10-ಮಿನಿಟ್ ಡೆಲಿವರಿ ಸಂಸ್ಕೃತಿ; ʼಕ್ವಿಕ್‌ ಕಾಮರ್ಸ್‌ʼ ಒಳಬೇಗುದಿ!

Date:

ಒಂದ್ಕಾಲದಲ್ಲಿ ಏನಾದರೂ ಬೇಕಾದ್ರೆ ಪೇಟೆಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ತಗೊಂಡು ಬರಬೇಕಾಗಿತ್ತು. ಬೆಳಿಗ್ಗೆ ಹೊರಟ್ರೆ ಮಧ್ಯಾಹ್ನ ಮನೆ ಸೇರುವ ದಿನಗಳೂ ಇದ್ದವು. ಮೊಬೈಲ್‌ ಬಂದಿದ್ದೇ ಬಂದದ್ದು, ಎಲ್ಲಾ ಉಲ್ಟಾ-ಪಲ್ಟಾ! ನಮಗಿಂತ ಮೈಲುಗಳಷ್ಟು ಮುಂದಿರುವ ವಿದೇಶಗಳಲ್ಲೂ ಸಿಗದ ಇ-ಕಾಮರ್ಸ್ ಸೌಲಭ್ಯ ನಮ್ಮಲ್ಲಿ ಸಿಗುತ್ತಿದೆ ಎಂದರೆ ನಂಬಲೇಬೇಕು. ಮೊಬೈಲ್ ಕೈಲಿದ್ದರೆ ಸಾಕು, ಹಾಲು, ತರಕಾರಿ, ಔಷಧಿ, ಬಟ್ಟೆಯಿಂದ ಹಿಡಿದು ಎಲೆಕ್ಟ್ರಿಕ್ಸ್‌, ಹೋಂ ಅಪ್ಲೈಯನ್ಸಸ್‌, ಐಫೋನ್‌ವರೆಗೆ ಎಲ್ಲವೂ ಒಂದು ಕ್ಲಿಕ್ಕಿನಲ್ಲಿ ಅದರಲ್ಲೂ ಹತ್ತು ನಿಮಿಷಗಳಲ್ಲಿ ಮನೆ ಬಾಗಿಲಲ್ಲಿರಲಿದೆ. ನಮಗಿದು ದೊಡ್ಡ ಸೌಲಭ್ಯವೇನೋ ಹೌದು. ಆದರೆ, ಈ ಸೌಲಭ್ಯ ಹೇಗೆ ಸಾಧ್ಯವಾಗುತ್ತಿದೆ? ಈ 10 ನಿಮಿಷಗಳ ಹಿಂದೆ ಯಾರು ಎಲ್ಲೆಲ್ಲಿ ಓಡಾಡ್ತಿದ್ದಾರೆ? ಯಾವ ಒತ್ತಡದಲ್ಲಿ ಕೆಲಸ ಮಾಡ್ತಿದ್ದಾರೆ? ಅನ್ನೋದನ್ನ ನಾವು ಯೋಚಿಸುವುದೇ ಇಲ್ಲ. ಇದೇ ಪ್ರಶ್ನೆಯಿಂದ ಆರಂಭವಾಗುತ್ತದೆ ‘10-ಮಿನಿಟ್ ನೇಷನ್’ ಎನ್ನುವ ನವ ಭಾರತದ ಕಥೆ.

- Advertisement -

ಭಾರತದಲ್ಲಿ ಇ–ಕಾಮರ್ಸ್‌ ಎಂಬ ಪರಿಕಲ್ಪನೆ ಆರಂಭದಲ್ಲಿ ಆಮೆ ಗತಿಯ ಹಾಗೂ ಕೆಲ ಮಿತಿಗಳನ್ನೊಳಗೊಂಡಿದ್ದ ವ್ಯವಸ್ಥೆಯಾಗಿತ್ತು. ಆನ್‌ಲೈನ್ ಖರೀದಿ ಬಂದಾದಮೇಲೂ ದಿನಗಟ್ಟಲೆ ಕಾಯುವಿಕೆ ಸಹಜವಾಗಿತ್ತು. ಈಗಲೂ ಇದೆ. ಆದರೆ ಕಳೆದ ಒಂದು ದಶಕದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ, ‌ಎಲ್ಲದಕ್ಕೂ ಸ್ಮಾರ್ಟ್‌ಫೋನ್ ಕೈಗೆತ್ತಿಕೊಳ್ಳುವ ರೂಢಿ ಮತ್ತು ನಗರ ಜೀವನದ ವೇಗ ಇ–ಕಾಮರ್ಸ್‌ನ ಸ್ವರೂಪವನ್ನೇ ಬದಲಿಸಿದೆ. ಈ ಬದಲಾವಣೆಗೆ ದೊಡ್ಡ ತಿರುವು ನೀಡಿದ್ದು COVID-19 ಮಹಾಮಾರಿ. ಲಾಕ್‌ಡೌನ್‌ ಸಮಯದಲ್ಲಂತೂ ಅನಿವಾರ್ಯವಾಗಿ ದಿನಬಳಕೆಯ ವಸ್ತುಗಳಿಗೂ ಜನ ಆನ್‌ಲೈನ್ ಮೊರೆ ಹೋದರು. ಇದೇ ಸಂದರ್ಭದಲ್ಲೇ ಕ್ವಿಕ್ ಕಾಮರ್ಸ್ ಸಂಸ್ಕೃತಿ ರೂಪುಗೊಂಡದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ ಎಂಡಿಆರ್‌ವರೆಗೆ...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

