ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
”Well then, just tell me yourself how, in your opinion, it would be best of all for me to die? So that it may happen most-most honourably, I mean? Tell me that.”
-Dostoevsky
*
ಅದೊ, ಮತ್ತೆ! ನಾನು ಆ ಸ್ಥಳಕ್ಕೆ ಬರುತ್ತಲೂ ದಿನಾಲು ಅದೇ ಅದೇ- ಆ ನಿಟ್ಟುಸಿರು! ಈಗ ಐದಾರು ತಿಂಗಳಿಂದಲೂ ಅದನ್ನು ಒಂದೇಸವನೆ ಕೇಳುತ್ತಲಿದ್ದೇನೆ… ಬಿಡುಗಡೆಯಿಲ್ಲದಂತೆ! ಬಹುಶಃ ಏನಿದ್ದಿರಬಹುದಾಗಿದ್ದೀತು?
ದಿನವೂ ಅದೇ ಯೋಚನೆ ನನಗೆ! ಅದನ್ನು ಕಂಡುಹಿಡಿಯಬೇಕೆಂಬ ಕುತೂಹಲ ಬಹಳ ದಿನಗಳಿಂದ- ಬಹಳ ದಿನಗಳಿಂದ ಇದೆ… ಆದರೆ? ಪುನಃ ಪುನಃ ನನ್ನನ್ನು ಕಾಡುತ್ತಿರುವುದು ಅದೇ ಪ್ರಶ್ನೆ! ಆಫೀಸಿನ ಮುಳ್ಳುಬೇಲಿಯನ್ನು ದಾಟಿ ನಾನು ಈಚೆಗೆ ಹೊರಡಬೇಕಾದರೆ ಆಗಲೆ ರಾತ್ರಿ ಹನ್ನೊಂದು ಗಂಟೆಯಾಗಿರುತ್ತದೆ. ಆಗ ಅದನ್ನೆಲ್ಲ ವಿಚಾರಿಸುತ್ತ ನಿಲ್ಲುವ ಸಮಾಧಾನ ಉಳಿದಿರುವುದಿಲ್ಲ ನನಗೆ! ಬಳಲಿದ ಮನಸ್ಸೂ, ಸೋತ ದೇಹವೂ ತೂಕಡಿಕೆ ಹಾಕುವ ಕಾಲ ಅದು!
ಒಂದು ವೇಳೆ, ಅಲ್ಲಿ ನಿಂತು ಅದನ್ನೆಲ್ಲ ಗೊತ್ತುಹಚ್ಚಬೇಕೆಂಬ ಹವ್ಯಾಸವನ್ನಿಟ್ಟುಕೊಂಡರೆ ಏನಿಲ್ಲೆಂದರೂ ಕನಿಷ್ಠ ಪಕ್ಷಕ್ಕೆ ಅರ್ಧಗಂಟೆಯಾದರೂ ಹಿಡಿದೀತು. ಆದರೆ ನಾನು ಹೊತ್ತನ್ನು, ಆ ರೀತಿಯಾಗಿ ದುಂದುವ್ಯಯ ಮಾಡಲು ಬರುವಂತಿಲ್ಲ… ಎಷ್ಟು ಮಾತ್ರವೂ ಬರುವಂತಿಲ್ಲ. ಆ ಮಾತನ್ನು ನಾನು ವಿಷಾದದಿಂದ ಒಪ್ಪಿಕೊಳ್ಳಬೇಕಾಗಿದೆ- ಒಪ್ಪಿಕೊಳ್ಳದೆ ವಿಧಿಯಿಲ್ಲ. ಮನೆಯಲ್ಲಿ ಹೆಂಡತಿಯೊಬ್ಬಳೆ ಊಟ ಎದುರಿಗಿಟ್ಟುಕೊಂಡು ನನಗಾಗಿ ಕಾದುಕೊಂಡಿರುತ್ತಾಳೆ. ಅವಳ ಮನಸ್ಸನ್ನು ಬಳಲಿಸಬಾರದು
ನಾನು… ಗೃಹಸ್ಥ ಧರ್ಮವೆ ಹಾಗೆ! ಮದುವೆಯಾದ ಮನುಷ್ಯ ಎಂದಿಗೂ… ಎಂದೆಂದಿಗೂ ಮರೆಯಲಾಗದು ತನ್ನ ಜವಾಬ್ದಾರಿಯನ್ನು!
ಹೀಗಾಗಿ ಆ ನಿಟ್ಟುಸಿರು ಪ್ರಪಂಚವನ್ನೆಲ್ಲ ಅರಿತುಕೊಳ್ಳಬೇಕೆಂಬ ಜಿಜ್ಞಾಸೆಯುಳ್ಳ ನನ್ನಂಥವನಿಗೆ ಕೂಡ ಇದುವರೆಗೆ ಅರ್ಥವಾಗದೆ ಉಳಿದುಕೊಂಡಿದೆ. ಹನ್ನೊಂದು ಗಂಟೆಗೆ ಮುಂಚೆ ನಮ್ಮ ಆಫೀಸು ಬಿಡುವಂತಿಲ್ಲ. ಹನ್ನೊಂದು ಗಂಟೆಯ ನಂತರ ನಾನು ಮನೆಗೆ ಸೇರುವುದನ್ನು ಬೇರೆ ತಪ್ಪಿಸುವಂತಿಲ್ಲ. ಎಂದಮೇಲೆ ಆ ನಿಟ್ಟುಸಿರಿನ ಕಾರಣ ನನಗೆ ಮನವರಿಕೆಯಾಗುವ ಬಗೆ ಹೇಗೆ? ಒಂದೊಂದೂ ಪೂರ್ವ ಪಶ್ಚಿಮ… ಇನ್ನು ಕೂಡುವ ದಾರಿ ಯಾವುದು?
ಇದನ್ನು ಓದಿದ್ದೀರಾ?: ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ
ಏನಾದರೂ ನಮ್ಮ ವೇಳಾ ಪತ್ರಿಕೆಯಲ್ಲಿ, ಕಾರ್ಯಕ್ರಮದ ಪಟ್ಟಿಯಲ್ಲಿ ಬದಲಾವಣೆ ನಡೆದರೆ ಮಾತ್ರ ಅದು ಸಾಧ್ಯವಾಗಬಹುದು. ಇಲ್ಲವಾದರೆ ಬಿಡಿಸಲಾಗದ ಒಂದು ಮಹಾ ಸಮಸ್ಯೆ ಆ ನಿಟ್ಟುಸಿರು… ಅಂತಃಕರಣವನ್ನು ತಳಮಳಗೊಳಿಸುವ ಆ ಬಿಸುಸುಯ್ಲು! ಅಯ್ಯೊ, ಕಿವಿದರೆದರೆ ಸಾಕು! ಅದೊ- ಮತ್ತೆ ಆ ಯಾತನೆ… ಯಮಯಾತನೆ!
2
ಉಃ, ಏನು ಉರಿವುರಿ ಆ ವರ್ಷ! ಅಂತೂ ಬಿಸಿಲ ಕುಲಿಮೆಯಿಂದ ಒಮ್ಮೆ ಬದುಕಿ ಬಂದಳು ಭೂಮಿ. ತಾಯಿ ಎನ್ನಬಹುದು! ಮಳೆ ಹಾಗೇ ನಿಃಷ್ಕರುಣವಾಗಿ ಸುರಿಯತೊಡಗಿತ್ತು. ಒಂದು ಕೈಯಲ್ಲಿ ಕೊಡೆಯನ್ನು ಹಿಡಿದು, ಇನ್ನೊಂದು ಕೈಯಿಂದ ಬಟ್ಟೆಬರೆಯನ್ನು ಸಾವರಿಸಿಕೊಂಡು ನಾನು ಅವಸರವಸರವಾಗಿ ಮನೆಯ ದಾರಿ ಹಿಡಿದಿದ್ದೆ.
ಗಾಳಿ ಹಿಗ್ಗುಮುಗ್ಗಾಗಿ ಬೀಸುತ್ತ ಕಣ್ಣುಮುಚ್ಚಾಲೆಯಾಡುತ್ತಿತ್ತು. ನುಗ್ಗಿ ನುಗ್ಗಿ ಬರುತ್ತಿದ್ದ ಆ ಮಳೆಯ ತುಂತುರು ಹನಿಯಲ್ಲಿ ಮಿಂದು ನನ್ನ ಉಡಿಗೆತೊಡಿಗೆ ಒದ್ದೆಯಾಗಿದ್ದವು. ಕತ್ತಲುಗವಿದ ಆ ಬೀದಿಯ ರೊಜ್ಜಿನಲ್ಲಿ ಲೊಚಪಚನೆ ಕಾಲನ್ನೆಳೆದುಕೊಂಡು ನಾನು ಒಂದು ಗತಿಯಿಂದ ಮುಂದುವರಿದಿದ್ದೆ. ಪಾದರಕ್ಷೆಗಳಂತೂ ಯಥಾಪ್ರಕಾರ ಬೆನ್ನಿನವರೆಗೂ ಓಕುಳಿಯನ್ನು ಸಿಂಪಡಿಸುವ ತಮ್ಮ ಪವಿತ್ರ ಕಾರ್ಯದಲ್ಲಿ ನಿರತವಾಗಿದ್ದವು… ಹೋಳಿಹುಣ್ಣಿಮೆಯ ಬಣ್ಣವನ್ನು ತಪ್ಪಿಸಿ ಬಂದುದಕ್ಕೆ ಅದು ಪ್ರಾಯಶ್ಚಿತ್ತವೊ ಏನೊ- ಯಾರು ಬಲ್ಲರು?
ನಮ್ಮ ಆಫೀಸಿನಲ್ಲಿ ಆಗಬೇಕಾಗಿದ್ದ ಹೆಚ್ಚುಕಡಿಮೆಗಳು, ಸುಧಾರಣೆಗಳು ತಮ್ಮಷ್ಟಕ್ಕೆ ತಾವೆ ನನ್ನ ಮನಸ್ಸಿನಿಂದ ಜಾರಿಹೋದವು. ನನ್ನ ಯೋಚನೆಯ ಎಳೆ ಒಮ್ಮಿಂದೊಮ್ಮೆಲೆ ಕತ್ತರಿಸಿ ಹೋದಂತಾಯಿತು. ಅವು ಏನೊ!… ”ಝಣಲ್” ಎಂದು ನನ್ನ ಎದುರಿನಲ್ಲಿಯೆ ಬಂದು ಚೆಲ್ಲಾಪಿಲ್ಲಿಯಾಗಿಬಿದ್ದವು. ಹಣ ಹಣ ಎಂದು ಪ್ರಪಂಚಕ್ಕೆ ಪ್ರಪಂಚವೆ ಹುಚ್ಚೆದ್ದು
ಕುಣಿಯುತ್ತಿರುವಾಗ ಅದೇ ಹಣವನ್ನು ಬೀದಿಗೆಸೆಯುವವರೂ ಇದ್ದಾರೆ ಎಂಬ ಮಾತನ್ನು ನಂಬುವುದಕ್ಕಾಗಲಿಲ್ಲ ನನ್ನ ಕಣ್ಣುಗಳಿಗೆ… ಪ್ರತ್ಯಕ್ಷ ಪ್ರಮಾಣಸಿದ್ಧವಾಗಿದ್ದರೂ! ನಾನು ಬೆರಗುಹೊಡೆದು ಹಾಗೆಯೆ ನಿಂತುಕೊಂಡಿದ್ದೆ.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
”ಧಡಕ್ಕನೆ” ಕದವನ್ನು ಮುಚ್ಚಿದ ಸಪ್ಪಳವಾಯಿತು. ಹ್ಹಿ ಹ್ಹಿ… ಹ್ಹಿ ಎಂದು ನಗುತ್ತ ಯಾವನೊ ಒಬ್ಬ ಅದೇ ಮನೆಯ ಬಾಗಿಲು ಕಡೆಯಿಂದ ನನ್ನ ಬಳಿಗೆ ಧಾವಿಸಿಕೊಂಡು ಬಂದು ಅಲ್ಲಿ ಚೆದುರಿ ಬಿದ್ದಿದ್ದ ರೊಕ್ಕವನ್ನು ಕತ್ತಲಲ್ಲಿಯೆ ಆಯ್ದುಕೊಳ್ಳತೊಡಗಿದ.
ನನಗೆ ಅದನ್ನೆಲ್ಲ ನೋಡಿ ದಿಗ್ಭ್ರಮೆಯಾಯಿತು. ನನ್ನ ಕುತೂಹಲ ನನ್ನನ್ನು ಅಷ್ಟಕ್ಕೇ ಸುಮ್ಮನಿರಗೊಡಲಿಲ್ಲ. ಮುಂದಕ್ಕೆ ಬಾಗಿ ಅವನನ್ನು ಮಾತನಾಡಿಸಿದೆ. ಮತ್ತೆ ಮಾತನಾಡಿಸಿದೆ… ಒಂದು, ಎರಡು, ಮೂರು ಸಲ! ಆದರೆ ಅವನೇನೂ ತನ್ನ ಮೌನದಿಂದ ಮಿಸುಗಲಿಲ್ಲ, ಜುಂಮ್ಮೆನ್ನಲಿಲ್ಲ. ತನ್ನ ಲಹರಿಯಲ್ಲಿಯೆ ತನ್ಮಯನಾಗಿಹೋಗಿದ್ದ.
ನನ್ನ ಮಾತು ಅವನಿಗೆ ಕೇಳಿರಲಾರದೆಂದು ನಾನು ಸಂಶಯಪಟ್ಟು ”ಏನಪ್ಪಾ?” ಎಂದು ಪುನಃ ಕರೆದೆ ಅವನನ್ನು! ಆಗ ಅವನು ಅದೆ ನಿದ್ದೆಯಿಂದ ಎಚ್ಚತ್ತವನಂತೆ ”ಆಂ” ಎಂದ. ”ದೀಪವನ್ನಾದರೂ ತಂದು ಹುಡುಕಬಾರದೇ?” ಎಂದು ನಾನು ಅವನಿಗೆ ಹೇಳಿದೆ. ನನ್ನ ಮಾತನ್ನು ಕೇಳಿ ಅವನು ಒಂದು ಹುಚ್ಚು ನಗೆಯನ್ನು ಬೀರಿದ, ಅಷ್ಟೆ!
”ಇದೇನು, ನನ್ನ ಮಾತಿಗೆ ನಗುತ್ತೀಯಲ್ಲ?” ಎಂದು ನಾನು ಅವನನ್ನು ಕೆಣಕಿ ನುಡಿದೆ.
”ನಗದೇ ಇನ್ನೇನು ಮಾಡಬೇಕು” ಅವನು ಪುನಃ ನಗುತ್ತಲೆ ಹೇಳತೊಡಗಿದ, ”ಅಸಲು ಹಣ ಕೈಗೆ ಬಂದಮೇಲೆ ಬಡ್ಡಿಗೇನಂತೆ- ಸಿಕ್ಕಷ್ಟು ಸಿಗಲಿ!”
