರರ ಸ್ಥಿತಿಯ ಕುರಿತು ಎಪಿಎಂಸಿ, ತೋಟಗಾರಿಕೆ ಅಧಿಕಾರಿಗಳು ಸೇರಿದಂತೆ ಹಲವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂಬುದು ರಾಮನಗರ ಮಾವು ಬೆಳೆಗಾರರ ಮಾತಾಗಿದೆ.
“ಮಾವಿನ ಗಿಡ ಹೂ ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಕಾಯಿ ಆಗಬೇಕಿದ್ದ ಪಿಂದೆಗಳು ರಣ ಬಿಸಿಲಿನ ತಾಪಕ್ಕೆ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರಿದ್ದವು. ತುಸು ದೊಡ್ಡದಾಗಿ ಬಲಿತ ಮಾವಿನ ಕಾಯಿಗಳು ನೀರಿನ ಅಂಶ ಸಿಗದೆ ಸೊರಗಿದ್ದವು. ಜತೆಗೆ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಬಂದಾಗ ಉದುರಿದ್ದವು. ಕೆಲವೆಡೆ ಮಾವಿನ ಕಾಯಿಗಳ ಗಾತ್ರ ಕಡಿಮೆಯಾಗಿ ಗುಣಮಟ್ಟ ಕಳೆದುಕೊಂಡಿವೆ” ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.
“ಆಂಧ್ರಪ್ರದೇಶ, ತಮಿಳುನಾಡಿನ ಜ್ಯೂಸ್ ತಯಾರಿಸುವ ಫ್ಯಾಕ್ಟರಿಗಳ ಮೇಲೆ ಅವಲಂಬನೆ ಆಗುವುದು ಬಿಟ್ಟು ನಮ್ಮದೇ ರಾಜ್ಯದಲ್ಲಿ ಜ್ಯೂಸ್ ಫ್ಯಾಕ್ಟರಿಗಳನ್ನು ಪ್ರಾರಂಭಿಸಬೇಕು. ವಿದೇಶಗಳಿಂದ ಬರುವ ಸಾಂದ್ರೀಕೃತ ಹಣ್ಣುಗಳ ರಸ ಆಮದು ನಿಲ್ಲಿಸಬೇಕು. ರಫ್ತಿಗೆ ಸೌಲಭ್ಯ ಕಲ್ಪಿಸಬೇಕು. ಜತೆಗೆ ಮೌಲ್ಯವರ್ಧನೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಕುರಿತು ತರಬೇತಿ ಅಗತ್ಯವಿದೆ. ಮಾರುಕಟ್ಟೆ ತಾಂತ್ರಿಕತೆ, ಕಟಾವು ತಂತ್ರಜ್ಞಾನವನ್ನು ರೈತರಿಗೆ ಹೇಳಿಕೊಡಬೇಕಿದೆ” ಎಂಬುದು ರೈತರ ಆಗ್ರಹವಾಗಿದೆ.
ರೈತರು ಬೆಂಗಳೂರಿನ ಮಾವಿನ ಮೇಳಗಳಲ್ಲಿ, ವಿವಿಧ ಮಾರುಕಟ್ಟೆಗಳಲ್ಲಿ, ಆನ್‌ಲೈನ್ ಹಾಗೂ ಪೋಸ್ಟಲ್ ಮೂಲಕವೂ ಮಾರಾಟ ಮಾಡುತ್ತಾರೆ. ಆದರೆ ಇದಕ್ಕೆ ದೊಡ್ಡ ಮಾರುಕಟ್ಟೆಯಿಲ್ಲ. ಹಿಂದೆಲ್ಲ ಗುಣಮಟ್ಟದ ಮಾವಿನ ಹಣ್ಣನ್ನು ಮಾಲೂರಿನ ಇನೋವಾ ಅಗ್ರಿ ಬಯೋಪಾರ್ಕ್(ಫುಡ್ ಪಾರ್ಕ್) ಮೂಲಕ ‘ಗಾಮಾ’ ಪ್ರಕ್ರಿಯೆಗೆ ಒಳಪಡಿಸಿ ಅಮೆರಿಕ, ಆಸ್ಟ್ರೇಲಿಯಾಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಹವಾಮಾನ ವೈಪರೀತ್ಯ ಕಾರಣ ಗುಣಮಟ್ಟದ ಹಣ್ಣು ಈಚೆಗೆ ಸಿಗುತ್ತಿಲ್ಲ. ಹೀಗಾಗಿ, ರಫ್ತು ಮಾಡುವವರು ಖರೀದಿಸುತ್ತಿಲ್ಲ.
