ಹಸ್ದೇವ್ ಅರಣ್ಯ ಉಳಿಸಿ ಎಂದ ಜನ; ಹರಾಜಾದ ʼತಾರಾʼ; ಕಲ್ಲಿದ್ದಲು ಕದನದಲ್ಲಿ ಗೆದ್ದವರು ಯಾರು?

Date:

ಛತ್ತೀಸ್‌ಗಢದ ಹಸ್ದೇವ್ ಅರಣ್ಯ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೇವಲ ಮರಗಳ ಕಡಿತದ ವಿಚಾರವಾಗಿ ಅಲ್ಲ. ವರ್ಷಗಳಿಂದ ಅರಣ್ಯ, ನೆಲ, ನೀರು ಮತ್ತು ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿ ಸಮುದಾಯಗಳ ಹಕ್ಕುಗಳ ಮೇಲೆಯೇ ತಾರಾ ಕಲ್ಲಿದ್ದಲು ಬ್ಲಾಕ್ ಹರಾಜಾಗಿರುವುದು. ಹಸ್ದೇವ್ ಬಚಾವ್ ಸಂಘಟನೆಗಳು ಮತ್ತು ಕಾಂಗ್ರೆಸ್, ಈ ಹರಾಜನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿವೆ. ಆದರೆ ವರ್ಷಗಳ ಕಾಲ ನಡೆದ ಬೃಹತ್ ಪ್ರತಿಭಟನೆಗಳು, ಗ್ರಾಮಸ್ಥರ ವಿರೋಧ, ಪರಿಸರ ಹೋರಾಟಗಳ ಬಳಿಕವೂ ಕಲ್ಲಿದ್ದಲು ಬ್ಲಾಕ್ ಹರಾಜಿನ ಹಂತಕ್ಕೆ ಬಂದಿದೆ ಎಂದರೆ, ಆ ಹೋರಾಟಗಳ ಕಿಮ್ಮತ್ತೇನು?

- Advertisement -

ಛತ್ತೀಸ್‌ಗಢದ ಉತ್ತರ ಭಾಗದಲ್ಲಿರುವ ಹಸ್ದೇವ್‌ ಅರಣ್ಯವು ಮಧ್ಯ ಭಾರತದ ಪ್ರಮುಖ ನೈಸರ್ಗಿಕ ಅರಣ್ಯ ಪ್ರದೇಶಗಳಲ್ಲಿ ಒಂದು. ಸರ್ಗೂಜಾ ಮತ್ತು ಕೊರ್ಬಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಅರಣ್ಯವು ಹಸ್ದೇವ್‌ ನದಿಯ ಜಲಾನಯನ ಪ್ರದೇಶವಾಗಿದ್ದು, ಸ್ಥಳೀಯ ಪರಿಸರ ವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ. ದಟ್ಟವಾದ ಸಾಲ್‌ ಮರಗಳ ಕಾಡು, ಜಲಮೂಲಗಳು, ವನ್ಯಜೀವಿಗಳು ಮತ್ತು ಅಪಾರ ಜೀವವೈವಿಧ್ಯವನ್ನು ಹೊಂದಿರುವ ಹಸ್ದೇವ್‌ ಅರಣ್ಯವನ್ನು ಛತ್ತೀಸ್‌ಗಢದ ‘ಹಸಿರು ಶ್ವಾಸಕೋಶ’ ಎಂದೂ ಕರೆಯಲಾಗುತ್ತದೆ. ಈ ಅರಣ್ಯವು ಆನೆಗಳು ಸೇರಿದಂತೆ ಹಲವು ವನ್ಯಜೀವಿಗಳ ಸಂಚಾರ ಮಾರ್ಗವಾಗಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಈ ಪ್ರದೇಶದಲ್ಲಿ ಗೊಂಡ್‌, ಒರಾಂವ್‌ ಸೇರಿದಂತೆ ಹಲವು ಆದಿವಾಸಿ ಸಮುದಾಯಗಳು ತಲೆಮಾರುಗಳಿಂದ ವಾಸಿಸುತ್ತಿವೆ. ಅವರ ಬದುಕು ಕೃಷಿ, ಅರಣ್ಯ ಉತ್ಪನ್ನಗಳು, ಜಲಮೂಲಗಳು ಮತ್ತು ಕಾಡಿನ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಕಾಡೆಂದರೆ ಎಂದರೆ ಅವರಿಗೆ ಜೀವನೋಪಾಯ, ಆಹಾರ, ಸಂಸ್ಕೃತಿ, ಧಾರ್ಮಿಕ ನಂಬಿಕೆ ಮತ್ತು ಸಮುದಾಯದ ಅಸ್ತಿತ್ವದ ಭಾಗ. ಆದರೆ ಹಸ್ದೇವ್‌ ಅರಣ್ಯದ ನೆಲದಡಿ ಇರುವ ಅಪಾರ ಪ್ರಮಾಣದ ಕಲ್ಲಿದ್ದಲು ನಿಕ್ಷೇಪಗಳಿಂದಲೇ ಈ ಪ್ರದೇಶವನ್ನು ಹಲವು ವರ್ಷಗಳಿಂದ ಗಣಿಗಾರಿಕೆ ಭೂತಗಳು ಇನ್ನಿಲ್ಲದಂತೆ ಕಾಡುತ್ತಿವೆ. ಕಲ್ಲಿದ್ದಲು ಗಣಿಗಾರಿಕೆಗಾಗಿ ಅರಣ್ಯ ಪ್ರದೇಶಗಳನ್ನು ಹಂಚಿಕೆ ಮಾಡುವ ಕ್ರಮಗಳ ವಿರುದ್ಧ ಸ್ಥಳೀಯ ಜನರು ಮತ್ತು ಪರಿಸರ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಿಂದ ಅರಣ್ಯ ನಾಶ, ಜಲಮೂಲಗಳ ಮೇಲೆ ಪರಿಣಾಮ, ವನ್ಯಜೀವಿಗಳ ಆವಾಸಸ್ಥಾನಗಳ ಕುಸಿತ ಮತ್ತು ಆದಿವಾಸಿಗಳ ಸ್ಥಳಾಂತರದ ಆತಂಕಗಳು ವ್ಯಕ್ತವಾಗುತ್ತಿವೆ.

