ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸುತ್ತೋಲೆ ಸಂಖ್ಯೆ 90/2024 ಸಮರ್ಪಕವಾಗಿ ಜಾರಿಗೆ ತರಬೇಕು ಹಾಗೂ ಕೆಲ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಆಗ್ರಹಿಸಿದೆ.
ಸಂಘದ ಬೀದರ್ ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಬಿ. ಜಾಧವ್ ಅವರಿಗೆ ಸಲ್ಲಿಸಿದರು.
“ಘಟಕ ವ್ಯವಸ್ಥಾಪಕರು ಸುತ್ತೋಲೆ ಅನ್ವಯ ಅವಶ್ಯಕತೆಗೆ ಅನುಗುಣವಾಗಿ ರಜೆ ಮಂಜೂರು ಮಾಡದಿರುವುದರಿಂದ ಸಿಬ್ಬಂದಿಗೆ ಬಹಳ ತೊಂದರೆಯಾಗುತ್ತಿದೆ. ಚಾಲನಾ ಸಿಬ್ಬಂದಿಗೆ ತುರ್ತು ರಜೆ ಪಡೆಯುವಲ್ಲಿ ಆಗುತ್ತಿರುವ ಅನಾನುಕೂಲ ನಿವಾರಿಸಬೇಕು. ವಾರದಲ್ಲಿ ಒಂದು ದಿನ ಗೈರಾದರೂ ವಾರದ ರಜೆ ನೀಡಬೇಕು. ಓಟಿ ಸೌಲಭ್ಯ ಕಲ್ಪಿಸಬೇಕು. ಘಟಕಗಳಿಗೆ ಬಿಡಿಭಾಗಗಳನ್ನು ಸರಿಯಾಗಿ ಸರಬರಾಜು ಮಾಡಬೇಕು” ಎಂದು ಒತ್ತಾಯಿಸಿದರು.
“ಎಲ್ಲ ಬಸ್‍ಗಳಲ್ಲಿ ಇಟಿಎಂ ಚಾರ್ಜರ್ ಅಳವಡಿಸಬೇಕು. ಅಗತ್ಯ ಮೂಲಸೌಕರ್ಯಗಳಿಲ್ಲದೇ ಇರುವುದರಿಂದ ರಾತ್ರಿ ಪಾಳಿಯಲ್ಲಿ ತಂಗುವ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದು, ನಗರದ ಕೇಂದ್ರ ಬಸ್ ನಿಲ್ದಾಣದ ಮೊದಲ ಮಹಡಿಯ ಸ್ಥಳವನ್ನು ಸಂಚಾರ ಸಿಬ್ಬಂದಿಯ ವಿಶ್ರಾಂತಿ ಗೃಹವಾಗಿ ಪರಿವರ್ತಿಸಬೇಕು. ಸಿಬ್ಬಂದಿಗೆ ಅನಗತ್ಯವಾಗಿ ಮಾನಸಿಕ ಕಿರುಕುಳ ಕೊಡಬಾರದು. ಎಚ್.ಆರ್.ಎಂ.ಎಸ್. ತಂತ್ರಜ್ಞಾನವನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. 15 ದಿನಗಳಲ್ಲಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಮೂವರು ಮಕ್ಕಳ ಮದುವೆ, ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವೆ : ಶಾಸಕ ಪ್ರಭು ಚವ್ಹಾಣ
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಗಣಪತಿ ಸಕರೆಪ್ಪನೋರ, ಬೀದರ್ ಘಟಕದ ಅಧ್ಯಕ್ಷ ಜಾನ್ಸನ್ ಜನವಾಡಕರ್, ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿತಾಳಗೇರಾ, ಎಸ್.ಸಿ, ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಟೈಗರ್, ಪದಾಧಿಕಾರಿಗಳಾದ ಧನಶೆಟ್ಟಿ ಮನ್ನಾಳೆ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಜ್ಯಾಂತೆ, ಪಂಡಿತ ಜನವಾಡ, ವೈಜಿನಾಥ ಚಾಮಾ, ರಾಹುಲ್ ಕಂಟೆ, ಕೈಲಾಸಯ್ಯ ಸ್ವಾಮಿ, ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್ ಘಟಕಗಳ ಹಲವರು ಮುಖಂಡರು ಹಾಗೂ ನೌಕರರು ಹಾಜರಿದ್ದರು.




