ಯುವಜನತೆ ಹಾಗೂ ವಿದ್ಯಾರ್ಥಿಗಳು ತಂಬಾಕು ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಕರೆ ನೀಡಿದರು.
ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್), ಬೋದಕ ಆಸ್ಪತ್ರೆ ಹಾಗೂ ದಂತ ಮಹಾವಿದ್ಯಾಲಯ ಎಸ್.ಬಿ. ಪಾಟೀಲ್, ನೌಬಾದ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಶ್ರೀ ಸಿದ್ದರಾಮೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಸಂತ ನರ್ಸಿಂಗ್ ಕಾಲೇಜು ಮತ್ತು ಸರ್ಕಾರಿ ಬ್ರಿಮ್ಸ್ ನರ್ಸಿಂಗ್ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ತಂಬಾಕು ವಿರೋಧಿ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
“ತಂಬಾಕು ಸೇವನೆಯು ಮಾನವನ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಉಂಟುಮಾಡುವುದಲ್ಲದೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಸಾಂಕ್ರಾಮಿಕವಲ್ಲದ ರೋಗಗಳಿಗೆ ಪ್ರಮುಖ ಕಾರಣವಾಗುತ್ತಿದೆ” ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು (ಡಿಎಸ್‌ಓ) ಅವರು ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಯಿದೆ. ತಂಬಾಕು ನಿಯಂತ್ರಣ ಕಾರ್ಯಕ್ರಮಗಳ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

“ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ತಂಬಾಕು ಸೇವನೆಯು ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದ್ದು, ಇದರ ಬಳಕೆಯನ್ನು ತಡೆಗಟ್ಟುವುದು ಸಾರ್ವಜನಿಕ ಆರೋಗ್ಯದ ಪ್ರಮುಖ ಆದ್ಯತೆಯಾಗಿದೆ. ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ” ಎಂದು ತಿಳಿಸಿದರು.
ಜಾಥಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಿದರು. ಸಾರ್ವಜನಿಕರ ಗಮನ ಸೆಳೆಯುವ ಘೋಷಣೆಗಳು, ಜಿಂಗಲ್ಸ್ ಹಾಗೂ ಸಂದೇಶಗಳ ಮೂಲಕ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಜಾಥಾವು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಜನವಾಡ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಸಂಚರಿಸಿ ಪುನಃ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಮರಳಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂ ಓದಿ : ಬಸವಕಲ್ಯಾಣ | ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಣೆ
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಶಂಕರಪ್ಪ ಬೋಮ್ಮಾ, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.





