ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 9 ವರ್ಷಗಳಿಂದ ಸ್ಥಗಿತಗೊಂಡಿದ್ದ ಶ್ರೀ ವೀರಭದ್ರೇಶ್ವರ ಏತ ನೀರಾವರಿ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ನಡೆದ ಬೃಹತ್ ರೈತ ಹೋರಾಟಕ್ಕೆ ಶಾಸಕ ಅಶೋಕ ಪಟ್ಟಣ ಸ್ಪಂದಿಸಿದ್ದು, ಈ ಮೂಲಕ ರೈತರು ಜಯಶಾಲಿಯಾಗಿದ್ದಾರೆ.
ರೈತರ ಏಳಿಗೆಗಾಗಿ ಶಾಸಕ ಅಶೋಕ ಪಟ್ಟಣ ಅವರು ವೀರಭದ್ರೇಶ್ವರ ಏತ ನೀರಾವರಿ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ 2016ರಲ್ಲಿಯೇ ಶಂಕುಸ್ಥಾಪನೆ ನಡೆದಿದ್ದರೂ ಕಾಮಗಾರಿ ಸ್ಥಗಿತಗೊಂಡಿತ್ತು. ಜೊತೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವೂ ಸಿಕ್ಕಿರಲಿಲ್ಲ.
ಇದೇ ಕಾರಣಕ್ಕೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಅವರ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಯಿತು.
ಶಾಸಕರು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ರೈತರು ಪಟ್ಟು ಹಿಡಿದಿದ್ದರು. ಕೊನೆಗೂ ಶಾಸಕ ಅಶೋಕ ಪಟ್ಟಣ ಅವರು ರೈತರ ಹೋರಾಟಕ್ಕೆ ಸ್ಪಂದಿಸಿ, ರಾತ್ರಿ 10:30ಕ್ಕೆ ಬೆಂಗಳೂರಿನ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಸಾಲಹಳ್ಳಿಗೆ ದೌಡಾಯಿಸಿ ಹೋರಾಟದ ವೇದಿಕೆಗೆ ಭೇಟಿ ನೀಡಿದರು.
ಈ ವೇಳೆ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಇದೇ ವರ್ಷದ ಮಾರ್ಚ್ ತಿಂಗಳೊಳಗೆ ಹಾಗೂ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಜೊತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಂದೂವರೆ ತಿಂಗಳೊಳಗೆ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ಶಾಸಕರ ಭರವಸೆಯ ನಂತರ ರೈತರು ಹೋರಾಟ ಹಿಂಪಡೆದರು. ಈ ಮೂಲಕ ರೈತರ ಹೋರಾಟಕ್ಕೆ ಜಯ ದೊರೆತಂತಾಯಿತು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ತಾಲೂಕು ಅಧ್ಯಕ್ಷರು, ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ತಾಲೂಕಿನ ರೈತರು ಉಪಸ್ಥಿತರಿದ್ದರು.