ಹಾಲು, ತರಕಾರಿ, ಔಷಧಿ ಮುಂತಾದ ದಿನನಿತ್ಯದ ಅಗತ್ಯ ವಸ್ತುಗಳು ತಕ್ಷಣವೇ ಬೇಕೆಂಬ ನಿರೀಕ್ಷೆ ಹೆಚ್ಚಾಗುತ್ತಿದೆ. ಯಾರಿಗೂ ಸಮಯವಿಲ್ಲದಿರುವುದು ಇದಕ್ಕೆ ಕಾರಣವಿದ್ದಿರಬಹುದು. ಈ ನಿರೀಕ್ಷೆಗೆ ತಕ್ಕಂತೆ Blinkit, Zepto, Swiggy Insta mart ನಂತಹ ಕಂಪನಿಗಳು ಡಾರ್ಕ್ ಸ್ಟೋರ್‌ಗಳು, ಲಾಜಿಸ್ಟಿಕ್ಸ್ ಮತ್ತು ಡೇಟಾ ಆಧಾರಿತ ನಿರ್ವಹಣೆಯ ಮೂಲಕ 10–15 ನಿಮಿಷಗಳ ವಿತರಣೆಯನ್ನು (Door step Delivery) ಸಾಧ್ಯ ಮಾಡಿವೆ. ಈ ವೇಗದ ಮಾದರಿ ಭಾರತೀಯ ನಗರ ಜೀವನದ ಅವಿಭಾಜ್ಯ ಭಾಗವಾಗುತ್ತಿದೆ. ಗ್ರಾಮೀಣ ಭಾರತವನ್ನೂ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

image 2025 12 19T145041.874

ಜನಪ್ರಿಯ ಫುಡ್‌ ಡೆಲಿವರಿ ಆಪ್‌ ಸ್ವಿಗ್ಗಿ, 2020ರ ಆಗಸ್ಟ್‌ 10ರಂದು ಗುರಗಾಂವ್‌ನಲ್ಲಿ ‘ಇನ್‌ಸ್ಟಾಮಾರ್ಟ್’ ಅನ್ನು ಆರಂಭಿಸಿತು. 30–45 ನಿಮಿಷಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳನ್ನು ತಲುಪಿಸುವ ಭರವಸೆ ನೀಡಿತು. ಆದರೆ ಅದಕ್ಕಿಂತ ದೊಡ್ಡ ಸುದ್ದಿಯಾಗಿದ್ದು ದಿನೇ ದಿನೇ ಏರುತ್ತಿದ್ದ ಕೊರೊನಾ ಪ್ರಕರಣಗಳು. ಯಾವಾಗ ಲಸಿಕೆ ಬರುತ್ತೆ, ಯಾವಾಗ ಜೀವನ ಸಾಮಾನ್ಯವಾಗುತ್ತೆ, ಯಾವಾಗ ಮಾಸ್ಕ್ ಇಲ್ಲದೇ ಹೊರಗೆ ಹೋಗಬಹುದು ಎಂಬ ಚಿಂತೆಯಲ್ಲೇ ಜನ ಇದ್ದರು. ಕೊರೊನಾ ಮುಂದುವರಿದೇ ಇತ್ತು. ಇನ್‌ಸ್ಟಾಮಾರ್ಟ್ ತನ್ನ ಸೇವೆಯನ್ನೂ ವಿಸ್ತರಿಸಿತು. 2021ರ ಮಧ್ಯಭಾಗಕ್ಕೆ 10–15 ನಿಮಿಷಗಳಲ್ಲಿ ವಿತರಣೆಯ ಭರವಸೆ ನೀಡಲಾರಂಭಿಸಿತು. ಅದೇ ವರ್ಷ ಜೂನ್‌ನಲ್ಲಿ ‘ಜೆಪ್ಟೋ’ ಮಾರುಕಟ್ಟೆಗೆ ಬಂತು. 10 ಮಿನಿಟ್‌ ಡೆಲಿವರಿ ನೀಡುವುದಾಗಿ ಘೋಷಿಸಿತು. ಅದೇ ಸಮಯದಲ್ಲಿ ಭೀಕರ ಡೆಲ್ಟಾ ಅಲೆ ದೇಶವನ್ನು ತಲ್ಲಣಗೊಳಿಸಿತ್ತು. ಸುಮಾರು ನಾಲ್ಕು ಲಕ್ಷ ಜನರು ಕೊರೊನಾದಿಂದ ಮೃತಪಟ್ಟಿದ್ದರು. ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಗ್ರಾಹಕರ ನಡವಳಿಕೆ ಬದಲಾಗುತ್ತಿದೆ ಎಂದಾಗಲೀ, ಇ-ಕಾಮರ್ಸ್‌ ಜನರ ದಿನನಿತ್ಯದ ಸಂಗಾತಿಯಾಗುತ್ತಿದೆ ಅಂತಾಗಲೀ ಯೋಚಿಸಲು ಯಾರಿಗೂ ಸಮಯವೇ ಇರಲಿಲ್ಲ.

