ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಒಂದು, ಎರಡು ಅಥವಾ ಹೆಚ್ಚೆಂದರೆ ಮೂರು ಹೆಸರುಗಳಿರುತ್ತವೆ. ಆದರೆ ನ್ಯೂಝಿಲ್ಯಾಂಡ್‌ನಲ್ಲಿ ಈ ವ್ಯಕ್ತಿಯೊಬ್ಬರು ಬರೋಬ್ಬರಿ 2,253 ಹೆಸರುಗಳನ್ನು ಹೊಂದುವ ಮೂಲಕ ಜಗತ್ತಿನಲ್ಲೇ ಅತ್ಯಂತ ಉದ್ದದ ಹೆಸರು ಹೊಂದಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವದಲ್ಲೇ ಅತ್ಯಂತ ಉದ್ದವಾದ ವೈಯಕ್ತಿಕ ಹೆಸರನ್ನು ಹೊಂದಿರುವ ಕಾರಣಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ (Guinness World Records) ಬರೆದಿರುವ ಈ ವ್ಯಕ್ತಿಯ ಹೆಸರು ಲಾರೆನ್ಸ್ ವಾಟ್ಕಿನ್ಸ್. ಮೂಲತಃ ನ್ಯೂಝಿಲ್ಯಾಂಡ್‌ನ ಆಕ್ಲೆಂಡ್‌ನವರಾದ ಲಾರೆನ್ಸ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಗಿನ್ನಿಸ್ ದಾಖಲೆ | ನಾಲಿಗೆಯಲ್ಲೇ 57 ಫ್ಯಾನ್‌ಗಳನ್ನು ನಿಲ್ಲಿಸಿದ ಭಾರತೀಯ ವ್ಯಕ್ತಿ; ವಿಡಿಯೋ ವೈರಲ್
2,253 ಹೆಸರುಗಳು ಬಂದಿದ್ದು ಹೇಗೆ?
ಈ ಹೆಸರಿನ ಇತಿಹಾಸ ಆರಂಭವಾಗಿದ್ದು 1990ರಲ್ಲಿ. ಇವರ ಮೂಲ ಹೆಸರು ಲಾರೆನ್ಸ್ ಗ್ರೆಗೊರಿ ವಾಟ್ಕಿನ್ಸ್ ಆಗಿತ್ತು. ಆದರೆ 1990ರಲ್ಲಿ ಲಾರೆನ್ಸ್‌ಗೆ 24 ವರ್ಷವಾಗಿದ್ದಾಗ ಇತಿಹಾಸದಲ್ಲಿ ಏನಾದರೂ ಒಂದು ವಿಭಿನ್ನ ದಾಖಲೆ ಬರೆಯಬೇಕು ಎಂದೆನಿಸಿತು. ಆಗ ಲಾರೆನ್ಸ್ ಆಕ್ಲೆಂಡ್‌ನ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದರು.
ಅದಾದ ಬಳಿಕ ಲಾರೆನ್ಸ್ ತಾವು ಕೆಲಸ ಮಾಡುತ್ತಿದ್ದ ಲೈಬ್ರರಿಯಲ್ಲಿದ್ದ ಪುಸ್ತಕಗಳು, ಸಹೋದ್ಯೋಗಿಗಳ ಸಲಹೆಗಳು, ಲ್ಯಾಟಿನ್, ಹಳೆಯ ಇಂಗ್ಲಿಷ್, ಸಾಮೊವನ್, ಚೈನೀಸ್, ಜಪಾನೀಸ್ ಹಾಗೂ ನ್ಯೂಝಿಲ್ಯಾಂಡ್‌ನ ಸ್ಥಳೀಯ ಭಾಷೆಯಾದ ‘ಮಾವುರಿ’ (Maori) ನಿಘಂಟಿನಿಂದ ಸಾವಿರಾರು ಹೆಸರುಗಳನ್ನು ಆಯ್ಕೆ ಮಾಡಿಕೊಂಡರು.
1990ರ ಮಾರ್ಚ್ 8ರಂದು ಆಕ್ಲೆಂಡ್ ಹೈಕೋರ್ಟ್ ಮೂಲಕ ಕಾನೂನುಬದ್ಧವಾಗಿ ತಮ್ಮ ಹೆಸರಿನ ಮಧ್ಯೆ 2,250 ಮಧ್ಯದ ಹೆಸರುಗಳನ್ನು (Middle Names) ಲಾರೆನ್ಸ್ ಸೇರಿಸಿಕೊಂಡರು. ಇದರೊಂದಿಗೆ ಅವರ ಒಟ್ಟು ಹೆಸರುಗಳ ಸಂಖ್ಯೆ 2,253 ಆಯಿತು!
