ಸ್ವಚ್ಛ, ಸುಂದರ, ಸದೃಢ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣದ ಹೊಣೆ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲಿದೆ ಎಂದು ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಸ್ವಚ್ಛತೆಯ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬೇಕು. ಶೈಕ್ಷಣಿಕ ಅಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು. ಯುವಶಕ್ತಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಮಾನವೀಯ ಮೌಲ್ಯಗಳ ಮಾರ್ಗದರ್ಶನ ನೀಡಿದಾಗ ಅವರು ದೇಶಕ್ಕೆ ಅಮೂಲ್ಯ ಕೊಡುಗೆಯಾಗುತ್ತಾರೆ. ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಯುವಕರು ಅರ್ಥಪೂರ್ಣ ಬದುಕು ನಡೆಸಬೇಕು” ಎಂದು ತಿಳಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷಗಳಾಗಿರುವ ಸಂದರ್ಭದಲ್ಲಿ ಈ ಅವಧಿಯಲ್ಲಿ ದೇಶ ಏನು ಸಾಧಿಸಿದೆ ಹಾಗೂ ಮುಂದಿನ ದಿನಗಳಲ್ಲಿ ಏನು ಸಾಧಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು” ಎಂದರು.

“ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಅಪಾರ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಸುರಕ್ಷಿತವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ದೇಶಭಕ್ತಿ ಗೀತೆಗಳು, ಭಾಷಣಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಲ್ಲಖಂಬ, ಲೇಜಿಮ್ ಮತ್ತು ಡಂಬಲ್ಸ್ ಪ್ರದರ್ಶನಗಳು ನೆರೆದವರನ್ನು ರೋಮಾಂಚನಗೊಳಿಸಿದವು.
ಇದನ್ನೂ ಓದಿ : ವಿ.ಕೃ. ಗೋಕಾಕ್ ಅವರ ಕತೆ | ಸಾವಿನ ಮೇಜವಾನಿ
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬಸವಲಿಂಗ ಸ್ವಾಮೀಜಿ, ಸಂಸ್ಥೆಯ ನಿರ್ದೇಶಕರಾದ ಶಶಿಧರ ಕೋಸಂಬೆ, ಚನ್ನಬಸವಣ್ಣ ಬಳತೆ, ಸೋಮನಾಥಪ್ಪ ಅಷ್ಟೂರೆ, ಪ್ರಮುಖರಾದ ಶಿವರಾಜ ಮಲ್ಲೇಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವ್ಕರ್ ನಿರೂಪಿಸಿದರು.