ಅದೇ ವರ್ಷ ಡಿಸೆಂಬರ್‌ನಲ್ಲಿ ‘ಬ್ಲಿಂಕಿಟ್’ ಬಂತು. 2013ರಿಂದ ದಿನಸಿ ತಲುಪಿಸುತ್ತಿದ್ದ ಗುರಗಾಂವ್ ಮೂಲದ ‘ಗ್ರೋಫರ್ಸ್’ ಸಂಸ್ಥೆ ತನ್ನ ಹೆಸರು ಬದಲಿಸಿ, ತಕ್ಷಣದ ವಾಣಿಜ್ಯ ಸೇವೆ ಒದಗಿಸುವ ಹೊಸ ಗುರಿಯನ್ನು ಘೋಷಿಸಿತು. ಇನ್‌ಸ್ಟಾಮಾರ್ಟ್, ಜೆಪ್ಟೋ, ಬ್ಲಿಂಕಿಟ್.. ಈ ಮೂರು ಸಂಸ್ಥೆಗಳು ಸುಮಾರು 10 ನಿಮಿಷಗಳಲ್ಲಿ ದಿನನಿತ್ಯದ ವಸ್ತು ತಲುಪಿಸುವ ಭರವಸೆಯೊಂದಿಗೆ ಕೇವಲ 16 ತಿಂಗಳ ಅವಧಿಯಲ್ಲಿಯೇ ಮಾರುಕಟ್ಟೆ ಸುತ್ತುವರಿದವು. ಇದೇ ಅವಧಿಯಲ್ಲಿ ‘ಕ್ವಿಕ್ ಕಾಮರ್ಸ್’ ಹಳೆಯ ಸಾಂಪ್ರದಾಯಿಕ ಖರೀದಿ ಪದ್ಧತಿಯ ಜಾಗಕ್ಕೆ ಮೌನವಾಗಿ ಬಂದು ಕೂತಿತ್ತು.

