ರಾಜ್ಯ ಸರ್ಕಾರದ ‘ಕನ್ನಡ ಕಡ್ಡಾಯ’ ಆದೇಶವನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ಸರ್ಕಾರದ ಅಧಿಕೃತ ಆದೇಶದ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು “ಕರ್ನಾಟಕ ಸರ್ಕಾರದ ದಾದಾಗಿರಿ ನಡೆಯುವುದಿಲ್ಲ” ಎಂದು ಘೋಷಣೆ ಕೂಗಿದರು.
ಅಲ್ಲದೆ, “ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ನಮ್ಮದೆ. ಇವು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು” ಎಂದು ಘೋಷಣೆಗಳನ್ನು ಕೂಗಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮುಂಗಾರು ವಿಳಂಬದಿಂದ ಬೆಳೆ ಒಣಗುವ ಭೀತಿ: ಆಕಾಶದತ್ತ ಮುಖಮಾಡಿದ ರೈತರು
ಗಡಿ ಭಾಗದಲ್ಲಿ ಮರಾಠಿ ಭಾಷೆಯಲ್ಲೇ ನಾಮಫಲಕಗಳನ್ನು ಅಳವಡಿಸಬೇಕು ಹಾಗೂ ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.



