2023ರ ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 822 ಮತಗಳನ್ನು (0.03%) ಗಳಿಸಿದ 20ರ ದಶಕದಲ್ಲಿ ಸ್ಥಾಪನೆಗೊಂಡ ನ್ಯಾಷನಲಿಸ್ಟ್ ಸಿಟಿಜನ್ಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ -ಟಿಎಂಸಿ ಬಂಡಾಯ ಬಣ ವಿಲೀನಗೊಳ್ಳುವುದಾಗಿ ಘೋಷಿಸಿಕೊಂಡಿದೆ.
ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಇಪ್ಪತ್ತು ಟಿಎಂಸಿ ಬಂಡಾಯ ಸಂಸದರು 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೂ ಇಳಿಯದ ನೋಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ಪಕ್ಷವಾದ ಎನ್‌ಸಿಪಿಐ ಜೊತೆ ವಿಲೀನಗೊಳ್ಳಲಿದ್ದಾರೆ.
ಇದನ್ನು ಓದಿದ್ದೀರಾ? ಎನ್‌ಡಿಎ ಸೇರಲು ಸಜ್ಜಾದ 20 ಬಂಡಾಯ ಟಿಎಂಸಿ ಸಂಸದರು ಯಾರ್ಯಾರು?
2022ರ ಅಕ್ಟೋಬರ್‌ನಲ್ಲಿ ಪಕ್ಷದ ನೋಂದಣಿ ಸಂಬಂಧ ಜಾಹೀರಾತು ಹೊರಡಿಸಲಾಗಿತ್ತು. ಈ ಜಾಹೀರಾತಿನಲ್ಲಿ ಶೆವ್ಲಿ ಕುಂದು ಅವರನ್ನು ಪಕ್ಷದ ಅಧ್ಯಕ್ಷೆ ಎಂದು ಉಲ್ಲೇಖಿಸಲಾಗಿತ್ತು. ಹಾಗೆಯೇ ಪಕ್ಷದ ಪ್ರಧಾನ ಕಚೇರಿ ಪಶ್ಚಿಮ ಬಂಗಾಳದ ಹೌರಾದಲ್ಲಿದೆ ಎಂದು ಪ್ರಕಟಿಸಲಾಗಿತ್ತು.
2023ರ ಚುನಾವಣೆಯಲ್ಲಿ ಚವ್ಮಾನು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎನ್‌ಸಿಪಿಐ ಅಭ್ಯರ್ಥಿ ಬರ್ಹೆಡಾ ತ್ರಿಪುರಾ 536 ಮತಗಳನ್ನು ಗಳಿಸಿದ್ದರು. ಕೈಲಾಸಹಾದಲ್ಲಿ ಸ್ಪರ್ಧಿಸಿದ್ದ ಜೆಹಾಂಗೀರ್ ಅಲಿ 286 ಮತಗಳನ್ನು ಗಳಿಸಿದ್ದರು. ಆದರೆ ಬಳಿಕ ಜೆಹಾಂಗೀರ್ ಅಲಿ ಕಾಂಗ್ರೆಸ್ ಸೇರಿದರು.
ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಪೋಸ್ಟ್ ಮಾಡಿದ್ದಾರೆ. “ಟಿಎಂಸಿ ಬಂಡಾಯ ಸಂಸದರು, ನ್ಯಾಷನಲಿಸ್ಟ್ ಸಿಟಿಜನ್ಸ್ ಪಕ್ಷದ (ಎನ್‌ಸಿಪಿ) ಜತೆ ವಿಲೀನಗೊಳ್ಳಲಿದ್ದಾರೆ. ಇದೀಗ ಭಾರತೀಯ ಪ್ರಜಾಪ್ರಭುತ್ವವು ‘ಅಸಂಬದ್ಧತೆಯ ರಂಗಭೂಮಿ’ಯಾಗಿದೆ. ಇದು ತಮಾಷೆ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ಟಿಎಂಸಿಯಲ್ಲಿ 20 ಸಂಸದರ ಬಂಡಾಯ; ದೀದಿ ಕೈಬಿಟ್ಟು ಎನ್‌ಡಿಎಗೆ ಬೆಂಬಲ
“ಟಿಎಂಸಿ ಶಾಸಕಾಂಗ ಪಕ್ಷದ ಬಂಡಾಯ ಸಂಸದರು, ಬೇರೆ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ. ಟಿಎಂಸಿ ಬಯಸಿದರೆ ಮಾತ್ರ ವಿಲೀನಗೊಳ್ಳಬಹುದು. ಅವರನ್ನು ಅನರ್ಹಗೊಳಿಸಿ” ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಪ್ರತ್ಯೇಕ ಆಸನ ವ್ಯವಸ್ಥೆಗೂ ಈ ಬಂಡಾಯ ಸಂಸದರು ಮನವಿ ಮಾಡಿದ್ದಾರೆ. ಈ ಬೆನ್ನಲ್ಲೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬಂಡಾಯ ಸಂಸದರು ಪ್ರತ್ಯೇಕ ಬಣವಾಗಿ ಕುಳಿತುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಹೇಳುವ ಕಾನೂನಿನ ಉಲ್ಲೇಖ ಮಾಡಿದ್ದಾರೆ. ಹಾಗೆಯೇ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತೃಣಮೂಲವನ್ನು ಒಂದೇ ಪಕ್ಷವೆಂದು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.




