ಮುಂಗಾರಿನಲ್ಲಿ ಮಳೆ ಕೊರತೆಯು ರಾಜ್ಯದ ವಿದ್ಯುತ್ ಕ್ಷೇತ್ರದ ಮೇಲೆ ಕರಿನೆರಳು ಈಗಾಗಲೇ ಬಿದ್ದಿದ್ದು, ರಾಜ್ಯದ ಪ್ರಸ್ತುತ ಜಲವಿದ್ಯುತ್ ಸಂಗ್ರಹವು ಕಳೆದ 10 ವರ್ಷಗಳಲ್ಲಿ ಎರಡನೇ ಅತ್ಯಂತ ಕಡಿಮೆಯಾಗಿದೆ.
ಶುಕ್ರವಾರ(ಜುಲೈ 3) ಬೆಳಿಗ್ಗೆ 8ರ ಸುಮಾರಿಗೆ ರಾಜ್ಯದ ಮೂರು ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸುಪಾ ಮತ್ತು ಮಾಣಿಗಳಲ್ಲಿನ ಸಂಚಿತ ಸಂಗ್ರಹವು ಪೂರ್ಣ ಸಾಮರ್ಥ್ಯದ ಕೇವಲ ಶೇ.14.9ರಷ್ಟಿರುವುದು ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.44.05ರಷ್ಟಿತ್ತು.
ಕಳೆದ 10 ವರ್ಷಗಳಲ್ಲಿ 2023ರಂದು ಜಲವಿದ್ಯುತ್ ಸಂಗ್ರಹವು ಈ ಮಟ್ಟಕ್ಕಿಂತ ಕಡಿಮೆಯಿತ್ತು. ಆ ವೇಳೆ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಒಟ್ಟು ಜಲವಿದ್ಯುತ್ ಸಂಗ್ರಹವು ಕೇವಲ ಶೇ.12.55ರಷ್ಟಿತ್ತು. ಎಂಬುದು ಇಂಧನ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.
2022ರ ಇದೇ ಅವಧಿಯಲ್ಲಿ ಜಲವಿದ್ಯುತ್ ಸಂಗ್ರಹವು ಕೇವಲ ಶೇ.14.88ರಷ್ಟಿದ್ದರೂ, ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮರುದಿನವೇ ಶೇ.15.65ರಷ್ಟು ಸಂಗ್ರಹವಾಗಿ, ಜುಲೈ ಮಧ್ಯದ ವೇಳೆಗೆ ಶೇ.44.8ಕ್ಕೆ ಏರಿತ್ತು.
ಪ್ರಸ್ತುತ, ಮೂರು ಜಲವಿದ್ಯುತ್ ಜಲಾಶಯಗಳಲ್ಲಿನ ಸಂಚಿತ ಸಂಗ್ರಹವು ಕೇವಲ 1,295 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡಿತು. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 3,828 ಮಿಲಿಯನ್ ಯೂನಿಟ್‌ಗಳಷ್ಟಿತ್ತು.
ಜಲಾಶಯವಾರು ಸಂಗ್ರಹದ ವಿಭಜನೆಯು ನಿರಾಶಾದಾಯಕ ಚಿತ್ರವನ್ನು ಪ್ರತಿಬಿಂಬಿಸುತ್ತದೆ, ಲಿಂಗನಮಕ್ಕಿ ಅಣೆಕಟ್ಟು ಕೇವಲ ಶೇ.10.92ರಷ್ಟು ಸಂಗ್ರಹವನ್ನು ಹೊಂದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.45.4ರಷ್ಟಿತ್ತು. ಅಂದರೆ 45,070 ಕ್ಯುಸೆಕ್‌ಗಳಷ್ಟಿತ್ತು. ಪ್ರಸ್ತುತವಾಗಿ ಜಲಾಶಯದಲ್ಲಿ 11,485 ಕ್ಯುಸೆಕ್‌ಗಳ ಒಳಹರಿವು ಇರುವುದು ವರದಿಯಾಗಿದೆ.
ಸುಪಾ ಅಣೆಕಟ್ಟಿನಲ್ಲಿಯೂ ಕೂಡ ಕೇವಲ ಶೇ.20.18ರಷ್ಟು ನೀರಿನ ಸಂಗ್ರಹವಿದ್ದು, ಕಳೆದ ವರ್ಷದ ನೀರಿನ ಮಟ್ಟ ಶೇ.41.25ರಷ್ಟಿದ್ದು, 1,825 ಕ್ಯುಸೆಕ್‌ಗಳಷ್ಟು ಒಳಹರಿವು ಇತ್ತು. ಮಣಿ ಅಣೆಕಟ್ಟು ಕೂಡ ಇದೇ ರೀತಿಯ ಸನ್ನಿವೇಶವನ್ನು ಹೊಂದಿದ್ದು, ಕಳೆದ ವರ್ಷದ ನೀರಿನ ಮಟ್ಟ ಶೇ.46.83ರಷ್ಟಿತ್ತು. ಆದರೆ ಇದು ಕೇವಲ ಶೇ.16.4ರಷ್ಟು ಕೊರತೆಯಾಗಿದ್ದು, ಇನ್ನೂ ಕೆಟ್ಟದಾಗಿ, ಈ ಜಲಾಶಯಕ್ಕೆ ಪ್ರಸ್ತುತ ಯಾವುದೇ ಒಳಹರಿವು ಇಲ್ಲ.