ಸುಮಾರು 1.70 ಲಕ್ಷ ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವ ಹಸ್ದೇವ್‌ ಅರಣ್ಯವನ್ನು ಮಧ್ಯ ಭಾರತದ ಅತಿ ದೊಡ್ಡ ಸತತ ದಟ್ಟ ಅರಣ್ಯ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಅರಣ್ಯದ ಕೆಳಗಿರುವ ಹಸ್ದೇವ್‌ ಅರನ್ಯ ಕಲ್ಲಿದ್ದಲು ಪ್ರದೇಶವು ಸುಮಾರು 1,879 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿದ್ದು, ಒಟ್ಟು 23 ಕಲ್ಲಿದ್ದಲು ಬ್ಲಾಕ್‌ಗಳನ್ನು ಒಳಗೊಂಡಿದೆ. ಈ ಕಲ್ಲಿದ್ದಲು ಪ್ರದೇಶದಲ್ಲಿ ಸುಮಾರು 1.369 ಬಿಲಿಯನ್ ಟನ್‌ ಸಾಬೀತಾದ ಕಲ್ಲಿದ್ದಲು ನಿಕ್ಷೇಪ ಮತ್ತು ಅಂದಾಜು 5.179 ಬಿಲಿಯನ್ ಟನ್‌ ನಿಕ್ಷೇಪವಿದೆ ಎಂದು ಲಭ್ಯ ದಾಖಲೆಗಳು ಸೂಚಿಸುತ್ತವೆ.