ಈ ಹಿಂದೆ ₹150-180 ಇದ್ದ ಬಾದಾಮಿ ಮಾವು ಈಗ ₹18-₹25ಕ್ಕೆ ಇಳಿದಿದೆ. ರೈತರು ಬೆಳೆದ ಬೆಳೆಗೆ ಕನಿಷ್ಠ ಕೂಲಿಯೂ ಸಿಗುತ್ತಿಲ್ಲ. ಹೊರ ರಾಜ್ಯ ವ್ಯಾಪಾರಿಗಳೂ ಖರೀದಿಗೆ ಬರುತ್ತಿಲ್ಲ, ರಫ್ತು ಕುಸಿದಿದೆ. ಅಲ್ಲದೆ ಏಕಕಾಲದಲ್ಲಿ ಮಾವು ಮಾರುಕಟ್ಟೆಗೆ ಮಹಾರಾಷ್ಟ್ರದಿಂದಲೂ ಅಧಿಕವಾಗಿ ಮಾವು ಸರಬರಾಜಾಗುತ್ತಿದೆ.
ರೈತರ ಕಥೆ: ಸಾಲ, ಶ್ರಮ ಮತ್ತು ನಷ್ಟ
ರೈತರ ಜೀವನ ಇಂದು ಅತ್ಯಂತ ಕಷ್ಟಕರವಾಗಿದೆ. ಸಾಲ ಮಾಡಿ, ಬ್ಯಾಂಕ್ ಕಡ್ಡಾಯಗಳನ್ನು ಎದುರಿಸಿ ಬೆಳೆದ ಮಾವು ಒಂದು ದಿನದ ಮಳೆಗೆ ನಾಶವಾಗುತ್ತಿದೆ. ʼಒಂದು ವರ್ಷ ಆರೈಕೆ ಮಾಡಿದ ಬೆಳೆ ನಮ್ಮ ಕಣ್ಣೆದುರೇ 30 ನಿಮಿಷದ ಮಳೆಗೆ ಎಲ್ಲವೂ ಹಾಳಾಗುತ್ತಿದೆ. ಜೋನಿ ರೋಗ, ಹವಾಮಾನ ಬದಲಾವಣೆ, ಅಕಾಲಿಕ ಮಳೆ ಎಲ್ಲವೂ ಸೇರಿಕೊಂಡು ಹೇಳಲಾರದಷ್ಟು ಇಳುವರಿಯನ್ನೇ ಕುಂಠಿತಗೊಳಿಸಿವೆ. ರಾಮನಗರದಲ್ಲಿ ಒಂದು ವರ್ಷಕ್ಕೆ 103 ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿರುವ ವರದಿಗಳೂ ಇವೆ.
