ಔರಾದ್ ತಾಲೂಕಿನ ಸಂತಪೂರ ಗ್ರಾಮದ ಅನುಭವ ಮಂಟಪದಲ್ಲಿ ನಡೆದ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಜರುಗಿತು.
ಔರಾದ ತಹಸೀಲ್ದಾರ್ ಮಹೇಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಗಡಿಭಾಗದಲ್ಲಿ ಶಾಲಾ, ಕಾಲೇಜು ತೆರೆದು ಗುಣಮಟ್ಟ ಶಿಕ್ಷಣ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಾ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇದು ಶೈಕ್ಷಣಿಕ ಕ್ರಾಂತಿ ಎನ್ನಬಹುದುʼ ಎಂದು ಹೇಳಿದರು.
ಸಂತಪೂರ ಗ್ರಾಮದ ಸಿದ್ದರಾಮೇಶ್ವರ ಪಿಯು ಕಾಲೇಜು ಜಿಲ್ಲೆ, ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಪ್ರತಿಶತ ಫಲಿತಾಂಶ ಪಡೆಯುತ್ತಿದೆ. ಅನುಭವ ಮಂಟಪ ಗುರುಕುಲ ಪ್ರೌಢ ಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಜೊತೆಗೆ 16 ವರ್ಷಗಳಿಂದ ಪ್ರತಿಶತ ಫಲಿತಾಂಶ ಪಡೆಯುತ್ತಿದೆ. ಅಲ್ಲದೆ ಸಂತಪೂರ ವಲಯದ ಇತರೆ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಯಶಸ್ಸು ಸಾಧಿಸಿವೆ. ಮಕ್ಕಳ ಏಳಿಗೆಗಾಗಿ ಶ್ರಮಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯʼ ಎಂದರು.

ನೇತ್ರತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಪ್ರತಿಯೊಬ್ಬರಿಗೂ ಸುಖ-ಶಾಂತಿ, ನೆಮ್ಮದಿ ಬೇಕು. ಅದಕ್ಕಾಗಿ ಧಾರ್ಮಿಕ ಸತ್ಸಂಗದಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ. ಹೀಗಾಗಿ ಮಕ್ಕಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣಬೇಕು. ಸಂತಪೂರ ವಲಯದ ಸಿದ್ದರಾಮೇಶ್ವರ ಪಿಯು ಕಾಲೇಜು, ಅನುಭವ ಮಂಟಪ ಗುರುಕುಲ, ಜ್ಞಾನ ಭಾರತಿ ಶಾಲೆಯ ಮಕ್ಕಳ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆʼ ಎಂದರು.
ಔರಾದ್ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ಮಾಳಗೆ ಗುರುಬಸವ ಪೂಜೆ ನೆರವೇರಿಸಿದರು.
ಇದನ್ನೂ ಓದಿ : ಬೀದರ್ | ಸಮಾನತೆಯ ಹರಿಕಾರ ಬಸವಣ್ಣ : ಪ್ರೊ.ಬಿ.ಎಸ್.ಬಿರಾದಾರ
ಡಾ.ಅಭಿಷೇಕ ಸ್ವಾಮಿ, ಬಸವರಾಜ ಬಿರಾದರ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಶಿವಕುಮಾರ ಹಿರೇಮಠ, ಸಂಗಮೇಶ ಬ್ಯಾಳೆ, ಹಾವಗಿರಾವ ಶೆಂಬೆಳ್ಳಿ, ಗೋವಿಂದರೆಡ್ಡಿ ಸೇರಿದಂತೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