ಇವರ ಕಾನೂನಾತ್ಮಕ ಹೆಸರು ಎಷ್ಟು ಉದ್ದವಿದೆಯೆಂದರೆ, ಇವರ ಜನ್ಮ ಪ್ರಮಾಣ ಪತ್ರ ಅಥವಾ ದಾಖಲೆ ಪತ್ರ ಬರೋಬ್ಬರಿ 6 ಪುಟಗಳಷ್ಟಿದೆ. ಅಷ್ಟು ಮಾತ್ರವಲ್ಲದೆ ಲಾರೆನ್ಸ್ ತಮ್ಮ ಸಂಪೂರ್ಣ ಹೆಸರನ್ನು ಒಂದೇ ಸಮನೆ ಓದುತ್ತಾ ಹೋದರೆ ಅದನ್ನು ಪೂರ್ತಿಗೊಳಿಸಲು ಕನಿಷ್ಠ 20 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ.
ಇದನ್ನು ಓದಿದ್ದೀರಾ? ಉಡುಪಿ | ಲಂಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಆರ್ ಮನೋಹರ್ ಅಭಿವೃದ್ಧಿಪಡಿಸಿದ ಬೈನಾಕ್ಯುಲರ್
ಮದುವೆಯಲ್ಲಿ ಆಡಿಯೋ ಪ್ಲೇ!
1991ರಲ್ಲಿ ಲಾರೆನ್ಸ್ ಅವರ ಮೊದಲ ಮದುವೆಯ ಸಂದರ್ಭದಲ್ಲಿ, ಕಾನೂನುಬದ್ಧವಾಗಿ ಪೂರ್ತಿ ಹೆಸರನ್ನು ಮದುವೆ ರಿಜಿಸ್ಟರ್‌ನಲ್ಲಿ ಪ್ರಸ್ತಾಪಿಸಬೇಕಿತ್ತು. ಅತಿಥಿಗಳಿಗೆ ಬೇಸರವಾಗದಿರಲಿ ಎಂದು ಲಾರೆನ್ಸ್ ತಮ್ಮ ಹೆಸರನ್ನು ಮೊದಲೇ ರೆಕಾರ್ಡ್ ಮಾಡಿ ಆ 20 ನಿಮಿಷಗಳ ಆಡಿಯೋವನ್ನು ಮದುವೆಯ ಮಂಟಪದಲ್ಲಿ ಪ್ಲೇ ಮಾಡಿದ್ದರು!
ನಿತ್ಯದ ಬಳಕೆಯಲ್ಲಿ ಇಷ್ಟೂ ದೊಡ್ಡ ಹೆಸರನ್ನು ಬಳಸಲು ಸಾಧ್ಯವಿಲ್ಲದ ಕಾರಣ, ಲಾರೆನ್ಸ್ ತಮ್ಮ ಹೆಸರನ್ನು ಸರಳವಾಗಿ ಲಾರೆನ್ಸ್ ಅಲೋನ್ ಎಲೋಯ್ ವಾಟ್ಕಿನ್ಸ್ ಎಂದು ಕರೆದುಕೊಳ್ಳುತ್ತಾರೆ. ಸಹಿ ಮಾಡುವಾಗ ಕುಟುಂಬದ ಐದನೇ ತಲೆಮಾರು ಎಂಬುದನ್ನು ಸೂಚಿಸಲು ‘ವಾಟ್ಕಿನ್ಸ್ V’ (Watkins V) ಎಂದು ಬಳಸುತ್ತಾರೆ. ಇಷ್ಟೊಂದು ಹೆಸರುಗಳ ಪೈಕಿ ತಮಗೆ ‘AZ2000’ ಹೆಸರು ಅತಿ ಇಷ್ಟ ಎನ್ನುತ್ತಾರೆ ಲಾರೆನ್ಸ್. ಇದರ ಅರ್ಥ “Aನಿಂದ Zವರೆಗಿನ ಅಕ್ಷರಗಳಿರುವ 2000ಕ್ಕೂ ಹೆಚ್ಚು ಹೆಸರುಗಳು ನನ್ನಲ್ಲಿವೆ” ಎಂಬುದಾಗಿದೆ.