ಹವಾಮಾನ ಬದಲಾವಣೆಯ ಪರಿಣಾಮ
ಮಾವು ಬೆಳೆಹಾನಿಗೆ ಹವಾಮಾನ ಬದಲಾವಣೆಯು ಪ್ರಮುಖ ಕಾರಣ. ಅಕಾಲಿಕ ಮಳೆ, ಬಿಸಿಲು, ಮಂಜು ಬೀಳುವುದು ಸೇರಿದಂತೆ ತಾಪಮಾನದ ವ್ಯತ್ಯಾಸಗಳು ಉಂಟಾದರೆ ಮಾವಿನ ಹೂವು, ಕಾಯಿ ಉದುರುತ್ತವೆ. ಕರ್ನಾಟಕದಲ್ಲಿ ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳಾದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಇದು ವರ್ಷ ವರ್ಷಕ್ಕೂ ಹೆಚ್ಚುತ್ತಿದೆ. ಹಾಗಾಗಿ ಕೃಷಿ ತಜ್ಞರು ಹವಾಮಾನ ನಿರೋಧಕ ತಳಿಗಳು, ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಬೆಳೆಗಾರರಿಗೆ ಸಲಹೆ ನೀಡುತ್ತಿದ್ದಾರೆ.
ಸರ್ಕಾರ ಮತ್ತು ಪರಿಹಾರದ ಅಗತ್ಯ
ರೈತರು ಸರ್ಕಾರದಿಂದ ತ್ವರಿತ ಪರಿಹಾರ, ಬೆಂಬಲ ಬೆಲೆ, ಬೀಡು ಬಿತ್ತನೆ ಸಹಾಯ, ವಿಮಾ ಪ್ರಯೋಜನಗಳನ್ನು ನೀಡುವಂತೆ ಆಗ್ರಹಿಸುತ್ತಿದ್ದಾರೆ. ಜಂಟಿ ಸಮೀಕ್ಷೆ ನಡೆಸಿ ನಷ್ಟ ಮೌಲ್ಯಮಾಪನ ಮಾಡಬೇಕು. ದೀರ್ಘಕಾಲಿಕವಾಗಿ ಮಾವು ಸಂಸ್ಕರಣಾ ಘಟಕಗಳು ಹಾಗೂ ರಫ್ತನ್ನು ಉತ್ತೇಜಿಸುವುದು ಅಗತ್ಯವಾಗಿದೆ.
ಇದನ್ನೂ ಓದಿದ್ದೀರಾ? ಭಾರತದ ಕೃಷಿ ಉತ್ಪನ್ನ ರಫ್ತು ಬಿಕ್ಕಟ್ಟು: ಮಾವು, ಅಕ್ಕಿ, ಮಸಾಲೆ ಪದಾರ್ಥಗಳ ನಿಷೇಧ
ರಾಮನಗರ ಮತ್ತು ಕೋಲಾರದ ಮಾವು ಬೆಳೆಗಾರರು ಇಂದು ತಮ್ಮ ಅಸಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿದ್ದಾರೆ. ಬೆಳೆಯೂ ಇಲ್ಲ, ಬೆಲೆಯೂ ಇಲ್ಲ ಎಂಬ ಸ್ಥಿತಿ ಅವರನ್ನು ನಿರಾಶೆಗೆ ದೂಡುತ್ತಿದೆ. ಹಾಗಾಗಿ ಸರ್ಕಾರ ಮತ್ತು ಕೃಷಿ ಇಲಾಖೆಗಳು ಒಗ್ಗೂಡಿ, ಹವಾಮಾನ ನಿರೋಧಕ ತಳಿಗಳ ಅಭಿವೃದ್ಧಿ, ಸಕಾಲಿಕ ಸಲಹೆ ಮತ್ತು ಎಚ್ಚರಿಕೆ ವ್ಯವಸ್ಥೆ, ಮಾರುಕಟ್ಟೆ ಸ್ಥಿರತೆಗೆ ಸರ್ಕಾರಿ ಹಸ್ತಕ್ಷೇಪ, ವಿಮಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ ರೈತರು ಇಂತಹ ಸಂಕಷ್ಟದಿಂದ ಹೊರಬರಬಹುದು. ಇಲ್ಲದಿದ್ದಲ್ಲಿ ʼಕರ್ನಾಟಕ ಹಣ್ಣಿನ ರಾಜ್ಯʼ ಎಂಬ ಖ್ಯಾತಿಗೆ ದೂರವಾಗಬಹುದು.