image 2026 09 11T181612.210

ತಾರಾ ಕಲ್ಲಿದ್ದಲು ಬ್ಲಾಕ್ ಹೊಸದಾಗಿ ಹಸ್ದೇವ್ ಪ್ರದೇಶಕ್ಕೆ ಬಂದ ವಿಚಾರವಲ್ಲ. ಕೇಂದ್ರ ಸರ್ಕಾರದ ಕಲ್ಲಿದ್ದಲು ಹರಾಜು ಪ್ರಕ್ರಿಯೆಯ ಹಿಂದಿನ ಹಂತಗಳಲ್ಲಿಯೇ ತಾರಾ ಬ್ಲಾಕ್ ಹರಾಜಿಗೆ ಗುರುತಿಸಲ್ಪಟ್ಟಿತ್ತು. 2023ರಲ್ಲಿ ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯವೂ ಹಸ್ದೇವ್ ಅರಂಡ್ ಅರಣ್ಯದಲ್ಲಿರುವ ತಾರಾ ಬ್ಲಾಕ್ ಅನ್ನು ಹರಾಜಿಗೆ ಗುರುತಿಸಿದ್ದನ್ನು ದಾಖಲಿಸಿದೆ. ಪರಿಸರದ ಸೂಕ್ಷ್ಮತೆಯನ್ನು ಪರಿಗಣಿಸಿ ಕೆಲವು ಕಲ್ಲಿದ್ದಲು ಬ್ಲಾಕ್‌ಗಳನ್ನು ಹರಾಜಿನಿಂದ ಹೊರಗಿಡಲಾಗಿದ್ದರೂ, ತಾರಾ ಆ ಪ್ರಕ್ರಿಯೆಯಲ್ಲಿ ಮುಂದುವರಿದಿತ್ತು.

ಹಸ್ದೇವ್‌ ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಗಣಿಗಾರಿಕೆ ನಡೆಸುವುದನ್ನು ಸ್ಥಳೀಯ ಆದಿವಾಸಿಗಳು ಮತ್ತು ಅರಣ್ಯ ಅವಲಂಬಿತ ಸಮುದಾಯಗಳು ಸುಮಾರು 15 ವರ್ಷಗಳಿಂದ ವಿರೋಧಿಸುತ್ತಿವೆ. ಗ್ರಾಮಸಭೆ ನಿರ್ಣಯಗಳು, ಧರಣಿಗಳು, ಪಾದಯಾತ್ರೆಗಳು ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆಗಳು ನಡೆದಿವೆ. 2021ರಲ್ಲಿ ಹಸ್ದೇವ್‌ ಪ್ರದೇಶದ ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಸುಮಾರು 300 ಕಿಲೋಮೀಟರ್‌ ಪಾದಯಾತ್ರೆ ನಡೆಸಿ ರಾಯ್‌ಪುರ ತಲುಪಿದ್ದರು.

ಈ ಹೋರಾಟದ ನಡುವೆ 2022ರಲ್ಲಿ ಛತ್ತೀಸ್‌ಗಢ ವಿಧಾನಸಭೆಯಲ್ಲೇ ಹಸ್ದೇವ್‌ ಪ್ರದೇಶದ ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುವ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. 2022ರ ಜುಲೈ 26ರಂದು ಅಂಗೀಕರಿಸಲಾದ ಈ ನಿರ್ಣಯವು ಹಸ್ದೇವ್‌ ಅರಣ್ಯದ ಕುರಿತು ರಾಜ್ಯದ ಅಧಿಕೃತ ನಿಲುವಿಗೂ ಮಹತ್ವದ ದಾಖಲೆ ಎನಿಸಿತು. ಇದರ ಬೆನ್ನಲ್ಲೇ 2023ರ ಜೂನ್‌ 23ರಂದು ಛತ್ತೀಸ್‌ಗಢದ ಖನಿಜ ಸಂಪನ್ಮೂಲ ಇಲಾಖೆ ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ ಪತ್ರ ಬರೆದು ಹರಾಜಿಗೆ ಪ್ರಸ್ತಾಪಿಸಲಾಗಿದ್ದ ಒಂಬತ್ತು ಕಲ್ಲಿದ್ದಲು ಬ್ಲಾಕ್‌ಗಳನ್ನು ಪಟ್ಟಿಯಿಂದ ಹೊರಗಿಡುವಂತೆ ಮನವಿ ಮಾಡಿತ್ತು. ಆ ಪಟ್ಟಿಯಲ್ಲಿ ತಾರಾ, ಕೆರೆಕೋಮಾ, ಕೊಂಡೇರ್‌, ತೆಂಡುವಾ-ಮುಡಿ, ಝಿಲ್ಗಾ-ಬರ್ಪಾಲಿ, ಬರ್ಪಾಲಿ-ಕರ್ಮಿ ಟಿಕ್ರಾ, ಬಟಾತಿ ಕೊಲ್ಗಾ ನಾರ್ತ್‌ ಈಸ್ಟ್‌, ಬಟಾತಿ ಕೊಲ್ಗಾ ಈಸ್ಟ್‌ ಮತ್ತು ಫತೇಪುರ ಸೌತ್‌ ಬ್ಲಾಕ್‌ಗಳು ಸೇರಿದ್ದವು. ರಾಜ್ಯ ಸರ್ಕಾರ ತನ್ನ ಮನವಿಗೆ ವಿಧಾನಸಭೆಯ ನಿರ್ಣಯವನ್ನೂ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಶಿಫಾರಸುಗಳನ್ನೂ ಉಲ್ಲೇಖಿಸಿತ್ತು.

ಆದರೆ ಈಗ ಇದೇ ತಾರಾ (ರಿವೈಸ್ಡ್‌) ಕಲ್ಲಿದ್ದಲು ಬ್ಲಾಕ್‌ ಹರಾಜಿಗೆ ಬಂದಿರುವುದು ಹೊಸ ರಾಜಕೀಯ ಮತ್ತು ಪರಿಸರ ವಿವಾದಕ್ಕೆ ಕಾರಣವಾಗಿದೆ. ಹಸ್ದೇವ್‌ ಉಳಿಸಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಹರಾಜನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ. ಕಾಂಗ್ರೆಸ್‌ ಕೂಡ ರಾಜ್ಯ ಸರ್ಕಾರದ ಹಿಂದಿನ ನಿಲುವನ್ನೇ ಮುಂದಿಟ್ಟು ಕೇಂದ್ರದ ಕ್ರಮವನ್ನು ಪ್ರಶ್ನಿಸಿದೆ.

ವಿವಾದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹಸ್ದೇವ್‌ ಪ್ರದೇಶದ ಜೀವವೈವಿಧ್ಯ (ಈ ಪ್ರದೇಶದಲ್ಲಿ 82ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಮತ್ತು 167 ಬಗೆಯ ಸಸ್ಯವರ್ಗಗಳು ದಾಖಲಾಗಿವೆ). ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ಜೀವವೈವಿಧ್ಯ ಮೌಲ್ಯಮಾಪನವು ಹಸ್ದೇವ್‌ ಪ್ರದೇಶದಲ್ಲಿ ಮತ್ತಷ್ಟು ಅರಣ್ಯ ವಿಭಜನೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಹೋರಾಟಗಾರರು ಉಲ್ಲೇಖಿಸಿದ್ದಾರೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗಣಿಗಳಾಚೆಯ ಪ್ರದೇಶಗಳನ್ನು ಗಣಿಗಾರಿಕೆಗೆ ‘ನೋ-ಗೋ’ ಪ್ರದೇಶಗಳಾಗಿ ಪರಿಗಣಿಸುವಂತೆ ಶಿಫಾರಸು ಮಾಡಲಾಗಿದೆ ಎಂಬುದು ಅವರ ವಾದ. ಮತ್ತಷ್ಟು ಗಣಿಗಾರಿಕೆಯಿಂದ ಆನೆಗಳ ಆವಾಸಸ್ಥಾನ ವಿಭಜನೆಯಾಗುವ ಮತ್ತು ಮಾನವ-ಆನೆ ಸಂಘರ್ಷ ಹೆಚ್ಚಾಗುವ ಸಾಧ್ಯತೆಯನ್ನೂ ಅವರು ಮುಂದಿಟ್ಟಿದ್ದಾರೆ.

ಇನ್ನೊಂದೆಡೆ, ಭಾರತದ ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕಾ ವಲಯಕ್ಕೆ ಕಲ್ಲಿದ್ದಲು ಇನ್ನೂ ಪ್ರಮುಖ ಇಂಧನವಾಗಿರುವುದು ವಾಸ್ತವ. ದೇಶದ ಇಂಧನ ಭದ್ರತೆಗಾಗಿ ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವುದು ಕೇಂದ್ರ ಸರ್ಕಾರದ ನೀತಿಯ ಪ್ರಮುಖ ಭಾಗವಾಗಿದೆ ಎಂಬುದು ಕೇಂದ್ರದ ವಾದ. ಕಲ್ಲಿದ್ದಲು ಸಚಿವಾಲಯವೂ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಮತ್ತು ಉತ್ಪಾದನೆ ಹೆಚ್ಚಿಸುವ ಕ್ರಮಗಳನ್ನು ನಿರಂತರವಾಗಿ ಮುಂದುವರಿಸುತ್ತಿದೆ.

2026ರ ಆಗಸ್ಟ್‌ನಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯ ನಡೆಸಿದ 15ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ CG Syn-Gas and Chemicals Limited ತಾರಾ (ರಿವೈಸ್ಡ್‌) ಬ್ಲಾಕ್‌ನ ಯಶಸ್ವಿ ಬಿಡ್ಡರ್ ಆಗಿದೆ. ಅಂದರೆ, ಹಸ್ದೇವ್‌ ಪ್ರದೇಶದ ತಾರಾ ಬ್ಲಾಕ್‌ ಅನ್ನು ಪಡೆಯಲು ಹರಾಜಿನಲ್ಲಿ ಈ ಕಂಪನಿ ಯಶಸ್ವಿಯಾಗಿದೆ. ಹಸ್ದೇವ್‌ ಅರಣ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಲ್ಲಿದ್ದಲು ಗಣಿಗಳಲ್ಲಿ ಅದಾನಿ ಸಮೂಹದ ಪ್ರಮುಖ ಪಾತ್ರವಿದೆ. ಉದಾಹರಣೆಗೆ, ಪರ್ಸಾ ಈಸ್ಟ್‌ ಮತ್ತು ಕೆಂಟಾ ಬಾಸನ್‌ (PEKB) ಕಲ್ಲಿದ್ದಲು ಬ್ಲಾಕ್‌ ರಾಜಸ್ಥಾನ ರಾಜ್ಯದ ವಿದ್ಯುತ್‌ ಉತ್ಪಾದನಾ ಸಂಸ್ಥೆಯಾದ Rajasthan Rajya Vidyut Utpadan Nigam Limited (RRVUNL)ಗೆ ಹಂಚಿಕೆಯಾಗಿದ್ದು, ಗಣಿಗಾರಿಕೆ ಕಾರ್ಯಾಚರಣೆಯನ್ನು ಅದಾನಿ ಎಂಟರ್‌ಪ್ರೈಸಸ್‌ Mine Developer and Operator (MDO) ಆಗಿ ನಡೆಸುತ್ತಿದೆ. ಹಾಗಾಗಿ ಉಳಿದುಕೊಂಡಿರುವ ತಾರಾ ಬ್ಲಾಕ್‌ನ್ನೂ ಅದಾನಿ ಸಮೂಹ ಬಾಚಿಕೊಳ್ಳಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

image 2026 09 11T181650.050

ಹಾಗಾದರೆ ಕಲ್ಲಿದ್ದಲು ಅಗತ್ಯವಿದ್ದರೆ ಹಸ್ದೇವ್‌ ಅರಣ್ಯದಲ್ಲೇ ಗಣಿಗಾರಿಕೆ ಮಾಡಬೇಕೇ? ಕೇಂದ್ರಕ್ಕೆ ಹಸ್ದೇವ್‌ ಅನಿವಾರ್ಯವಲ್ಲ. 2023ರಲ್ಲಿ ಛತ್ತೀಸ್‌ಗಢ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ರಾಜ್ಯದ ಒಟ್ಟು ಕಲ್ಲಿದ್ದಲು ಸಂಪನ್ಮೂಲದಲ್ಲಿ ಹಸ್ದೇವ್‌ ಅರಣ್ಯದ ಪಾಲು ಸುಮಾರು 8% ಮಾತ್ರ ಎಂದು ಹೇಳಿತ್ತು. ಅಂದರೆ, ರಾಜ್ಯದಲ್ಲಿ ಕಲ್ಲಿದ್ದಲು ಸಂಪನ್ಮೂಲಗಳಿರುವ ಇತರ ಪ್ರದೇಶಗಳೂ ಇವೆ. ಸೂಕ್ಷ್ಮ ಪ್ರದೇಶವಾದ ಹಸ್ದೇವ್ ಬದಲು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗಣಿಗಳ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸುವುದು, ಪರಿಸರದ ದೃಷ್ಟಿಯಿಂದ ಕಡಿಮೆ ಸೂಕ್ಷ್ಮ ಪ್ರದೇಶಗಳಲ್ಲಿರುವ ಕಲ್ಲಿದ್ದಲು ಸಂಪನ್ಮೂಲಗಳಿಗೆ ಆದ್ಯತೆ ನೀಡುವುದು ಮತ್ತು ಹಂತಹಂತವಾಗಿ ಸೌರ, ಪವನ, ಜಲವಿದ್ಯುತ್ ಹಾಗೂ ಬ್ಯಾಟರಿ ಸಂಗ್ರಹಣೆಯಂತಹ ಪರ್ಯಾಯ ಇಂಧನ ಮೂಲಗಳತ್ತ ಸಾಗುವುದು ಸರ್ಕಾರದ ಆಯ್ಕೆಗಳಲ್ಲಿವೆ. ದೇಶದ ಇಂಧನ ಅಗತ್ಯವನ್ನು ಪೂರೈಸುವ ಜೊತೆಗೆ ಈಗಾಗಲೇ ಗುರುತಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಉಳಿಸುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕಾಗಿದೆ.

ಇದನ್ನೂ ಓದಿ: ಛತ್ತೀಸಗಢ | ಹಸ್ದೇವ್‌ ಗಣಿಗಾರಿಕೆ ವಿರುದ್ಧ ಪ್ರತಿಭಟನೆ; ಮಹಿಳಾ ಪೇದೆ ಮೇಲಿನ ದೌರ್ಜನ್ಯ ಚಳವಳಿ ಹತ್ತಿಕ್ಕುವ ಅಸ್ತ್ರವಾಗದಿರಲಿ

ಇಲ್ಲಿಯವರೆಗೆ ನೋಡಿದರೆ, ಸುಮಾರು 15 ವರ್ಷಗಳಿಂದ ನಡೆಸುತ್ತಿರುವ ಬೃಹತ್ ಹೋರಾಟಕ್ಕೆ ತಾರಾ ಹರಾಜನ್ನು ತಡೆಯಲು ಸಾಧ್ಯವಾಗಿಲ್ಲ. 300 ಕಿಲೋಮೀಟರ್‌ ಪಾದಯಾತ್ರೆ, ಗ್ರಾಮಸಭೆಗಳ ವಿರೋಧ, ವರ್ಷಗಳ ಧರಣಿ, ಪರಿಸರ ತಜ್ಞರ ಎಚ್ಚರಿಕೆ, ವಿಧಾನಸಭೆಯ ಸರ್ವಾನುಮತದ ನಿರ್ಣಯ.. ಇವೆಲ್ಲದರ ನಡುವೆಯೂ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಹಸ್ದೇವ್‌ ಹೋರಾಟ ಕನಿಷ್ಠ ಮೂರು ಪ್ರಮುಖ ಸಂಗತಿಗಳನ್ನು ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತಂದಿದೆ. ಮೊದಲನೆಯದು, ಅರಣ್ಯವನ್ನು ಕೇವಲ ಖನಿಜ ಸಂಪತ್ತಿನ ಪ್ರದೇಶವಾಗಿ ನೋಡುವುದಕ್ಕೆ ವಿರೋಧ. ಎರಡನೆಯದು, ಗಣಿಗಾರಿಕೆ ನಿರ್ಧಾರಗಳಲ್ಲಿ ಅರಣ್ಯ ಅವಲಂಬಿತ ಸಮುದಾಯಗಳ ಹಕ್ಕು ಮತ್ತು ಗ್ರಾಮಸಭೆಯ ಪಾತ್ರ. ಮೂರನೆಯದು, ದೇಶದ ಇಂಧನ ಅಗತ್ಯ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಂಘರ್ಷವನ್ನು ನೇರವಾಗಿ ಪ್ರಶ್ನಿಸುವುದು. ಇದಕ್ಕಿಂತ ಮುಖ್ಯವಾಗಿ, ಹಸ್ದೇವ್‌ ಕುರಿತ ವೈಜ್ಞಾನಿಕ ಅಧ್ಯಯನಗಳೂ ಗಣಿಗಾರಿಕೆಯಿಂದ ಉಂಟಾಗಬಹುದಾದ ಅರಣ್ಯ ವಿಭಜನೆ ಮತ್ತು ಮಾನವ-ಆನೆ ಸಂಘರ್ಷದ ಅಪಾಯವನ್ನು ದಾಖಲಿಸಿವೆ. WII ಅಧ್ಯಯನವು ಹಸ್ದೇವ್‌ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಮೂಲಸೌಕರ್ಯದಿಂದ ವನ್ಯಜೀವಿಗಳ ಆವಾಸಸ್ಥಾನ ಕಳೆದುಹೋಗುವ ಹಾಗೂ ವಿಭಜನೆಯಾಗುವ ಸಾಧ್ಯತೆಯನ್ನು ಎತ್ತಿ ತೋರಿಸಿದೆ. ಈಗಾಗಲೇ ಮಾನವ-ಆನೆ ಸಂಘರ್ಷ ತೀವ್ರವಾಗಿರುವ ಸಂದರ್ಭದಲ್ಲಿ ಮತ್ತಷ್ಟು ಆವಾಸಸ್ಥಾನ ನಾಶವಾದರೆ ಸಂಘರ್ಷ ಹೊಸ ಪ್ರದೇಶಗಳಿಗೂ ವಿಸ್ತರಿಸಬಹುದು ಎಂದು ಅಧ್ಯಯನ ಎಚ್ಚರಿಸಿದೆ.

