ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾ ಗ್ರಾಮದ ಸರ್ವೆ ನಂ. 249ರಲ್ಲಿ ಸುಮಾರು 20 ಬಡ ಕುಟುಂಬಗಳಿಗೆ ನಿವೇಶನಕ್ಕಾಗಿ ಹಕ್ಕುಪತ್ರಗಳನ್ನು ನೀಡಿದ್ದರೂ, ಹಲವು ವರ್ಷಗಳು ಕಳೆದಿವೆ. ಆದರೂ ಫಲಾನುಭವಿಗಳ ಸಮಸ್ಯೆಗಳಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಾಲ್ಲೂಕು ಅಧ್ಯಕ್ಷ ಶಂಕರ ಫುಲೆ ಆರೋಪಿಸಿದ್ದಾರೆ.
ಈ ಕುರಿತು ಶಂಕರ ಫುಲೆ ಅವರ ನೇತೃತ್ವದಲ್ಲಿ ಫಲಾನುಭವಿಗಳು ಹಾಗೂ ಪಕ್ಷದ ಮುಖಂಡರು ಬಸವಕಲ್ಯಾಣ ತಹಸೀಲ್ದಾರರಿಗೆ ಮನವಿಪತ್ರ ಸಲ್ಲಿಸಿ, ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು.

“ಕಿಟ್ಟಾ ಗ್ರಾಮದ ಬಡ ಕುಟುಂಬಗಳು ಹಕ್ಕುಪತ್ರಗಳನ್ನು ಪಡೆದು ಹಲವು ವರ್ಷಗಳು ಕಳೆದಿದ್ದರೂ, ನಿವೇಶನದ ಹಕ್ಕು ಹಾಗೂ ಅಗತ್ಯ ಸೌಲಭ್ಯಗಳಿಗಳಿಲ್ಲ. ಫಲಾನುಭವಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸಮಸ್ಯೆ ಬಗೆಹರಿದಿಲ್ಲ” ಎಂದು ದೂರಿದ್ದಾರೆ.
ಸರ್ಕಾರ ಬಡ ಕುಟುಂಬಗಳಿಗೆ ನೀಡಿರುವ ಹಕ್ಕುಪತ್ರಗಳ ಉದ್ದೇಶ ಸಾಕಾರಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸುವ ಮೂಲಕ ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಹಕ್ಕು ಮತ್ತು ನ್ಯಾಯವನ್ನು ಒದಗಿಸಬೇಕು ಎಂದು ಶಂಕರ ಫುಲೆ ಆಗ್ರಹಿಸಿದರು.
ತಹಸೀಲ್ದಾರರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು, ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಫಲಾನುಭವಿಗಳು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಿಟ್ಟಾ ಗ್ರಾಮದ ಬಡ ಕುಟುಂಬಗಳ ನಿವೇಶನದ ಸಮಸ್ಯೆಯನ್ನು ನಿಗದಿತ ಅವಧಿಯೊಳಗೆ ಪರಿಹರಿಸದಿದ್ದರೆ, ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಬಹುಜನ ಸಮಾಜ ಪಕ್ಷದ ವತಿಯಿಂದ ತಹಸೀಲ್ದಾರರ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶಂಕರ ಫುಲೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಅಲಿಯಂಬರ್ ಬಳಿ ಸೇತುವೆ ಕುಸಿತ: ಸಂಚಾರ ಸ್ಥಗಿತ
ಬಿಎಸ್‌ಪಿ ತಾಲ್ಲೂಕು ಸಂಯೋಜಕ ದತ್ತು ಸುಠಾಣೆ, ಮಕ್ಬುಲ್ ಸಾಬ್, ತಾಲ್ಲೂಕು ಉಪಾಧ್ಯಕ್ಷರಾದ ರಮೇಶ ರಾಠೋಡ, ಸಚಿನ್ ಕಾಂಬಳೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ತಾಲ್ಲೂಕು ಕಾರ್ಯದರ್ಶಿ ಮಹಾದೇವ ಗಾಯಕವಾಡ, ನಗರ ಘಟಕದ ಸಂಯೋಜಕ ಮಸ್ತಾನ್ ಸಾಬ್, ಕಿಟ್ಟಾ ಗ್ರಾಮ ಘಟಕದ ಅಧ್ಯಕ್ಷ ರಾಹುಲ್ ವಾಗಮಾರೆ, ಹಾರಕೂಡ ಗ್ರಾಮ ಘಟಕದ ಉಪಾಧ್ಯಕ್ಷ ಪ್ರಶಾಂತ ಗುಡ್ಡೆ, ಹಂದ್ರಾಳ (ಆರ್) ಗ್ರಾಮ ಘಟಕದ ಅಧ್ಯಕ್ಷ ಮಾರುತಿ ಮೇಕಲೆ ಪ್ರಮುಖರಾದ ಜಾವೀದ್ ಲದ್ದಾಫ್, ರಮೇಶ ಮಂಠಾಳಕರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.