ಅಸಲು ಬಡ್ಡಿ… ಅವನ ಮಾತು ನನಗೆ ಏನೊಂದೂ ಅರ್ಥವಾಗಲಿಲ್ಲ. ನಾನು ಸುಮ್ಮನೆ ನಮ್ಮ ಮನೆಯ ಹಾದಿಯನ್ನು ಹಿಡಿದೆ. ಆದರೆ ಎಂದಿಗಿಂತ ಭೀಷಣವಾದ, ದಾರುಣವಾದ ನಿಟ್ಟುಸಿರು ನನ್ನ ಕಿವಿಯನ್ನು ಹೊಕ್ಕು ಅಂತಃಕರಣಕ್ಕೆ ತಾಗಿತು. ಎಂಥ ಚಿತ್ತವೇಧಕ ನರಳಿಕೆ ಹುದುಗಿದೆ ಆ ನಿಟ್ಟುಸಿರಿನಲ್ಲಿ! ಅದನ್ನು ಕೇಳಬಾರದೆಂದು ನಾನು ಎಷ್ಟೆ ನಿಶ್ಚಯಿಸಿದ್ದರೂ ಅದನ್ನು ಕೇಳುವುದು ಬೇರೆ ಮತ್ತೂ ತಪ್ಪಲಿಲ್ಲ- ಕೊನೆಗೂ ತಪ್ಪಲಿಲ್ಲ! ನನ್ನ ನಡಿಗೆಯನ್ನು ಇನ್ನೂ ಸ್ವಲ್ಪ ಒತ್ತರಿಸಿ ನಾನು ಹಾಗೇ ಮುಂದಕ್ಕೆ ಸಾಗಿದೆ. ಉರುಳಿ ಬಿದ್ದ ರೊಕ್ಕಕ್ಕಾಗಿ ಅವನಿನ್ನೂ ಅಲ್ಲಿಯೆ ಬಗ್ಗಿಕೊಂಡು ಆ ಕೊಳಚೆಯಲ್ಲಿ ಕೈೆಯಾಡಿಸುತ್ತಲೆ ಇದ್ದ!
3
ಮರುದಿನವಂತೂ ನನಗೆ ಆಫೀಸಿನಲ್ಲಿ ಯಾವ ಕೆಲಸವೂ ಇರಲಿಲ್ಲ. ಯಂತ್ರ ಕೆಟ್ಟುಹೋಗಿ ನಮ್ಮ ಕಾರ್ಖಾನೆ ನಡೆಯಲಾರದಂತಾಗಿತ್ತು. ಕೊಳಲಿನ ಕಣ್ಣು ಕಟ್ಟಿಹೋಗಿದ್ದರೆ ಯಾವ ರಾಗ ಊದಬೇಕು? ಆ ಹೊತ್ತು ನಾನು ಆಫೀಸು ಬಿಟ್ಟಾಗ ಇನ್ನೂ ರಾತ್ರಿ ಒಂಬತ್ತು ಗಂಟೆಯಾಗಿರಲಿಲ್ಲವೆಂದು ತೋರುತ್ತದೆ. ನಿಟ್ಟುಸಿರು ಶೋಧಿಸಬೇಕೆಂಬ ನನ್ನ ಕುತೂಹಲ ಎಂದಿಗಿಂತಲೂ ಸ್ವಲ್ಪ ಹೆಚ್ಚಾಗಿಯೆ ಜಾಗ್ರತವಾಗಿತ್ತು.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
ಆ ಮನೆಯನ್ನಂತೂ ನಾನು ಹೇಗೊ ಹಿಂದಿನ ದಿನವೆ ಕಂಡುಕೊಂಡಿದ್ದೆ. ನನ್ನ ಉತ್ಸುಕತೆ ನನ್ನನ್ನು ಲಗುಬಗೆಯಿಂದ ಎಳೆದುಕೊಂಡು ಹೋಯಿತು ಆ ಮನೆಯ ಬಳಿಗೆ!… ಕದ ತೆರೆದಿತ್ತು. ಹಿಂದು ಮುಂದು ಯೋಚಿಸದೆ ಧೈರ್ಯಮಾಡಿ ನಾನು ಒಳಗೆ ಹೆಜ್ಜೆಯನ್ನಿಟ್ಟೆ. ಹೀಗೆ ಹೆಜ್ಜೆಯನ್ನಿಟ್ಟಿದ್ದೇ ತಡ- ಮುಖದಲ್ಲಿ ಒಂದು ಹುಸಿನಗೆಯನ್ನು ಕುಣಿಸುತ್ತ ಒಬ್ಬ
ಹೆಣ್ಣು ನನ್ನೆದುರು ಬಂದು ನಿಂತಳು…. ಬಣ್ಣದ ಬೀಸಣಿಕೆಯಂತೆ!
ಅದಕ್ಕೆ ಹಿಂದಿನ ದಿನ ಆ ಮಳೆಯಲ್ಲಿ ನನೆದುಹೋಗಿದ್ದರೂ ನಡುಗಿರಲಿಲ್ಲ ನಾನು! ನನ್ನ ಎದೆ ”ಧಸ್ಸೆಂದು” ಆ ಕ್ಷಣವೆ ಕುಸಿದುಹೋಯಿತು. ಎಲ್ಲಿದ್ದೇನೆಂಬುದು ನನಗೆ ಪೂರ್ತಿ ಮನವರಿಕೆಯಾಯಿತು. ಅಲ್ಲಿಂದ ಓಡಬೇಕೆಂದುಕೊಂಡೆ ನಾನು! ಆದರೆ ಕಾಲು ಕೀಳುವುದೆ ನನ್ನಿಂದಾಗಲಿಲ್ಲ. ಸುಮ್ಮನೆ ತಬ್ಬಿಬ್ಬಾಗಿ ನಿಂತುಬಿಟ್ಟೆ!
ಆಕೆ ಬಳಕುತ್ತ ”ಬರ್ರಿ” ಎಂದಳು ಒಂದು ವೈಯ್ಯಾರದಿಂದ.
ನನ್ನ ಶಕ್ತಿ ಉಡುಗಿಹೋದಂತಾಗಿ ಅಪ್ರತಿಭನಾಗಿ ನಿಂತುಬಿಟ್ಟೆ ನಾನು! ನನ್ನ ಸ್ಥಿತಿಯನ್ನು ನೋಡಿ ಅವಳಿಗೆ ತುಂಬಾ ಸೋಜಿಗವೆನಿಸಿರಬೇಕು. ಅವಳು ಹೀಗೆಯೆ ಇನ್ನೂ ಸ್ವಲ್ಪ ಹೊತ್ತು ನಿಂತು ಬಾಗಿಲನ್ನು ಮುಚ್ಚಿ ಬರಲು ಮುಂದಾದಳು. ಆಗ ನನ್ನ ಮೈಯಲ್ಲಿ ಯಾವುದೊ ಒಂದು ಆವೇಶ ತುಂಬಿದಂತಾಯಿತು. ”ಥೂ, ನೀನು… ಸೂಳೆ” ಎನ್ನುತ್ತ ಅವಳನ್ನು ಹಾಯ್ದುಕೊಂಡು ನಾನು ಅಲ್ಲಿಂದ ರಭಸವಾಗಿ ಓಡಿಬಿಟ್ಟೆ. ಮನೆಯನ್ನು ಸೇರಿದಾಗ ನನ್ನ ಮೈಯೆಲ್ಲ ಬೆವರೊಡೆದಿತ್ತು.
”ಏನು ಅಷ್ಟು ಅವಸರದಿಂದ ಬಂದಿರಲ್ಲ ಇವೊತ್ತು?” ಎಂದು ನಮ್ಮಾಕೆ ಕೇಳಿದ ಪ್ರಶ್ನೆಗೆ ನನ್ನಿಂದ ಸರಿಯಾಗಿ ಉತ್ತರ ಹೇಳುವುದಕ್ಕೂ ಆಗಲಿಲ್ಲ.
”ಒಂದು ದಿನವಾದರೂ ಬೇಗ ಬಂದು ನಿನ್ನ ನೋಡಬೇಕು, ಇಬ್ಬರೂ ಜೊತೆಯಲ್ಲಿ ಕುಳಿತು ಒಂದು ದಿನವಾದರೂ ಊಟ ಮಾಡಬೇಕು ಅಂತ ಮನಸ್ಸಾಯಿತು- ಅದಕ್ಕೆ” ಎಂದೆ ನಾನು.
”ಇದ್ದರೂ ಇದ್ದೀತು, ಪಾಪ!” ಎಂದು ಆಕೆ ಅಣಕಿಸುವ ರೀತಿಯಲ್ಲಿ ನಗುತ್ತ ಗೋಣು ತೂಗಿದಳು.
ನನ್ನ ಗುಟ್ಟು ಅವಳಿಗೂ ತಿಳಿದಿರಬಹುದೇನೊ- ಯಾರು ಬಲ್ಲರು?
ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆ | ಒಂದು ತುಂಡು ಗೋಡೆ
ಎರಡು ಮೂರು ದಿನಗಳವರೆಗೂ ನನ್ನ ಮನಸ್ಸು ತುಮುಲ ಕೋಲಾಹಲವಾಗಿತ್ತು… ಸೂಳೆಗಾರಿಕೆಯನ್ನೂ, ಅದಕ್ಕೆ ಕಾರಣವಾದ ಸಮಾಜದ ಲೋಪದೋಷಗಳನ್ನೂ ಆಲೋಚಿಸಿ ಆಲೋಚಿಸಿ ನಾನು ನಿರ್ವಿಣ್ಣನಾಗಿ ಹೋಗಿದ್ದೆ. `
”ಅದು ಅವಳ ತಪ್ಪೇ?”
ಆ ಪ್ರಶ್ನೆಗೆ ಸರಿಯಾದ, ಸಮಂಜಸವಾದ ಉತ್ತರ ನನಗೆ ಕೊನೆಗೂ ದೊರೆಯಲಿಲ್ಲ.
ಸರ್ವಜನ ಸುಖ ಸಂತುಷ್ಟಿಯನ್ನು ಪಡೆದು ನೆಮ್ಮದಿಯಾಗಿ ಬಾಳಬೇಕು ಎಂದು ನಾವು ಸುಮ್ಮಸುಮ್ಮನೆ ಆಡಿಕೊಳ್ಳುತ್ತ ಕುಳಿತುಬಿಡುವುದು ಎಂಥ ಅಪಹಾಸ್ಯ! ಅಂತಃಕರುಣ ತಳಮಳಗೊಳ್ಳುವ ನಿಟ್ಟುಸಿರು, ಬಿಸುಸುಯ್ಲು, ನರಳಿಕೆ, ಯಾತನೆ… ಎಂದು ಮುಂತಾಗಿ ಎಷ್ಟು ವಿಶೇಷಣ ಹಚ್ಚಿ ಹೇಳಿದರೂ ಏನು ಬಂತು- ಒಂದು ಅಂಶದಷ್ಟಾದರೂ ಅದನ್ನು
ನಿವಾರಣೆ ಮಾಡುವ ಮಾನವ ಹೃದಯ ಇಲ್ಲದಿದ್ದರೆ!
ಆ ದಿನದ ನನ್ನ ಪಲಾಯನ ವೃತ್ತಿಯನ್ನು ಕಂಡು ನನಗೇ ನಾಚಿಕೆಯಾಯಿತು. ನನ್ನನ್ನು ನಾನೆ ಹಳಿದುಕೊಂಡೆ, ಬೈದುಕೊಂಡೆ, ಆ ನಿಟ್ಟುಸಿರಿನ ಹಿಂದೆ ಹುದುಗಿದ್ದ ದಾರುಣ ವ್ಯಥೆಯನ್ನು ಕೇಳುವ ಔದಾರ್ಯವನ್ನು ತೋರಿಸದೆ ಓಡಿಬರುವಷ್ಟು ಕ್ಷುದ್ರವಾಗಬೇಕೆ, ನನ್ನ ಮನಸ್ಸು?
ಮುನ್ನಾರಾತ್ರಿ ನಿರ್ಧರಿಸಿದಂತೆ ನಾನು ಮರುದಿನ ಅಲ್ಲಿಗೆ ಹೋದೆ. ಎಂದಿನಂತೆ ಆ ದಿನವೂ ಬಾಗಿಲು ಮುಚ್ಚಿಯೆ ಇತ್ತು. ನಾನು ಕದವನ್ನು… ಆದರೆ?
ಅವಳು ನನ್ನನ್ನು ಕಂಡೊಡನೆಯೆ ಹಿಂದಿನ ದಿನದಂತೆ ಹುಸಿ ನಗೆಯನ್ನು ನಗಲಿಲ್ಲ. ನನ್ನೆಡೆಗೆ ತೃಷಿತ ದೃಷ್ಟಿಯನ್ನು ಬೀರಲಿಲ್ಲ, ಕಲ್ಲುಪುತ್ಥಳಿಯಂತೆ ಸುಮ್ಮನೆ ನಿಂತಲ್ಲಿಯೆ ನಿಂತುಬಿಟ್ಟಿದ್ದಳು. ಅದನ್ನು ಕಂಡು ನನಗೆ ಬಹಳ ಸಂಕೋಚವೆನಿಸಿತು. ಯಾರ ಮನಸ್ಸಾದರೂ ಸಂಕೋಚಗೊಳ್ಳಬಹುದಾದ ಸನ್ನಿವೇಶ ಅದು!
ನಾನೆ ಹಿಂದಕ್ಕೆ ಹೊರಳಿ ಹೋಗಿ ಬಾಗಿಲನ್ನು ಇಕ್ಕಿಕೊಂಡು ಬಂದೆ. ಆಗಲೂ ಕೂಡ ಅವಳು ನಿಂತ ಸ್ಥಳದಿಂದ ಎಷ್ಟೆಷ್ಟೂ ಕದಲಿರಲಿಲ್ಲ. ನನಗೆ ಇನ್ನೂ ಹೆಚ್ಚಿನ ಸೋಜಿಗವಾಯಿತು. ಅವಳ ಮುಂದುಗಡೆ ಮೆಲ್ಲಗೆ ಬಂದು ನಿಂತು ನಾನು ಮುಖದ ಕಡೆಗೆ ದೃಷ್ಟಿಯನ್ನು ಚೆಲ್ಲಿದೆ. ಕಣ್ಣೀರು ಅವಳ ಕೆನ್ನೆಗುಂಟ ದಳದಳನೆ ಇಳಿಯುತ್ತಿತ್ತು. ಏನನ್ನಾದರೂ ನೋಡಬಹುದು… ಆದರೆ ಕಣ್ಣೀರನ್ನು ನೋಡುವುದಕ್ಕಾಗುವದಿಲ್ಲ!
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
ನಾನು ಸುಮ್ಮನೆ ಹೋಗಿ ಆ ಮೂಲೆಯಲ್ಲಿದ್ದ ಮುರುಕು ಕುರ್ಚಿಯಲ್ಲಿ ಕುಳಿತುಕೊಂಡೆ. ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು- ಪ್ರಕ್ಷುಬ್ಧ ಸಾಗರದಂತೆ!
*
ತಿರುಗಿ ಮನೆಗೆ ಹೋದಾಗ ಆಗಲೆ ನಸುಕು ಹರಿದಿತ್ತು!
4
”ಏನು, ರಾತ್ರಿಯೆಲ್ಲ ಬರಬಾರದೇ?” ಎಂದು ನಮ್ಮಾಕೆ ಕಣ್ಣು ಹೊಸೆಯುತ್ತಲೆ, ಕೇಳಿದಳು… ನನ್ನ ಕಣ್ಣು ತೂಕಡಿಕೆ ಹಾಕುತ್ತಿದ್ದವು. ಮೈಯೆಲ್ಲ ಭಾರವಾಗಿತ್ತು ನನಗೆ!
”ಕೆಲಸ- ವಿಪರೀತ ಕೆಲಸ!” ಎನ್ನುತ್ತ ನಾನು ಹಾಸಿಗೆಯಲ್ಲಿ ಉರುಳಿಕೊಂಡೆ. ಅವಳು ಬಂದು ಶಾಲು ಹೊದಿಸಿ ಹೋದಳು. ಆದರೆ ನಿದ್ರೆ ಮಾತ್ರ ಬರಲಿಲ್ಲ. ಅದಕ್ಕೆ ಬದಲಾಗಿ ಮನಸ್ಸಿನಲ್ಲಿ ನೂರಾರು ವಿಲಕ್ಷಣ ಚಿತ್ರಗಳ ಪ್ರದರ್ಶನಕ್ಕಾರಂಭವಾಗಿತ್ತು… ಉಸಿರೆಳೆಯುವುದಕ್ಕೂ ಅವಕಾಶವಿಲ್ಲದಂತೆ!
ಅಯ್ಯೊ, ಎಂಥ ಬಾಳನ್ನು ಬದುಕಬೇಕಾಗಿದೆ ಅವಳು! ಅದನ್ನು ನೆನೆದರೆ ಎದೆಯ ರಕ್ತ ಹೆಪ್ಪುಗಟ್ಟಿ ಹೋಗುವುದು. ದೈವಕ್ಕೆ ಹೃದಯವಿಲ್ಲ… ದೇವರಿಗೆ ಕರುಣೆಯಿಲ್ಲ… ಕಟುಕನಿಗಿಂತ ನಿರ್ದಯಿ ಕಾಲಪುರುಷ!
ಐದು ರಾತ್ರಿ ರಕ್ತ ಮಾಂಸದ ದೇಹವನ್ನು ಮಾರಿ ತನ್ನ ಮಾನವನ್ನು ಕಃಪದಾರ್ಥವೆಂಬಂತೆ ತೂರಿಕೊಂಡರೂ ಅವಳಿಗೆ ಪ್ರತಿಫಲ ಒಂದು ರೂಪಾಯಿ ಹದಿಮೂರು ಆಣೆಗಳು ಮಾತ್ರ! ಆ ಹಣವನ್ನು ಅವಳು ಬೀದಿಗೆಸೆಯದೆ ಇನ್ನೇನು ಮಾಡಬೇಕು? ತನ್ನ ದೇಹವನ್ನೆ ಜೂಜಾಟಕ್ಕಿಟ್ಟವಳಿಗೆ ಆ ಹಣ ಅದೇನು ಮಹಾ! ಥೂ, ಅವನೆಂಥ ನಿರ್ಲಜ್ಜ ಮನುಷ್ಯನಲ್ಲ ಅವನು… ಪಶು! ತನ್ನ ಕಾಮವಾಸನೆಯನ್ನು ಹಿಂಗಿಸಿಕೊಂಡು ಅವಳ ಮುಖದ ಎದುರಿನಲ್ಲಿಯೆ ತಾನು ಕೊಟ್ಟ ಚಿಲ್ಲರೆಯನ್ನು ಆರಿಸಿಕೊಂಡನಲ್ಲ! ಅಸಲಿನ ಜೊತೆಗೆ ಬಡ್ಡಿಯಂತೆ ಅದು!
”ಚಂದ್ರಾ, ಎಂಥ ದುರವಸ್ಥೆಯೆ ನಿನ್ನದು!” ಎಂದುಕೊಳ್ಳುತ್ತ ನಾನು ಮಗ್ಗುಲಾಗಿ ಮಲಗಿಕೊಂಡೆ. ನನಗೆ ಗೊತ್ತಿಲ್ಲದಂತೆ ನನ್ನ ಕಣ್ಣು ಒದ್ದೆಯಾಗಿದ್ದವು.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
ಚಂದ್ರಾ… ಚಂದ್ರಾ ಎಂಥ ಸವಿಯಾದ ಹೆಸರು ಅದು! ಆದರೆ ಆ ಹೆಸರಿನ ಜೊತೆಗೇ ವಿರೋಧ ಕಟ್ಟಕೊಂಡಿದ್ದಾಳೆ, ಚಂದ್ರಾ! ಅದು ಎಷ್ಟು ಮಾತ್ರಕ್ಕೂ ಸೇರಿಕೆಯಿಲ್ಲ ಅವಳಿಗೆ!ಚಂದ್ರ… ಸುಂದರನಾಗಿದ್ದಾಳೆ, ನಿಜ! ಆದರೆ ಎಂಥ ಕಲಂಕ ತುಂಬಿದೆ ಅವಳ ಬಿಂಬದಲ್ಲಿ!
ಮೊದಮೊದಲೇನೊ ಅವಳ ಮದುವೆಯಾಗಿಲ್ಲವೆಂದೆ ನನ್ನ ಭಾವನೆಯಾಗಿತ್ತು. ನನ್ನ ತರ್ಕ ಸರಿಯಾಗಲಿಲ್ಲ. ಅವಳ ಬಾಯಿಂದ ಅವಳ ಕಥೆಯನ್ನು ಕೇಳಿದಾಗ ಒಂದು ಹೊಸ ಪ್ರಪಂಚವನ್ನೆ ಸುತ್ತಿ ಬಂದಂತಾಯಿತು ನನಗೆ… ಒಂದು ಅಗ್ನಿಪರೀಕ್ಷೆ ಅವಳ ಬಾಳು!
ಚಂದ್ರಾ ಜಳಕಮಾಡಿ ಮಡಿಯನ್ನುಟ್ಟುಕೊಂಡು ಶುಚಿಯಾಗಿದ್ದಳು. ಅವಳ ನೀಲವಾದ ಆ ಕುಂತಳ ರಾಜಿ ಬೆನ್ನಿನ ಮೇಲೆ ಉದ್ದವಾಗಿ ಒರಗಿಕೊಂಡಿದ್ದವು. ಅವಳ ಮದುವೆಯ ಸವಿನೆನಪಿನ ಕಟು ಅನುಭವದ ದಿನ ಅದು. ಆ ಹೊತ್ತಿಗೆ ಒಂಬತ್ತು ವರ್ಷದ ಹಿಂದೆ ಚಂದ್ರಾ ಹಸೆಮಣೆಯ ಮೇಲೆ ಕುಳಿತಿದ್ದಳು- ಮದುವಣಗಿತ್ತಿಯಾಗಿ! ಆ ದಿನವನ್ನು ಅವಳು
ಇನ್ನೂ ಮರೆತಿಲ್ಲ… ವರ್ಷ ವರ್ಷವೂ ಆಚರಿಸುತ್ತಿದ್ದಾಳೆ ಅದನ್ನು ಶ್ರದ್ಧೆಯಿಂದ!
ಭಾಗ್ಯಶಾಲಿ… ಆದರೂ ಹತಭಾಗ್ಯೆ, ಚಂದ್ರಾ.
ಅವಳಿಗೆ ತಂದೆ ಇದ್ದಾನೆ. ತಾಯಿ ಇದ್ದಾಳೆ. ಅಣ್ಣತಮ್ಮಂದಿರಿದ್ದಾರೆ. ಕೂದಲಿಗೊಂದು ಬಳಗವಿದೆ ಅವಳಿಗೆ! ಹೂವಿನಂತೆ ಎತ್ತಿ ಆಡಿಸುವ ಕರುಳ ಸಂಬಂಧ ಅವಳ ಸುತ್ತಲೂ ಹೆಣೆದುಕೊಂಡಿದೆ. ಇಷ್ಟೊಂದು ಜನ ನಂಟರಿಷ್ಟರ ನಡುವಿದ್ದರೂ ಆಕೆ ಅನಾಥೆ, ಒಂಟಿ, ಪರದೇಶಿ! ಎಂಥ ದುರ್ದೈವ ಅವಳದು!
ಆಕೆಯ ತಾಯಿ ದೇವರಿಗೆ ಹರಕೆ ಹೊತ್ತು ವ್ರತ ನಿಯಮ ಹಿಡಿದು ಬಯಸಿ ಹಡೆದ ಮುದ್ದಿನ ಕುವರಿ ಅವಳು. ಅವಳಿಗೆ ಯಾವ ನೋವೂ ವ್ಯಥೆಯೂ ಉಂಟಾಗದಂತೆ ಆ ತಾಯಿ ಸಾಕಿ ಸಲಹಿದಳು. ಇವಳ ಬೆಳಿಗೆ, ಏಳ್ಗೆ, ಕಲ್ಯಾಣದ ಮೇಲೆ ಆ ಮಾತೃ ಹೃದಯ ಕಾವು ಕೂತಿತ್ತು. ಚಂದ್ರಾ ಆ ಮಮತೆಯ ತೋಳತೊಟ್ಟಿಲಲ್ಲಿ ಸೌಂದರ್ಯಮೋಹಿನಿಯಾಗಿ ಬೆಳೆದಳು… ಸುತ್ತಲಿನ ಹತ್ತೂ ಹಳ್ಳಿಗೆಲ್ಲ ಅವಳೊಬ್ಬಳೇ ಬಿನ್ನಾಣಗಿತ್ತಿ!
ಅವಳ ಚೆಲುವಿಗೆ ಆ ಮದನೂರಿನ ಹುಡುಗ ತಕ್ಕ ವರನಲ್ಲವೆಂದು ನಿಬ್ಬಣಕ್ಕೆ ಬಂದ ಜನ ಆಡಿಕೊಂಡರು. ತನ್ನ ನುನೆಯ ಮುಂದಿ ಹಂದರ ಹಾಕಿ ಮದುವೆ ಮಾಡಿಕೊಟ್ಟು ಅಳಿಯನನ್ನೂ ಮಗಳನ್ನೂ ಕಣ್ಣು-ಪ್ರೀತಿ ಹರಿಯುವವರೆಗೆ ನೋಡಿ, ಹಿರಿಹಿರಿ ಹಿಗ್ಗಿದಳು ಆ ತಾಯಿ- ಚಂದ್ರಾನ ತಾಯಿ!
ಈಗ ಅದೆಲ್ಲವೂ ಒಂದು ಮಧುರವಾದ ಸ್ವಪ್ನದಂತೆ ಕಾಣುತ್ತದೆ ಎಂದು ಚಂದ್ರಾ ನನ್ನೆದುರು ಹೇಳುತ್ತಾಳೆ. ಹೇಳುವಾಗ ಅವಳ ಧ್ವನಿ ಕಂಪಿಸುತ್ತದೆ. ಕಣ್ಣುಗಳೆರಡೂ ಅಶ್ರು ಜಲಧಿಯಲ್ಲಿ ಮುಳುಗಿರುತ್ತವೆ!
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಹೌದು, ಚಂದ್ರಾನನ್ನು ಮದುವೆಯಾದ ಮೂರು ತಿಂಗಳಿನ ಮೇಲೆ ಗಂಡನ ಮನೆಗೆ ಕಳಿಸಿಕೊಟ್ಟರು. ಮಗಳು ಇನ್ನು ತನ್ನಿಂದ ಅಗಲಿ ಬೇರೆ ಹೋಗುತ್ತಾಳೆ ಎಂದು ಅವಳ ತಾಯಿ ಎಂಟು ದಿನಗಳಿಂದ ಊಟವನ್ನು ಕೂಡ ಸರಿಯಾಗಿ ಮಾಡಿರಲಿಲ್ಲವಂತೆ. ನಾಳೆ ಹೋಗುವುದೆಂದರೆ ಅದರ ಹಿಂದಿನ ರಾತ್ರಿ ತಾಯಿಮಕ್ಕಳಿಬ್ಬರೂ ತಬ್ಬಿಕೊಂಡು ಒಬ್ಬರೊಬ್ಬರ ತೋಳಿನಲ್ಲಿ ಬಿಕ್ಕಿದರು. ಬೆಳಿಗ್ಗೆ ಎದ್ದಾಗ ಇಬ್ಬರ ಕಣ್ಣುಗಳೂ ಊದಿಕೊಂಡಿದ್ದವು. ಚಂದ್ರಾ ಹೊರಟು ನಿಂತಾಗ ಅವಳ ತಾಯಿಗೆ ಉಕ್ಕಿಉಕ್ಕಿ ಬರುತ್ತಿದ್ದ ಆ ಕಣ್ಣೀರನ್ನು ಹಿಂದಕ್ಕೋಡಿಸುವುದಾಗಲಿಲ್ಲ!
ಈಗ ಅದನ್ನೆಲ್ಲ, ಚಂದ್ರಾ, ತನ್ನ ಮನಸ್ಸಿನಲ್ಲಿ ಮೆಲುಕುಹಾಕುವಳು. ತಾನು ಪತಿಯ ಗೃಹವನ್ನು ಸೇರಲು ಹೊರಟುನಿಂತ ಕಾಲಕ್ಕೆ ಗುರುಹಿರಿಯರು, ನಂಟರಿಷ್ಟರು ಏನೆಂದು ಹರಸಿದ್ದರು, ಅವಳನ್ನು?
”ಗೃಹಿಣಿಯಾಗಿ, ಮುತ್ತೈದೆಯಾಗಿ- ಬಾಳು!” ಅವರ ಆಶೀರ್ವಾದದ ನೆನಪು ಬಂದರೆ ಅವಳಿಗೆ ಸಾವಿರ ಚೇಳು ಕುಟುಕಿದ ಯಾತನೆ! ಇಷ್ಟೊಂದು ಜೀವಗಳನ್ನೆ ಎಳೆದೊಯುತ್ತದೆ…
ಸಾವು, ತನ್ನನ್ನೇಕೆ ನುಂಗಿಕೊಳ್ಳಬಾರದು? ಇನ್ನೂ ಯಾವ ನರಕವನ್ನು ಸವಿದುಬರಲು ತಾನು ಬದುಕಿರಬೇಕು? ಹಗಲಿರುಳು ಇದೇ ಇದೇ ಕನವರಿಕೆ ಚಂದ್ರಾನಿಗೆ!
ಅವಳಿಗೆ ಕಲಂಕ ಯಾಕೆ ಬಂತು? ಚಂದ್ರಾ ಎಂದು ಅವಳ ತಾಯಿ-ತಂದೆ ಲಲ್ಲೆಯಿಂದ ಮುದ್ದಾಡಿ ನಾಮಕರಣ ಮಾಡಿದ್ದು ತಪ್ಪಾಯಿತೇನು? ಅವಳ ಗಂಡ ಹೇಮಣ್ಣನಂತೂ ಆಕೆಯನ್ನು ತನ್ನ ಕಣ್ಣುಗೊಂಬೆಯೆಂಬಂತೆ ಗಂಡನಿಗಿರಬಹುದಾದ ಸ್ನೇಹ, ಮಮತೆ, ಕರುಣೆಗಳಿಂದ ನೋಡಿಕೊಂಡ ಜೀವನ ಮಧುಪರ್ಕವಾಗಿತ್ತು- ಈ ಹಾಲಿನ ಕಡಲಲ್ಲಿ
ಹುಳಿ ಯಾವ ಕಡೆಯಿಂದ ಬಂದು ಬೆರೆತುಕೊಂಡಿತು?
ಅಯ್ಯೊ, ಚಂದ್ರಾ!… ಅಭಿಮನ್ಯುವನ್ನು ಕೊಲ್ಲಲು ಎಷ್ಟೊಂದು ಚಕ್ರವ್ಯೂಹಗಳು! ಹೆಣ್ಣನ್ನು ಅಬಲೆಯೆಂದು ದೂಡಲು ಎಷ್ಟೊಂದು ಮೋಸ, ಎಷ್ಟೊಂದು ವಂಚನೆ, ಎಷ್ಟೊಂದು ಕ್ರೌರ್ಯ!
5
ಮದನೂರಿನಲ್ಲಿ ಬಹಳ ನೆಮ್ಮದಿಯಾಗಿ ಬಾಳಿಕೊಂಡಿದ್ದಳು, ಚಂದ್ರಾ! ಮನೆಯಲ್ಲಿ ತನ್ನ ಜೊತೆಗೆ ಗಂಡ, ಅತ್ತೆ ಇಷ್ಟೇ ಜನ! ಆಕೆ ತುಂಬ ಸುಖಿ… ಖಂಡಿತವಾಗಿಯೂ ಪುಣ್ಯಮಾಡಿ ಬಂದಿದ್ದಾಳೆ ಅವಳು! ಅತ್ತೆ ಸೊಸೆಯನ್ನು ಒಳ್ಳೇ ಮುದ್ದು ಮುದ್ದಾಗಿ ಕಂಡಳು. ಅವಳಿಗೆ ಮಗಳಿಗಿಂತ ಹೆಚ್ಚಾದ ಮಮತೆ ಸೊಸೆಯ ಮೇಲೆ! ಒಂದು ದೃಷ್ಟಿಯಲ್ಲಿ ನೋಡಿದರೆ ಆಕೆ ಚಂದ್ರಾನ ತಾಯಿಯೂ ಸರಿ! ಸ್ವತಃ ತನ್ನ ತಾಯಿಯೆ ಅತ್ತೆಯ ರೂಪದಲ್ಲಿ ಬಂದು ನಿಂತಿರುವಂತೆ ಅವಳಿಗೆ ಎಷ್ಟೊ ಸಲ ಭಾಸವಾಗಿದೆ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಆ ಮಾತನ್ನು ನನ್ನೆದುರು ಬಹಳ ವಿನಯ ಸೌಜನ್ಯ ಗೌರವಗಳಿಂದ ಆಡಿದ್ದಾಳೆ ಚಂದ್ರಾ! ಒಳ್ಳೆಯ ಜನ ಬಹಳ ದಿನ ಬದುಕುವುದಿಲ್ಲವಂತೆ! ತಮ್ಮ ಅತ್ತೆಯ ಜೀವನವನ್ನೂ ತನ್ನ ಜೀವನವನ್ನೂ ತುಲನೆ ಮಾಡಿಕೊಂಡು ಈ ಮಾತನ್ನು ಅವಳು ಈ ಹೊತ್ತಿಗೂ ಹೇಳುತ್ತಾಳೆ… ತಾನು ಈಗಾಗಲೆ ಬಹಳ ದಿನ ಬದುಕಿರುವಂತೆ ಅವಳ ಕಲ್ಪನೆ!
ಪಾಪ, ಬಟ್ಟೆ ಬರೆ ಸೆಳೆದುಕೊಂಡು ಬರಲು ಅವಳು ಬಾವಿಗಿಳಿದದ್ದೆ ತಪ್ಪಾಯಿತಂತೆ! ಯಾರಿಗೇನು ಜೋಲಿ ಹೋಗುವುದಿಲ್ಲವೆ?… ಕಾಲು ಜಾರುವುದಿಲ್ಲವೆ? ಆದರೆ ಅವಳ ಅತ್ತೆಯ ಜೀವನ ಬೇರೆ ಕಥೆಯನ್ನೆ ಹೇಳುತ್ತದೆ. ಆ ದಿನ ಕಾಲು ಜಾರಿದ್ದೇ ನೆವ! ಆ ನಂತರ ಎರಡುಮೂರು ದಿನ ತಲೆ ಸಿಡಿಯುವಷ್ಟು ಉರಿ ಕಾದವಂತೆ! ನಾಲ್ಕನೆಯ ದಿನ ಆ ಪುಣ್ಯಾತ್ಮೆ ಪ್ರಪಂಚದಿಂದಲೆ ಸಿಡಿದುಹೋದಳು!
ಹಾ ಹೊ ಅನ್ನುವುದರೊಳಗೆ ಬಂಧುಬಳಗ ಕವಿದುಕೊಂಡು ಬಂದಿತು. ಬಂದವರು ಬಂದಷ್ಟೆ ಶೀಘ್ರವಾಗಿ ತಿರುಗಿ ಹೋದರು. ಚಂದ್ರಾನ ತಾಯಿ ಮಾತ್ರ ಇನ್ನೂ ನಾಲ್ಕು ಒಪ್ಪೊತ್ತು ನಿಂತಳು ಮಗಳ ಸಮಾಧಾನಕ್ಕಾಗಿ- ಅಳಿಯನ ದುಃಖ ಶಮನಕ್ಕಾಗಿ. ಆದರೆ ಈ ಅಳು-ದುಃಖ ಕೇಳುತ್ತ ಆಕೆ ಹೀಗೆಯೆ ಎಷ್ಟು ದಿನ ಕುಳಿತುಕೊಂಡಾಳು? ಅವಳಿಗೇನು ಅನುವು ಆಪತ್ತಿಗೆ ಕಡಿಮೆಯೆ?
ಮದನೂರಿನಲ್ಲಿ ಎರಡು ತಿಂಗಳ ಕಾಲ ನಿಂತು ಆಕೆ ತಮ್ಮ ಊರಿಗೆ ಹೊರಟು ನಿಂತಳು. ಮಗಳ ಅಗಲಿಕೆಯಿಂದ ಜರ್ಝರಿತವಾಗಿದ್ದ ಅವಳ ಹೃದಯ, ಅಳಿಯನ ಉನ್ಮಾದ ವರ್ತನೆಯನ್ನು ಕಂಡು ಇನ್ನೂ ಸೀದುಹೋಗಿತ್ತು.
”ಚಂದ್ರಾ, ನಿನ್ನ ಅವಸ್ಥೆ ಏನೇ?” ಎಂದು ಅವಳು ಗೋಗರೆದು ಕಣ್ಣೀರು ಹಾಕಿದಳಂತೆ ಆ ದಿವಸ.
”ಈಗ ನನ್ನ ಅವಸ್ಥೆ ಏನಾಗಿದೆ ನೋಡಿರಿ” ಎಂದು ಚಂದ್ರಾ ತನ್ನ ಕರುಣ ಕತೆಯನ್ನು ಅಂತಃಕರುಣ ಕಲಮಲಗೊಳ್ಳುವಂತೆ ಹೇಳಿ ನನ್ನೆದುರು ಬಿದ್ದು ಬಿದ್ದು ಅಳುತ್ತಾಳೆ.
ಹೇಮಣ್ಣನ ಸ್ವಭಾವ ಒಮ್ಮಿಂದೊಮ್ಮೆಲೆ ಹಾಗೆ ವಿಚಿತ್ರವಾಗಿ ಪಲ್ಲಟವಾಗಲಿಕ್ಕೆ ಕಾರಣವೇನೊ! ನಿರ್ದಿಷ್ಟವಾಗಿ ಏನೊಂದೂ ತಿಳಿಯದು. ನಾನಾ ಜನ ನಾನಾ ತೆರನಾಗಿ ಹೇಳುತ್ತಾರೆ. ಒಬ್ಬರು ಕೊಡುವ ಕಾರಣ ಇನ್ನೊಬ್ಬರು ಹೇಳುವ ಕಾರಣಕ್ಕೆ ಎಲ್ಲಿಯೂ ಸಂಬಂಧವಾಗುವುದಿಲ್ಲ. ಬಾಯಿಯಿದ್ದವರು ತಮ್ಮ ಬಾಯಿಗೆ ಬಂದಂತೆ ಆಡಿಕೊಂಡರು. ಅದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆಯೊ ಹೇಳಲಿಕ್ಳಾಗದು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
”ನನ್ನ ದೃಷ್ಟಿಗೆ ಒಂದು ಸತ್ಯ ಹೊಳೆಯುತ್ತದೆ” ಎಂದಳು ಚಂದ್ರಾ. ಅದು ಸತ್ಯವಾಗಿರಬೇಕೆಂದು ಅವಳ ಭಾವನೆ. ಹಾಗೆಯೆ ಇದ್ದಿರಬೇಕೆಂದು ನಮ್ಮದು ಕೂಡ!
ಹೇಮಣ್ಣನ ತಂದೆಗೆ ಇಬ್ಬರು ಹೆಂಡಿರಂತೆ. ಮೊದಲನೆಯ ಹೆಂಡತಿಯನ್ನು ಹೇಮಣ್ಣನ ತಂದೆ ಏನು ಕಾರಣದಿಂದಲೊ ಬಿಟ್ಟುಬಿಟ್ಟರಂತೆ. ಆಮೇಲೆ ಲಗ್ನವಾದ ಹೆಂಡತಿಯೆ ಹೇಮಣ್ಣನ ತಾಯಿ. ಇವನ ಮಲತಾಯಿ ಈಗಲೂ ಜೀವಿಸಿದ್ದಾಳಂತೆ. ಹೇಮಣ್ಣನ ಬಗ್ಗೆ ಅವಳ ಎದೆಯಲ್ಲಿ ಇಲ್ಲದ ವಿಷ, ಇಲ್ಲದ ಈರ್ಷೆ! ಅವಳೆ ಮದ್ದು ಮಾಟ ಏನಾದರೂ ಮಾಡಿಸಿರಬೇಕು ಎಂದು ಜನ ಹೇಳುತ್ತಾರೆ.
ಅದೇನು ಕತೆಯೊ, ಅದನ್ನೆಲ್ಲ ಯಾರು ಬಲ್ಲರು? ಆದರೆ ಇಷ್ಟು ಮಾತ್ರ ನಿಜ! ಹುಚ್ಚಿಗೆ ಸಮೀಪವಾದ ವರ್ತನೆ ಹೇಮಣ್ಣನಲ್ಲಿ ಕಾಣತೊಡಗಿತ್ತು. ಮಾತುಕತೆಯೆಲ್ಲ ಅಸಂಬದ್ಧ! ನಡೆನುಡಿಯಲ್ಲಿ ತಾಳ-ಲಯ ಏನೊಂದೂ ಕೇಳಬಾರದು!
”ಹೇಮಣ್ಣ, ನಿನಗೇನು ಹುಚ್ಚುಗಿಚ್ಚೊ?” ಎಂದು ಯಾರಾದರೂ ಅವನನ್ನು ಕೇಳಿದರೆ ಸಾಕು, ಅವರನ್ನೆ ಹುಚ್ಚ ಎಂದು ಮೂದಲಿಸುತ್ತಾನೆ ಅವನು. ಹುಚ್ಚರಿಗೆ ಜಗತ್ತೆಲ್ಲವೂ ಹುಚ್ಚರಂತೆ ಕಾಣುತ್ತದೆ ಎಂದು ಹೇಳುತ್ತಾರೆ. ಆ ಮಾತಿಗೆ ಸಾಕ್ಷಿ ಹೇಮಣ್ಣನೇನೊ!
ಚಂದ್ರಾನ ಜೀವನದಲ್ಲಿ ದುಃಖದಾಯಕವಾದ ಕಾಲ ಅದು… ಆದರೂ ಆ ಜೀವನದಲ್ಲಿ ಆನಂದನಿತ್ತು ಎನ್ನುತ್ತಾಳೆ, ಚಂದ್ರಾ! ಗಂಡನನ್ನು ಎದುರಿಗಿಟ್ಟುಕೊಂಡು ಎಂಥ ಸಿಡಿಲ ಆಘಾತವನ್ನಾದರೂ ಸಹಿಸಿಕೊಳ್ಳಬಹುದಂತೆ!
ಆಗ ಹತ್ತೂ ನಿಟ್ಟಿನಿಂದ ಸಂಕಟ ಅವಳಿಗೆ! ಇಬ್ಬರ ಅನ್ನ ತಾನೊಬ್ಬಳೆ ಸಂಪಾದಿಸಬೇಕು. ಆಳನ್ನು ಕಟ್ಟಿಕೊಂಡು ಹೊಲಮನೆಯ ಬದುಕನ್ನು ನೋಡಿಕೊಳ್ಳಬೇಕು. ಮನೆಯ ಗಂಡು ಹೆಣ್ಣು- ಎರಡೂ ಅವಳೊಬ್ಬಳೆ!
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಇನ್ನು ಇದರ ಸಂಗಡವೆ ಗಂಡನ ಯೋಗಕ್ಷೇಮ ನೋಡಿಕೊಳ್ಳಬೇಕು. ಅವನ ಹುಚ್ಚನ್ನು ನಿವಾರಣೆಗೊಳಿಸಲು ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನು ನಡಸಬೇಕು. ಹುಚ್ಚಿನವರ ಸಹವಾಸ ಸಿಡಿಗುಂಡಿನ ಸ್ನೇಹವಿದ್ದಂತೆ! ಮೈಮೇಲಿನ ಸ್ಮರಣೆ ತಪ್ಪಿ ಹುಚ್ಚು ಯಾವಾಗ ಬಂದೀತೋ ಹೇಳಲಿಕ್ಕಾಗದು. ಅವರ ಜೊತೆಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವೆಲ್ಲ ಬಹಳ ನಾಜೂಕು!
ಇವೆಲ್ಲ ಸಂಕಷ್ಟಗಳಲ್ಲಿಯೂ ಚಂದ್ರಾ ಹೇಗೊ ಧೈರ್ಯ ತಂದುಕೊಂಡಿದ್ದಳು. ಅವಳು ಎಲ್ಲಿಯೊ ಚಿಕ್ಕಂದಿನಲ್ಲಿ ವಿಷ್ಣುವಿನ ಮೋಹಿನಿ ಅವತಾರದ ಕತೆಯನ್ನು ಬಯಲಾಟದಲ್ಲಿ ನೋಡಿರಬೇಕು. ”ಈ ಹಾಲಾಹಲ ಮುಗಿದಮೇಲೆ ಅಮೃತ ಸೃಷ್ಟಿಯಾಗಲೆಬೇಕು” ಎಂದು ಆಕೆ ತನ್ನ ವಿದೀರ್ಣವಾದ ಮನಸ್ಸಿಗೆ ಸಂತತವೂ ಸಮಾಧಾನ ಹೇಳುತ್ತಿದ್ದಳಂತೆ.
6
ಅದೇನೊ, ಆ ಮಾತು ಆ ಕಡೆ ಇರಲಿ. ಅವಳನ್ನು ಆ ಕಾಲಕ್ಕೆ ಒಂದು ಭಯ ಸಣ್ಣಗೆ ತಿನ್ನತೊಡಗಿತ್ತು. ಅದೇನೊ ಸುಳ್ಳಲ್ಲ. ವಾದವಿಲ್ಲದ ಸಂಗತಿ ಅದು! ಹಿಂದೆ ತೋಟದ ದುರಸ್ಥಿ
ನಡೆಯಬೇಕಾಗಿತ್ತು. ಆ ಸಂಬಂಧವಾಗಿ ಅವರ ಮಾವ ಕೊಯ್ದ ಸಾಲ ಇನ್ನೂ ಹಾಗೇ ಇದೆ. ಅದು ದಿನದಿನಕ್ಕೆ ಭಾರವಾಗುತ್ತ ನಡೆಯುವ ವಸ್ತು. ಸಾಲವನ್ನಿಟ್ಟುಕೊಂಡು ಬದುಕುವುದೆಂದರೆ ಹಾವಿನ ನೆರಳಲ್ಲಿ ವಾಸಮಾಡಿಕೊಂಡಿದ್ದಂತೆ. ಯಾವಾಗ ಕಚ್ಚೀತೊ ಹೇಳಲಿಕ್ಳಾಗದು!
ಚಂದ್ರಾ ಇದನ್ನೆಲ್ಲ ಚೆನ್ನಾಗಿ ಗ್ರಹಿಸಿದ್ದಳು. ಅದಕ್ಕೆಂತಲೆ ಆಕೆ ಸಾಲ ಮುಟ್ಟಿಸಿ ಋಣಮುಕ್ತಳಾಗಬೇಕೆಂದು ಹಗಲುರಾತ್ರಿಯೆನ್ನದೆ ದೇಹ ಸವೆಸಿ ದುಡಿಯುತ್ತಿದ್ದಳು. ಆಗ ಏನು ಉತ್ಸಾಹ ತುಂಬಿತ್ತು ಅವಳಲ್ಲಿ! ತಾನೆ ತೋಟದ ಬೆಳೆಯನ್ನು ಸಂತೆಗೆ ಹೊತ್ತು ಸ್ವತಃ ಮಾರಿ ಬರುವಳು. ಅರ್ಧ ಸಾಲವನ್ನು ಪರಿಹರಿಸಿದ ಸಂತೃಪ್ತಿ ಅವಳ ಮುಖದಲ್ಲಿ ಬರೆದಿತ್ತು. ಮುಂದಿನ ಜೀವನದ ಸುಖಮಯ ಸ್ವಪ್ನಗಳನ್ನು ಆಕೆ ಆಗಲೆ ಮನಸ್ಸಿನಲ್ಲಿ ನೆಯ್ಯತೊಡಗಿದ್ದಳು!
ಅವಳ ಹಾರೈಕೆಯಂತೆ ಹೇಮಣ್ಣನ ಹುಚ್ಚು ಮಾತ್ರ ಇಳಿಮುಖವಾಗಲಿಲ್ಲ. ದಿನಕ್ಕೊಂದು ಹಂತದಂತೆ ಅದು ಇನ್ನೂ ಏರತೊಡಗಿತು. ಸುತ್ತುಮುತ್ತು ಎಡಬಲದಲ್ಲಿ ತನಗೆ ಗೊತ್ತಿರಬಹುದಾದ ಎಲ್ಲ ಚಿಕ್ಕ ದೊಡ್ಡ ದೇವರುಗಳಿಗೆ ಆಕೆ ಮುಡಿಪು ಕಟ್ಟಿದಳು. ಅವಳ ಗುಡ್ಡದವರೆಗೆ ‘ದಿಂಡರಿಕೆ’ ಹಾಕುವುದಾಗಿ ಅವಳು ಎಲ್ಲಮ್ಮನಿಗೆ ಹರಕೆ ಹೊತ್ತಳು.
ಆದರೆ ಅವಳ ಬಿನ್ನಹವನ್ನು ಯಾವ ದೇವತೆಯೂ ಮನ್ನಿಸಿದಂತೆ ಕಾಣಲಿಲ್ಲ. ಅವಳ ಕೂಗು ಅರಣ್ಯರೋದನ!
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ನಾನು ಇನ್ನು ಹೇಳಬೇಕಾಗಿರುವ ಮಾತನ್ನು ನನ್ನೆದುರು ತೋಡಿಕೊಳ್ಳುವಾಗ ಚಂದ್ರಾ ಮನಸ್ಸಿಗೆ ಬಹಳ ಖಿನ್ನ ಮಾಡಿಕೊಂಡಳು. ಅವಳ ಧ್ವನಿಯಲ್ಲಿ ರೋದನೆ ಶೃತಿಯಾಡತೊಡಗಿತ್ತು. ಆ ಹೊತ್ತು ಸಂತೆಯನ್ನು ಮುಗಿಸಿ ಚಂದ್ರಾ ತನ್ನ ಊರಿಗೆ ಹೊರಟು ನಿಲ್ಲುವ ಹೊತ್ತಿಗೆ ಸಂಜೆ ಇಣಿಕಿತ್ತು. ಗೋಕಾಕದಿಂದ ತನ್ನ ಊರು ಸೇರಬೇಕಾದರೆ ಅವಳು ಏಳು ಮೈಲು ನಡೆದು ಹೋಗಬೇಕು. ಜೊತೆಗೆ ಭಾರವಾದ ಬುಟ್ಟಿ… ಮನೆತನದ ಸಾಮಗ್ರಿಯೆಲ್ಲ ಅದರಲ್ಲಿ! ಮೈಲೆರಡು ಮೈಲಿ ಹೋಗಿರಬಹುದು ಆಕೆ! ಸವಾರಿ ಗಾಡಿಯೊಂದು ‘ಗಿಲ್’ ‘ಗಿಲ್’ ಎಂದು ಒಂದು ಗತ್ತಿನಲ್ಲಿ ಧ್ವನಿಗೈಯ್ಯುತ್ತ ಅವಳ ಹಿಂದಿನಿಂದ ಬಂದಿತು. ಗಾಡಿಯನ್ನು ತರುಬಿ ಯಾರೊ ಕೂಗಿದರು. ಚಂದ್ರಾ ಹಿಂತಿರುಗಿ ನೋಡಿದಳು. ಅದು ಅವರ ಊರಿನ ಶೆಟ್ಟರ ಗಾಡಿ. ಅವರಿಗೆ ಸಾಲಕೊಟ್ಟ ಸಾಹುಕಾರರದು. ಚಂದ್ರಾ ಯೋಚನೆಗೊಳಗಾದಳು. ‘ಅನುಮಾನಿಸ್ತೀ ಯಾಕೆ? ಬಾ ಬಾ, ಕತ್ತಲಾಯ್ತು?’ ಎಂದ ಆ ಗಾಡಿಯಲ್ಲಿದ್ದ ಮನುಷ್ಯ. ಅವಳು ಹೋಗಿ ತನ್ನ ಬುಟ್ಟಿಯನ್ನಿಟ್ಟುಕೊಂಡು ಗಾಡಿಯಲ್ಲಿ ಕುಳಿತಳು.
ಆ ಶೆಟ್ಟರ ಹುಡುಗನ ಬಗ್ಗೆ ಚಂದ್ರಾನಿಗೆ ಎಂದಿನಿಂದಲೂ ಸಂಶಯ. ಈಗ ಅವನಿಗೆ ಹೆಂಡತಿ ಬೇರೆ ಇಲ್ಲ. ಹುಮ್ಮಸ್ಸಿನಿಂದ ಹೊರಟ ಗಾಡಿ ಆಗಲೆ ನಿದಾನವಾಗಿ ನಡೆದಿತ್ತು. ಆ ಈ ಮಾತನ್ನು ಅವನು ಹರಟೆಗೆತ್ತಿಕೊಂಡು ತನ್ನ ಸ್ನೇಹಿತನಾದ ಹೇಮಣ್ಣನ ಪಾಡನ್ನು ಕುರಿತು ಅವಳೆದುರು ನಾಲ್ಕು ಕನಿಕರದ ಕಣ್ಣೀರನ್ನು ಸುರಿಸಿದ.
ದಾರಿ ಮೊದಲೆ ಸ್ವಲ್ಪ ಕಡಿದು. ಇನ್ನು ಹಿಂಬದಿಗಂತೂ ಮೂಲೆ ಭಾರವಾಗಿತ್ತು. ಎತ್ತಿನ ಕೊರಳು ಹಾರತೊಡಗಿದವು. ‘ಮುಂದಕ್ಕೆ ಬಾ’ ಎಂದ ಅವನು. ಅವಳು ಸ್ವಲ್ಪ ಸರಿದುಕೊಂಡಳು. ಆಗ ಅವನು ‘ಇನ್ನೂ ಸ್ವಲ್ಪ’ ಎಂದ. ಎತ್ತಿಗೆ ಹಗುರಾಯಿತು… ಆದರೂ ‘ದಡುಕು’. ಇಬ್ಬರ ಮೈಯೂ ಒಂದಕ್ಕೊಂದು ತಾಗಿದಾಗ ಎಂಥ ವಿದ್ಯುತ್ಸಂಚಾರ
ಅದು!
”ಎಷ್ಟು ದಿನದಿಂದ ಈ ಆಸೆ ಇತ್ತು ಬಲ್ಲೆಯಾ?” ಎಂದ ಶೆಟ್ಟಿ. ಚಂದ್ರಾ ಮನಸ್ಸಿಲ್ಲದ ಮನಸ್ಸಿನಿಂದ ಅವನ ತೋಳಿನಲ್ಲಿ ಸೆರೆಯಾಗಿದ್ದಳು. ಆಕೆ`ಗಾಡಿಯಿಂದಿಳಿದು ತನ್ನ ಮನೆಗೆ ಹೊರಡಲು ಅಣಿಯಾಗುತ್ತಿರುವಾಗ ಅವನು ಬಳಿಗೆ ಬಂದು ಅವಳ ಗಲ್ಲ ಹಿಡಿದು ‘ನೆನಪಿರಲಿ’ ಎಂದನಂತೆ.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
”ನನ್ನ ದುರ್ಗತಿ ಆರಂಭವಾದ ಆ ಹಾಳು ದಿನದ ನೆನಪು ಎಂದಿಗೆ ಹೋದೀತಣ್ಣ” ಎಂದು ಚಂದ್ರಾ ಕಂಬನಿದುಂಬಿ ಗದ್ಗದಿಸಿ ಹೇಳುತ್ತಾಳೆ ನನ್ನೆದುರು! ಒಂದಿಲ್ಲೊಂದು ನೆವವನ್ನು ಮುಂದೆ ಮಾಡಿಕೊಂಡು ಆ ಶೆಟ್ಟಿ ಅಂದಿನಿಂದ ತೋಟಕ್ಕೆ ಮನೆಗೆ ಬಂದು ಹೋಗತೊಡಗಿದ. ಜೀವನದಲ್ಲಿ ಒಮ್ಮೆ ಜಾರಿದಳು ಚಂದ್ರಾ!
ಮಗಳ ಯೋಗಕ್ಷೇಮವನ್ನು ವಿಚಾರಿಸದೆ ಬಹಳ ದಿನವಾಯಿತೆಂದು ಅವಳ ತಾಯಿ ಆ ಸುಮಾರಕ್ಕೆ ಮದನೂರಿಗೆ ಬಂದಳು. ಮಗಳ ಚಾತುರಿಯನ್ನು, ವ್ಯವಹಾರ ಕುಶಲತೆಯನ್ನು ಕಂಡು ಅವಳಿಗೆ ಹೊಟ್ಟೆ ಹಿಡಿಸಲಾರದಷ್ಟು ಸಂತೋಷ! ತಿರುಗಿ ಊರಿಗೆ ಹೊರಟಾಗ್ಗೆ ತಾಯಿ ಮಗಳನ್ನು ಕರೆದು ಅವಳ ಕಿವಿಯಲ್ಲಿ ಹಿತವಚನ ಹೇಳಿದಳಂತೆ: ‘ಹಿರಿಯರಿಲ್ಲದ ಮನೆ ನಮ್ಮವ್ವ, ಹುಟ್ಟಿದ ಮನೆಗೆ ಕೀರ್ತಿ, ಕೊಟ್ಟ ಮನೆಗೆ ಮರ್ಯಾದೆ- ಬರಬೇಕು, ತಾಯಿ, ನಿನ್ನಿಂದ!’
ತಮ್ಮ ತಾಯಿಯ ಮಾತನ್ನು ನೆನೆದುಕೊಂಡು ಚಂದ್ರಾ ಬಿಕ್ಕಿ ಬಿಕ್ಕಿ ಅಳುತ್ತಾಳೆ ಈಗಲೂ! ತನ್ನಿಂದ ತಾಯಿ-ತಂದೆಗಳ, ಗಂಡ-ಮಾವಂದಿರ ವಂಶಕ್ಕೆ ಎಂಥ ಕೀರ್ತಿ? ‘ಅಯ್ಯೊ, ಚಂದ್ರಾ! ನೀನು ಹುಟ್ಟದೆ ಇದ್ದಿದ್ದರೆ ಏನು ಅನರ್ಥವಾಗುತ್ತಿತ್ತು, ಈ ಪ್ರಪಂಚದಲ್ಲಿ?’ ಏಂದು ಆಕೆ ತನ್ನನ್ನು ಹಗಲಿರುಳು ಶಪಿಸಿಕೊಳ್ಳುತ್ತಾಳೆ.
7
ತಾಯಿಯ ಉಪದೇಶ ಚಂದ್ರಾನನ್ನು ಮೇಲಿಂದ ಮೇಲೆ ಎಚ್ಚರಿಸುತ್ತಿತ್ತು. ಅನುಚಿತಕ್ಕೆ ತೊಡಗಿದಾಗ ಅದು ಯಾವಾಗಲೂ ಎದುರಿಗೆ ಬಂದು ನಿಲ್ಲುತ್ತಿತ್ತು. ಪಾಪ-ಪುಣ್ಯಗಳ ನಡುವೆ ಅವಳ ಜೀವದ ಜೋಕಾಲಿ ತೂಗತೊಡಗಿತ್ತು. ಹೃದಯ ಸದಾಕಾಲ ವಿವೇಕವನ್ನು ಬೋಧಿಸಿದರೂ ರಾತ್ರಿ ಆ ಶೆಟ್ಟಿ ಬಂದು ಕದವನ್ನು ಬಡಿದಾಗ ಕಾಲು ಅವಳನ್ನು ಸುಮ್ಮನೆ ಬಾಗಿಲಿಗೆ ಎಳೆದುಕೊಂಡು ಹೋಗುವುವು! ಈ ರೀತಿಯಾಗಿ ದಿನದ ಮೇಲೆ ದಿನ ಕರಗಿ ಹೋಗತೊಡಗಿದವು. ಗುಸುಗುಸು ಎಂದು ಹಿಂದೆಮುಂದೆ ಆಡಿಕೊಳ್ಳುತ್ತಿದ್ದ ಜನ ಈಗ ಎದುರಿಗೇ ಪ್ರಾರಂಭ ಮಾಡಿದರು. ಸುದ್ದಿಯಂತೂ ಕರ್ಣಾಕರ್ಣಿಯಾಗಿ ಹಬ್ಬಿಹೋಯಿತು. ಮದನೂರಿನ ತುಂಬೆಲ್ಲ ಅದೇ ಮಾತು! ಈ ಸಂಗತಿಯನ್ನು ಕೇಳಿದಾಗ ಚಂದ್ರಾನ ತಾಯಿಗೆ ಜೀವ ನಡುನೆತ್ತಿಯಿಂದ ಹಾರಿಹೋದಂತಾಯಿತು. ‘ಇನ್ನೂ ಬದುಕಿರಬೇಕೆ, ಹಾಳುರಂಡೆ? ಸತ್ತುಹೋದರೆ ಒಂದು ನಿಶ್ಚಿಂತೆ!’ ಎಂದು ಉಸಿರ್ಗರೆದಳಂತೆ ಅವಳು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಆಗಲೆ ಸತ್ತುಹೋಗಿದ್ದರೆ ತನ್ನ ಕರ್ಮದ ಕಥೆ ಇಷ್ಟೊಂದು ಉದ್ದವಾಗಿ ಬೆಳೆಯುವುದಾದರೂ ತಪ್ಪಿ ಹೋಗುತ್ತಿತ್ತು ಎಂದು ಚಂದ್ರಾ ಗಂಟಲಲ್ಲಿ ಕಣ್ಣೀರು ನುಂಗಿ ಹೇಳಿದಳು. ಇದ್ದ ಒಬ್ಬ ಮಗಳು ಸತ್ತುಹೋದಳೆಂದು ಅವಳ ತಾಯಿ ಆಗಲೆ ಮನಸ್ಸನ್ನು ಕಲ್ಲು ಮಾಡಿಕೊಂಡುಬಿಟ್ಟಳಂತೆ. ”ಜನ ಏನೆಂದುಕೊಳ್ಳುತ್ತಾರೆ, ಕೇಳಿದಿರಾ!” ಎಂದು ಚಂದ್ರಾ ಒಂದು ರಾತ್ರಿ ಮೆಲ್ಲಗೆ ಶೆಟ್ಟಿಯ ಕಿವಿಯಲ್ಲಿ ಕೇಳಿದಳು. ಶೆಟ್ಟಿ ಸುಮ್ಮನೆ ನಕ್ಕ ಆ ಮಾತಿಗೆ! ಪುನಃ ‘ಕೇಳಿದಿರಾ?’ ಎಂದಳು ಚಂದ್ರಾ! ‘ಕೇಳಿ ಮಾಡುವುದೇನು’ ನಗುತ್ತಲೆ ಹೇಳಿದ ಶೆಟ್ಟ, ‘ನಿನಗೆಲ್ಲಾ
ಅಷ್ಟೊಂದು ಯೋಚನೆ ಯಾಕೆ ಬಿಡು! ಅನ್ನುವವರು ಸಾವಿರ ಅನ್ನುತ್ತಾರೆ. ಯಾರ ಗೊಡವೆ ನಮಗೇನು? ನನಗೆ ಹೆಂಡತಿಯಿಲ್ಲ- ನಿನ್ನ ಪಾಲಿಗಂತೂ ಗಂಡ ಎಂದೊ ಸತ್ತುಹೋಗಿದ್ದಾನೆ. ಜೀವ ದುಂದು ಮಾಡಿದರಾಯಿತು… ಶೆಟ್ಟಿ ಇನ್ನೂ ಮಾತು ಮುಗಿಸಿರಲಿಲ್ಲ. ಹ್ಹಾ! ಮೊನೆಯಾದ ಕೊಡಲಿ ಹಿಂದಿನಿಂದ ಬೀಸಿಬಂದು ಅವನ ತಲೆಯಲ್ಲಿ ಕಚ್ಚನೆ ಸಿಕ್ಕಿಕೊಂಡಿತು!
ಯಾವ ಸುಖವನ್ನು ಉಣ್ಣುವುದಕ್ಕಾಗಿ ಆ ದಿವಸ ತಲೆ ತಪ್ಪಿಸಿಕೊಂಡು ಬಂದೆ ಎನ್ನುತ್ತಾಳೆ ಚಂದ್ರಾ! ಗಂಡನ ಕೈಯಿಂದ ಮರಣವನ್ನು ಪಡೆದು ಗಂಡನ ಎದುರಿನಲ್ಲಿ ಕಣ್ಣು ಮುಚ್ಚಿದ್ದರೆ ಎಂಥ ಪುಣ್ಯ, ಎಂಥ ಸೌಭಾಗ್ಯ ಅದು! ಆ ಕೊಡಲಿಯ ಮೊನೆಗಿಂತ ಹರಿತನಾದ ಕರ್ಕಶವಾದ ಆಘಾತಗಳನ್ನು ಸಹಿಸಬೇಕಾಗಿದೆ ಅವಳಿಂದು!… ”ಅಲ್ಲವೆ ಅಣ್ಣ?” ಎಂದು ಚಂದ್ರಾ ನನ್ನನ್ನು ಅಲುಗಿಸಿ ಕೇಳುತ್ತಾಳೆ, ಏನು ಹೇಳಲಿ ಅವಳಿಗೆ ನಾನು? ಆ ದಿವಸ ಅವಳು ಜೀವದ ಮೇಲೆ ಅಸೆಯನ್ನಿಟ್ಟುಕೊಂಡು ಆ ಸ್ಥಳದಿಂದ ಏತಕ್ಕೆ ಪಾರಾಗಿ ಹೋದಳೆಂಬುದನ್ನು ಸ್ವತಃ ಚಂದ್ರಾ ಇಂದಿಗೂ ಸರಿಯಾಗಿ ಹೇಳಲಾರಳು.
ಮರುದಿನ ಹೇಮಣ್ಣ ಆ ರಕ್ತಮಯ ಕೊಡಲಿಯನ್ನು ಹಿಡಿದುಕೊಂಡು ಊರಲ್ಲೆಲ್ಲ ಸುತ್ತಿ ಬಂದನಂತೆ! ನೆರೆಮನೆಯಲ್ಲಿ ಅವಿತುಕೊಂಡು ಚಂದ್ರಾ ಇದನ್ನೆಲ್ಲ ಕೇಳಿದಳು, ತನ್ನ ಬಾಳುವೆ ಎಲ್ಲಿಗೆ ಬಂದು ಹತ್ತಿತಲ್ಲ ಎಂದು ಆಕೆ ಆ ಮನೆಯ ಮುದುಕಮ್ಮನ ಎದುರಿಗೆ ಅತ್ತಳಂತೆ. ಎಷ್ಟು ಅತ್ತು ಎಷ್ಟು ಕರೆದರೇನು ಅವಳಿಗೆ ತನ್ನ ಉದ್ಧಾರದ ಹಾದಿ ಕಾಣಲಿಲ್ಲ.
ಮುಗಿಲು ಹರಿದು ಮೈಮೇಲೆ ಬಿದ್ದಂತಾಗಿತ್ತು ಅವಳಿಗೆ!
ಮಧ್ಯಾಹ್ನಕ್ಕೆ ಪೊಲೀಸರು ಬಂದು ಹೇಮಣ್ಣನನ್ನು ಕೈದು ಮಾಡಿಕೊಂಡು ಹೋದರು. ಇನ್ನು ಚಂದ್ರಾ ಆ ಊರಿನಲ್ಲಿ ಯಾರಿಗೆ ಮುಖ ತೋರಿಸಬೇಕು? ಯಾರು ಕಂಡರೂ ಛೀ ಥೂ ಎನ್ನುವವರೆ! ಆ ಮುದುಕಿ ಇಲ್ಲದಿದ್ದರೆ ಈಕೆ ಏನಾದರೂ ಅಪಾಯಕ್ಕೆ ತುತ್ತಾಗುತ್ತಿದ್ದಳೊ ಏನೊ! ಹಗಲು ರಾತ್ರಿ ತನ್ನ ಕಣ್ಣೆದುರಿಗೆ ಕುಳ್ಳಿರಿಸಿಕೊಂಡು ಆ ಮುದುಕಿ ಧೈರ್ಯ ಹೇಳಿದಳಂತೆ. ಮೂರು ದಿನದ ಶಿಕ್ಷಣ ಪಡೆದ ಮೇಲೆ ಚಂದ್ರಾ ಅವಳ ಮಾತಿಗೆ ಸಮ್ಮತಿಸಿದಳು. ಅವಳ ಕಣ್ಣೆದುರಿಗೆ ಆ ಮುದುಕಿ ಕಾಮನ ಬಿಲ್ಲಿನ ಬಣ್ಣ ಹೆಣೆದಿದ್ದಳಂತೆ!
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ಯಾರ ಕಣ್ಣಿಗೂ ಬೀಳದಂತೆ ಸ್ಥಳ ಬಿಡಬೇಕೆಂದು ಮುಂಚಿತವಾಗಿಯೆ ನಿರ್ಧಾರವಾಗಿತ್ತು. ಅದರಂತೆಯೆ ರಾತ್ರಾರಾತ್ರಿ ಊರನ್ನು ಬಿಟ್ಟು ಆ ಮುದುಕಿಯೊಂದಿಗೆ ಹೊರಟುಬಂದಳು ಚಂದ್ರಾ… ಸರೋವರ ಸಾಲದೆಂದು ಸಮುದ್ರಕ್ಕೆ ಜಿಗಿದಿತ್ತು ಅವಳ ಮನಸ್ಸು! ಅಂದಿನಿಂದ ಅವಳ ಜೀವನದಲ್ಲಿ ಒಂದು ನೂತನವಾದ ಅಧ್ಯಾಯ
ಪ್ರಾರಂಭವಾಯಿತು!
8
ಇವಳಂಥ ಹೆಣ್ಣು ಎಷ್ಟು ಜನ ಅಲ್ಲಿ! ಅವರು ನಡೆಸಿರುವ ದೇಹಕ್ಷಯವನ್ನು ಕಂಡು ‘ಇಶ್’ ಎಂದಳು ಚಂದ್ರಾ! ತನಗೂ ಇಂದು ನಾಳೆ ಅದೇ ‘ಸೋಬತಿ’ ಕಾದಿದೆಯೆಂದು ಅವಳಿಗೆ ಹೇಗೆ ಗೊತ್ತು? ಹೊಸ ಮಾಲು ಪೇಟೆಗೆ ಬಂದರೆ ಜನ ಮುಗಿದುಬೀಳುತ್ತಾರೆ. ಕಚ್ಚಾಡುತ್ತಾರೆ. ಈಗ ಆಗ ಎನ್ನುವಷ್ಟರಲ್ಲಿ ಅದು ಇತ್ತೊ ಇಲ್ಲವೊ ಎನ್ನುವಂತಾಗಿಬಿಡುತ್ತದೆ. ಗಿರಾಕಿಗಳು ನಾ ಮೊದಲು ನೀ ಮೊದಲು ಎಂದು ಎಡತಾಕತೊಡಗಿದರು. ಚಂದ್ರಾನ ಮಾನ ಲಿಲಾವಿನ ತಕ್ಕಡಿಯಲ್ಲಿ ತೂಗತೊಡಗಿತ್ತು. ಬೆಲೆ ಏರಿತು, ಏರಿತು! ಆದರೂ ಅದು ಅವಳ ಚೆಲುವಿಗೆ ಒರೆ ಹಚ್ಚುವ ಬೆಲೆಯಂತೂ ಅಲ್ಲವೆ ಅಲ್ಲ!
ಅಂತೂ ಒಮ್ಮೆ ಚಂದ್ರಾ ತನ್ನ ದೇಹವನ್ನು ಮಾರಾಟಕ್ಕೆ ಹಚ್ಚಬೇಕಾಯಿತು. ಅದರಂತೆ ಆಕೆ ಹಚ್ಚಿಬಿಟ್ಟಳು. ಬಗೆಬಗೆಯ ಜನ ಬಂದು ಹೋಗತೊಡಗಿದರು. ಸಿಡಿಹಿಡಿಯಾಗಿ ಹಣ ಅವಳ ಕೈಗೆ ಸುಮ್ಮನೆ ಬಂದು ಬೀಳುತ್ತಿತ್ತು. ಆದರೂ ಅವಳ ಬಳಿ ತನ್ನದೆನ್ನುವ ಒಂದು ಬಿಡಿ ಕಾಸೂ ಇಲ್ಲ! ಗಾಣ ಮಾತ್ರ ದಿನವೂ ತಿರುಗಬೇಕು… ಎಣ್ಣೆ ಯಾರ ಪಾಲಿಗೊ!
ಚಂದ್ರಾ ಒಂದು ಊರಿನಲ್ಲಿ ಗಟ್ಟಿಗೊಂಡು ನಿಲ್ಲಬೇಕೆಂದರೆ ಅವಳು ಸ್ವತಂತ್ರಳಲ್ಲ. ಆಕೆ ಯಾರ ಅಂಕಿತಕ್ಕೊಳಪಟ್ಟಿದ್ದಳೊ- ಅವಳಿಗೇ ತಿಳಿಯದು ಅದು! ಬೆಳಗಾವಿಯಾಯಿತು, ಆ ನಂತರ ಪುಣೆ, ಆಮೇಲೆ ಮುಂಬಯಿ, ಈಗ ಬೆಂಗಳೂರು!
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಚಂದ್ರಾನ ಸೌಂದರ್ಯ ಮಾಸಿಹೋಗದ ಮುನ್ನ ಅದು ಸಂಪಾದಿಸಿ ತರಬಹುದಾದ ಹಣವನ್ನೆಲ್ಲ ಬಸಿದುಕೊಳ್ಳಬೇಕೆಂದು ಅವಳನ್ನು ಕಟ್ಟಿಕೊಂಡವರ ಹಂಬಲಿಕೆ! ತನಗೆ ದೇವರು ಆ ರೂಪವನ್ನೇತಕ್ಕೆ ಕೊಟ್ಟ? ಕುರೂಪಿಯನ್ನಾಗಿ ಮಾಡಿ ಕುಳ್ಳಿರಿಸಿದ್ದರೆ ಎಂಥ ಸುಖವಿತ್ತಲ್ಲ ಎಂದು ಚಂದ್ರಾ ಆ ಕಾಲದಲ್ಲೆಲ್ಲ ಅಂದುಕೊಳ್ಳುತ್ತಿದ್ದಳಂತೆ. ತನ್ನ ವಿನಾಶದ ಬಟ್ಟಲನ್ನು ತಾನೇ ತನ್ನ ಕೈಯಿಂದ ಕ್ಷಣಕ್ಷಣವೂ ತುಂಬಿಕೊಳ್ಳುತ್ತಿರುವಂತೆ ಚಂದ್ರಾನ ಭಾವನೆ. ತಾನು ತುಳಿಯುವ ಹಾದಿ ತಪ್ಪು ಎಂದು ಮನವರಿಕೆಯಾದಾಗ ಯಾರಿಗಾದರೂ ಸಂಕಟವೆ? ಆದರೆ ಪಾಪವೆಂದು ತಿಳಿದದ್ದನ್ನು ತಿಳಿದೂ ತಿಳಿದೂ ಪುನಃ ಶ್ರದ್ದೆಯಿಂದ ಆಚರಿಸಬೇಕು- ಎಂಥ ವೇದನೆ ಅದು!
ದಿನವೂ ಬಾಗಿಲಿಗೆ ನಿಲ್ಲಬೇಕು. ವೈಯ್ಯಾರ ಮಾಡಬೇಕು. ಎದೆಯಲ್ಲಿ ಜ್ವಾಲಾಮುಖಿ ಕುದಿಯುತ್ತಿದ್ದರೂ ಮುಖದಲ್ಲಿ ಹುಸಿನಗೆಯನ್ನು ತೇಲಿಸಬೇಕು! ಹಗಲು ರಾತ್ರಿಯೆನ್ನದೆ ಹತ್ತೆಂಟು ಜನರ ಕಾಮವಾಸನೆಯನ್ನು ತೃಪ್ತಿಪಡಿಸಬೇಕು! ಆ ಉದ್ಯೋಗದಲ್ಲಿ ಅವಳಿಗೇನು ಆನಂದವೆ? ಯಾವ ಸುಖ ಸಂತೃಪ್ತಿ ಇದೆ ಆ ಜೀವನದಲ್ಲಿ?
”ನನಗಂತೂ ಗೌರವದ ಸಾವು ಬರಲಿಲ್ಲ. ಜೀವನದಲ್ಲಿ ತಾಳ್ಮೆಗೂ ಒಂದು ಮಿತಿಯುಂಟು. ಮನಸ್ಸಿಗೆ ಬೇಡವಾದ ಬದುಕನ್ನು ಎಲ್ಲಿಯವರೆಗೆ ಹೊರೆಯುವುದು? ಅದು ಎಂಥದೆ ಆಗಲಿ… ಸಾವು ನನ್ನನ್ನು ಬಂದು ಅಪ್ಪಿಕೊಳ್ಳಲಿ. ನನ್ನ ದೇಹದ ಮೇಜವಾನಿಯನ್ನು ಬಂದಬಂದವರಿಗೆ ಯಥೇಷ್ಟವಾಗಿ ಉಣ್ಣಿಸಿದ್ದೇನೆ. ಮರಣ ಕೊನೆಯ ತುತ್ತನ್ನು ನುಂಗಿ
ಬಿಡಲಿ! ಇನ್ನುಮುಂದೆ ದುರ್ಬಲರು ಎಂದೆಂದಿಗೂ ಹುಟ್ಟಿ ಬರಬಾರದು ಈ ಪ್ರಪಂಚದ ಮೇಲೆ!” ಹೀಗೆಂದು ಚಂದ್ರಾ ತನ್ನ ಹೃದಯದಲ್ಲಿ ಕುದಿಯುತ್ತಿರುವ ಜ್ವಲಂತ ರಸವನ್ನು ಎಷ್ಟು ಸಾರೆ ಸುರಿದಿಲ್ಲ ನನ್ನೆದುರಿಗೆ!
*
ಸರಿ! ಹೂವು ಎಷ್ಟು ದಿನ ಬಾಡದೆ ಇದ್ದೀತು? ಬರಬರುತ್ತ ಅವಳ ಗಳಿಕೆ ಇಳಿಯತೊಡಗಿತಂತೆ. ರಸಿಕ ಜೇನು ಹೊಸ ಹೊಸ ಕುಸುಮಗಳನ್ನು ಹುಡುಕಿಕೊಂಡು ಹೋದವು. ಚಂದ್ರಾನ ನಿಸ್ತೇಜ ಕಳೆ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತ್ತು. ನಿಜಕ್ಕೂ ರೂಪಾಯಿ, ಎಂಟಾಣೆಯ ತರಗತಿಗಿಳಿದಳಾಕೆ! ತನ್ನ ಅಂಗಡಿಯನ್ನು ಬೇಕಾದ ಕಡೆಯಲ್ಲಿ ತೆರೆದುಕೊಂಡಿರಲು ಅವಳಿಗೆ ಅನುಮತಿ ಸಿಕ್ಕಿತು ಆಗ! ಅಂತೂ ಕೊನೆಗಾದರೂ ಚಂದ್ರಾ ಆ ವಿಷದ ಕೊಂಡಿಯಿಂದ ತನ್ನ ಸಂಬಂಧ ಕಡಿದುಕೊಂಡಳು… ಸ್ವತಂತ್ರಳಾದಳು!
ಇನ್ನು ಹೊಸ ಆರಂಭ ಹೂಡಬೇಕು ಅವಳು! ಚಂದ್ರಾ ತನ್ನದಾದ ಮನೆಯಲ್ಲಿ ಬಂದು ನಿಂತು ನಾಲ್ಕು ವರುಷಗಳಾದವು. ಅವಳ ಕಸಬಿಗೆ ಯುದ್ಧ ಪರಿಸ್ಥಿತಿ ತುಂಬ ಅನುಕೂಲ.
ಗಿರಾಕಿಗಳು ಹೆಚ್ಚಾ ಗಿಯೆ ಇದ್ದರು. ವ್ಯಾಪಾರ ತುರುಸಾಗಿತ್ತು. ಸ್ಥಳ ಸಿಕ್ಕದೆ ಸೈನಿಕರು ಪೇಟೆಯಲ್ಲೆಲ್ಲ ತಂಡತಂಡವಾಗಿ ತಿರುಗುತ್ತಿದ್ದರು. ಹಣ ಮಾಡಿಕೊಳ್ಳಬೇಕೆಂದವರು ಸಾಕಷ್ಟು ಮಾಡಿಕೊಂಡು ತೃಪ್ತರಾದರು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಆದರೆ ಯಾಕೊ ಚಂದ್ರಾನಿಗೆ ಆ ಬುದ್ಧಿ ಬರಲಿಲ್ಲ. ಗಾಳಿ ಬಿಟ್ಟಾಗ ತೂರಿಕೊಳ್ಳುವ ಮಂತ್ರ ಅವಳಿಗೆ ತಿಳಿದಿತ್ತೊ ಇಲ್ಲವೊ! ಆಕೆ ತನಗೆ ಬೇಕಾದರೆ ಕದವನ್ನು ತೆರೆಯುತ್ತಿದ್ದಳು. ಇಲ್ಲವಾದರೆ ಇಲ್ಲ.
ಅವಳಿಗೂ ಮಧ್ಯೆ ಮಧ್ಯೆ ಒಮ್ಮೊಮ್ಮೆ ಯೋಚನೆ ಬರುತ್ತಿತ್ತು… ”ನಶ್ವರ ದೇಹ- ಶಾಶ್ವತನೇನೂ ಅಲ್ಲ! ಅದಕ್ಕಾಗಿ ಅಷ್ಟೊಂದು ಯೋಚನೆ ಏತಕ್ಕೆ ಮಾಡಬೇಕು? ಹೋಗಲಿ… ತೂರಿಬಿಟ್ಟರಾಯಿತು”- ಈ ವಿಚಾರ ಬಂದ ಒಂದೆರೆಡು ದಿನ ಹಗಲು ರಾತ್ರಿಯೆಲ್ಲ ಕದವನ್ನು ತೆರೆದಿಟ್ಟುಬಿಡುತ್ತಿದ್ದಳು ಚಂದ್ರಾ! ಆಮೇಲೆ ಮತ್ತೆ ಹಿಂದಿನ ನೆನಪು ಅವಳ ಮನಸ್ಸನ್ನು ಸುಡುವುದಕ್ಕಾರಂಭ! ಆ ಕಾಲದ ಚಿತ್ರಗಳನ್ನೆಲ್ಲ ಸ್ಮರಿಸಿಕೊಂಡು ಆಕೆ ನಿಟ್ಟುಸಿರು ಕರೆಯುವಳು. ತನ್ನ ಗಂಡನಾದಿಯಾಗಿ ಸಕಲ ಬಂಧುಬಳಗವೆಲ್ಲ ಅವಳ ಕಣ್ಣೆದುರಿನಲ್ಲಿ ಸುಳಿದುಹೋದಂತಾಗುತ್ತಿತ್ತು.
ತನಗೆ ಎಂಥ ಪ್ರಾಯಶ್ಚಿತ್ತವನ್ನಾದರೂ ಕೊಡಲಿ ದೇವರು! ಆದರೆ ತನ್ನ ಗಂಡ, ತನ್ನ ತಂದೆ-ತಾಯಿ, ತನ್ನ ಬಂಧು-ಬಳಗ ಇವರನ್ನು ಈ ಜನ್ಮದಲ್ಲಿ ಪುನಃ ನೋಡುವ ಪ್ರಾಯಶ್ಚಿತ್ತವನ್ನು ಅವನು ಖಂಡಿತವಾಗಿಯೂ ಕೊಡದಿರಲಿ ಎಂದು ಹೇಳುತ್ತಾಳೆ ಚಂದ್ರಾ! ಆ ಪವಿತ್ರಾತ್ಮರ ಮಂಗಲದೃಷ್ಟಿಗೆ ತನ್ನ ಪಾಪೀ ಮುಖ ಕಾಣಬಾರದೆಂದು ಅವಳ ಪ್ರಾರ್ಥನೆ!
ಏಳು ವರ್ಷದ ಶಿಕ್ಷೆಯನ್ನು ಮುಗಿಸಿ ತನ್ನ ಗಂಡ ಊರಿಗೆ ಹೋಗಿರುವನೆಂದು ಎಣಿಕೆ ಹಾಕಿ ಚಂದ್ರಾ ನಂದಾದೀವಿಗೆ ಹಚ್ಚಿದ್ದಳು ನಿನ್ನೆ!
9
”ದಿನಾಲು ಕೆಲಸ ಕೆಲಸ- ಏನು ಕೆಲಸ ಅದು?” ಎಂದು ನಮ್ಮಾಕೆ ರಂಗಿಗೆದ್ದುಬಿಟ್ಟಿದ್ದಳು. ಅವಳನ್ನು ಸಮಾಧಾನ ಮಾಡಬೇಕಾದರೆ ಸಾಕುಬೇಕಾಗಿ ಹೋಯಿತು ನನಗೆ! ಈಗ ಮಾತ್ರ ಹೊತ್ತಿಗೆ ಸರಿಯಾಗಿ ಮನೆಗೆ ಹೋಗುತ್ತೇನೆ. ಜಗಳ ತಂಟೆ ಯಾವುದೂ ಇಲ್ಲ. ನಮ್ಮಾಕೆ ಪುನಃ ನನ್ನ ಜೊತೆಯಲ್ಲಿ ಮೊದಲಿನಂತೆ ನಗುವುದಕ್ಕಾರಂಭಿಸಿದ್ದಾಳೆ. ನಮ್ಮ ಜೀವನದಲ್ಲಿ ಮತ್ತೆ ರಸರೋಮಾಂಚನ!
ಅವಳಲ್ಲಿ ಕೇಳಬೇಕಾಗಿದ್ದ ಒಂದು ಮಾತು ನನ್ನೆದೆಯಲ್ಲಿ ಕಟೆಯುತ್ತಿತ್ತು. ನಗುತ್ತ ಕುಳಿತಾಗ ಅದನ್ನು ಎತ್ತಿಕೊಂಡೆ. ”ಒಂದು ಮಾತು ಹೇಳಲೇನು?” ಎಂದು ಕೇಳಿದೆ ಅವಳನ್ನು. ”ಅದೇನು ಹೇಳಿರಲ್ಲ” ಎಂದಳು ಆಕೆ. ”ಉಂ ಹೂಂ, ನಿನಗೆ ಕೇಳುವ ಮನಸ್ಸಿಲ್ಲ ಬಿಡು” ಎಂದೆ. “ಇಲ್ಲ ಹೇಳಿರಿ! ಹೇಳದಿದ್ದರೆ ನನ್ನಾಣೆಯಿದೆ” ಎಂದಳು. ”ಅದಕ್ಕೆಲ್ಲ ಆಣೆ ಏತರದೆ ಹುಚ್ಚಿ! ಹೇಳ್ತೇನೆ ಬಿಡು!” ಎಂದು ಅವಳಿಗೆ ನಾನು ಚಂದ್ರಾನ ಕತೆಯೆಲ್ಲವನ್ನು ಸಾದ್ಯಂತವಾಗಿ ವಿವರಿಸಿ ಹೇಳಿದೆ. ಹನಿಯುವ ಕಣ್ಣೀರಿನ ಮಧ್ಯೆ ಹೂಂಗುಟ್ಟುತ್ತ ಆಕೆ ಅದನ್ನೆಲ್ಲ
ಕೇಳಿದಳು.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಕತೆ ಮುಗಿಯಿತು- ನಂತರ ಇಬ್ಬರೂ ಕ್ಷಣಹೊತ್ತು ಮೌನವಾಗಿದ್ದೆವು. ಎದೆಯ ಉಬ್ಬೆಗದಲ್ಲಿ ಮಾತು ಮೂಕವಾಗಿಹೋಗಿತ್ತು. ಆ ದುಃಸ್ಸಹವಾದ ಮೌನವನ್ನು ಮುರಿದು ಅವಳೆ ಪರಿಹಾರ ಸೂಚಿಸಿದಳು. ನಾಳೆ ಸಂಜೆಗೆ ಚಂದ್ರಾನನ್ನು ಖಂಡಿತವಾಗಿಯೂ ಕರೆದು ತರಬೇಕೆಂದು ಅವಳ ಆಗ್ರಹದ ವಾಣಿ! ಪತಿತಳಾದ ನನ್ನ ತಂಗಿಯೊಬ್ಬಳನ್ನು ನರಕದ ದಾರಿಯಿಂದ ಉದ್ಧಾರ ಮಾಡಿದ ಶ್ರೇಯಸ್ಸು ನಾಳೆಯ ದಿನವೆ ನನ್ನದಾಗುವುದೆಂದು ನಾನು ಹಿಗ್ಗಿಹೋದೆ. ಮರುದಿನ ರಾತ್ರಿ ಚಂದ್ರಾನ ಬೀಡಾರದೆಡೆಗೆ ಹೊರಟಾಗ್ಗೆ ನನ್ನ ಹೃದಯ ಉಕ್ಕಿ ಆನಂದ ಪುಲಕಿತವಾಗಿ ಹೋಗಿತ್ತು! ಬಾಗಿಲನ್ನು ದೂಡಿ ಭ್ರಾತೃ ಸಲಿಗೆಯಿಂದ ಒಳಗೆ ಹೆಜ್ಜೆಯನ್ನಿರಿಸಿದೆ. ನಾನು ಹೀಗೆ ಹೆಜ್ಜೆಯನ್ನಿಡುತ್ತಲೂ ನನ್ನೆದುರು ಬಂದು ನಿಂತಳು ಒಬ್ಬ ಅಪರಿಚಿತ ಸ್ತ್ರೀ! ನಾನು ಸುಮ್ಮನೆ ಭ್ರಾಂತನಂತೆ ದಂಗುಬಡೆದು ನಿಂತಿರುವುದನ್ನು ಕಂಡು ಆಕೆ ‘ಬರ್ರಿ’ ಎಂದಳು ತನ್ನ ನತ್ತನ್ನು ಒಂದು ಠೀವಿಯಲ್ಲಿ ಕುಣಿಸುತ್ತ!
”ಆದರೆ… ಚಂದ್ರಾ” ಎಂದೆ ನಾನು ಕುತೂಹಲ ವಾಣಿಯಿಂದ.
”ಓ, ಅವಳೇ? ಎನ್ನುತ್ತ ಆಕೆ ಕಿಲಕಿಲನೆ ನಗುವುದಕ್ಕಾರಂಭಿಸಿದಳು. ನನಗೆ ಆ ತಾತ್ಸಾರದ ನಗೆಯನ್ನು ಕೇಳುವುದಕ್ಕಾಗಲಿಲ್ಲ. ಅದರಲ್ಲಿಯೂ ಅದು ನನ್ನ ಚಂದ್ರಾನ ವಿಷಯಕವಾದ ನಗೆ. ನನ್ನ ಮನಸ್ಸು ತಳಮಳಿಸಿಹೋಗಿತ್ತು. ನಾನು ವ್ಯಾಕುಲಗೊಂಡು ಹೊರಗೆ ಬಂದೆ.
”ಚಂದ್ರಾ- ಹೋದಳೆಲ್ಲಿಗೆ ಆಕೆ? ಹೋಗಿರಲು ಎಂದಿಗೂ ಸಾಧ್ಯವಿಲ್ಲ. ನನಗೆ ಹೇಳದೆ ಎಲ್ಲಿಗೆ ಹೋದಾಳು? ಎಲ್ಲಿಗೂ ಹೋಗುವ ಜೀವವಲ್ಲ ಅದು!” ಎಂದುಕೊಳ್ಳುತ್ತ ನಾನು ಹೆಜ್ಜೆಯನ್ನು ಮುಂದಕ್ಕೆ ಚಾಚಿದೆ.
”ಏಯ್” ಎಂದು ಯಾರೊ ಕೂಗಿದಂತಾಯಿತು. ಹೆಣ್ಣು ಧ್ವನಿಯೆಂಬಂತೆ ಕೇಳಿಸಿತು ನನಗೆ! ಹಿಂದಕ್ಕೆ ಹೊರಳಿ ನೋಡಿದೆ. ಹೌದು, ಆಕೆ ಚಂದ್ರಾನ ಪಕ್ಕ ದ ಮನೆಯಾಕೆ!ಅವಳಿಗೇನಾದರೂ ಗೊತ್ತಿರಬಹುದೆ ಚಂದ್ರಾನ ಸುದ್ದಿ? ಓ, ಗೊತ್ತಿರದೆ ಏನು? ಬೆಳಿಗ್ಗೆ ಎದ್ದರೆ ಒಬ್ಬರ ಮುಖವನ್ನೊಬ್ಬರು ನೋಡಬೇಕು ಅವರು!
ಆಕೆ ಹೇಳಿದಳು: ಮೊನ್ನೆ ಯಾವನೊ ಒಬ್ಬ ಬಂದಿದ್ದನಂತೆ. ಅಂಥವರನೇಕ ಜನ ಬರುತ್ತಾರೆ- ಹೋಗುತ್ತಾರೆ… ನಡೆದೆ ಇರುತ್ತದೆ ಅದು! ಸರಿ, ಆ ಮನುಷ್ಯ ಮರುದಿನ ಸಾಯಂಕಾಲ ಏಳು ಗಂಟೆಯ ಸುಮಾರಿಗೆ ಬರುವುದಾಗಿ ಸಂಚಕಾರ ಕೊಟ್ಟು ಹೋದನಂತೆ! ಹಿಂದಿನ ದಿನ ಹೇಳಿಹೋದಂತೆ ಅವನು ನಿನ್ನೆ ಏಳು ಗಂಟೆಗೆ ಸರಿಯಾಗಿ ಚಂದ್ರಾನ ಬಳಿಗೆ ಬಂದ. ಚಂದ್ರಾ ಆ ಉಡುಪಿ ಅಂಗಡಿಯಿಂದ ಎರಡು ಕಪ್ಪು ಟೀ ತರಿಸಿದಳು ಪದ್ಧತಿಯಂತೆ! ಕಪ್ಪನ್ನು ಬಾಯಿಗೆ ಎತ್ತಿ ‘ಸಕ್ಕರೆ ಕಮ್ಮಿ’ ಎಂದನಂತೆ ಆ ಮನುಷ್ಯ. ಸಕ್ಕರೆಗಾಗಿ ಪುನಃ ತಮ್ಮ
ಅಂಗಡಿಗೆ ಹೊರಟಿದ್ದ ಆ ಉಡುಪಿಯ ಹುಡುಗನನ್ನು ನಿಲ್ಲಿಸಿ, ಚಂದ್ರಾ ಸಕ್ಕರೆಯನ್ನು ತರಲು ಒಳಕ್ಕೆ ಹೋದಳು. ಅದೇ ಸಮಯವನ್ನು ಕಾಯ್ದುಕೊಂಡು ಕುಳಿತಿದ್ದ ಆ ಮನುಷ್ಯ ಯಾವುದೊ ಚೀಟಯಿಂದ ಪುಡಿಯನ್ನು ತೆಗೆದು ಒಂದು ಕಪ್ಪಿನಲ್ಲಿ ಬೆರಸಿದನಂತೆ.
”ಈ ಮಾತನ್ನು ಆ ಹುಡುಗ ಇದೇ ಈಗ ಹೇಳಿಹೋದ” ಎಂದು ನಡುವೆ ಸೇರಿಸಿ ಆಕೆ ಪುನಃ ತನ್ನ ವಿವರಣೆಯನ್ನು ಮುಂದುವರಿಸಿದಳು. ನಿನ್ನೆ ಆ ಹೊತ್ತಿಗೆ ಭಯಂಕರವಾದ ಗಾಳಿ ಧೂಳಿ ಎದ್ದುಬಿಟ್ಟಿತಂತೆ. ಚಂದ್ರಾ ಸಕ್ಕರೆ ಹಾಕಿ ಟೀ ಕಪ್ಪನ್ನು ಎತ್ತಿ ಕೊಡುವಾಗ್ಗೆ ಅವನಿನ್ನೂ ತನ್ನ ಕಣ್ಣನ್ನು ಉಜ್ಜಿಕೊಳ್ಳುತ್ತಿದ್ದನೆಂದು ಹೇಳಿದರೆ ಅದರ ಕಲ್ಪನೆಯಾಗಬಹುದು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ದೈವದ ಜಾಲ ಎಂಥದೊ, ಯಾರು ಬಲ್ಲರು? ಅಂತೂ ಏನೊ ಅದಲು-ಬದಲಾಗಿ ಹೋಯಿತು. ಚಂದ್ರಾನನ್ನು ಸುಡುವುದಕ್ಕೆಂದು ತಂದ ಮದ್ದು ಅವನ ಜೀವಕ್ಕೇ ಮುಳುವಾಯಿತು. ”ನಿನ್ನ ಕೊಲ್ಲಬೇಕು ಅಂತ ತಂದಿದ್ದೆನೆ ಅದನ್ನು?” ಎಂದು ಅವನು ತನ್ನ ಜೀವ ಹೋಗುವವರೆಗೆ ಒಂದೆಸವನೆ ಬಡಬಡಿಸಿದನಂತೆ!
ಆ ಉದ್ದನ್ನ ಗಡ್ಡ- ಮೀಸೆಗಳ ಹಿಂದೆ ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿದಾಗ ಅವಳಿಗೆ ತನ್ನ ಗಂಡನ ಆಕೃತಿ ಹೊಳೆಯಿತು. ಹೌದು! ಹೇಮಣ್ಣನೇ ಅವನು, ನಿಜ! ಚಂದ್ರಾನ ಆಹುತಿ ತೆಗೆದುಕೊಂಡು ಬರುವುದಾಗಿ ಊರಲ್ಲಿ ಪಂಥ ತೊಟ್ಟು ಬಂದಿದ್ದನಂತೆ!
ಆಕೆ ಸಿಡಿಲಿನ ಸುದ್ದಿಯನ್ನು ಹೇಳಿದಳು. ಈ ದಿನ ಬೆಳಿಗ್ಗೆ ಪೊಲೀಸರು ಚಂದ್ರಾನನ್ನು ಕೈದುಮಾಡಿಕೊಂಡು ಹೋದರು. ಹೋಗುವ ಮುನ್ನ ಅವಳು ನನ್ನನ್ನು ಮಾತುಮಾತಿಗೆ ಹಂಬಲಿಸುತ್ತಿದ್ದಳಂತೆ: ”ಸಾವಿಗೆ ಕೊನೆಯ ಔತಣ ಕೊಟ್ಟು ಹೊರಟಿದ್ದೇನೆ. ನನಗೆ ಯಾವ ವ್ಯಥೆ ಸಂಕಟವೂ ಇಲ್ಲ. ಆದರೆ ನನ್ನ ಜೀವನದ ಸಂಜೆಯಲ್ಲಿ ‘ಚಂದ್ರಾ… ಚಂದ್ರಾ’ ಎಂದು ನನ್ನನ್ನು ವಾತ್ಸಲ್ಯದಿಂದ ಕರೆದು ನುಡಿಸಿದ ಆ ಪ್ರೀತಿಯ ಮಧುರ ಧ್ವನಿಯನ್ನು ಅಂತಿಮಯಾತ್ರೆಗೆ ಹೊರಟುನಿಂತ ಈ ವೇಳೆಯಲ್ಲಿ ಕೇಳುವಂತಾಗಲಿಲ್ಲವಲ್ಲ ಎಂಬ ವ್ಯಸನವೊಂದೆ ನನ್ನನ್ನು ಬಾಧಿಸುತ್ತಿರುವುದು.”

ಪಾಟೀಲ ಪುಟ್ಟಪ್ಪ(1921 – 2020): ಅವಿಭಜಿತ ಧಾರವಾಡ ಜಿಲ್ಲೆಯ, ಈಗಿನ ಹಾವೇರಿ ಜಿಲ್ಲೆಯ ಹಲಗೇರಿ ಸಮೀಪದ ಕುರುಬಗೊಂಡ ಗ್ರಾಮದಲ್ಲಿ 1921ರಲ್ಲಿ ಜನಿಸಿದರು. ಹಲಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿಯಲ್ಲಿ ಕಾನೂನು ಪದವಿ ಪಡೆದರು. ಹಾವೇರಿಯಲ್ಲಿ ಓದುತ್ತಿರುವಾಗ ‘ನಮ್ಮ ನಾಡು’ ಕೈ ಬರಹದ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಲು ಬಾಂಬೆಗೆ ತೆರಳಿ, ಅಲ್ಲಿ ಪತ್ರಿಕೋದ್ಯಮದ ಸಖ್ಯ ಬೆಳೆಸಿಕೊಂಡರು. ಪತ್ರಕರ್ತರಾಗಬೇಕೆಂಬ ಆಸೆಯಿಂದ 1949ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪಾಪು ಎಂದೇ ಹೆಸರಾದ ಇವರು, ಪತ್ರಕರ್ತ, ಸಾಹಿತಿ, ಕನ್ನಡ ಪರ ಹೋರಾಟಗಾರರು. ನವಯುಗ, ವಿಶ್ವವಾಣಿ, ಪ್ರಪಂಚ , ವಿಶಾಲ ಕರ್ನಾಟಕ, ಮನೋರಮಾ ಪತ್ರಿಕೆಗಳ ಸ್ಥಾಪಕ ಸಂಪಾದಕರಾಗಿದ್ದರು. 1940-50ರ ದಶಕದಲ್ಲಿ ನಡೆದ ಏಕೀಕರಣ ಆಂದೋಲನದ ಮುಂಚೂಣಿಯಲ್ಲಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 30 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. 1982ರಲ್ಲಿ ಗೋಕಾಕ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದರು. ಎರಡು ಅವಧಿಗೆ (1962 ರಿಂದ 1974) ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರೂ ಆಗಿದ್ದರು. ಪ್ರಕಟಿತ ಕೃತಿಗಳು: ಕರ್ನಾಟಕ ಕವಿ ಲೇಖಕರು, ಕರ್ನಾಟಕ ಸಂಗೀತ ಕಲಾರತ್ನರು, ಬದುಕು ಬೇಕು ಬದುಕುವ ಈ ಮಾತು, ನೆನಪಿನಾ ಬುಟ್ಟಿ, ಮಾತು ಮಾಣಿಕ್ಯ, ಕನ್ನಡದ ಕಂಪು, ಸುವರ್ಣ ಕರ್ನಾಟಕ, ಪುಸ್ತಕ ಸಂಸ್ಕೃತಿ, ನನ್ನದು ಈ ಕನ್ನಡ ನಾಡು, ನಮ್ಮದು ಈ ಭರತ ಭೂಮಿ, ಕರ್ನಾಟಕದ ಕಥೆ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿದಳು, ಕಲಾ ಸಂಗಮ, ಬೆಳೆದ ಬದುಕು, ಭಾರತದ ಬೆಳಕು, ನೆಲದ ನಕ್ಷತ್ರಗಳು, ಸರ್ ಸಾಹೇಬರು, ಹೊಸಮನಿ ಸಿದ್ದಪ್ಪ, ಪ್ರಪಂಚ ಪಟುಗಳು, ನಮ್ಮ ಜನ ನಮ್ಮ ದೇಶ, ಈಗ ಹೊಸದನ್ನು ಕಟ್ಟೋಣ, ಪಾಪು ಪ್ರಪಂಚ ಬದುಕುವ ಮಾತು, ಅಮೃತವಾಹಿನಿ, ವ್ಯಕ್ತಿ ಪ್ರಪಂಚ, ಸುವರ್ಣ ಕರ್ನಾಟಕ. ಬಸವಶ್ರೀ, ಟಿಎಸ್ಆರ್, ಗೌರವ ಡಾಕ್ಟರೇಟ್, ನಾಡೋಜ, ನೃಪತುಂಗ ಪ್ರಶಸ್ತಿ ಪುರಸ್ಕೃತರು. 2020ರಲ್ಲಿ 101ನೇ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.




