ಜೂ.28ರಂದು ನಡೆಯಲಿರುವ “ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ” ಕಾರ್ಯಕ್ರಮದಲ್ಲಿ ಭಾಗವಹಿಸಲು ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಕೊಲ್ಹಾಪುರದ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮೀಜಿಯವರ ಪ್ರವೇಶವನ್ನು ತಡೆಯುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.
ನೂತನ ಸಚಿವರಾಗಿ ಜಿಲ್ಲೆಗೆ ಆಗಮಿಸಿ ಭಾನುವಾರ ಸಂಜೆ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿದ ಈಶ್ವರ ಖಂಡ್ರೆ ಅವರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ನೇತ್ರತ್ವದಲ್ಲಿ ವಿವಿಧ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
“ಬಸವ ಭಕ್ತರನ್ನು ʼಬಸವ ತಾಲಿಬಾನಿʼ ಎಂದು ಪದ ಪ್ರಯೋಗ ಮಾಡಿ ಅವಮಾನಿಸಿರುವುದು ಹಾಗೂ ಬಸವತತ್ವ ಮತ್ತು ಸಂಸ್ಕೃತಿಯನ್ನು ನಾಡಿನಾದ್ಯಂತ ಪ್ರಚಾರ ಮಾಡುತ್ತಿರುವ ಪೂಜ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಸುಪ್ರೀಂ ಕೋರ್ಟ್‌ನಿಂದಲೂ ಟೀಕೆಗೆ ಗುರಿಯಾಗಿರುವ ಕನೇರಿ ಸ್ವಾಮೀಜಿಯವರ ನಡೆ ಬಸವ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ಬಸವಾದಿ ಶರಣರ ಪವಿತ್ರ ನೆಲವಾದ ಬಸವಕಲ್ಯಾಣವು ಬಸವ ಭಕ್ತರ ಆರಾಧ್ಯ ಕೇಂದ್ರವಾಗಿದ್ದು, ಗೌರವ, ನಾಡಿನ ಸಮಸ್ತ ಬಸವ ಭಕ್ತರ ಭಾವನೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸುವ ನಿರ್ಣಯವನ್ನು ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು, ಬಸವ ಭಕ್ತರು ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ” ಎಂದು ಹೇಳಿದರು.
“ಸರ್ಕಾರ ಹಾಗೂ ಜಿಲ್ಲಾಡಳಿತವು ಬಸವ ಭಕ್ತರ ಭಾವನೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು. ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಇದು ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿರೋಧವಲ್ಲ. ಬಸವ ತತ್ವ, ಸಾಮಾಜಿಕ ಸೌಹಾರ್ದತೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಸಲ್ಲಿಸಲಾಗುತ್ತಿರುವ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮನವಿಯಾಗಿದೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಬಸವ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳು ಎದುರಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮನವಿ ಮಾಡಿದೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಬಸವ ಭಕ್ತರನ್ನು ಹಾಗೂ ಮಠಾಧೀಶರನ್ನು ಅವಮಾನಿಸುತ್ತಿರುವ ಕನೇರಿ ಸ್ವಾಮೀಜಿ ಅವರನ್ನು ಯಾವುದೇ ಕಾರಣಕ್ಕೂ ಬಸವಕಲ್ಯಾಣ ಪ್ರವೇಶಕ್ಕೆ ಬಿಡುವುದಿಲ್ಲ. ಈಗಾಗಲೇ ತಾಲೂಕು ಆಡಳಿತ ಸಮಾವೇಶಕ್ಕೆ ಅನುಮತಿ ನಿರಾಕರಿಸಿದೆ. ಅದು ಬದಲಾಗದಂತೆ ನೋಡಿಕೊಂಡು ಕನೇರಿ ಶ್ರೀ ಪ್ರವೇಶಕ್ಕೆ ತಡೆ ನೀಡುವ ವ್ಯವಸ್ಥೆ ಮಾಡಬೇಕು. ನಾಡಿನ ಬಸವ ಭಕ್ತರ ಪವಿತ್ರ ಸ್ಥಳವಾದ ಬಸವಕಲ್ಯಾಣಕ್ಕೆ ಕನೇರಿ ಶ್ರೀ ಪ್ರವೇಶಿಸಿದರೆ ಜೂ.28ರಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಸವ ಅನುಯಾಯಿಗಳು ಸೇರಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಸಚಿವ ಈಶ್ವರ ಖಂಡ್ರೆ ಮನವಿ ಸ್ವೀಕರಿಸಿ ಬಳಿಕ ಮಾತನಾಡಿ, “ಸಮಾಜಕ್ಕೆ ಕಾವಿಧಾರಿಗಳು, ಮಠಾಧೀಶರು ಉಪದೇಶ ಹೇಳಬೇಕು. ಆದರೆ, ಈಚೆಗೆ ರಾಜಕೀಯ, ಸಾಮಾಜಿಕ ಕ್ಷೇತ್ರ ಕಲುಷಿತಗೊಂಡಂತೆ ಧಾರ್ಮಿಕ ಕ್ಷೇತ್ರವೂ ಕಲುಷಿತ ಆಗಿರುವುದು ನೋವಿನ ಸಂಗತಿ. ಮಠಗಳು ಸಮಾಜದ ಆಸ್ತಿಯಾಗಿವೆ. ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಕೋಮುವಾದಿ ಪಕ್ಷಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಹೇಳಿಕೆಗಳನ್ನು ಕೊಡುವುದು, ಬಸವಾದಿ ಶರಣರು ಹಾಗೂ ಸಮಾಜದಲ್ಲಿ ಗೌರವ, ಘನತೆ ಇರುವ ಪೂಜ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸುವುದು ಖಂಡನೀಯವಾಗಿದೆ” ಎಂದರು.
“ಸಚಿವನಾಗಿ ಬೀದರ್ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ. ಜಾತಿ ವಿಷಬೀಜ ಬಿತ್ತಲು ಆಸ್ಪದ ನೀಡುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬೇಕೆಂದು ಸೂಚಿಸುತ್ತೇನೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಮತದಾನದ ಹಕ್ಕು ಕಸಿದುಕೊಳ್ಳುವ ಎಸ್‌ಐಆರ್ : ಜ್ಞಾನಪ್ರಕಾಶ ಸ್ವಾಮೀಜಿ
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಬೇಲೂರು ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವಕಲ್ಯಾಣದ ರತ್ನಕಾಂತ ಶಿವಯೋಗಿ, ಸುಗುಣಾತಾಯಿ, ಸತ್ಯಕ್ಕತಾಯಿ, ಗಾಯತ್ರಿತಾಯಿ, ಶಿವಕುಮಾರ ಸ್ವಾಮಿ, ಬೇಲೂರು, ಬಸವದೇವರು ಬಸವಲ್ಯಾಣ, ಶಿವಾನಂದ ಸ್ವಾಮಿ ಬಸವಕಲ್ಯಾಣ, ಅನೀಲ ಮಹಾರಾಜ, ಇಂದುಮತಿ ಗಾರಂಪಳ್ಳಿ, ರಾಜೇಂದ್ರ ಜೊನ್ನೆಕೇರಿ, ಯೋಗೇಶ ಶ್ರಿಗೇರೆ, ಪ್ರವೀಣಕುಮಾರ ಎಕಲಾರೆ, ಅರುಣಕುಮಾರ ಮಹಾಜನ ಸೇರಿದಂತೆ ಬಸವಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.




