ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಆದೇಶಕ್ಕೆ ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ತಾತ್ಕಾಲಿಕ ತಡೆ ನೀಡಿದೆ. ಆದರೆ, ಇತರ ಏಳು ಕೈದಿಗಳ ಸ್ಥಳಾಂತರಕ್ಕೆ ಇಲಾಖೆ ಸಮ್ಮತಿ ಸೂಚಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು, ಪ್ರಜ್ವಲ್ ರೇವಣ್ಣ ಸೇರಿದಂತೆ ಏಳು ಆರೋಪಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದರು. ಇದರ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಆದೇಶಿಸಿತ್ತು.
ಎರಡು ತಿಂಗಳ ಹಿಂದೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸೇರಿದಂತೆ ಏಳು ಆರೋಪಿಗಳು ಹಾಗೂ ಜೈಲು ವಾರ್ಡನ್ ಪ್ರಕಾಶ್ ಗಾವೇ ಅವರನ್ನು ಪೊಲೀಸರು ಬಂಧಿಸಿದ್ದರು.
ಪ್ರಜ್ವಲ್ ರೇವಣ್ಣ ಅವರ ವರ್ಗಾವಣೆಯ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದ ಸೋಮಶೇಖರ್ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ, ಭದ್ರತೆ ಮತ್ತು ನಿಗಾವಣೆಯ ದೃಷ್ಟಿಯಿಂದ ಡಿಜಿಪಿ ಅಲೋಕ್ ಕುಮಾರ್ ವರ್ಗಾವಣೆ ಆದೇಶವನ್ನು ಮರುಪರಿಶೀಲನೆಗೆ ಒಳಪಡಿಸಿದ್ದಾರೆ. ಹೀಗಾಗಿ, ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.