ಸಂಗ್ರಹಣಾ ಸನ್ನಿವೇಶವು ಸುಧಾರಿಸದಿದ್ದರೆ ರಾಜ್ಯದ ವಿದ್ಯುತ್ ವಲಯವು ಕ್ಯಾಸ್ಕೇಡಿಂಗ್(ರಭಸದಿಂದ ಕೆಳಕ್ಕೆ ಬೀಳುವುದು) ಸಮಸ್ಯೆಗಳನ್ನು ಎದುರಿಸಬಹುದು ಎಂದು ವಿದ್ಯುತ್ ತಜ್ಞರು ಮತ್ತು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕವು ತನ್ನ ಗರಿಷ್ಠ ವಿದ್ಯುತ್ ಉತ್ಪಾದನೆಯ ಪರಿಣಾಮಕಾರಿ ನಿರ್ವಹಣೆಗಾಗಿ ಜಲವಿದ್ಯುತ್ ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲ್ಲದೆ, ಇತರ ರೀತಿಯ ವಿದ್ಯುತ್‌ಗೆ ಹೋಲಿಸಿದರೆ ಜಲವಿದ್ಯುತ್ ಶಕ್ತಿಯು ತುಂಬಾ ಮಿತವ್ಯಯಕಾರಿಯಾಗಿದೆ. ಆದ್ದರಿಂದ, ಮಳೆಗಾಲದ ಯಾವುದೇ ವೈಫಲ್ಯವು ವಿದ್ಯುತ್ ಪೂರೈಕೆಯ ಪೀಕ್ ಅವರ್ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ನಂತರದ ಹಂತಗಳಲ್ಲಿ ಕೊರತೆಯನ್ನು ನೀಗಿಸಲು ರಾಜ್ಯವು ದುಬಾರಿ ಮೂಲಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿಸುವಂತಾಗಬಹುದು. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಕನಿಷ್ಠ ಎರಡು ತಿಂಗಳು ಕಾಯಬೇಕಾಗುತ್ತದೆ. ಬಳಿಕ ಮುಂದೇನಾಗುತ್ತದೆ ಎಂಬುದನ್ನು ಗಮನಿಸಬಹುದು” ಎಂದು ಎಂದು ಅಧಿಕಾರಿಯೊಬ್ಬರು ಡೆಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಅರಸೀಕೆರೆ | ಮಳೆ ಕೊರತೆ: ಬಿತ್ತನೆ ಮಾಡಲಾಗದೆ ಆಕಾಶದತ್ತ ಮುಖ ಮಾಡಿ, ಕಾದು ಕುಳಿತ ರೈತರು
“ಕಳೆದ ವರ್ಷ ಭಾರೀ ಮಳೆಯಿಂದಾಗಿ ಉಂಟಾದ ಬಲವಾದ ಜಲವಿದ್ಯುತ್ ಸಂಗ್ರಹವು ಬೇಸಿಗೆಯ ತಿಂಗಳುಗಳಲ್ಲಿ ಬೇಡಿಕೆ ದಾಖಲೆಯ 18,650 ಮೆಗಾವ್ಯಾಟ್ ತಲುಪಿದ್ದರೂ ಕೂಡ ಗರಿಷ್ಠ ಹೊರೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯಕ್ಕೆ ಸಹಾಯ ಮಾಡಿದೆ” ಎಂದು ಅಧಿಕಾರಿಗಳು ಗಮನಸೆಳೆದಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಾಗಿರುವುದು ನೀತಿ ನಿರೂಪಕರು ಮತ್ತು ತಜ್ಞರಲ್ಲಿ ಕಳವಳವನ್ನುಂಟುಮಾಡಿದೆ. ಏಕೆಂದರೆ ಪ್ರತಿ ಮುಂಗಾರು ಆರಂಭದಲ್ಲಿ ಶೇ.73-75ರಷ್ಟು ವಾಡಿಕೆಯ ಮಳೆಯಾಗಬೇಕು. ಆದರೆ, ಜೂನ್‌ನಲ್ಲಿ ರಾಜ್ಯಾದ್ಯಂತ ಶೇ.42ರಷ್ಟು ಮಳೆ ಕೊರತೆಯಾಗಿದೆ. ಇದು ರಾಜ್ಯದ ಹವಾಮಾನ ವ್ಯವಸ್ಥೆಯ ಪ್ರಮುಖ ಅಂಶವಾಗಿದ್ದು, ಈ ಮುಂಗಾರಿನಲ್ಲಿ ಕೇವಲ ಶೇ.23-25ರಷ್ಟು ಮಳೆಯಾಗಿದೆ.




