ರಾಜ್ಯದಲ್ಲಿ ಎಸ್‌ಐಆರ್ ಜಾರಿಯನ್ನು ವಿರೋಧಿಸಿ ರಾಜ್ಯದ ಐದು ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದ್ದು, ಕಲ್ಯಾಣ ಕರ್ನಾಟಕ ಭಾಗದಿಂದ ಹೊರಡಲಿರುವ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಕ್ಕೆ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಚಾಲನೆ ದೊರೆಯಿತು.
ಎಸ್‌ಐಆರ್ ವಿರೋಧಿ ಕರ್ನಾಟಕ, ಎದ್ದೇಳು ಕರ್ನಾಟಕ, ಜಾತ್ಯಾತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತ್ರತ್ವದಲ್ಲಿ ನಡೆಯಲಿರುವ ಜಾಥಾ ಜೂ.13ರಂದು ಆರಂಭವಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಮುಖಾಂತರ ಜೂ.20ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶಗೊಳ್ಳಲಿದೆ.
ಎದ್ದೇಳು ಕರ್ನಾಟಕದ ಮುಖಂಡ ಜೆ.ಎಂ.ವೀರಸಂಗಯ್ಯ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, “ದೇಶದೆಲ್ಲೆಡೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡುವ ಮೂಲಕ ಲಕ್ಷಾಂತರ ಅರ್ಹ ಮತದಾರರ ಸಾಂವಿಧಾನಿಕವಾದ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಯಾಗಿದ್ದು, ಅರ್ಹ ಮತದಾರರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು” ಎಂದು ಆಗ್ರಹಿಸಿದರು.
“ಚುನಾವಣಾ ಆಯೋಗವು ದೇಶದೆಲ್ಲೆಡೆ ನಡೆಸಿದಂತೆ ಅವೈಜ್ಞಾನಿಕ ಲಾಜಿಕಲ್ ಡಿಸ್ಕ್ರಿಪ್ಷನ್ ಮಾನದಂಡವನ್ನು ಕರ್ನಾಟಕದಲ್ಲಿ ಅನುಸರಿಸಬಾರದು. ಕರ್ನಾಟಕ ಸರ್ಕಾರವು ಗ್ರಾಮ ಸಭೆಗಳನ್ನು ನಡೆಸಿ ಯಾರೆಲ್ಲ ಅರ್ಹ ಮತದಾರರ ಬಳಿ ದಾಖಲೆಗಳಿಲ್ಲವೋ ಅಂತಹ ವ್ಯಕ್ತಿಗಳಿಗೆ ಕೂಡಲೇ ಅಗತ್ಯ ದಾಖಲೆಗಳನ್ನು ಮಾಡಿಕೊಡಬೇಕು. ಸಣ್ಣ ಮಾಹಿತಿ ಇಲ್ಲದಿರುವುದಕ್ಕೆ ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ನಡೆಯಬಾರದು” ಎಂದು ಆಗ್ರಹಿಸಿದರು.

ಬೀದರ್ ಬಸವ ಮಂಟಪದ ಸತ್ಯದೇವಿ, ಸಿಪಿಐ ಮುಖಂಡ ಬಾಬುರಾವ್ ಹೊನ್ನಾ, ದಸಂಸ ಮುಖಂಡ ಮಾರುತಿ ಬೌದ್ಧೆ, ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ರಾಜಶ್ರೀ ಸ್ವಾಮಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಫುಲಾರಿ ಮಾತನಾಡಿ, “ಮತದಾನವೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕು, ಈ ಹಕ್ಕನ್ನು ಯಾರಿಗೂ ಕಸಿಯಲು ಬಿಡುವುದಿಲ್ಲ. ಎಸ್‌ಐಆರ್ ಎಂಬುದು ಭಾರತದ ಪ್ರಜಾಪ್ರಭುತ್ವ ಹಾಗೂ ಜನವಿರೋಧಿಯಾಗಿದೆ. ಹಾಗಾಗಿ ಎಸ್‌ಐಆರ್ ರದ್ದಾಗಬೇಕು. ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಮತದಾರರ ಪಟ್ಟಿಯಿಂದ ಕೈಬಿಡಬಾರದು” ಎಂದು ಎಚ್ಚರಿಸಿದರು.
“ಎಸ್‌ಐಆರ್ ಪ್ರಕ್ರಿಯೆಯನ್ನು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಕ್ರಮವೆಂದು ಆರೋಪಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಜನರು, ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ಯುವಜನತೆ ತಂಬಾಕು ವ್ಯಸನದಿಂದ ದೂರವಿರಿ : ಡಿಎಚ್‌ಒ ದ್ಯಾನೇಶ್ವರ ನಿರಗುಡೆ
ಎದ್ದೇಳು ಕರ್ನಾಟಕದ ಸಂಯೋಜಕರಾದ ಓಂಪ್ರಕಾಶ್ ರೊಟ್ಟೆ, ಜಗದೀಶ್ವರ ಬಿರಾದರ್, ನಿಜಾಮುದ್ದೀನ್, ಲಕ್ಷ್ಮಣ್ ಮಂಡಲಗೇರಾ, ದುರ್ಗೇಶ, ಚಂದ್ರು ತರಹುಣಸೆ ಸೇರಿದಂತೆ ಎಸ್ಐಆರ್ ವಿರೋಧಿ ಸಮಿತಿಯ ವಿಠಲದಾಸ ಪ್ಯಾಗೆ, ಶ್ರೀಕಾಂತ್ ಸ್ವಾಮಿ, ಮಹೇಶ್ ಗೊರನಾಳಕರ್, ಮಲ್ಲಿಕಾರ್ಜುನ್ ಸ್ವಾಮಿ, ಕಾಶಿನಾಥ್ ಚೆಲವಾ, ಬಸವರಾಜ ಅಷ್ಟೂರೆ, ಸಂತೋಷ ಗುದಗೆ, ಶರಣು ಫುಲೆ, ಶಾಂತಮ್ಮ ಮೂಲಗೆ, ಉಮಾಕಾಂತ ವಿಳಾಸಪುರೆ, ಮುಹಮ್ಮದ್ ಆರಿಫೋದ್ದೀನ್, ಸೈಯದ್ ಇಬ್ರಾಹಿಂ, ಫಿರಾಜತ್ ಅಲಿ, ಅಸ್ಮಾ ಸುಲ್ತಾನ್, ಸಬೀಯಾ ಖಾನ್, ಮುಹಮ್ಮದ್ ಜಫರುಲ್ಲಾ ಖಾನ್ಸೇರಿದಂತೆ ಆರ್‌ಪಿಐ, ಸಿಪಿಐ, ಕರ್ನಾಟಕ ರಾಜ್ಯ ರೈತ ಸಂಘ, ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ವಿಶ್ವಕ್ರಾಂತಿ ದಿವ್ಯಪೀಠ, ಜಮಾಅತ್ ಇಸ್ಲಾಮಿ ಹಿಂದ್, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘ, ಅಖಿಲ ಭಾರತ ಲಿಂಗಾಯತ ಮಹಾಸಭೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಜಾಥಾದಲ್ಲಿ ಭಾಗವಹಿಸಿದ್ದರು.




