ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ. ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ನದಿಗೆ ಬರೋಬ್ಬರಿ 15 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಉಂಟಾಗಿದೆ.
ಕೃಷ್ಣಾ ನದಿಯು ಉತ್ತರ ಕರ್ನಾಟಕದ ಜೀವನಾಡಿಗಳಲ್ಲಿ ಒಂದಾಗಿದೆ. ನದಿಯಲ್ಲಿ ನೀರಿಲ್ಲದೆ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಇದೀಗ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನದಿಯಲ್ಲಿ ನೀರಿನ ಹರಿವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸ್ಥಳೀಯರು, ಮತ್ತಷ್ಟು ಒಳಹರಿವು ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿದ್ದೀರಾ? ಮಳೆ ಕೊರತೆ | ಲಿಂಗನಮಕ್ಕಿ ಜಲಾಶಯ ಖಾಲಿ: ರಾಜ್ಯದ ವಿದ್ಯುತ್ ಕ್ಷೇತ್ರದ ಮೇಲೆಯೂ ಕರಿನೆರಳು
ಕಳೆದ ವಾರದಿಂದ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಹೆಚ್ಚಾಗಿದ್ದು, ಆ ಭಾಗದಲ್ಲಿರುವ ನದಿಗಳು ಹಾಗೂ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಗಡಿಯೊಳಗೆ ಹರಿಯುವ ಕೃಷ್ಣಾ ನದಿಗೂ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ. ಇದು ಬೆಳಗಾವಿ ಜಿಲ್ಲೆ ಸೇರಿದಂತೆ ನದಿಯ ಪಾತ್ರದಲ್ಲಿರುವ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಭರವಸೆ ಮೂಡಿಸಿದೆ.