ಜರ್ಮನಿಯ ಫ್ರ್ಯಾಂಕ್‌ಫರ್ಟ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಸಾಹಿಲ್ ಚೌಧರಿ, ಭಾರತದಲ್ಲಿ ಶರವೇಗದಲ್ಲಿರುವ ʼಕ್ವಿಕ್‌ ಕಾಮರ್ಸ್‌ʼ ವ್ಯವಸ್ಥೆಯನ್ನು ಜರ್ಮನಿಯ ವ್ಯವಸ್ಥೆಯೊಂದಿಗೆ ಹೋಲಿಸಿದ್ದಾರೆ. ಭಾರತದ ಬ್ಲಿಂಕಿಟ್ ಮತ್ತು ಜೆಪ್ಟೋ ರೀತಿಯ 10 ನಿಮಿಷಗಳಲ್ಲಿ ಡೆಲಿವರಿ ಮಾಡುವ ಸೇವೆಗಳನ್ನು ಜರ್ಮನಿಯವರು “ಅವಿಶ್ವಾಸನೀಯ” ಎಂದು ಭಾವಿಸುತ್ತಾರೆ. ಜರ್ಮನಿಯಲ್ಲಿ ಡೆಲಿವರಿ ಪಡೆಯಲು ಕೆಲವು ವರ್ಕಿಂಗ್‌ ದಿನಗಳು ಬೇಕಾಗುತ್ತವೆ. ವಾರಾಂತ್ಯಗಳಲ್ಲಿ ಆ ಸೇವೆಯೂ ಇಲ್ಲ, ಆದರೆ ಭಾರತದಲ್ಲಿ ಕೆಲ ನಿಮಿಷಗಳಲ್ಲಿ ಇದು ಸಾಧ್ಯವಾಗುತ್ತಿದೆ. ಭಾರತದ ಲಾಜಿಸ್ಟಿಕ್ಸ್ ದಟ್ಟ ʼಡಾರ್ಕ್ ಸ್ಟೋರ್‌ಗಳುʼ ಮತ್ತು ಟ್ರಾಫಿಕ್‌ನಲ್ಲಿ ನಿಪುಣವಾಗಿ ಸಂಚರಿಸುವ Riders‌ಗಳೊಂದಿಗೆ ನಡೆಸಲ್ಪಡುತ್ತದೆ. ಇದು ಜರ್ಮನಿಯ ತಾಳ್ಮೆಯುಳ್ಳ, ನಿಧಾನಗತಿಯ ವ್ಯವಸ್ಥೆಗಿಂತ ಭಿನ್ನವಾಗಿದೆ. ಈ ವೇಗವು ಆರ್ಥಿಕತೆಯನ್ನು ಉತ್ತೇಜಿಸಿದೆ, ಗ್ರಾಹಕ ಬಳಕೆಯನ್ನು ಹೆಚ್ಚಿಸಿದೆ, ಮತ್ತು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. “ನಾನು ಜರ್ಮನಿಯವರಿಗೆ ಇದನ್ನು ಹೇಳಿದಾಗ, ಅವರು ನಂಬಲಾಗದೆ ನಾನು ಟೆಲಿಪೋರ್ಟ್‌ ಬಗ್ಗೆ ಹೇಳುತ್ತಿರುವೆನೇ ಎನ್ನುವಂತೆ ನನ್ನತ್ತ ನೋಡುತ್ತಿದ್ದರು. ಆದರೆ ಈ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕಿರುವವರು ಡೆಲಿವರಿ ವರ್ಕರ್ಸ್. ಕಡಿಮೆ ವೇತನ, ದೀರ್ಘ ಗಂಟೆಗಳ ಕೆಲಸ, ಹೆಚ್ಚುತ್ತಿರುವ ಮಾಲಿನ್ಯದ ನಡುವೆಯೂ ಅವರು ಇಷ್ಟು ಕಡಿಮೆ ಸಮಯದಲ್ಲಿ ಸೇವೆ ಒದಗಿಸುತ್ತಿದ್ದಾರೆ ಎಂದು ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿರುವುದನ್ನು NDTV ವರದಿ ಮಾಡಿದೆ.

image 2025 12 19T124440.559
pc: NDTV

ಮನೆ ಬಾಗಿಲಿಗೆ ತಲುಪುವ ಸರಕನ್ನು ತರುವ ಸಾವಿರಾರು ಕಾರ್ಮಿಕರಿಗೆ ಈ ʼ10 ಮಿನಿಟ್‌ʼ ಚಕ್ರ ಅತ್ಯಂತ ತ್ರಾಸದಾಯಕವಾಗಿದೆ. ಸಮಯದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ನಿತ್ಯ ಗುದ್ದಾಡುವಂತಾಗಿದೆ. ʼಕ್ವಿಕ್-ಕಾಮರ್ಸ್ʼ ಕಂಪನಿಗಳು ಗ್ರಾಹಕರಿಗೆ ಸುಮಾರು 10 ನಿಮಿಷಗಳಲ್ಲಿ ಡೆಲಿವರಿ ಮಾಡುವುದಾಗಿ ಭರವಸೆ ನೀಡುತ್ತವೆ. ಇದರಿಂದ ಬೆಂಗಳೂರಿನಂತಹ  ಟ್ರಾಫಿಕ್‌ ಇರುವ ನಗರಗಳಲ್ಲಿ ಕೆಲಸ ಮಾಡುವ ಡೆಲಿವರಿ ಸಿಬ್ಬಂದಿಗೆ ಅಸಾಧ್ಯವಾದ ಒತ್ತಡ ಉಂಟಾಗುತ್ತದೆ. ಪರಿಣಾಮ, ರೈಡರ್‌ಗಳು ಹೆಚ್ಚಿನ ವೇಗದಲ್ಲಿ ಬೈಕ್‌ ಚಲಾಯಿಸುತ್ತಾರೆ, ಪಾದಚಾರಿ ಮಾರ್ಗಗಳಲ್ಲಿ ನುಗ್ಗುತ್ತಾರೆ, ಸಂಕುಚಿತ ರಸ್ತೆಗಳಲ್ಲಿ ಜಿಗ್‌ಜಾಗ್ ನಡೆಸುತ್ತಾರೆ, ಸಿಗ್ನಲ್ ಜಂಪ್‌ ಮಾಡುತ್ತಾರೆ.

