ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಮೃತ ಮಹೋತ್ಸವ ಸಮಿತಿ ವತಿಯಿಂದ ಏ.22 ರಂದು ನಡೆಯಲಿರುವ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭಕ್ಕೆ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಮತ್ತು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿದೆ.
ನವದೆಹಲಿಯ ಉಪ ರಾಷ್ಟ್ರಪತಿಗಳ ಭವನಕ್ಕೆ ಈಚೆಗೆ ಸಂಸದ ಸಾಗರ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಭೇಟಿ ನೀಡಿ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ವಿಶ್ವಗುರು ಬಸವಣ್ಣನವರ ಪುಸ್ತಕ ನೀಡಿ ಐತಿಹಾಸಿಕ ಸಮಾರಂಭಕ್ಕೆ ಆಹ್ವಾನ ನೀಡಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಬೆಂಗಳೂರಿನ ನಿವಾಸಕ್ಕೆ ಶನಿವಾರ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಭೇಟಿ ನೀಡಿ ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿದರು.

ಸಂಸದ ಸಾಗರ ಖಂಡ್ರೆ ಮಾತನಾಡಿ, ʼಗಡಿಭಾಗದಲ್ಲಿ ಹಿರೇಮಠ ಸಂಸ್ಥಾನ ನೀಡುತ್ತಿರುವ ಜನಪರ ಮತ್ತು ಜೀವಪರ ಸೇವೆಯನ್ನು ಉಪ ರಾಷ್ಟ್ರಪತಿಗಳ ಗಮನಕ್ಕೆ ತರಲಾಗಿದ್ದು, ಅವರು ಇದೇ 22 ರಂದು ನಡೆಯಲಿರುವ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೊತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅತ್ಯಂತ ಖುಷಿಯಿಂದ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಪತ್ರಕರ್ತರ ಲೇಖನಿ ಸತ್ಯದ ಪರವಾಗಿರಲಿ : ಸಭಾಧ್ಯಕ್ಷ ಯು.ಟಿ.ಖಾದರ್
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ ಜತೆಗಿದ್ದರು.




