ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ವೃತ್ತಿಪರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಕ್ಕ ಪಡೆ ರಾಜ್ಯ ಸಂಯೋಜಕರಾದ ಶೈನಿ ಪ್ರದೀಪ ಗುಂಟಿ ಹೇಳಿದರು.
ಬೀದರ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಅಕ್ಕಪಡೆಯು ರಾಜ್ಯ ಮಟ್ಟದಲ್ಲಿ ಬೀದರ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದನ್ನು ಹೆಮ್ಮೆ ತಂದಿದೆʼ ಎಂದರು.
ವಕೀಲರಾದ ಮಂಗಲಾ ದಾಡಿಗೆ ಮಾತನಾಡಿ, ʼಮಹಿಳೆಯರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಧ್ಯಯನ ನಡೆಸಿ ಅದರಂತೆ ನಡೆಯಬೇಕು. ಸಮಾಜದಲ್ಲಿನ ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತರಾಗಬೇಕುʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ರಂಜನಾ ಪಾಟೀಲ್ ಮಾತನಾಡಿ, ʼಮಹಿಳೆಯರ ಅಭಿವೃದ್ಧಿಗೆ ಪುರುಷರು ಸಹಕರಿಸಬೇಕು. ಹೆಣ್ಣು-ಗಂಡು ಎನ್ನದೆ ಎಲ್ಲರೂ ಕುಟುಂಬದ ಪ್ರಗತಿಗಾಗಿ ಒಟ್ಟಾಗಿ ಶ್ರಮಿಸುವುದು ಅಗತ್ಯʼ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಂಬಿಕಾ ಪಾಟೀಲ್ ಮಾತನಾಡಿ, ʼಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮೆ ಪಡಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಬತ್ತಿದ ಬಾವಿ, ಒಣಗಿದ ಬೋರ್‌ವೆಲ್; ಟ್ಯಾಂಕರ್ ನೀರೂ ಇಲ್ಲದಿದ್ರೆ ಅಧೋಗತಿ!
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕದ ಅಧಿಕಾರಿ ಡಾ.ಮೀನಾ ಗಾಯಕವಾಡ್, ಘಟಕ ಅಧಿಕಾರಿ ಸಿ.ಬಿ.ದೇವರಾಜು, ಮಾಲಾಶ್ರೀ ಮಾಳಗೆ, ಫಲಕ ಅಂಜುಮ್, ಅಂಕಿತಾ, ವಚನಾಂಬಿಕಾ, ಡಾ. ಶ್ವೇತಾ ಸರಿಕಾರ್, ಡಾ.ಶಿವಾನಂದ್ ಸಕ್ಪಾಲ್, ಡಾ.ಪ್ರವೀಣಕುಮಾರ, ವಿದ್ಯಾಸಾಗರ್, ದತ್ತು ಡೊಂಗ್ರೆ, ಶ್ವೇತಾ ಹಾಗೂ ಎಲ್ಲ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದರು. ಮಹಾದೇವಿ ಜ್ಯಾಂತೆ ನಿರೂಪಿಸಿದರು, ಅಂಬಿಕಾ ಧನರಾಜ ವಂದಿಸಿದರು.




