ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಡಾವಣೆಯ ಮಹಿಳೆಯರು ಮೋರಂಬಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿ, ಬಳಿಕ ಮೋರಂಬಿ ಗ್ರಾಮದ ಭಾಲ್ಕಿ-ಬಸವಕಲ್ಯಾಣ ಮುಖ್ಯರಸ್ತೆಯ ಮೇಲೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿ ನೀರಿಗಾಗಿ ಗ್ರಾಮ ಪಂಚಾಯತ್ ವಿರುದ್ಧ ಘೋಷಣೆ ಕೂಗಿದರು.
ಮಹಿಳೆಯರು ಮಾತನಾಡಿ, ʼಗ್ರಾಮದ ಎಸ್ಸಿ ಓಣಿಯಲ್ಲಿ ಸುಮಾರು 70 ಮನೆಗಳಿವೆ. ಕಳೆದ ಮೂರು ತಿಂಗಳಿಂದ ನೀರಿನ ಸಮಸ್ಯೆ ಉದ್ಭವಿಸಿದೆ, ಎರಡು ಬೋರ್‌ವೆಲ್, ಬಾವಿಗಳಿದ್ದರೂ ಮೋಟಾರ್ ವ್ಯವಸ್ಥೆ ಇಲ್ಲ. ಇದರಿಂದ ನೀರಿಗಾಗಿ ಪರದಾಟ ನಡೆಸಬೇಕಾಗಿದೆʼ ಎಂದು ದೂರಿದ್ದಾರೆ.
ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಉಂಟಾಗಿದೆ. ಮುಂದಿನ ಎರಡು ತಿಂಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೂಡಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಹೆಚ್ಚಾಗದಂತೆ ಕ್ರಮಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಬತ್ತಿದ ಬಾವಿ, ಒಣಗಿದ ಬೋರ್‌ವೆಲ್; ಟ್ಯಾಂಕರ್ ನೀರೂ ಇಲ್ಲದಿದ್ರೆ ಅಧೋಗತಿ!
ಈ ಸಂದರ್ಭದಲ್ಲಿ ಲಕ್ಷ್ಮಣ, ಗೌತಮ, ನಾಗೇಶ, ಪಾರಮ್ಮ, ನೀಲಮ್ಮ, ಅನೀತಾ, ವರ್ಷಾ, ಸುಶೀಲಾ, ಲೋಕೇಶ, ಸೂರ್ಯಕಾಂತ, ಮೋಹನ ಸೇರಿದಂತೆ ಅನೇಕರಿದ್ದರು