ಈ ವ್ಯವಸ್ಥೆಯಿಂದ ಮೊದಲಿಗೆ ಲಾಭ ಪಡೆಯುವವರು ಗ್ರಾಹಕರು. ದಿನನಿತ್ಯದ ಒತ್ತಡದ ನಡುವೆ ಸಮಯ ಉಳಿಸುವ ಸೌಲಭ್ಯವೇನೋ ಅವರಿಗೆ ದೊರೆಯುತ್ತದೆ. ಜೊತೆಗೆ ಕಂಪನಿಗಳು ಮತ್ತು ಹೂಡಿಕೆದಾರರು ಭಾರೀ ಲಾಭ ಕಂಡ ಕುಳಗಳು. ಹೊಸ ಮಾರುಕಟ್ಟೆ, ಬೃಹತ್ ಹೂಡಿಕೆಯಿಂದ ಕ್ವಿಕ್ ಕಾಮರ್ಸ್ ಒಂದು ಭರವಸೆಯ ವ್ಯಾಪಾರ ಮಾದರಿಯಾಗಿ ಗುರುತಿಸಿಕೊಂಡಿತು. ಆದರೆ ಈ ಲಾಭದ ಕಥೆಯ ಹಿಂದಿರುವ ಡೆಲಿವರಿ ಗಿಗ್ ವರ್ಕರ್ಸ್‌ಗಳ ಬದುಕು? ಇದನ್ನು ಯಾರೋ ಯಾಕೆ ಸ್ವತಃ ಕೆಲಸ ಮಾಡಿಸಿಕೊಂಡ ಕಂಪನಿಗಳೇ ಯೋಚಿಸುವುದಿಲ್ಲ. 10-ಮಿನಿಟ್ ಪರಿಕಲ್ಪನೆಯ ನಿಜವಾದ ಚಾಲಕಶಕ್ತಿ ಡೆಲಿವರಿ ಬಾಯ್ಸ್‌. ಆದರೆ ಅವರ ಕೆಲಸದ ಸ್ವರೂಪ ಅತ್ಯಂತ ಅಸ್ಥಿರ.

ಇವರು ಶಾಶ್ವತ ಉದ್ಯೋಗಿಗಳಲ್ಲ; ಬದಲಿಗೆ ಗಿಗ್ ವರ್ಕರ್‌ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಸ್ವತಂತ್ರವಾಗಿ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಾತ್ಕಾಲಿಕ, ಗುತ್ತಿಗೆ ಅಥವಾ ಪ್ರಾಜೆಕ್ಟ್-ಆಧಾರಿತ ಕೆಲಸಗಳನ್ನು ಮಾಡುವ ಇವರಿಗೆ ಗಂಟೆ ಅಥವಾ ಕೆಲಸದ ಆಧಾರದ ಮೇಲೆ ಪಾವತಿಸಲಾಗುತ್ತದೆ. ಸ್ಥಿರ ಸಂಬಳವಿರುವುದಿಲ್ಲ, ಬದಲಿಗೆ ವಿವಿಧ ಗಿಗ್‌ಗಳಿಂದ (ಕೆಲಸಗಳು) ಆದಾಯ ಗಳಿಸುತ್ತಾರೆ. ಸಮಯದ ಗುರಿಯೇ ಅವರ ಕೆಲಸದ ಕೇಂದ್ರಬಿಂದು. ಒಂದು ಆರ್ಡರ್ ತಡವಾದರೂ ರೇಟಿಂಗ್ ಕಡಿಮೆಯಾಗುವ, ಪೆನಾಲ್ಟಿ ಬೀಳುವ ಭೀತಿಯಲ್ಲೇ ಸದಾ ಕೆಲಸ. ಈ ಒತ್ತಡ ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕ ಹಿಂಸೆಗೆ ತಳ್ಳುತ್ತದೆ.

