ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ಧ್ವನಿ ಸಂತೋಷ ಕುಲಕರ್ಣಿ 600ಕ್ಕೆ 599 ಅಂಕಗಳನ್ನು ಗಳಿಸಿ ಅಪೂರ್ವ ಸಾಧನೆ ಮೆರೆದಿದ್ದಾರೆ.
ನಗರದ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಧ್ವನಿ, ಇಂಗ್ಲಿಷ್ ವಿಷಯದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದು, ಉಳಿದ ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಬೇಸಿಕ್ ಮ್ಯಾನ್ಸ್ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜು ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.
ಇನ್ನೊಂದೆಡೆ, ಫಲಿತಾಂಶದಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಹಾಗೂ ಅಂಕಗಳ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಒಟ್ಟಿನಲ್ಲಿ, ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮುಂಚೂಣಿಯಲ್ಲಿದ್ದು, ರಾಜ್ಯದ ಒಟ್ಟು ತೇರ್ಗಡೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಳವಾಗಿದೆ.




