ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಮೇಲೆ ಶೂ ಎಸೆದಿರುವ ಘಟನೆ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಹುಲಸೂರನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಭೀಮನಗರದ ಡಾ.ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು, ದಾರಿಯುದ್ದಕ್ಕೂ ವಕೀಲ್ ರಾಕೇಶ್ ಕಿಶೋರ್, ಅನೀಲ ಮಿಶ್ರಾ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಹುಲಸೂರ-ಬಸವಕಲ್ಯಾಣ ಮುಖ್ಯ ರಸ್ತೆಯಲ್ಲಿ ವಕೀಲ ರಾಕೇಶ್ ಕಿಶೋರ್ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಸುನೀಲ ಸಜ್ಜನಶೆಟ್ಟಿ ಅವರಿಗೆ ಸಲ್ಲಿಸಿದರು.
This video cannot be played in your browser. Open the video directly

‘ಸಾಂವಿಧಾನಿಕ ಹುದ್ದೆಯಲ್ಲಿರುವ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವುದು ಅತ್ಯಂತ ಹೇಯ ಮತ್ತು ರಾಷ್ಟ್ರವಿರೋಧಿ ಕೃತ್ಯ. .
ಸಿಜೆಐ ಬಿ.ಆರ್ ಗವಾಯಿ ಅವರತ್ತ ಶೂ ಎಸೆದ ವಕೀಲ ರಾಕೇಶ ಕಿಶೋರ್ ಹಾಗೂ ಗ್ವಾಲಿಯರ್‌ನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಅನೀಲ್ ಮಿಶ್ರಾ ಎಂಬುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಇಬ್ಬರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼಭಗವಾನ್ ಬುದ್ಧ ಹಾಗೂ ಡಾ.ಅಂಬೇಡ್ಕರ್ ಅವರ ಅನುಯಾಯಿ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಿಜೆಐ ಅವರ ಮೇಲೆ ಶೂ ಎಸೆದ ಘಟನೆ ವ್ಯಕ್ತಿ ಮೇಲೆ ನಡೆಸಿದ ದಾಳಿಯಲ್ಲ. ಇದು ಸಂವಿಧಾನದ ಮೇಲಿನ ದಾಳಿ. ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿಯಾಗಿದೆʼ ಎಂದು ಕಿಡಿಕಾರಿದರು.

ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಶೋಷಿತರಿಗೆ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. ಸಂವಿಧಾನ ಅಪಾಯದಲ್ಲಿದೆ ಎಂಬ ನಮ್ಮ ಆತಂಕಕ್ಕೆ ನೇರ ಪುರಾವೆ ಸಿಕ್ಕಿದೆ. ಸಿಜೆಐ ಮೇಲಿನ ಹಲ್ಲೆ ದೇಶದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಲೋಕೇಶ್ ಕಾಂಬಳೆ, ದಸಂಸ ತಾಲೂಕು ಸಂಚಾಲಕ ದೇವಾನಂದ ತೋಳೆ, ಬಿಎಸ್ಸಿ ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಂಕರ ಫುಲೆ, ಭೀಮ ಆರ್ಮಿ ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ಚೇತನ್ ಕಾಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಮುಕೇಶ್ ಸದಲಾಪುರೆ, ಪ್ರಲ್ಹಾದ್ ಮೋರೆ, ವಿದ್ಯಾಸಾಗರ ಬನಸೋಡೆ, ಸುರೇಶ್ ಮೋರೆ, ವಿನೋದ ಸಿಂಧೆ, ಜ್ಞಾನೋಬಾ ನಿಟ್ಟೂರೆ, ಬಬನ ಮೋರೆ, ಶಾಲುಬಾಯಿ ಬನಸೋಡೆ ಅನೇಕರು ಪಾಲ್ಗೊಂಡಿದ್ದರು.