ಆದಾಯದ ವಿಷಯದಲ್ಲಿಯೂ ಅಷ್ಟೇ!. ಹೆಚ್ಚಿನ ಡೆಲಿವರಿ ಬಾಯ್ಸ್‌ಗಳ ಆದಾಯ ತಿಂಗಳಿಗೆ ಸುಮಾರು ₹12,000 ರಿಂದ ₹18,000ಗಳ ನಡುವೆ ಇರುತ್ತದೆ. ಇದು ಆರ್ಡರ್ ಸಂಖ್ಯೆ ಮತ್ತು ಇನ್ಸೆಂಟಿವ್‌ಗಳ ಮೇಲೆ ಅವಲಂಬಿತ. ಕೆಲಸ ಹೆಚ್ಚು ಮಾಡಿದಷ್ಟು ಆದಾಯ ಹೆಚ್ಚಾದರೂ, ಅದರ ಜೊತೆಗೆ ಅಪಾಯವೂ ಹೆಚ್ಚುತ್ತದೆ. ಅಪಘಾತ, ಆರೋಗ್ಯ ಸಮಸ್ಯೆ ಅಥವಾ ಕೆಲಸ ಕಳೆದುಕೊಂಡರೆ ಅವರ ಬಳಿ ಜಾಬ್‌ ಗ್ಯಾರಂಟಿ ಇಲ್ಲ. ಪಿಎಫ್ ಇಲ್ಲ, ಪಿಂಚಣಿ ಇಲ್ಲ, ಸಂಪೂರ್ಣ ಆರೋಗ್ಯ ವಿಮೆಯೂ ಇಲ್ಲ. ಇದರಿಂದ ಅವರ ಕುಟುಂಬವೂ ಆರ್ಥಿಕ ಅಸ್ಥಿರತೆಯೊಳಗೆ ಸಿಲುಕುತ್ತದೆ. ಈ ಹಂತದಲ್ಲಿ 10-ಮಿನಿಟ್ ಕಾನ್ಸೆಪ್ಟ್ ಎರಡು ಅಸಮಾನತೆಯ ಚಿತ್ರಣ ತೆರೆದಿಡುತ್ತದೆ. ಮೇಲ್ಮಟ್ಟದಲ್ಲಿ ವೇಗ, ಅನುಕೂಲತೆ ಮತ್ತು ಲಾಭ; ಕೆಳಮಟ್ಟದಲ್ಲಿ ಅಪಾಯ, ಅಸ್ಥಿರತೆ ಮತ್ತು ಭದ್ರತೆಯ ಕೊರತೆ. ಗ್ರಾಹಕರಿಗೆ ಸೌಲಭ್ಯ ನೀಡುವ ವ್ಯವಸ್ಥೆ, ಅದನ್ನು ಸಾಧ್ಯ ಮಾಡುತ್ತಿರುವ ಕಾರ್ಮಿಕರ ಮಾನವೀಯ ಅಗತ್ಯಗಳನ್ನು ಕಡೆಗಣಿಸುತ್ತಿದೆ.