ಮುಂದಿನ ಹಂತಗಳಲ್ಲಿ ಅರಣ್ಯ ಅನುಮತಿಗಳು, ಸ್ಥಳೀಯ ಜನರ ವಿರೋಧ ಹಾಗೂ ವೈಜ್ಞಾನಿಕ ಶಿಫಾರಸುಗಳಿಗೆ ಸರ್ಕಾರ ಎಷ್ಟು ಮಾನ್ಯತೆ ನೀಡುತ್ತದೆ ಎಂಬುದೇ ಆ ಹೋರಾಟದ ನಿಜವಾದ ಫಲಿತಾಂಶವನ್ನು ನಿರ್ಧರಿಸಲಿದೆ. ಹಸ್ದೇವ್‌ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಬೇಕೆಂಬುದನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಯಾವ ಪ್ರದೇಶದ ಅರಣ್ಯವನ್ನು ಗಣಿಗಾರಿಕೆಗೆ ತೆರೆಯಬೇಕು? ಅದರ ಪರಿಸರ ಮತ್ತು ಸಾಮಾಜಿಕ ಬೆಲೆಯನ್ನು ಯಾರು ಭರಿಸಬೇಕು? ಅರಣ್ಯವನ್ನು ಕಳೆದುಕೊಳ್ಳುವ ಜನರ ಒಪ್ಪಿಗೆಗೆ ಎಷ್ಟು ಮಹತ್ವ? ಎಂಬ ಪ್ರಶ್ನೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕು.

WhatsApp Image 2025 05 16 at 6.54.26 PM
Sub Editor at Eedina.com | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸಾರ್ವಜನಿಕ ಸೇವೆಗಳಲ್ಲಿ ಲೋಪ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಗಜಾನನ ಬಾಲೆ ಸೂಚನೆ

ಬಡವರು, ರೋಗಿಗಳು, ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಿ...

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...

ಬೀದರ್‌ | ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ʼಬೆಂಕಿʼ ಪಾಲು, ಆರ್ಥಿಕ ಸಂಕಷ್ಟದಲ್ಲಿ ರೈತರು

ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ಕೈಗೆ ಬಂದಿದ್ದ ಕಬ್ಬು ಸುಟ್ಟು...