ಇನ್ನು ತಮ್ಮ ಈ ಹೆಸರಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಲಾರೆನ್ಸ್, “ನಾನು ಯಾವಾಗಲೂ ಜಗತ್ತಿನಲ್ಲಿ ಯಾರೂ ಮಾಡದ ಏನನ್ನಾದರೂ ಸಾಧಿಸಬೇಕು ಮತ್ತು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಬೇಕು ಎಂದು ಬಯಸಿದ್ದೆ. ಆದರೆ ಯಾವ ವಿಷಯದಲ್ಲಿ ಸಾಧನೆ ಮಾಡಬೇಕೆಂದು ತಿಳಿಯುತ್ತಿರಲಿಲ್ಲ. ಕೊನೆಗೆ ನನ್ನ ಹೆಸರನ್ನೇ ದಾಖಲೆಯಾಗಿಸಲು ನಿರ್ಧರಿಸಿದೆ” ಎಂದಿದ್ದಾರೆ.
“ಬ್ಯಾಂಕ್ ಅಥವಾ ಯಾವುದೇ ಅಧಿಕೃತ ದಾಖಲೆಗಳಿಗೆ ಸಹಿ ಮಾಡುವಾಗ ನಾನು ‘Watkins V’ ಎಂದು ಸಹಿ ಮಾಡುತ್ತೇನೆ. ಆದರೆ ಕೆಲವರು ನನ್ನ ಪೂರ್ತಿ ಹೆಸರನ್ನು ಬರೆಯಲು ಜಾಗ ಸಾಲದೆ ತಲೆ ಕೆಡಿಸಿಕೊಳ್ಳುತ್ತಾರೆ. ಕಂಪ್ಯೂಟರ್ ಸಿಸ್ಟಮ್‌ಗಳಲ್ಲಂತೂ ನನ್ನ ಹೆಸರು ಫಿಟ್ ಆಗುವುದೇ ಇಲ್ಲ” ಎಂದೂ ತಮ್ಮ ಈ ಹೆಸರಿನಿಂದಾಗುವ ಸಂಕಷ್ಟವನ್ನೂ ಲಾರೆನ್ಸ್ ತಿಳಿಸಿದ್ದಾರೆ.
ಕಾನೂನನ್ನೇ ತಿದ್ದುಪಡಿ ಮಾಡಿದ ಸರ್ಕಾರ
ಲಾರೆನ್ಸ್ ವಾಟ್ಕಿನ್ಸ್ ಅವರ ಈ ಸಾಹಸದ ನಂತರ ನ್ಯೂಝಿಲ್ಯಾಂಡ್ ಸರ್ಕಾರವು ತನ್ನ ಹೆಸರಿಡುವ ಕಾನೂನನ್ನೇ ತಿದ್ದುಪಡಿ ಮಾಡಿದೆ. ಮಕ್ಕಳಿಗಾಗಲಿ ಅಥವಾ ವಯಸ್ಕರಿಗಾಗಲಿ ಅತಿಯಾದ ಉದ್ದದ, ಸಮಾಜಕ್ಕೆ ಮುಜುಗರ ತರುವ ಅಥವಾ ಗುರುತಿನ ಚೀಟಿಯಲ್ಲಿ ಅಳವಡಿಸಲು ಸಾಧ್ಯವಾಗದಂತಹ ಹೆಸರುಗಳನ್ನು ಇಡುವುದನ್ನು ಈಗ ನಿಷೇಧಿಸಲಾಗಿದೆ. ಹೆಸರಿನಲ್ಲಿ ಯಾವುದೇ ಸಂಖ್ಯೆಗಳು ಅಥವಾ ವಿಶೇಷ ಚಿಹ್ನೆಗಳನ್ನು ಬಳಸಲು ಅವಕಾಶವಿಲ್ಲ. ಸೂಕ್ತ ಕಾರಣವಿಲ್ಲದೆ ಯಾರೂ ತಮ್ಮ ಹೆಸರಿನ ಜೊತೆ ಜಡ್ಜ್, ಕಿಂಗ್, ಪ್ರಿನ್ಸ್, ಕಾನ್‌ಸ್ಟೇಬಲ್‌ನಂತಹ ಪದಗಳನ್ನು ಬಳಸುವಂತಿಲ್ಲ. ಹಾಗಾಗಿ ಲಾರೆನ್ಸ್ ಅವರ ದಾಖಲೆ ಇಂದಿಗೂ ‘ಅಜೇಯ’ವಾಗಿ ಉಳಿದಿದೆ.