e commerce

ನಗರದ ರಸ್ತೆಗಳಲ್ಲಿ ಡೆಲಿವರಿ ಸಿಬ್ಬಂದಿಯೇ ಹೆಚ್ಚಾಗಿರುವುದನ್ನು ನಿತ್ಯ ನೋಡುತ್ತಿದ್ದೇವೆ. ಗಿಗ್-ಕಾಮರ್ಸ್ ಸ್ವಭಾವ, ರಸ್ತೆಗಳ ಸುರಕ್ಷತೆಯನ್ನು ಈಗಾಗಲೇ ಹೆಚ್ಚು ಅಪಾಯಕಾರಿಯಾಗಿದೆ. ಕೆಲವು ಡೆಲಿವರಿ ಕಾರ್ಮಿಕರು ಸಮಯದೊಂದಿಗೆ ಸ್ಪರ್ಧಿಸುತ್ತಿರುವಾಗ ಸ್ವತಃ ಅಪಘಾತಕ್ಕೆ ಬಲಿಯಾಗಿರುವ ಪ್ರಕರಣಗಳೂ ಕಂಡುಬಂದಿವೆ. ಕಳೆದ ಮೂರು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಕನಿಷ್ಠ 27 ಮಂದಿ ಡೆಲಿವರಿ ಸಿಬ್ಬಂದಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್‌ ಡೇಟಾ ಪ್ರಕಾರ, ಡೆಲಿವರಿ ಸಿಬ್ಬಂದಿಗಳು ಟ್ರಾಫಿಕ್‌ ನಿಯಮ ಉಲ್ಲಂಘಿಸುವ ಪ್ರಕರಣಗಳು ಬಹಳ ಹೆಚ್ಚಾಗಿವೆ. 2023ರಲ್ಲಿ 30,968 ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ ಇದು 52,153ಕ್ಕೆ ಏರಿಕೆಯಾಯಿತು. 2025ರ ಮೊದಲ 9 ತಿಂಗಳಲ್ಲೇ 63,718 ಪ್ರಕರಣಗಳು ದಾಖಲಾದವು. ಇನ್ನು ರೋಡ್‌ ರೇಜ್‌ ಪ್ರಕರಣ, ಲೇಟ್‌ ಡೆಲಿವರಿ ಕಾರಣಕ್ಕೆ ಪುಂಡರ ಹಾವಳಿಯಿಂದ ಸಾವನ್ನಪ್ಪಿದವರಿಗೆ ಸ್ಪಷ್ಟ ದಾಖಲೆಗಳಿಲ್ಲ. ಈ ಅಂಕಿಗಳು ಗಿಗ್ ಅಥವಾ ಪ್ಲಾಟ್‌ಫಾರ್ಮ್ ಕೆಲಸದ ಸ್ವಭಾವ, ನಗರದ ಒತ್ತಡ, ನಿಯಂತ್ರಣದ ಕೊರತೆಗಳ ಕಾರಣದಿಂದ ಸಮಸ್ಯೆ ಹೆಚ್ಚುತ್ತಿರುವುದನ್ನು ತೋರಿಸುತ್ತವೆ ಎಂದು ಬೆಂಗಳೂರು ಸಿಟಿ ಪೊಲೀಸ್‌ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್‌ ಹೇಳಿರುವುದಾಗಿ ʼದ ಹಿಂದೂʼ ವರದಿಯೊಂದರಲ್ಲಿ ಉಲ್ಲೇಖಿಸಿದೆ.

ನಮ್ಮ ಬಾಗಿಲಿಗೆ ನಾವಂದುಕೊಂಡ ಸಮಯಕ್ಕೆ ಬಂದು ತಲುಪುವ ಪ್ರತಿಯೊಂದು ಪ್ಯಾಕೆಟ್‌ ಹಿಂದೆ ಎಷ್ಟೋ ಬಡ ಕಾರ್ಮಿಕರ ಶ್ರಮ ಅಡಗಿದೆ. ಸಮಯದ ಒತ್ತಡ, ಅಪಾಯ, ಅನಿಶ್ಚಿತ ಆದಾಯ ಮತ್ತು ಮಾನಸಿಕ ದಣಿವಿನೊಂದಿಗೆ ಹೋರಾಡುತ್ತಿರುವ ಡೆಲಿವರಿ ಕಾರ್ಮಿಕರ ಕಥೆಯಿದೆ. ಯಾವುದೇ ಡೆಲಿವರಿ ಬಾಯ್‌ಗೆ ನಾವು ಕೊಡಬಹುದಾದ್ದು ರೇಟಿಂಗ್‌, ಟಿಪ್‌ ಅಥವಾ ದೂರಷ್ಟೇ. ಆದರೆ ಅವನ ಬದುಕಿನ ಭದ್ರತೆ, ಆರೋಗ್ಯ, ಗೌರವದ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಗ್ರಾಹಕರ ಅನುಕೂಲತೆಯ ಹೆಸರಿನಲ್ಲಿ ಕಾರ್ಮಿಕರ ಮಾನವೀಯತೆಯನ್ನು ಬಲಿಕೊಡುವ ವ್ಯವಸ್ಥೆ ಯಾವತ್ತಿಗೂ ಶಾಶ್ವತವಾಗಿರಲಾರದು.

ಇದನ್ನೂ ಓದಿ: AI ಕ್ರಾಂತಿಯಿಂದ ಜಾಗತಿಕ RAM ಕೊರತೆ: ದುಬಾರಿಯಾಗಲಿವೆ ಸ್ಮಾರ್ಟ್‌ಫೋನ್‌!

