ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA)ವು ಕರ್ನಾಟಕದಾದ್ಯಂತ 50 ಮಿಲಿಯನ್ ಸಸಿಗಳನ್ನು ನೆಡುವ ಮಹತ್ವದ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ್ ಅವರು ತಿಳಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ಬಗ್ಗೆಜಿಲ್ಲಾ ನ್ಯಾಯಾಲಯದ 1ನೇ ಮಹಡಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಸಿ ನೆಡುವ ಅಭಿಯಾನದ ಪೈಲಟ್ ಯೋಜನೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಇಲ್ಲಿ ಮಿಯಾವಾಕಿ ವಿಧಾನದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರವು ಗ್ರೀನ್ ರಿಂಗ್ ಬೆಂಗಳೂರು ಕಾರಿಡಾರ್ ವ್ಯಾಪ್ತಿಯಲ್ಲಿಯೂ ಬರುತ್ತದೆ. ಈ ಕಾರಿಡಾರ್ ವಿಧಾನಸೌಧದಿಂದ ಸುಮಾರು 50 ಕಿ.ಮೀ ವೈಮಾನಿಕ ಅಂತರದೊಳಗಿನ ಪ್ರದೇಶಗಳನ್ನು ಒಳಗೊಂಡಿದೆ. ಈ ಕಾರಿಡಾರ್ ಯೋಜನೆಯಡಿ, ವಿಸ್ತರಿಸುತ್ತಿರುವ ಬೆಂಗಳೂರು ಪ್ರದೇಶದ ಸುತ್ತಮುತ್ತ ಜೀವ ವೈವಿಧ್ಯತೆಯನ್ನು ವೃದ್ಧಿಸಲು, ಅಂತರ್ಜಲ ಮರುಪೂರಣವನ್ನು ಹೆಚ್ಚಿಸಲು ಹಾಗೂ ಧೂಳು ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚಿನ ಅರಣ್ಯ ಪ್ರದೇಶಗಳ ಅಗತ್ಯ ತುರ್ತಾಗಿ ಇದೆ. ಜಿಲ್ಲೆ ಗಂಭೀರ ಪರಿಸರ ಒತ್ತಡವನ್ನು ಎದುರಿಸುತ್ತಿದ್ದು, ಅಂತರ್ಜಲ ಮಟ್ಟವು ಕುಸಿದಿದೆ. 2023ರ ಫೆಬ್ರವರಿಯಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಭೂಮಿಯ ಮಟ್ಟದಿಂದ 17.52 ಮೀಟರ್ ಆಳದಲ್ಲಿತ್ತು. ಆದರೆ 2024ರ ಫೆಬ್ರವರಿಯ ವೇಳೆಗೆ ಅದು 35.66 ಮೀಟರ್ ಆಳಕ್ಕೆ ಕುಸಿದಿದ್ದು, ಸರಾಸರಿ 18.14 ಮೀಟರ್ ಕುಸಿತ ದಾಖಲಾಗಿದೆ. ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ಎಲ್ಲರೂ ಚಲಾಯಿಸುತ್ತೇವೆ ಆದರೆ ಕರ್ತವ್ಯಗಳನ್ನು ಮರೆಯುತಿದ್ದೇವೆ.ನಮ್ಮ ಸಂವಿಧಾನವು ಪರಿಸರ ರಕ್ಷಣೆ ಕುರಿತು ಕರ್ತವ್ಯಗಳಲ್ಲಿ ತಿಳಿಸಿದೆ. ಈ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಒತ್ತು ನೀಡಿ ಹೇಳಿದ್ದಾರೆ. ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರ ಸಂರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಅಗತ್ಯತೆ ನಮ್ಮ ಮೇಲಿದೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ನ್ಯಾಯಾಂಗ ಮತ್ತು ಜಿಲ್ಲಾಡಳಿತದ ಆಡಳಿತ ವರ್ಗಗಳು 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಮಾತನಾಡಿ, ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯ ಕಾರ್ಯಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಧರೆ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜವಬ್ದಾರಿಯನ್ನು ತೋರುತ್ತಿದೆ. ಇದರ ಭಾಗವಾಗಿ ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕಳೆದ ಏಪ್ರಿಲ್ ಮಾಹೆಯಲ್ಲಿ ಚಾಲನೆ ದೊರಕಿದೆ. ಅದರ ಮುಂದುವರೆದ ಭಾಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ನವರ ಸ್ಮಾರಕದ ಬಳಿ 5 ಗುಂಟೆ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಅನುಷ್ಠಾನವಾಗಿ ಒಟ್ಟು 5 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಜಿತ ಗುರಿಯನ್ನು ಹೊಂದಲಾಗಿದೆ. ಕೇವಲ ಗಿಡಗಳನ್ನು ನೆಟ್ಟು ಹೋಗುವುದರಿಂದ ಗಿಡ ಬೆಳೆಯುವುದಿಲ್ಲ, ಅವು ಬೆಳೆಯುವವರೆಗೆ ಕನಿಷ್ಠ 3 ವರ್ಷ ಸಂರಕ್ಷಣೆ ಮಾಡುವ ಅಗತ್ಯವಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಇವರ ಸಹಕಾರ ಪಡೆದು ಜಿಲ್ಲೆಯಲ್ಲಿ 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಆ ಮೂಲಕ ಅಂತರ್ಜಲ ವೃದ್ಧಿಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳು, ಸಮಸ್ತ ಸಾರ್ವಜನಿಕರು, ಸಹಕಾರ ನೀಡಬೇಕು. ಗಿಡ ಬೆಳೆಸುವ ಜವಬ್ದಾರಿಯನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ಈ ವರ್ಷ 5 ಲಕ್ಷ ಗಿಡಗಳನ್ನು ಮುಂಗಾರು ಮಳೆಯ ಅವಧಿಯಲ್ಲಿ ನೆಡಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಶಾಲಾಕಾಲೇಜುಗಳ ಆವರಣ, ಸರ್ಕಾರಿ ಆಸ್ಪತ್ರೆಗಳ ಆವರಣ, ಮುಜರಾಯಿ ಇಲಾಖೆಯ ಆಸ್ತಿಗಳು,ದೇವಸ್ಥಾನಗಳ ಆವರಣ, ಸ್ಮಶಾನಗಳು,ಕೆರೆಗಳ ಸುತ್ತಮುತ್ತ, ತ್ಯಾಜ್ಯವಿಲೆವಾರಿ ಘಟಕಗಳ ಆವರಣ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗಳ ವ್ಯಾಪ್ತಿಯಲ್ಲಿ ಗಿಡ ನೆಡಲು ಯೋಜಿಸಲಾಗಿದೆ, ಜಿಲ್ಲಾಡಳಿತದ ಕಾರ್ಯಕ್ರಮದ ಜೊತೆಗೆ ಕಾನೂನು ಸೇವಾ ಪ್ರಾಧಿಕಾರದ ಜೊತೆಗೂಡಿ ಹೆಚ್ಚುವರಿಯಾಗಿ 5 ಲಕ್ಷ ಸಸಿಗಳನ್ನು ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು. ಜಿಲ್ಲೆಯಲ್ಲಿ ಈ ವರ್ಷ ನೆಡಲಿರುವ 10 ಲಕ್ಷ ಗಿಡಗಳ ಪೈಕಿ ಶೇ. 80 ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲು ಎಲ್ಲಾ ನೆಟ್ಟ ಸಸಿಗಳ ಮೌಲ್ಯಮಾಪನ ಮಾಡುವ ಮೂಲಕ ಈ ಮೌಲ್ಯಯುತವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಇದನ್ನು ಓದಿದ್ದೀರಾ..? ಕೋಲಾರ | ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ
ಈ ವೇಳೆ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಶಿಲ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್,ಧರೆ ಫೌಂಡೇಶನ್ ಪ್ರತಿನಿಧಿ ವೃಷಾಂಕ್ ಬಟ್, ಬಾರ್ ಕೌನ್ಸಿಲ್ ನ ಸದಸ್ಯ ಹರೀಶ್ ಕುಮಾರ್, ವಕೀಲರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.