ಕ್ವಿಕ್‌ ಕಾಮರ್ಸ್‌ ಭಾರತದ ತಂತ್ರಜ್ಞಾನ ಸಾಮರ್ಥ್ಯ ಮತ್ತು ನಿರ್ವಹಣಾ ಕೌಶಲ್ಯದ ಸಂಕೇತವೇನೋ ಸರಿ. ಅದಕ್ಕೆ ತಕ್ಕಂತೆ ಡೆಲಿವರಿ ವರ್ಕರ್‌ಗಳ ಕೆಲಸದ ಸಮಯ, ಕನಿಷ್ಠ ವೇತನ, ಅಪಘಾತ ವಿಮೆ, ಆರೋಗ್ಯ ಭದ್ರತೆ ಮತ್ತು ರಸ್ತೆ ಸುರಕ್ಷತೆ ಕುರಿತಾಗಿ ಸರ್ಕಾರ, ಹಗಲು ರಾತ್ರಿ ಕೆಲಸ ತೆಗೆಸುವ ಕಂಪನಿಗಳು ಮತ್ತು ಸಮಾಜ ಒಟ್ಟಾಗಿ ಹೊಣೆ ಹೊತ್ತುಕೊಳ್ಳಬೇಕಿದೆ. ಇಲ್ಲವಾದರೆ ಜಾಗತಿಕವಾಗಿ ಸಿಕ್ಕಿರುವ ಈ  ಹೆಮ್ಮೆ, ಮುಂದಿನ ದಿನಗಳಲ್ಲಿ ಅಪಘಾತ, ಅಸಮಾನತೆ ಮತ್ತು ಅಸಂತೃಪ್ತಿಯ ಸಂಕೇತವಾಗಿ ಬದಲಾಗುವ ಅಪಾಯವಿದೆ. ಹತ್ತು ನಿಮಿಷ ಉಳಿದರೆ ಸಾಕಪ್ಪಾ ಎಂದುಕೊಳ್ಳುವ ಈ ಕಾಲದಲ್ಲಿ, ಯಾರದೋ ಜೀವನ ಅಪಾಯಕ್ಕೆ ಸಿಲುಕುತ್ತಿದೆ ಎಂಬ ಸತ್ಯವನ್ನು ಮರೆಯಬಾರದು. ತಂತ್ರಜ್ಞಾನ ಮಾನವನ ಬದುಕನ್ನು ಸುಲಭಗೊಳಿಸಲು ಇರಬೇಕೇ ಹೊರತು, ಮಾನವನನ್ನೇ ಒತ್ತಡಕ್ಕೆ ತಳ್ಳಲು ಅಲ್ಲ. ವೇಗದ ಜೊತೆಗೆ ಸಂವೇದನೆ, ಮಾನವೀಯ ಸ್ಪರ್ಶಗಳು ಇದ್ದಾಗ ಮಾತ್ರ, ಈ ಹೊಸ ಭಾರತದ ಅಭಿವೃದ್ಧಿ ನಿಜವಾದ ಅರ್ಥ ಪಡೆಯುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ್ತೂರಿ ರಂಗನ್ ವರದಿ: ಸಿಎಂಗೆ ಮನವಿ ಸಲ್ಲಿಸಲು ಪಕ್ಷ, ಸಂಘಟನೆಗಳಿಗೆ ಅವಕಾಶವಿದೆ; ಟಿ.ಡಿ ರಾಜೇಗೌಡ 

ಕಸ್ತೂರಿರಂಗನ್ ವರದಿ ಕುರಿತು ತಮ್ಮ ಅಭಿಪ್ರಾಯ, ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ...

ಬೆಂಗಳೂರು | ಪತ್ನಿ ಮೇಲೆ ಆಸಿಡ್ ಸುರಿದು, ಮಚ್ಚಿನಿಂದ ಹಲ್ಲೆಗೈದ ವಿಕೃತ ಪತಿ

ನಡುರಸ್ತೆಯಲ್ಲೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹೃದಯವಿದ್ರಾವಕ...

ಬಿಹಾರದಲ್ಲಿ 14,500 ಮಕ್ಕಳು ನಾಪತ್ತೆ: ಎಫ್‌ಐಆರ್ ವಿಳಂಬಕ್ಕೆ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ

ನಳಂದಾ ಜಿಲ್ಲೆಯ ಆಸ್ಪತ್ರೆಯೊಂದರಿಂದ ನವಜಾತ ಶಿಶು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್...

ಇಸ್ಲಾಂಗೆ ಯುವಕ ಮತಾಂತರ; ‘ಬ್ರೇನ್‌ವಾಶ್’ ಆರೋಪ: ಇಷ್ಟದ ಧರ್ಮ ಅನುಸರಿಸುವ ಸ್ವಾತಂತ್ರ್ಯವಿದೆ ಎಂದ ಹೈಕೋರ್ಟ್

ವಯಸ್ಕನಾದ ವ್ಯಕ್ತಿಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ...